ಶನಿವಾರ, ಸೆಪ್ಟೆಂಬರ್ 25, 2021
22 °C
ಪ್ರೊ ಕೊಕ್ಕೊ ಆಡುವ ಇಚ್ಛೆ; ನಿತ್ಯ 6 ತಾಸು ಅಭ್ಯಾಸ

ಬೆಳಗಾವಿ: ಭರವಸೆಯ ಕ್ರೀಡಾಪಟು ರಮೇಶ ಮಳವಾಡ

ಬಾಲಶೇಖರ ಬಂದಿ Updated:

ಅಕ್ಷರ ಗಾತ್ರ : | |

Prajavani

ಮೂಡಲಗಿ: ತಾಲ್ಲೂಕಿನ ನಾಗನೂರ ಗ್ರಾಮದ ರಮೇಶ ಪ್ರಕಾಶ ಮಳವಾಡ ಕೊಕ್ಕೊ ಕ್ರೀಡೆಯಲ್ಲಿ ಪರಿಣತಿ ಸಾಧಿಸಿ ಶಾಲಾ ಮಟ್ಟದಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳೆದಿದ್ದಾರೆ.

ಪ್ರಾಥಮಿಕ ಶಾಲೆಯಲ್ಲಿ 6ನೇ ತರಗತಿಯಲ್ಲಿ ಓದುತ್ತಿದ್ದಾಗಲೇ ಕೊಕ್ಕೊ ಮೈದಾನ ಪ್ರವೇಶಿಸಿದ ಅವರು, ಆಗಿನಿಂದ ಇಂದಿನವರೆಗೂ ತಿರುಗಿ ನೋಡದೆ ಹಂತ ಹಂತವಾಗಿ ಸಾಧನೆ ಮಾಡಿದ್ದಾರೆ.

ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಯಲ್ಲಿದ್ದಾಗ 14 ವರ್ಷ ಒಳಗಿನ ಬಾಲಕರ ವಿಭಾಗದವರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸುವ ರಾಷ್ಟ್ರ ಮಟ್ಟದಲ್ಲಿ ಸತತ 3 ಬಾರಿ ಆಡಿ ಪ್ರತಿಭೆ ತೋರಿದ್ದಾರೆ.

ಪಿಯುಸಿ ಕಲಿಯುವಾಗಲೂ 2 ಬಾರಿ ಪದವಿ ಪೂರ್ವ ಕಾಲೇಜುಗಳ ರಾಷ್ಟ್ರೀಯ ಟೂರ್ನಿಗಳಲ್ಲಿ ರಾಜ್ಯ ತಂಡ ಪ್ರತಿನಿಧಿಸಿ ಗಮನ ಸೆಳೆದಿದ್ದಾರೆ. ಮೂಡಬಿದಿರೆ ಆಳ್ವಾಸ್ ಕಾಲೇಜಿನಲ್ಲಿ ಬಿಬಿಎ ಪದವಿ ಕಲಿಯುವಾಗ ಸತತ 3 ವರ್ಷ ಮಂಗಳೂರು ವಿಶ್ವವಿದ್ಯಾಲಯದ ಕೊಕ್ಕೊ ಆಟದ ಬ್ಲೂ ಆಗಿದ್ದರು. ಅಲ್ಲದೆ 2018ರಲ್ಲಿ ವಿಶ್ವವಿದ್ಯಾಲಯದ ತಂಡದ ನಾಯಕನಾಗಿ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯದ ಮಟ್ಟದ ಟೂರ್ನಿಯಲ್ಲಿ ತಂಡಕ್ಕೆ ಗೆಲವು ತಂದು ಕೊಟ್ಟಿದ್ದು ಅವರ ಪ್ರಮುಖ ಸಾಧನೆಯಲ್ಲೊಂದಾಗಿದೆ.

ವಿವಿಧಡೆ ಸಾಧನೆ: ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ (ಮುಕ್ತ ವಿಭಾಗ) ಮಾಡಿದ ಸಾಧನೆ ಗಮನಾರ್ಹವಾಗಿದೆ. 2016ರಿಂದ ಸತತ 4 ವರ್ಷಗಳವರೆಗೆ ಹಿರಿಯರ ವಿಭಾಗದಲ್ಲಿ ಭಾರತೀಯ ಕೊಕ್ಕೊ ಒಕ್ಕೂಟದಿಂದ ನಡೆಯುವ ರಾಷ್ಟ್ರ ಮತ್ತು ದಕ್ಷಿಣ ಭಾರತ ಅಂತರ ರಾಜ್ಯ ಟೂರ್ನಿಗಳಲ್ಲಿ ಆಡಿ ತಂಡಕ್ಕೆ ಶ್ರೇಯಸ್ಸು ತಂದು ಕೊಟ್ಟಿದ್ದಾರೆ. 2017ರಲ್ಲಿ ಮುಂಬೈನಲ್ಲಿ ಇಂಗ್ಲೆಂಡ್ ದೇಶದೊಂದಿಗೆ ನಡೆದ ಅಂತರರಾಷ್ಟ್ರೀಯ ಕೊಕ್ಕೊ ಪ್ರದರ್ಶನ ಟೂರ್ನಿಯಲ್ಲಿ ಆಡಿ ಭಾರತ ತಂಡಕ್ಕೆ ಚಾಂಪಿಯನ್‌ಷಿಪ್‌ ತಂಡುಕೊಟ್ಟ ಹೆಗ್ಗಳಿಕೆ ರಮೇಶ ಅವರದ್ದಾಗಿದೆ. ಸಾಕಷ್ಟು ಬಾರಿ ವಿವಿಧ ಟೂರ್ನಿಗಳಲ್ಲಿ ಸರ್ವೋತ್ತಮ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ.

‘ಮೈದಾನದಲ್ಲಿ ರಮೇಶನ ಮಿಂಚಿನ ಓಟ, ಪೋಲ್ ಮತ್ತು ಗ್ರೌಂಡ್ ಡೈವಿಂಗ್ ಮೂಲಕ ಅಂಕ ಗಳಿಸುವ ಗುರಿ ಯಾವತ್ತು ತಪ್ಪವುದಿಲ್ಲ’ ಎಂದು ಅವರಿಗೆ ತರಬೇತಿ ನೀಡಿರುವ ಬೆಂಗಳೂರಿನ ಕುಮಾರ್ ಎನ್. ಹೇಳಿದರು.

‘ತರಬೇತುದಾರ ಈರಣ್ಣ ಹಳಿಗೌಡರ ನನ್ನ ಕೊಕ್ಕೊ ಗುರು ಆಗಿದ್ದಾರೆ. ಚಿಕ್ಕವನಿದ್ದಾಗಲೇ ಆ ಆಟದ ಹೆಜ್ಜೆಗಳನ್ನು ಹೇಳಿಕೊಟ್ಟು ಬೆಳೆಸಿದ್ದರಿಂದ ಇಷ್ಟೊಂದು ಸಾಧನೆ ಮಾಡಲು ಸಾಧ್ಯವಾಗಿದೆ’ ಎಂದು ರಮೇಶ ತಿಳಿಸಿದರು.

‘ಆಳ್ವಾಸ್ ಕಾಲೇಜಿನ ಪ್ರೀತಿ ಶರತ್ ಮತ್ತು ಬೆಂಗಳೂರಿನ ಕುಮಾರ ಎನ್. ಅವರು ಸೀನಿಯರ್‌ ಮಟ್ಟದಲ್ಲಿ ಆಡುವಾಗ ಆಟದ ತಾಂತ್ರಿಕ ಅಂಶಗಳಲ್ಲಿ ನನ್ನನ್ನು ಪರಿಣತಿಗೊಳಿಸಿದರು. ನನ್ನ ಕ್ರೀಡಾ ಸಾಧನೆಗೆ ತಂದೆಯ ಪ್ರೋತ್ಸಾಹ ಇದೆ’ ಎಂದರು.

ಪ್ರೊ ಕೊಕ್ಕೊದಲ್ಲಿ ಆಡುವ ಇಚ್ಛೆ ಹೊಂದಿರುವ ರಮೇಶ ನಿತ್ಯ ಬೆಳಿಗ್ಗೆ 3 ತಾಸು, ಸಂಜೆ 3 ತಾಸು ಅಭ್ಯಾಸ ಮಾಡುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು