ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಯೋಮಿತಿ ಪರೀಕ್ಷೆ ಕಡ್ಡಾಯಗೊಳಿಸಿದ ಎಐಟಿಎ

ವಯೋ ವಂಚನೆಗೆ ಕಡಿವಾಣ ಹಾಕಲು ಮುಂದಾದ ಸಂಸ್ಥೆ
Last Updated 16 ಜುಲೈ 2020, 14:17 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ಪಾಲ್ಗೊಳ್ಳಲಿರುವ ಜೂನಿಯರ್‌ ಹಂತದ ಎಲ್ಲಾ ಕ್ರೀಡಾಪಟುಗಳು ಇನ್ನು ಮುಂದೆ ವಯೋಮಿತಿ ಪರೀಕ್ಷೆಗೆ ಒಳಪಡುವುದನ್ನು ಕಡ್ಡಾಯಗೊಳಿಸಲಾಗಿದೆ.

ವಯೋ ವಂಚನೆ ಪ್ರಕರಣಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಅಖಿಲ ಭಾರತ ಟೆನಿಸ್‌ ಫೆಡರೇಷನ್‌ (ಎಐಟಿಎ) ಈ ತೀರ್ಮಾನ ಕೈಗೊಂಡಿದೆ.

ಜೂನಿಯರ್‌ ಡೇವಿಸ್‌ ಕಪ್‌ ಹಾಗೂ ಫೆಡ್‌ ಕಪ್‌ಗಳಲ್ಲಿ ಭಾರತ ತಂಡಕ್ಕೆ ಆಯ್ಕೆಯಾಗುವ ಕ್ರೀಡಾಪಟುಗಳೂ ವೈದ್ಯಕೀಯ ಪರೀಕ್ಷೆ ಎದುರಿಸಬೇಕಿದೆ.

‘ರಾಷ್ಟ್ರೀಯ ಚಾಂಪಿಯನ್‌ಷಿಪ್‌ನ ಮುಖ್ಯ ಸುತ್ತಿನಲ್ಲಿ ಆಡಲಿರುವ 12, 14 ಮತ್ತು 16ವರ್ಷದೊಳಗಿನ ಕ್ರೀಡಾಪಟುಇನ್ನು ಮುಂದೆ ವಯೋಮಿತಿ ಪರೀಕ್ಷೆಗೆ ಒಳಪಡುವುದನ್ನು ಕಡ್ಡಾಯಗೊಳಿಸಲಾಗಿದೆ. ಈ ಹಿಂದೆಯೂ ವೈದ್ಯಕೀಯ ಪರೀಕ್ಷೆ ಜಾರಿಯಲ್ಲಿತ್ತು. ಆದರೆ ಕ್ರಮೇಣ ಅದು ನಿಂತು ಹೋಗಿತ್ತು’ ಎಂದು ಎಐಟಿಎ ಮಹಾ ಕಾರ್ಯದರ್ಶಿ ಹಿರಣ್ಮಯ್‌ ಚಟರ್ಜಿ ತಿಳಿಸಿದ್ದಾರೆ.

‘ಚಂಡೀಗಡ ಲಾನ್‌ ಟೆನಿಸ್‌ ಸಂಸ್ಥೆಯ (ಸಿಎಲ್‌ಟಿಎ) ಐದು ಮಂದಿ ಜೂನಿಯರ್‌ ಆಟಗಾರರ ವಿರುದ್ಧ ವಯೋ ವಂಚನೆ ಆರೋಪ ಕೇಳಿ ಬಂದಿತ್ತು. ಇದಕ್ಕೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ನಿಯಮ ಜಾರಿಗೆ ತರಬೇಕೆಂದು ಹಲವು ಹಿರಿಯ ಆಟಗಾರರು ಒತ್ತಾಯಿಸಿದ್ದರು. ಈ ಸಂಬಂಧ ಎಐಟಿಎ ಸಭೆಯಲ್ಲಿ ಚರ್ಚಿಸಿ ಈ ನಿರ್ಧಾರ ಕೈಗೊಂಡಿದ್ದೇವೆ’ ಎಂದು ಅವರು ಹೇಳಿದ್ದಾರೆ.

‘ಪರೀಕ್ಷೆಗೆ ತಗಲುವ ವೆಚ್ಚವನ್ನು ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲಿರುವ ಕ್ರೀಡಾಪಟುಗಳೇ ಭರಿಸಬೇಕು. ಡೇವಿಸ್‌ ಕಪ್‌ ಮತ್ತು ಫೆಡ್‌ ಕಪ್‌ ತಂಡಗಳಿಗೆ ಆಯ್ಕೆಯಾದ ಕ್ರೀಡಾಪಟುಗಳ ಪರೀಕ್ಷೆಯ ಹಣವನ್ನು ಎಐಟಿಎ ನೀಡಲಿದೆ’ ಎಂದು ನುಡಿದಿದ್ದಾರೆ.

‘50 ವರ್ಷಗಳ ಹಿಂದೆಯೇ ಸಂಸ್ಥೆಯು ಇಂತಹದೊಂದು ಕಠಿಣ ನಿರ್ಧಾರ ಕೈಗೊಳ್ಳಬೇಕಿತ್ತು. ಇದು ಕೇವಲ ಘೋಷಣೆಯಾಗಬಾರದು. ಇದನ್ನು ಕಟ್ಟುನಿಟ್ಟಾಗಿ ಕಾರ್ಯಗತಗೊಳಿಸಬೇಕು. ಪರೀಕ್ಷೆಯ ವೇಳೆ ಪಾರದರ್ಶಕತೆಯನ್ನೂ ಕಾಪಾಡಿಕೊಳ್ಳಬೇಕು’ ಎಂದು ಹಿರಿಯ ಆಟಗಾರ ಮಹೇಶ್‌ ಭೂಪತಿ ಹೇಳಿದ್ದಾರೆ.

‘ಎಐಟಿಎಯ ಈ ನಿರ್ಧಾರ ಸ್ವಾಗತಾರ್ಹವಾದುದು. ಇದನ್ನು ಎಲ್ಲಾ ಮಂಡಳಿಗಳೂ ಅಳವಡಿಸಿಕೊಳ್ಳಬೇಕು. ರಾಷ್ಟ್ರೀಯ ಚಾಂಪಿಯನ್‌ಷಿಪ್‌ನ ಅರ್ಹತಾ ಹಂತದಲ್ಲಿ ಆಡುವವರೂ ವಯೋಮಿತಿ ಪರೀಕ್ಷೆ ಎದುರಿಸುವುದನ್ನು ಕಡ್ಡಾಯಗೊಳಿಸಬೇಕು. ಪರೀಕ್ಷೆ ನಡೆಸುವ ಪ್ರಯೋಗಾಲಯಗಳು ನಂಬಿಕೆಗೆ ಅರ್ಹವಾಗಿರಬೇಕು. ವರದಿ ತಿರುಚುವ ಕೆಲಸಗಳು ಆಗದಂತೆ ನೋಡಿಕೊಳ್ಳಬೇಕು. ಚಾಂಪಿಯನ್‌ಷಿಪ್‌ ನಡೆಯುವ ಸ್ಥಳದಲ್ಲೇ, ಪಂದ್ಯಗಳ ಆರಂಭಕ್ಕೂ ಮುನ್ನ ಪರೀಕ್ಷೆ ನಡೆಸಬೇಕು’ ಎಂದು ಜೂನಿಯರ್‌ ಡೇವಿಸ್‌ ಕಪ್‌ ತಂಡದ ಆಟವಾಡದ ನಾಯಕ ವಿಶಾಲ್‌ ಉಪ್ಪಳ ಸಲಹೆ ನೀಡಿದ್ದಾರೆ.

‘ವಯೋ ವಂಚನೆಗೆ ಕಡಿವಾಣ ಹಾಕುವುದು ನಮ್ಮ ಆದ್ಯ ಕರ್ತವ್ಯ ಎಂದು ಎಐಟಿಎ ಹೇಳಿದೆ. ಹೀಗಿದ್ದರೂ ಕಠಿಣ ನಿಯಮ ರೂಪಿಸಲು ತಡ ಮಾಡಿದ್ದು ಏಕೆ’ ಎಂದು ಹಿರಿಯ ಆಟಗಾರ ರೋಹನ್‌ ಬೋಪಣ್ಣ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT