ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ ಕೋಚ್‌ಗಳಿಗೆ ಮತ್ತೊಂದು ಸುತ್ತಿನ ತರಬೇತಿ

ಏಷ್ಯನ್‌ ಹಾಕಿ ಫೆಡರೇಷನ್‌ನಿಂದ ಆಯೋಜನೆ
Last Updated 4 ಆಗಸ್ಟ್ 2020, 13:43 IST
ಅಕ್ಷರ ಗಾತ್ರ

ನವದೆಹಲಿ : ಹಾಕಿ ಇಂಡಿಯಾದ ತರಬೇತುದಾರರು ಹಾಗೂ ತಾಂತ್ರಿಕ ಅಧಿಕಾರಿಗಳಿಗೆ ಮತ್ತೊಂದು ಸುತ್ತಿನ ಆನ್‌ಲೈನ್‌ ತರಬೇತಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲು ಏಷ್ಯನ್‌ ಹಾಕಿ ಫೆಡರೇಷನ್ (ಎಎಚ್‌ಎಫ್‌‌)‌ ಮುಂದಾಗಿದೆ. ಈ ತಿಂಗಳ ಅಂತ್ಯದಲ್ಲಿ ಇದಕ್ಕೆ ಚಾಲನೆ ದೊರೆಯಲಿದೆ.

ಒಟ್ಟು ಐದು ಕಾರ್ಯಾಗಾರಗಳು ನಡೆಯಲಿದ್ದು, 15ಕ್ಕಿಂತ ಹೆಚ್ಚು ಕೋಚ್‌ಗಳು ಹಾಗೂ ಅಧಿಕಾರಿಗಳು ಹಾಜರಾಗಲಿದ್ದಾರೆ.

ಅಂತರರಾಷ್ಟ್ರೀಯ ಟೂರ್ನಿಗಳನ್ನು ನಿರ್ವಹಿಸುವ ವಿವಿಧ ಅಂಶಗಳ ಬಗ್ಗೆ ಪರಿಣತಿ ಮತ್ತು ಜ್ಞಾನವನ್ನು ನೀಡುವ ಉದ್ದೇಶದಿಂದ, ಮೈಕ್ರೊಸಾಫ್ಟ್‌ ಟೀಮ್ಸ್‌ ಆ್ಯಪ್‌ ಮೂಲಕ ಈ ಕಾರ್ಯಾಗಾರಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಪ್ರತಿ ಕಾರ್ಯಾಗಾರವು ನಾಲ್ಕು ತಾಸುಗಳ (ವಿರಾಮ ಒಳಗೊಂಡು) ಅವಧಿಯದ್ದಾಗಿರುತ್ತದೆ.

ತಾಂತ್ರಿಕ ಅಧಿಕಾರಿಗಳಿಗೆ ನೀಡಲಾಗುವ ತರಬೇತಿಯು ಪ್ರಮುಖವಾಗಿ, ಪ್ರತಿಭಟನೆಯಂತಹ ಸಂದರ್ಭದಲ್ಲಿ ನೀತಿ ಸಂಹಿತೆ ಪಾಲನೆಯನ್ನು ಕೇಂದ್ರೀಕೃತವಾಗಿಟ್ಟುಕೊಂಡು ನಡೆಯುತ್ತದೆ. ಕೋಚ್‌ಗಳಿಗೆ, ಫೈವ್‌ ಎ ಸೈಡ್‌ ಪಂದ್ಯಗಳು, ದೈಹಿಕ ಫಿಟ್‌ನೆಸ್‌, ಪಂದ್ಯದ ತಂತ್ರಗಳು ಹಾಗೂ ಗೋಲ್‌ಕೀಪರ್‌ಗಳ ಪಾತ್ರ ಎಂಬ ವಿಷಯಗಳ ಮೇಲೆ ತರಬೇತಿ ನಡೆಯಲಿದೆ.

ದೇಶದಲ್ಲಿ ನಡೆಯುವ ಫೈವ್‌ ಎ ಸೈಡ್‌ ಟೂರ್ನಿಗಳಲ್ಲಿ ಕಾರ್ಯನಿರ್ವಹಿಸುವ ತನ್ನ ಎಂಟು ಸದಸ್ಯ ಘಟಕಗಳು ತಲಾ ಇಬ್ಬರು ಕೋಚ್‌ಗಳನ್ನು ಕಾರ್ಯಾಗಾರಕ್ಕೆ ಶಿಫಾರಸು ಮಾಡುವಂತೆ ಹಾಕಿ ಇಂಡಿಯಾ ಸೂಚಿಸಿದೆ.

’ಈ ಕಾರ್ಯಾಗಾರಗಳು ನಮ್ಮ ಕೋಚ್‌ಗಳು ಹಾಗೂ ಅಧಿಕಾರಿಗಳಿಗೆ ಪರಿಣತಿಯನ್ನು ಸಾಧಿಸಲು ಅನುಕೂಲವಾಗಲಿವೆ. ಈ ಪ್ರಕ್ರಿಯೆಯ ಮೂಲಕ ದೇಶದಲ್ಲಿ ಹಾಕಿ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹವೂ ಸಿಗಲಿದೆ ‘ ಎಂದು ಹಾಕಿ ಇಂಡಿಯಾ ಅಧ್ಯಕ್ಷ ಗ್ಯಾನೆಂದ್ರೊ ನಿಗೊಂಬಮ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಮೊದಲ ಬಾರಿ ನಡೆದ ಆನ್‌ಲೈನ್‌ ಕಾರ್ಯಾಗಾರದಲ್ಲಿ ಹಾಕಿ ಇಂಡಿಯಾದ ಕೋಚ್‌ಗಳು ಮತ್ತು ತರಬೇತುದಾರರು ಬಹಳ ಉತ್ಸಾಹ ಮತ್ತು ಆಸಕ್ತಿಯಿಂದ ಭಾಗವಹಿಸಿದ್ದರು. ಮುಂಬರುವ ಕಾರ್ಯಾಗಾರಗಳನ್ನು ಇದಕ್ಕಿಂತ ಉತ್ತಮ ರೀತಿಯಲ್ಲಿ ಅವರು ಬಳಸಿಕೊಳ್ಳುತ್ತಾರೆ ಎಂಬುದರಲ್ಲಿ ಸಂಶಯವಿಲ್ಲ. ಕ್ರೀಡೆಯ ಬೆಳವಣಿಗೆಗೆ ಹಾಕಿ ಇಂಡಿಯಾ ನಡೆಸುತ್ತಿರುವ ಪ್ರಯತ್ನ ಶ್ಲಾಘನೀಯ‘ ಎಂದು ಎಎಚ್‌ಎಫ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಅಂತರರಾಷ್ಟ್ರೀಯ ಹಾಕಿ ಫೆಡರೇಷನ್‌ನ ಅಭಿವೃದ್ಧಿ ಮತ್ತು ಶಿಕ್ಷಣ ಸಮಿತಿಯ ಮುಖ್ಯಸ್ಥ ದಾಟೊ ತಯ್ಯಬ್‌ ಇಕ್ರಂ ಹೇಳಿದ್ದಾರೆ.

ಏಷ್ಯಾದಲ್ಲಿ ಹಾಕಿ ಆಡುವ ಎಲ್ಲ ತಂಡಗಳಿಗೆ ಎಎಚ್‌ಎಫ್‌ ಈ ತಿಂಗಳು ಆನ್‌ಲೈನ್‌ ಕಾರ್ಯಾಗಾರಗಳನ್ನು ನಡೆಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT