ಗುರುವಾರ , ಮೇ 6, 2021
24 °C

26 ಶಸ್ತ್ರಚಿಕಿತ್ಸೆ, ಆದರೂ ಮಿಂಚಿನ ಓಟ!

ಪ್ರಮೋದ‌ Updated:

ಅಕ್ಷರ ಗಾತ್ರ : | |

Prajavani

ಆ ಹುಡುಗನ ತಂದೆ ಹಾಕಿ ಆಟಗಾರರಾಗಿದ್ದರು. ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಟೂರ್ನಿಗಳಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು. ವೃತ್ತಿ ಹಾಗೂ ವೈಯಕ್ತಿಕ ಬದುಕು ಕಟ್ಟಿಕೊಳ್ಳಲು ನೌಕರಿ ಅರಸಿ ಮುಂಬೈಗೆ ಹೋದರು. ಅಲ್ಲಿ ಪಶ್ಚಿಮ ರೈಲ್ವೆಯಲ್ಲಿ ನೌಕರಿ ಸಿಕ್ಕಿತಲ್ಲದೆ ತಮ್ಮ ಕ್ರೀಡಾ ಬದುಕು ರೂಪಿಸಿದ್ದ ಹಾಕಿಯಲ್ಲಿ ರೈಲ್ವೆ ಮಹಿಳಾ ತಂಡದ ಕೋಚ್‌ ಆಗಿ ಕೆಲಸ ಮಾಡುವ ಅವಕಾಶವೂ ಲಭಿಸಿತು.

ತಮ್ಮಂತೆ ತಮ್ಮ ಮಗ ಸಿದ್ಧಾರ್ಥನನ್ನು ಹಾಕಿ ಆಟಗಾರನನ್ನಾಗಿ ರೂಪಿಸುವ ಗುರಿಯೊಂದಿಗೆ ಮಂಜುನಾಥ ಬಳ್ಳಾರಿ ತರಬೇತಿ ಆರಂಭಿಸಿದರು. ತಮ್ಮೂರು ಹುಬ್ಬಳ್ಳಿಗೆ ಆಗಾಗ ಬಂದು ಹೋಗುತ್ತಿದ್ದರು. 2018ರ ನವೆಂಬರ್‌ನಲ್ಲಿ ಹುಬ್ಬಳ್ಳಿಗೆ ಬಂದಿದ್ದಾಗ 11 ಸಾವಿರ ಕೆ.ವಿ. ವೋಲ್ಟೇಜ್‌ನ ವಿದ್ಯುತ್‌ ತಂತಿ ಮಗನ ದೇಹಕ್ಕೆ ಆಕಸ್ಮಿಕವಾಗಿ ತಗುಲಿ ಹೊಟ್ಟೆಯ ಕೆಳಭಾಗವೆಲ್ಲ ಸುಟ್ಟು ಹೋಯಿತು. ಕೈ, ಕಾಲುಗಳಂತೂ ಸುಟ್ಟ ಹಪ್ಪಳದಂತಾಗಿದ್ದವು. ತೊಡೆಯ ಭಾಗದ ಮಾಂಸ ಛಿದ್ರವಾಗಿತ್ತು. ಸಿದ್ದಾರ್ಥ್‌ಗೆ ಆಗ 13 ವರ್ಷ!

ಹಾಕಿ ಕ್ರೀಡೆಯಲ್ಲಿ ಎತ್ತರದ ಸಾಧನೆ ಮಾಡುವ ಆಸೆ ಹೊಂದಿದ್ದ ಸಿದ್ದಾರ್ಥ್ ಪಾಲಿಗೆ ಬದುಕು ಮುಗಿದೇ ಹೋಯಿತು ಎನಿಸಿತು. ಇನ್ನೆಂದೂ ತನ್ನ ನೆಚ್ಚಿನ ಸ್ಟಿಕ್‌ ಹಿಡಿಯಲು ಸಾಧ್ಯವೇ ಇಲ್ಲ ಎನ್ನುವ ನೋವು ಇನ್ನೂ ಕಾಡಿತು. ಬದುಕಿದರೆ ಸಾಕು, ಕೊನೆಯವರೆಗೂ ಮಗನನ್ನು ಹೂವಿನಂತೆ ನೋಡಿಕೊಳ್ಳುತ್ತೇವೆ ಎನ್ನುವ ಪ್ರಾರ್ಥನೆ ಕುಟುಂಬದವರದ್ದಾಗಿತ್ತು. ಘಟನೆ ನಡೆದಾಗ ಸಿದ್ದಾರ್ಥನನ್ನು ನೋಡಿದವರು ‘ಇದ್ದಷ್ಟು ದಿನ ಇರಲಿಬಿಡಿ’ ಎನ್ನುವ ಮಾತುಗಳನ್ನಾಡಿದ್ದರು.

ಸಿದ್ದಾರ್ಥನ ದೇಹದ ಒಂದೊಂದೇ ಅಂಗವನ್ನು ಸರಿಪಡಿಸಲು ಇದುವರೆಗೆ 26 ಬಾರಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ದೇಹದ ಬೇರೆ, ಬೇರೆ ಭಾಗಗಳಿಂದ ಚರ್ಮ ತೆಗೆದು ಸುಟ್ಟ ಭಾಗಕ್ಕೆ ಹಾಕಲಾಗಿದೆ. ಇನ್ನು ನಾಲ್ಕು ಶಸ್ತ್ರಚಿಕಿತ್ಸೆಗಳು ಬಾಕಿಯಿವೆ. ಚೆಂಡಿನೊಂದಿಗೆ ಚಿನ್ನಾಟವಾಡಿ ಹಾಕಿ ಅಂಗಳದಲ್ಲಿ ಓಡಾಡುತ್ತಿದ್ದ ಕಾಲುಗಳಲ್ಲಿ ಶಕ್ತಿ ಇಲ್ಲವೆನ್ನುವ ಸತ್ಯ ಗೊತ್ತಾಗುವ ಹೊತ್ತಿಗೆ ಸಿದ್ದಾರ್ಥ್‌ಗೆ 16 ಶಸ್ತ್ರಚಿಕಿತ್ಸೆಗಳು ಪೂರ್ಣಗೊಂಡಿದ್ದವು. ಘಟನೆ ನಡೆದ ಐದು ತಿಂಗಳ ತನಕ ಸಿದ್ದಾರ್ಥ್‌ ಬದುಕುವ ಬಗ್ಗೆ ವೈದ್ಯರು ಖಚಿತವಾಗಿ ಏನನ್ನೂ ಹೇಳಿರಲಿಲ್ಲ.

ಘಟನೆ ನಡೆದು ಈಗ ಎರಡು ವರ್ಷಗಳೇ ಕಳೆದಿವೆ. ಬದುಕಿದರೆ ಸಾಕು ಎನ್ನುವ ಆಸೆಯಲ್ಲಿದ್ದ ತಂದೆ, ಮಗನನ್ನು ನಿತ್ಯ ಹುಬ್ಬಳ್ಳಿಯಲ್ಲಿ ಫಿಟ್‌ನೆಸ್‌ಗಾಗಿ ರೈಲ್ವೆ ಮೈದಾನಕ್ಕೆ ಕರೆದುಕೊಂಡು ಬರುತ್ತಾರೆ. ನಿಧಾನವಾಗಿ ನಡೆಯುತ್ತ, ಕೆಲ ದಿನಗಳಲ್ಲಿ ಓಡುವುದನ್ನು ಸಿದ್ದಾರ್ಥ್‌ ರೂಢಿಸಿಕೊಂಡಿದ್ದಾನೆ. ಕಾಲುಗಳಲ್ಲಿ ಕಳೆದು ಹೋಗಿದ್ದ ಶಕ್ತಿ ಮರಳಿ ಬಂದಿದೆ. ದೇಹದ ಎಲ್ಲ ಅಂಗಗಳು ಸರಿಯಿರುವ ಮಕ್ಕಳ ಜೊತೆ ಸ್ಪರ್ಧೆ ಎದುರಿಸುತ್ತಾನೆ.

ಎಡಗೈ ಕತ್ತರಿಸಲಾಗಿದ್ದು, ಬಲಗೈ ಇದ್ದರೂ ಸ್ವಾಧೀನವಿಲ್ಲ. ಹತ್ತನೇ ತರಗತಿ ಓದುತ್ತಿರುವ ಸಿದ್ದಾರ್ಥ್‌, ಪರೀಕ್ಷೆ ಬರೆಯಲು ಬೇರೆಯವರನ್ನು ಅವಲಂಬಿಸಬೇಕಿದೆ. ಸ್ಪರ್ಧೆಗಳಲ್ಲಿ ಪಾಲ್ಗೊಂಡರೆ ಬದುಕು ಇನ್ನಷ್ಟು ಬದಲಾಗಬಹುದು ಎನ್ನುವ ಆಸೆಯಿಂದ ಸಿದ್ದಾರ್ಥ್ ಇತ್ತೀಚೆಗೆ ಮೈಸೂರಿನಲ್ಲಿ ಕರ್ನಾಟಕ ರಾಜ್ಯ ಅಂಗವಿಕಲರ ಕ್ರೀಡಾ ಸಂಸ್ಥೆ ಆಯೋಜಿಸಿದ್ದ ರಾಜ್ಯ ಪ್ಯಾರಾ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನ 100 ಹಾಗೂ 200 ಮೀಟರ್‌ ಓಟದ ಸ್ಪರ್ಧೆಯಲ್ಲಿ ಬೆಳ್ಳಿ ಪದಕಗಳನ್ನು ಗೆದ್ದುಕೊಂಡಿದ್ದಾನೆ.

ಮಂಜುನಾಥ ಬಳ್ಳಾರಿ ಹಾಕಿ ಆಟಗಾರರಿಗೆ ತರಬೇತಿ ನೀಡುವ ಅವಧಿಯಲ್ಲಿ ಗಾಯಗೊಂಡ ಅನೇಕ ಕ್ರೀಡಾಪಟುಗಳನ್ನು ನೋಡಿದ್ದಾರೆ. ಅಂಗಳಕ್ಕೆ ಯಾವತ್ತೂ ಮರಳಲು ಸಾಧ್ಯವೇ ಇಲ್ಲ ಎನ್ನುವ ಗಂಭೀರ ಗಾಯವಾದಾಗಲೂ ವಿಧಿಗೆ ಸಡ್ಡು ಹೊಡೆದು ಮತ್ತೆ ಕ್ರೀಡೆಯಲ್ಲಿ ಮಿಂಚಿದ ಕ್ರೀಡಾಪಟುಗಳ ‘ಪವಾಡ’ಗಳನ್ನು ಕಂಡಿದ್ದಾರೆ. ಎರಡೂ ಕಾಲು ಇಲ್ಲದಿದ್ದರೂ ಸ್ಫೂರ್ತಿಯ ಮಾತುಗಳನ್ನಾಡುವ ಈಜುಪಟು ಆಸ್ಟ್ರೇಲಿಯಾದ ನಿಕ್‌ ಜಾನ್‌, ನೋವಿನಲ್ಲಿಯೂ ಜಗತ್ತೇ ಮೆಚ್ಚುವ ಸಾಧನೆ ಮಾಡಿದ ಮಿಲ್ಕಾ ಸಿಂಗ್‌ ಅವರ ಸಾಧನೆಯ ಗಾಥೆಯನ್ನು ಕೇಳಿದ್ದಾರೆ; ಮಗನಿಗೂ ಕೇಳಿಸಿದ್ದಾರೆ. ತಾವು ಕಂಡ ಹಾಗೂ ತಮ್ಮ ಜೀವನದಲ್ಲಿ ಎದುರಿಸಿದ ಸವಾಲುಗಳನ್ನು ಮಗನ ಜೊತೆ ಹಂಚಿಕೊಂಡು ‘ಮತ್ತೆ ಮೊದಲಿನಂತೆಯೇ ಬದುಕಲು ಸಾಧ್ಯ’ ಎನ್ನುವ ಭರವಸೆ ತುಂಬಿದ್ದಾರೆ. ಆ ಮಾತುಗಳೇ ಸಿದ್ದಾರ್ಥನಿಗೆ ಮರುಜನ್ಮ ನೀಡಿ, ಮೊಗದಲ್ಲಿ ಮತ್ತೆ ನಗು ಅರಳಿಸಿವೆ.

‘ಸಿದ್ದಾರ್ಥ್‌ ಸ್ಫೂರ್ತಿಯ ನಾಯಕ’
ಬದುಕಿನಲ್ಲಿ ಸಣ್ಣ ಘಟನೆ ನಡೆದರೆ ನಮ್ಮಿಂದ ಏನೂ ಸಾಧ್ಯವೇ ಇಲ್ಲ ಎನ್ನುವ ನಿರಾಶೆಯ ಮನಸ್ಥಿತಿ ಉಳ್ಳವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ದೇಹದ ಬಹುತೇಕ ಭಾಗ ಸುಟ್ಟರೂ ಮತ್ತೆ ಸಾಧನೆಯ ಛಲ ಹೊಂದಿರುವ ಸಿದ್ದಾರ್ಥ್‌ ಸ್ಫೂರ್ತಿಯ ನಾಯಕ ಎಂದು ಕ್ರೀಡಾ ಕೋಚ್‌ ಸಂತೋಷ ಹೊಸಮನಿ ಮೆಚ್ಚುಗೆ ವ್ಯಕ್ತಪಡಿಸಿದರು.

‘ನಿತ್ಯ ಬೆಳಿಗ್ಗೆ 5.30ಕ್ಕೆ ಮೈದಾನಕ್ಕೆ ತಪ್ಪದೇ ಅಭ್ಯಾಸಕ್ಕೆ ಬರುತ್ತಾನೆ. ಫಿಟ್‌ನೆಸ್‌ಗಾಗಿ ಎಲ್ಲರೊಂದಿಗೆ ಅಭ್ಯಾಸ ಮಾಡಿ, ಅವರೊಂದಿಗೆ ಸ್ಪರ್ಧೆ ಎದುರಿಸುತ್ತಾನೆ. ಅವನಲ್ಲಿ ಏನಾದರೂ ದೊಡ್ಡ ಸಾಧನೆ ಮಾಡಬೇಕೆನ್ನುವ ಛಲವಿದೆ. ಎರಡೂ ಕೈಗಳು ಹಾಗೂ ಕಾಲುಗಳ ಇಲ್ಲದ ಅದೆಷ್ಟೋ ಜನ ಸಾಧನೆ ಮಾಡಿದ್ದಾರೆ. ಅವರಂತೆ ಆಗಬೇಕೆನ್ನುವ ಗುರಿ ಅವನಲ್ಲಿದೆ’ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು