ಗುರುವಾರ , ಮೇ 19, 2022
21 °C
ಮಿಶ್ರ ತಂಡ ವಿಭಾಗದಲ್ಲಿ ರಿಷಭ್ ಯಾದವ್‌ಗೆ ಬೆಳ್ಳಿ ಪದಕ

ಏಷ್ಯನ್ ಆರ್ಚರಿ ಚಾಂಪಿಯನ್‌ಷಿಪ್‌: ಢಾಕಾದಲ್ಲಿ ಬೆಳಗಿದ ಚಿನ್ನದ ಜ್ಯೋತಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಢಾಕಾ: ಏಷ್ಯನ್‌ ಆರ್ಚರಿ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದ ಜ್ಯೋತಿ ಸುರೇಖಾ ವೆಣ್ಣಂ ಅವರು ಸಾಧನೆಯ ಹಾದಿಯಲ್ಲಿ ಎರಡು ಬಾರಿ ಬಲಿಷ್ಠ ಕೊರಿಯಾದ ಸವಾಲನ್ನು ಮೀರಿ ನಿಂತಿದ್ದರು. ಆದರೆ ಮಿಶ್ರ ತಂಡ ವಿಭಾಗದ ಫೈನಲ್‌ನಲ್ಲಿ ಕೊರಿಯಾ ಆರ್ಚರ್‌ಗಳಿಗೆ ಮಣಿದರು.

ಮಹಿಳೆಯರ ವಿಭಾಗದ ಫೈನಲ್‌ ಹಣಾಹಣಿಯಲ್ಲಿ ಜ್ಯೋತಿ 146-145ರಲ್ಲಿ ಓಹ್‌ ಯೂಹ್ಯೂನ್‌ ಎದುರು ಜಯ ಗಳಿಸಿದರು. ಈಚೆಗೆ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಮೂರು ಬೆಳ್ಳಿ ಪದಕ ಗೆದ್ದು ಸಂಭ್ರಮಿಸಿದ್ದ ಜ್ಯೋತಿ ಸೆಮಿಫೈನಲ್‌ನಲ್ಲಿ 2015ರ ವಿಶ್ವ ಚಾಂಪಿಯನ್ ಕಿಮ್ ಯುನ್ಹಿ ಅವರನ್ನು 148-143ರಲ್ಲಿ ಮಣಿಸಿದ್ದರು.  

ಎರಡು ಪಾಯಿಂಟ್‌ಗಳ ಮುನ್ನಡೆಯೊಂದಿಗೆ ಅಂತಿಮ ಸುತ್ತಿನಲ್ಲಿ ಕಣಕ್ಕೆ ಇಳಿದ ವಿಶ್ವ ಕ್ರಮಾಂಕದಲ್ಲಿ ಆರನೇ ಸ್ಥಾನದಲ್ಲಿರುವ ಜ್ಯೋತಿ ಒಂದು ಬಾರಿ 10 ಮತ್ತು ಎರಡು ಬಾರಿ ಒಂಬತ್ತಕ್ಕೆ ಗುರಿ ಇಟ್ಟರು. ಈ ಮೂಲಕ ದೇಶಕ್ಕೆ ಮೊದಲ ಚಿನ್ನ ಗಳಿಸಿಕೊಟ್ಟರು.

ಕೊರಿಯಾದ ಆರ್ಚರ್ ಒಂಬತ್ತು ರಿಂಗ್‌ ಹಾಕಿದರು. ಆ ತಂಡದ ಕೋಚ್ ಸೇರಿದಂತೆ ಎಲ್ಲರೂ ಅದನ್ನು 10 ಎಂದೇ ಪರಿಗಣಿಸಿ ಸಂಭ್ರಮಿಸಿದ್ದರು. ಆದರೆ ಅಂಪೈರ್ ನಿರ್ಧಾರ ಪ್ರಕಟಗೊಂಡಾಗ ಅಸಮಾಧಾನ ವ್ಯಕ್ತಪಡಿಸಿದರು. 

’ಬಾಣವು 10ರ ರಿಂಗ್‌ನಲ್ಲಿರಲಿಲ್ಲ. ಆದರೆ ಕೊರಿಯಾದವರು ತೀರ್ಪುಗಾರರ ಮೇಲೆ ಒತ್ತಡ ಹೇರಿ ಫಲಿತಾಂಶವನ್ನು ತಮ್ಮ ಪರವಾಗಿ ಮಾಡಿಕೊಳ್ಳಲು ಪ್ರಯತ್ನಿಸಿದರು. ವಿಶ್ವ ಆರ್ಚರಿ ನಿಯಮಗಳ ಪ್ರಕಾರ ತೀರ್ಪುಗಾರರ ನಿರ್ಧಾರಕ್ಕೆ ಪ್ರತಿಭಟನೆ ವ್ಯಕ್ತಪಡಿಸುವ ಅವಕಾಶ ಇಲ್ಲ‘ ಎಂದು ಭಾರತದ ಕೋಚ್ ತಿಳಿಸಿದರು.

’ಹತ್ತರ‘ ಅಮೋಘ ಆರಂಭ

ಎರಡು ಬಾರಿ ಹತ್ತರ ರಿಂಗ್ ಮೂಲಕ ಅಮೋಘ ಆರಂಭ ಕಂಡ ಜ್ಯೋತಿ ಮೊದಲು 29–20ರ ಮುನ್ನಡೆ ಕಂಡರು. ಆದರೆ ನಂತರ ಕೊರಿಯಾ ಆರ್ಚರ್ ತಿರುಗೇಟು ನೀಡಿದರು. ಈ ಮೂಲಕ ಸ್ಕೋರು 58ರಲ್ಲಿ ಸಮ ಆಯಿತು.

ಮೂರನೇ ಸೆಟ್‌ನ ಮೂರು ಬಾಣಗಳನ್ನು 10ಕ್ಕೆ ಗುರಿ ಇಟ್ಟ ಆಂಧ್ರಪ್ರದೇಶದ ಜ್ಯೋತಿ 88-86ರ ಮುನ್ನಡೆ ಸಾಧಿಸಿದರು. ನಂತರ ಇಬ್ಬರೂ ತಲಾ 30 ಸ್ಕೋರು ಗಳಿಸಿದ್ದರಿಂದ ಎಲ್ಲರ ಗಮನ ಫೈನಲ್ ಹಂತದತ್ತ ಸಾಗಿತು. ಈ ಸಂದರ್ಭದಲ್ಲಿ ಜ್ಯೋತಿ ಎದೆಗುಂದದೆ ಆಡಿ ಚಿನ್ನಕ್ಕೆ ಮುತ್ತನ್ನಿತ್ತರು. 

ಮಿಶ್ರ ತಂಡ ವಿಭಾಗದಲ್ಲಿ ಕೊರಿಯಾದ ಕಿಮ್ ಯುನ್ಹಿ ಮತ್ತು ಚೊಯ್ ಯುಂಘೀ ಎದುರಿನ ಹಣಾಹಣಿಯಲ್ಲಿ ಜ್ಯೋತಿ ಮತ್ತು ರಿಷಭ್ ಯಾದವ್ ಸೋತು ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಕೊರಿಯಾ ಜೋಡಿ 155-154ರಲ್ಲಿ ಜಯ ಸಾಧಿಸಿತು. ಯಾದವ್ ತಂಡ ವಿಭಾಗದಲ್ಲಿ ಅಭಿಷೇಕ್ ಮತ್ತು ಅಮನ್ ಸೈನಿ ಜೊತೆಗೂಡಿ ಕಂಚಿನ ಪದಕವನ್ನೂ ಗಳಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು