ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷರತ್ತಿಲ್ಲದೆ ನಾಮಪತ್ರ ಹಿಂಪಡೆದೆ

ದಾವಣಗೆರೆ ದಕ್ಷಿಣದ ಬಿಜೆಪಿ ಬಂಡಾಯ ಅಭ್ಯರ್ಥಿ ನಾಗರಾಜ್
Last Updated 28 ಏಪ್ರಿಲ್ 2018, 9:54 IST
ಅಕ್ಷರ ಗಾತ್ರ

ದಾವಣಗೆರೆ: ‘ಯಾವುದೇ ಷರತ್ತಿಲ್ಲದೆ ನಾಮಪತ್ರ ಹಿಂದಕ್ಕೆ ಪಡೆದಿದ್ದೇನೆ’ ಎಂದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಮುಖಂಡ ಎಚ್‌.ಎಸ್‌. ನಾಗರಾಜ್‌ ಸ್ಪಷ್ಟಪಡಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಲವು ವರ್ಷಗಳಿಂದ ಪಕ್ಷದಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದೇನೆ. ಸಹಜವಾಗಿಯೇ ಪಕ್ಷದ ಟಿಕೆಟ್‌ ಬಯಸಿದ್ದೆ. ‍ಆದರೆ, ಪಕ್ಷದ ಕೆಲವು ಆಂತರಿಕ ಸಮಸ್ಯೆಗಳಿಂದ ಬೇಸತ್ತು
ನಾಮಪತ್ರವನ್ನೂ ಸಲ್ಲಿಸಿದ್ದೆ. ವರಿಷ್ಠರು ಈಗ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತರಾವ್ ಜಾಧವ್‌ ಅವರಿಗೆ ಟಿಕೆಟ್‌ ನೀಡಿದ್ದಾರೆ. ಜಾಧವ್‌ ಅವರೊಂದಿಗೆ ನನ್ನೆಲ್ಲಾ ನೋವುಗಳನ್ನು ಹಂಚಿಕೊಂಡಿದ್ದರಿಂದ ನಿರಾಳವಾಗಿದ್ದೇನೆ. ಹಾಗಾಗಿ, ಕಣದಿಂದ ಹಿಂದಕ್ಕೆ ಸರಿಯಲು ತೀರ್ಮಾನಿಸಿದ್ದೇನೆ’ ಎಂದು ಹೇಳಿದರು.

‘ಪಕ್ಷದಿಂದ ಯಾವುದೇ ಹುದ್ದೆ ಬಯಸಿಲ್ಲ. ಬಿಜೆಪಿಯಲ್ಲಿ ಕಾರ್ಯಕರ್ತನಾಗಿರುವುದೇ ದೊಡ್ಡ ಜವಾಬ್ದಾರಿ. ಈಗ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವುದೇ ನನ್ನ ಗುರಿ’ ಎಂದರು.

‘ಯಶವಂತರಾವ್‌ ಜಾಧವ್‌ ವಿರುದ್ಧ ಎಂದೂ ಟೀಕೆ ಮಾಡಿಲ್ಲ. ಪಕ್ಷದ ನಾಯಕರಾದ ಜಿ.ಎಂ. ಸಿದ್ದೇಶ್ವರ, ಎಸ್‌.ಎ. ರವೀಂದ್ರನಾಥ್ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದೆ; ಆದರೆ, ಅದು ಆ ಕ್ಷಣದ ಪ್ರತಿಕ್ರಿಯೆ ಅಷ್ಟೇ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಷರತ್ತು ವಿಧಿಸಿಲ್ಲ: ‘ನಾಮಪತ್ರ ಹಿಂಪಡೆಯಲು ನಾಗರಾಜ್‌ ಅವರು ಯಾವುದೇ ಷರತ್ತು ವಿಧಿಸಿಲ್ಲ. ‍ಪಕ್ಷವೂ ಕೂಡ ಅವರಿಗೆ ಯಾವುದೇ ಹುದ್ದೆಯ ಭರವಸೆ ನೀಡಿಲ್ಲ’ ಎಂದು ದಾವಣಗೆರೆ ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯೂ ಆದ ಯಶವಂತರಾವ್‌ ಜಾಧವ್ ಸ್ಪಷ್ಟಪಡಿಸಿದರು.

‘ಪಕ್ಷದ ವಿಚಾರದಲ್ಲಿ ನಡೆದ ಸಣ್ಣ–ಪುಟ್ಟ ವ್ಯತ್ಯಾಸಗಳ ಬಗ್ಗೆ ಅವರಿಗೆ ಆಕ್ಷೇಪ ಇತ್ತು. ಅದನ್ನು ಸರಿಪಡಿಸುವ ಭರವಸೆ ನೀಡಿದ್ದೇನೆ. ನನ್ನ ಪರವಾಗಿಯೇ ಅವರು ಪ್ರಚಾರ ಕಾರ್ಯ ಕೈಗೊಳ್ಳುವರು’ ಎಂದು ಹೇಳಿದರು.

‘ಮಾಯಕೊಂಡ ಕ್ಷೇತ್ರದಲ್ಲಿ ಬಂಡಾಯ ಎದ್ದಿರುವ ಎಚ್‌. ಆನಂದಪ್ಪ ಅವರನ್ನು ಮನವೊಲಿಸಲು ಸಾಕಷ್ಟು ಪ್ರಯತ್ನಿಸಲಾಯಿತು. ಆದರೆ, ಅವರು ತಮಗೆ ಜನರ ಆಶೀರ್ವಾದ ಇರುವುದಾಗಿ ಹೇಳಿದ್ದಾರೆ. ಈ ವಿಚಾರದಲ್ಲಿ ನಮ್ಮ ಪ್ರಯತ್ನ ಸಫಲವಾಗಿಲ್ಲ’ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ವೈ. ಮಲ್ಲೇಶ್, ಪ್ರತಾಪ್, ರುದ್ರಮುನಿ ಸ್ವಾಮಿ, ರಾಜಶೇಖರ್, ರಾಜನಹಳ್ಳಿ ಶಿವಕುಮಾರ್, ಗೋಣೆಪ್ಪ, ಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT