ಬ್ಯಾಡ್ಮಿಂಟನ್ ಟೂರ್ನಿ: ಸಿಂಗಲ್ಸ್ ಫೈನಲ್‌ಗೆ ಅನ್ಷ್‌–ಪ್ರಣವ್

ಶನಿವಾರ, ಜೂಲೈ 20, 2019
24 °C

ಬ್ಯಾಡ್ಮಿಂಟನ್ ಟೂರ್ನಿ: ಸಿಂಗಲ್ಸ್ ಫೈನಲ್‌ಗೆ ಅನ್ಷ್‌–ಪ್ರಣವ್

Published:
Updated:
Prajavani

ಉಡುಪಿ: ಶ್ರೇಯಾಂಕಕ್ಕೆ ನ್ಯಾಯ ಒದಗಿಸುವ ರೀತಿಯಲ್ಲಿ ಆಡಿದ ಅನ್ಷ್‌ ನೇಗಿ (ಉತ್ತರಾಖಂಡ) ಮತ್ತು ಪ್ರಣವ್‌ ರಾಮ್‌ ಎನ್‌. (ತೆಲಂಗಾಣ), ಅಖಿಲ  ಭಾರತ ಸಬ್‌ ಜೂನಿಯರ್‌ ರ‍್ಯಾಂಕಿಂಗ್‌ ಬ್ಯಾಡ್ಮಿಂಟನ್‌ (13 ವರ್ಷದೊಳಗಿನವರ) ಟೂರ್ನಿಯಲ್ಲಿ ಶನಿವಾರ ಫೈನಲ್‌ ಪ್ರವೇಶಿಸಿದರು. ಬಾಲಕಿಯರ ವಿಭಾಗದಲ್ಲೂ ಮೊದಲ ಎರಡು ಶ್ರೇಯಾಂಕದ ಆಟಗಾರ್ತಿಯರು ಪ್ರಶಸ್ತಿಗೆ ಸೆಣಸುವ ಅರ್ಹತೆ ಪಡೆದರು.

ಅಜ್ಜರಕಾಡು ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಟೂರ್ನಿಯ ಸೆಮಿಫೈನಲ್‌ನಲ್ಲಿ ಉತ್ತರಾ ಖಂಡದ ಅನ್ಷ್‌  21–17, 21–11ರಲ್ಲಿ ಶ್ರೇಯಾಂಕರಹಿತ ಆಟಗಾರ ವಿಶ್ವತೇಜ್ ಗೊಬ್ಬರು (ಆಂಧ್ರಪ್ರದೇಶ) ವಿರುದ್ಧ ಸುಲಭವಾಗಿ ಜಯಗಳಿಸಿದರೆ, ಎರಡನೇ ಶ್ರೇಯಾಂಕದ ಪ್ರಣವ್‌ ಮೊದಲ ಸೆಟ್‌ ಹಿನ್ನಡೆಯಿಂದ ಚೇತರಿಸಿ 12–21, 21–12, 21–13ರಲ್ಲಿ ನಾಲ್ಕನೇ ಶ್ರೇಯಾಂಕದ ಕುನಾಲ್‌ ಚೌಧರಿ  (ರಾಜಸ್ತಾನ) ವಿರುದ್ಧ ಜಯಗಳಿಸಿದ.

ಎಂಟರ ಘಟ್ಟದ ಪಂದ್ಯಗಳಲ್ಲಿ ನೇಗಿ 21–12, 21–12ರಲ್ಲಿ ಆದಿತ್ಯಓಂ ಜೋಶಿ ವಿರುದ್ಧ, ವಿಶ್ವತೇಜ್‌ 21–11, 21–16ರಲ್ಲಿ ಧಾರ್ಮಿಕ್‌ ಶ್ರೀಕುಮಾರ್‌ ವಿರುದ್ಧ, ಕುನಾಲ್‌ 21–19, 22–20ರಲ್ಲಿ ಓಂಕರಣ್‌ ಶರ್ಮ ವಿರುದ್ಧ, ಪ್ರಣವ್‌ 21–10, 21–4ರಲ್ಲಿ ಕೇರಳದ ಬಿ.ಜೈಸನ್‌ ವಿರುದ್ಧ ಜಯಗಳಿಸಿದ್ದರು. 

ಬಾಲಕಿಯರ ಸಿಂಗಲ್ಸ್‌ನಲ್ಲಿ ಅಗ್ರ ಶ್ರೇಯಾಂಕದ ನವ್ಯಾ ಖಂಡೇರಿ (ಆಂಧ್ರ) ತೀವ್ರ ಹೋರಾಟದ ನಂತರ 21–6, 13–21, 21–13ರಲ್ಲಿ ಮಾನ್ಸಾ ರಾವತ್‌ (ಉತ್ತರಾಖಂಡ) ವಿರುದ್ಧ; ಎರಡನೇ ಶ್ರೇಯಾಂಕದ ಉನ್ನತಿ ಹೂಡಾ (ಹರಿಯಾಣ) 21–14, 21–19ರಲ್ಲಿ ಐದನೇ ಶ್ರೇಯಾಂಕದ ಏಷಾ ಗಾಂಧಿ (ಗುಜರಾತ್‌) ವಿರುದ್ಧ ಜಯಗಳಿಸಿದರು.

ಅನುಷ್ಕಾ ನಿರ್ಗಮನ: ಇದಕ್ಕೆ ಮೊದಲು ಕ್ವಾರ್ಟರ್‌ಫೈನಲ್‌ನಲ್ಲಿ  ಕರ್ನಾಟಕದ ಅನುಷ್ಕಾ ಬರಾಯ್‌, ಐದನೇ ಶ್ರೇಯಾಂಕದ ರಕ್ಷಾ ಕಂದಸಾಮಿ (ಮಹಾರಾಷ್ಟ್ರ) ಎದುರು 14–21, 9–21ರಲ್ಲಿ ನೇರ ಸೆಟ್‌ಗಳಿಂದ ಸೋಲನುಭವಿಸಿದ್ದರು. ನವ್ಯಾ ಕ್ವಾರ್ಟರ್‌ಫೈನಲ್‌ನಲ್ಲೂ ಮೂರು ಸೆಟ್‌ಗಳ ಪ್ರತಿರೋಧದ ನಂತರ ಶ್ರೇಯಾಂಕರಹಿತ ಆಟಗಾರ್ತಿ ರಕ್ಷಿತಾ ಶ್ರೀ (ತಮಿಳುನಾಡು) ವಿರುದ್ಧ 21–12, 21–23, 21–16ರಲ್ಲಿ ಜಯಗಳಿಸಿದ್ದರು.

ಪ್ರಶಸ್ತಿ ಡಬಲ್‌ನತ್ತ ಅನ್ಷ್‌: ಸಿಂಗಲ್ಸ್‌ನಲ್ಲಿ ಪ್ರಶಸ್ತಿ ಸುತ್ತಿನಲ್ಲಿರುವ ಅನ್ಷ್‌ ನೇಗಿ ಡಬಲ್ಸ್‌ನಲ್ಲಿ ಸಿದ್ಧಾರ್ಥ ರಾವತ್‌ ಜೊತೆಗೂಡಿ ಭವ್ಯ ಛಾಬ್ರಾ (ಉತ್ತರಪ್ರದೇಶ)– ಓಂಕರಣ್‌ ಶರ್ಮಾ (ಹರಿಯಾಣ) ಜೋಡಿಯನ್ನು ಸೋಲಿಸಿ ಫೈನಲ್‌ ಪ್ರವೇಶಿಸಿದರು.

ಇನ್ನೊಂದು ಸೆಮಿಫೈನಲ್‌ನಲ್ಲಿ ವಂಶಪ್ರತಾಪ್‌ ಸಿಂಗ್ ಕರ್ಕಿ –ಕೌಸ್ತುಭ್ ತ್ಯಾಗಿ 21–15, 23–21ರಲ್ಲಿ ಶುಹೇಬು ಮಲಿಕ್‌ – ಆಯುಷ್‌ ಸೂರಜ್‌ (ಕೇರಳ) ವಿರುದ್ಧ ಜಯಗಳಿಸಿದರು. ಬಾಲಕಿಯರ ಡಬಲ್ಸ್‌ ಫೈನಲ್‌ನಲ್ಲಿ, ಅಗ್ರ ಶ್ರೇಯಾಂಕದ ಉನ್ನತಿ –ದಿವಿತಾ ಪೊಟ್ಟಸಿರಿ ಜೋಡಿ ಪ್ರಶಸ್ತಿಗಾಗಿ ಎರಡನೇ ಶ್ರೇಯಾಂಕದ ಸೌಮ್ಯಾ ದರ್ಶನ್‌– ಗಾರ್ಗಿ ಗರೈ ಜೋಡಿಯ ವಿರುದ್ಧ ಸೆಣಸಲಿದ್ದಾರೆ. ಉನ್ನತಿ ಎರಡೂ ವಿಭಾಗಗಳಲ್ಲಿ ಫೈನಲ್‌ ತಲುಪಿದಂತಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !