ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ಏಷ್ಯನ್‌ ವಯೋವರ್ಗ ಈಜು ಕೂಟ

ಸೆಪ್ಟೆಂಬರ್‌ 24ರಿಂದ ಆಯೋಜನೆ; 1,200 ಸ್ಪರ್ಧಿಗಳು ಪಾಲ್ಗೊಳ್ಳುವ ನಿರೀಕ್ಷೆ
Last Updated 2 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಬೆಂಗಳೂರು: ಎರಡು ವರ್ಷಗಳಿಗೊಮ್ಮೆ ನಡೆಯುವ ಏಷ್ಯನ್‌ ವಯೋವರ್ಗ ಈಜು ಚಾಂಪಿಯನ್‌ಷಿಪ್‌ ಮೊದಲ ಬಾರಿ ಉದ್ಯಾನನಗರಿಯಲ್ಲಿ ನಡೆಯಲಿದೆ. ಸೆಪ್ಟೆಂಬರ್‌ 24ರಿಂದ ಆಕ್ಟೋಬರ್‌ 2ರವರೆಗೆ ನಡೆಯಲಿರುವ ಈ ಹತ್ತನೇ ಚಾಂಪಿಯನ್‌ಷಿಪ್‌ನಲ್ಲಿ ಸುಮಾರು 40 ದೇಶಗಳ 1,200 ಈಜು ಸ್ಪರ್ಧಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಈ ಚಾಂಪಿಯನ್‌ಷಿಪ್‌ನ ಲೋಗೊ ಮತ್ತು ವೆಬ್‌ಸೈಟ್‌ ಲಾಂಚ್‌ ಕಾರ್ಯಕ್ರಮ ನಗರದ ಜೆಡಬ್ಲ್ಯು ಮ್ಯಾರಿಯಟ್‌ ಹೋಟೆಲ್‌ನಲ್ಲಿ ಶುಕ್ರವಾರ ನಡೆಯಿತು.ಈ ಸಂದರ್ಭದಲ್ಲಿ ಭಾರತ ಒಲಿಂಪಿಕ್‌ ಅಸೋಸಿಯೇಷನ್‌ ಉಪಾಧ್ಯಕ್ಷ ವಿರೇಂದ್ರ ನಾನಾವತಿ ಮಾಧ್ಯಮಗೋಷ್ಠಿಯಲ್ಲಿ ‌ಚಾಂಪಿಯನ್‌ಷಿಪ್‌ನ ವಿವರಗಳನ್ನು ನೀಡಿದರು.

ಈಜು ಜೊತೆ ಡೈವಿಂಗ್‌, ಕಲಾತ್ಮಕ ಈಜು ಸ್ಪರ್ಧೆಗಳು ನಗರದ ವಿವಿಧ ಈಜು ಕೇಂದ್ರಗಳಲ್ಲಿ ಒಟ್ಟು 9 ದಿನಗಳ ಅವಧಿಯಲ್ಲಿ ನಡೆಯಲಿವೆ.

ಎಲ್ಲಿ ಏನು?:ಈಜು ಸ್ಪರ್ಧೆಗಳು ಪಡುಕೋಣೆ– ದ್ರಾವಿಡ್‌ ಕ್ರೀಡಾ ಶ್ರೇಷ್ಠತಾ ಕೇಂದ್ರದಲ್ಲಿ ಸೆ. 24 ರಿಂದ 27ರವರೆಗೆ ನಡೆಯಲಿವೆ. ವಾಟರ್‌ಪೋಲೊ ಸ್ಪರ್ಧೆಗಳು ಕೇಂಗೇರಿಯ ಭಾರತ ಕ್ರೀಡಾ ಪ್ರಾಧಿಕಾರದ ಕೇಂದ್ರದಲ್ಲಿ ಸೆ. 24 ರಿಂದ 30ರವರೆಗೆವಾಟರ್‌ಪೋಲೊ ಸ್ಪರ್ಧೆಗಳು ಮತ್ತು 29 ರಿಂದ ಅಕ್ಟೋಬರ್‌ 2ರವರೆಗೆ ಡೈವಿಂಗ್‌ ಸ್ಪರ್ಧೆಗಳು ನಡೆಯಲಿವೆ. ಅಲಸೂರಿನ ಕೆನ್ಸಿಂಗ್‌ಟನ್‌ ಈಜುಕೊಳದಲ್ಲಿ ಕಲಾತ್ಮಕ ಈಜು (ಆರ್ಟಿಸ್ಟಿಕ್‌ ಸ್ವಿಮಿಂಗ್‌) ಸ್ಪರ್ಧೆಗಳು ನಡೆಯಲಿವೆ.

12 ರಿಂದ 14 ವರ್ಷ, 15 ರಿಂದ 17 ವರ್ಷ ಹಾಗೂ ಓಪನ್‌ (18 ವರ್ಷ ಮೇಲ್ಪಟ್ಟವರ) ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿವೆ. 800 ಮೀ. ಮತ್ತು 1,500 ಮೀ. ದೂರದ ಸ್ಪರ್ಧೆಗಳಿಗೆ ಫೈನಲ್‌ ಮೊದಲು ಟೈಮ್‌ ಟ್ರಯಲ್ಸ್‌ ಇರುತ್ತದೆ. ಉಳಿದ ಸ್ಪರ್ಧೆಗಳಲ್ಲಿ ಹೀಟ್ಸ್ ಮತ್ತು ಫೈನಲ್‌ ನಡೆಯಲಿದೆ ಎಂದರು.

9ನೇ ಏಷ್ಯನ್‌ ವಯೋವರ್ಗ ಚಾಂಪಿಯನ್‌ಷಿಪ್‌ ಉಜ್ಬೇಕಿಸ್ತಾನದ ತಾಷ್ಕೆಂಟ್‌ನಲ್ಲಿ ನಡೆದಿತ್ತು. ಭಾರತದ ಈಜು ಸ್ಪರ್ಧಿಗಳು ಐದು ಚಿನ್ನ, 13 ಬೆಳ್ಳಿ ಮತ್ತು 22 ಕಂಚಿನ ಪಕದಗಳನ್ನು ಗೆದ್ದುಕೊಂಡಿದ್ದರು. ಡೈವಿಂಗ್‌ನಲ್ಲಿ ಮೂರು ಚಿನ್ನ, ಎರಡು ಬಳ್ಳಿ ಮತ್ತು ಮೂರು ಕಂಚಿನ ಪದಕಗಳು ಭಾರತದ ಸ್ಪರ್ಧಿಗಳ ಪಾಲಾಗಿದ್ದವು.

ಭಾರತ ಈಜು ಫೆಡರೇಷನ್‌ ಆಶ್ರಯದಲ್ಲಿ ಈ ಕೂಟ ನಡೆಯಲಿದೆ. 1999ರಲ್ಲಿ ಕೊನೆಯ ಬಾರಿ ಈ ಚಾಂಪಿಯನ್‌ಷಿಪ್‌ನ ಆತಿಥ್ಯ ವಹಿಸಿತ್ತು.

ಭಾರತ ಈಜು ಫೆಡರೇಷನ್‌ (ಎಸ್‌ಎಫ್‌ಐ) ಆಜೀವ ಅಧ್ಯಕ್ಷ ದಿಗಂಬರ್‌ ಕಾಮತ್‌ ಮಾತನಾಡಿ, ‘ಈ ಚಾಂಪಿಯನ್‌ಷಿಪ್‌ ನಡೆಸಲು ನಗರದಲ್ಲಿ ಉತ್ತಮ ಮಟ್ಟದ ಮೂಲ ಸೌಲಭ್ಯಗಳಿವೆ. ಆದ್ದರಿಂದ, ಕೆಲ ನಗರಗಳು ಆತಿಥ್ಯಕ್ಕೆ ಮುಂದೆಬಂದಿದ್ದರೂ ಬೆಂಗಳೂರನ್ನು ಆಯ್ಕೆ ಮಾಡಲಾಯಿತು. ಇಲ್ಲಿಂದ ಅನೇಕ ರಾಷ್ಟ್ರೀಯ, ಅಂತರರಾಷ್ಟ್ರೀಯ ಈಜುಪಟುಗಳು ಮೂಡಿಬಂದಿದ್ದಾರೆ’ ಎಂದರು.

‘ಭಾರತ ತಂಡಕ್ಕೆ 4–5 ದಿನಗಳಲ್ಲಿ ಪುಣೆಯ ಬಾಲೇವಾಡಿಯಲ್ಲಿ ಶಿಬಿರ ನಡೆಯಲಿವೆ. ನಮ್ಮ ಈಜುಪಟುಗಳಿಗೆ ತವರಿನಲ್ಲೇ ಉತ್ತಮ ಸಾಧನೆ ತೋರಲು ಇದೊಂದು ಸದವಕಾಶ. ದೇಶದ ಪ್ರಮುಖ ಈಜುಪಟುಗಳಾದ ವೀರಧವಳ ಖಾಡೆ, ಸಾಜನ್‌ ಪ್ರಕಾಶ್‌, ಶ್ರೀಹರಿ ನಟರಾಜ್‌, ಅಂಶುಲ್‌ ಕೊಥಾರಿ, ಕುಶಾಗ್ರ ರಾವತ್‌ ಮತ್ತಿತರರು ಮುಕ್ತ ವಿಭಾಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರ ಜತೆಗೆ ಏಷ್ಯದ ಪ್ರಬಲ ತಂಡಗಳಾದ ಜಪಾನ್‌, ಚೀನಾ, ದಕ್ಷಿಣ ಕೊರಿಯಾ, ಹಾಂಗ್‌ಕಾಂಗ್‌ ತಂಡಗಳ ಪ್ರಮುಖ ಸ್ಪರ್ಧಿಗಳೂ ಪಾಲ್ಗೊಳ್ಳಲಿದ್ದಾರೆ’ ಎಂದರು.

ಸಂಘಟನಾ ಸಮಿತಿ ಅಧ್ಯಕ್ಷ ಗೋಪಾಲ್‌ ಬಿ.ಹೊಸೂರ್, ಎಸ್‌ಎಫ್‌ಐ ಮಹಾ ಕಾರ್ಯದರ್ಶಿ ಮೊನಾಲ್‌ ಚೋಕ್ಸಿ, ಉಪಾಧ್ಯಕ್ಷ ಟಿ.ಡಿ.ವಿಜಯರಾಘವನ್‌, ಕ್ರೀಡಾ ಮತ್ತು ಯುವಸಬಲೀಕರಣ ಇಲಾಖೆ ಆಯುಕ್ತ ಆರ್‌.ಎಸ್‌.ಪೆದ್ದಪ್ಪಯ್ಯ ಉಪಸ್ಥಿತರಿದ್ದರು.

ಒಲಿಂಪಿಕ್ಸ್‌ಗೆ ಅರ್ಹತಾ ಟೂರ್ನಿ
ಏಷ್ಯನ್‌ ವಯೋವರ್ಗ ಈಜು ಚಾಂಪಿಯನ್‌ಷಿಪ್‌ ಅನ್ನು ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತಾ ಕೂಟವಾಗಿ ಪರಿಗಣಿಸಲಾಗುತ್ತದೆ. ಏಷ್ಯಾ ಈಜು ಫೆಡರೇಷನ್‌ನ ಪ್ರತಿನಿಧಿಗಳು ವೀಕ್ಷಕರಾಗಿ ಬರಲಿದ್ದಾರೆ ಎಂದು ವಿರೇಂದ್ರ ನಾನಾವತಿ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

ಭಾರತ ಮತ್ತು ಏಷ್ಯಾದ ಇತರ ದೇಶಗಳ ಈಜುಪಟುಗಳು, ಡೈವಿಂಗ್ ಪಟುಗಳು ಮುಂದಿನ ವರ್ಷ ನಡೆಯುವ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಈ ಚಾಂಪಿಯನ್‌ಷಿಪ್‌ ಉತ್ತಮ ವೇದಿಕೆಯಾಗಿದೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT