ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಮಿನಿ ಒಲಿಂಪಿಕ್ಸ್‌: ಬೆಳಗಾವಿ ಬಾಲಕ–ಬಾಲಕಿಯರಿಗೆ ಪ್ರಶಸ್ತಿ

ಕೊಕ್ಕೊದಲ್ಲಿ ಬಾಗಲಕೋಟೆ ತಂಡಗಳು ರನ್ನರ್ ಅಪ್‌
Last Updated 7 ಫೆಬ್ರುವರಿ 2020, 20:17 IST
ಅಕ್ಷರ ಗಾತ್ರ

ಬೆಂಗಳೂರು: ಬೆಳಗಾವಿ ಬಾಲಕರ ಮತ್ತು ಬಾಲಕಿಯರ ತಂಡದವರು ರಾಜ್ಯ ಮಿಲಿ ಒಲಿಂಪಿಕ್‌ ಕ್ರೀಡಾಕೂಟದ ಕೊಕ್ಕೊದಲ್ಲಿ ಚಿನ್ನದ ಪದಕವನ್ನು ಕೊರಳಿಗೇರಿಸಿಕೊಂಡರು. ವಿದ್ಯಾನಗರ ಕ್ರೀಡಾ ಸಂಕೀರ್ಣದಲ್ಲಿ ಶುಕ್ರವಾರ ನಡೆದ ಫೈನಲ್ ಪಂದ್ಯಗಳಲ್ಲಿ ಎರಡೂ ವಿಭಾಗಗಳಲ್ಲಿ ಬೆಳಗಾವಿ ತಂಡಗಳು ಬಾಗಲಕೋಟೆಯನ್ನು ಮಣಿಸಿದವು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಜ್ಯ ಒಲಿಂಪಿಕ್ಸ್ ಸಂಸ್ಥೆ ಹಾಗೂ ರಾಜ್ಯ ಕ್ರೀಡಾ ಪ್ರಾಧಿಕಾರ ಆಯೋಜಿಸಿರುವ ಕೂಟದ ಬಾಲಕರ ವಿಭಾಗದಲ್ಲಿ ನಾರಾಯಣ್ ಆಲ್‌ರೌಂಡ್ ಆಟವಾಡಿ ಬೆಳಗಾವಿಗೆ ಗೆಲುವು ತಂದುಕೊಟ್ಟರು (7–6). ಅಜೇಯ ಮೂರೂವರೆ ನಿಮಿಷ ಡಾಡ್ಜಿಂಗ್ ಮಾಡಿದ ಅವರು ಎರಡು ಪಾಯಿಂಟ್‌ಗಳನ್ನೂ ಕಲೆ ಹಾಕಿ ಇನಿಂಗ್ಸ್‌ ಮತ್ತು ಒಂದು ಪಾಯಿಂಟ್‌ಗಳ ಜಯಕ್ಕೆ ಕಾರಣರಾದರು.

ಬಾಲಕಿಯರ ವಿಭಾಗದಲ್ಲಿ ಬೆಳಗಾವಿ ಪರ ಲಕ್ಷ್ಮಿ ಹಿರೇಮಠ (ಅಜೇಯ 2 ನಿ, 10 ಸೆಕೆಂಡು; 2 ಪಾಯಿಂಟ್), ರಾಶಿಕಾ ಕಂಗ್ರಾಲ್ಕರ್ (4 ಪಾಯಿಂಟ್) ಮತ್ತು ಸಾನಿಯಾ ಮುಲ್ಲಾ (5 ಪಾಯಿಂಟ್‌) ಮಿಂಚಿದರು. ಈ ಮೂವರ ಅಮೋಘ ಆಟದ ಬಲದಿಂದ ತಂಡ 14–12ರಲ್ಲಿ ಜಯ ಗಳಿಸಿತು.

ಮೂರನೇ ಸ್ಥಾನಕ್ಕಾಗಿ ನಡೆದ ಬಾಲಕರ ಪಂದ್ಯದಲ್ಲಿ ಹಾವೇರಿ ತಂಡ ರಾಯಚೂರು ವಿರುದ್ಧ, ಬಾಲಕಿಯರ ವಿಭಾಗದಲ್ಲಿ ರಾಯಚೂರು ತಂಡ ಹಾವೇರಿಯನ್ನೂ ಸೋಲಿಸಿತು.

ಧ್ರುವ ಬಲ್ಲಾಳ್ ಮಿಂಚು: ಬಾಲಕರ 400 ಮೀಟರ್ಸ್ ಓಟದಲ್ಲಿ ಉಡುಪಿಯ ಧ್ರುವ ಬಲ್ಲಾಳ್ (56.20 ಸೆಕೆಂಡು) ಚಿನ್ನ ಗೆದ್ದರು. ಚಂದ್ರಶೇಖರ್ ಎಚ್ ಮತ್ತು ಸಚಿನ್ ಬೋರೇಗೌಡ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗಳಿಸಿದರು. ಬಾಲಕಿಯರ ವಿಭಾಗದಲ್ಲಿ ಪ್ರಿಯಾಂಕ ಮಡಿವಾಳಪ್ಪ ಓಲೆಕಾರ (59.26 ಸೆ), ನೀಮಾ ಎಂ.ಎಂ ಮತ್ತು ಶ್ರೇಯಾ ಕೆಕ್ರಮವಾಗಿ ಚಿನ್ನ, ಬೆಳ್ಳಿ ಮತ್ತು ಕಂಚು ಗಳಿಸಿದರು.

ಅನುಷ್ಕಾಗೆ ಚಿನ್ನ

ಸಾತ್ವಿಕ್ ಶಂಕರ್ ಮತ್ತು ಅನುಷ್ಕಾ ಬರಲ್, ಬ್ಯಾಡ್ಮಿಂಟನ್‌ ನಲ್ಲಿ ಕ್ರಮವಾಗಿ ಬಾಲಕ ಮತ್ತು ಬಾಲಕಿ ಯರ ವಿಭಾಗದ ಚಿನ್ನ ತಮ್ಮದಾಗಿಸಿಕೊಂಡರು. ಬಾಲಕರ ಡಬಲ್ಸ್‌ನಲ್ಲಿ ನಿಕೋಲಸ್ ರಾಜ್ ಮತ್ತು ತುಷಾರ್ ಸುವೀರ್, ಬಾಲಕಿಯರ ಡಬಲ್ಸ್‌ನಲ್ಲಿ ಆರಾಧನಾ ಬಾಲಚಂದ್ರ ಮತ್ತು ಪ್ರೇರಣಾ ಶೇಟ್ ಪ್ರಶಸ್ತಿ ಗೆದ್ದುಕೊಂಡರು. ಮಿಶ್ರ ಡಬಲ್ಸ್‌ನಲ್ಲಿ ತುಷಾರ್ ಸುವೀರ್ ಮತ್ತು ಕರ್ಣಿಕಾ ಶ್ರೀ ಚಿನ್ನದ ಪದಕ ಗಳಿಸಿದರು.

ಬಾಲಕರ ಫೈನಲ್‌ನಲ್ಲಿ ಸಾತ್ವಿಕ್ 8–15, 15–12, 15–9ರಲ್ಲಿ ತುಷಾರ್ ಸುವೀರ್ ವಿರುದ್ಧ ಗೆದ್ದರೆ, ಬಾಲಕಿಯರ ಫೈನಲ್‌ನಲ್ಲಿ ಅನುಷ್ಕಾ 15–8, 15–6ರಲ್ಲಿ ಕರ್ಣಿಕಶ್ರೀ ವಿರುದ್ಧ ಜಯ ಗಳಿಸಿದರು.

ನಿಕೋಲಸ್ ಮತ್ತು ತುಷಾರ್ 15–11,7–15,15–8ರಲ್ಲಿ ಆದಿತ್ಯ ನಾರಾಯಣ ಭಟ್ ಮತ್ತು ಸಾತ್ವಿಕ್ ಶಂಕರ್ ವಿರುದ್ಧ, ಆರಾಧನಾ ಮತ್ತು ಪ್ರೇರಣಾ ಶೇಟ್ ಜೋಡಿ ರುಜುಲಾ ರಾಮು ಮತ್ತು ಮೇಘಶ್ರೀ ಅವರನ್ನು 15–10, 15–6ರಲ್ಲಿ ಮಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT