ಗುರುವಾರ , ಜನವರಿ 27, 2022
21 °C

ಪ್ರೊ ಕಬಡ್ಡಿ: ಬೆಂಗಳೂರು–ಟೈಟನ್ಸ್ ಸಮಬಲದ ಹೋರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಜಿದ್ದಾಜಿದ್ದಿಯ ಹೋರಾಟದಲ್ಲಿ ಬೆಂಗಳೂರು ಬುಲ್ಸ್‌ ಮತ್ತು ತೆಲುಗು ಟೈಟನ್ಸ್ ತಂಡಗಳು ಸಮಬಲದ ಹೋರಾಟ ಪ್ರದರ್ಶಿಸಿದವು. ಚಂದ್ರನ್ ರಂಜಿತ್ ಮತ್ತು ಪವನ್ ಶೆರಾವತ್‌ ಅವರು ಬುಲ್ಸ್ ಪರವೂ ಅಂಕಿತ್ ಬೆನಿವಾಲ್ ಮತ್ತು ಅದರ್ಶ್‌ ಅವರು ಟೈಟನ್ಸ್ ಪರವೂ ಮಿಂಚಿದರು. ಇವರ ಅಮೋಘ ಆಟದ ಬಲದಿಂದ ಪಂದ್ಯ 34–34ರಲ್ಲಿ ಟೈ ಆಯಿತು.

ನಗರದ ವೈಟ್‌ಫೀಲ್ಡ್‌ನಲ್ಲಿರುವ ಹೋಟೆಲ್ ಶೆರಟಾನ್ ಗ್ರ್ಯಾಂಡ್‌ನಲ್ಲಿ ಶನಿವಾರ ರಾತ್ರಿ ನಡೆದ ಪ್ರೊ ಕಬಡ್ಡಿ ಲೀಗ್‌ ಪಂದ್ಯದ ಮೊದಲಾರ್ಧದಲ್ಲಿ ಸ್ವಲ್ಪ ಹಿನ್ನಡೆ ಅನುಭವಿಸಿದ್ದ ಟೈಟನ್ಸ್ (12–14) ದ್ವಿತೀಯಾರ್ಧದಲ್ಲಿ ದಿಟ್ಟ ಆಟದ ಮೂಲಕ ಬುಲ್ಸ್‌ಗೆ ಆಘಾತ ನೀಡಿತು.

ದ್ವಿತೀಯಾರ್ಧದ ಕೊನೆಯ ಘಟ್ಟದಲ್ಲಿ ಬೆಂಗಳೂರು ಕೂಡ ತಿರುಗೇಟು ನೀಡಿತು. ಹೀಗಾಗಿ ಪಂದ್ಯ ರೋಚಕವಾಯಿತು. ಕೊನೆಯ ಐದು ನಿಮಿಷ ಬಾಕಿ ಇರುವಾಗ ಟೈಟನ್ಸ್ 27–25ರ ಮುನ್ನಡೆ ಗಳಿಸಿತು. ತಿರುಗೇಟು ನೀಡಿದ ಬೆಂಗಳೂರು ಕೊನೆಯಲ್ಲಿ 30–28ರ ಮುನ್ನಡೆ ಗಳಿಸುವಲ್ಲಿ ಯಶಸ್ವಿಯಾಯಿತು. ಪಟ್ಟು ಬಿಡದ ಟೈಟನ್ಸ್ ಪಾಯಿಂಟ್‌ಗಳನ್ನು ಕಲೆ ಹಾಕಿತು. ಆದರೆ ಸಮಬಲ ಸಾಧಿಸುವಲ್ಲಿ ಬುಲ್ಸ್ ಯಶಸ್ವಿಯಾಯಿತು.

ಚಂದ್ರನ್ ರಂಜಿತ್ 9 ಮತ್ತು ಪವನ್ ಶೆರಾವತ್ 8 ಪಾಯಿಂಟ್ ಗಳಿಸಿದರೆ ಟೈಟನ್ಸ್ ಪರ ಅಂಕಿತ್ ಬೆನಿವಾಲ್ ಸೂಪರ್ 10 ಸಾಧನೆ ಮಾಡಿದರು. ಟ್ಯಾಕ್ಲಿಂಗ್‌ನಲ್ಲಿ ಆದರ್ಶ್‌ 5 ಪಾಯಿಂಟ್ ಕಲೆ ಹಾಕಿದರು.

ಮುಂಬಾ–ಯೋಧಾ ಪಂದ್ಯ ಟೈ

ಅಂತಿಮ ನಿಮಿಷದಲ್ಲಿ ನಾಯಕ ಮಾಡಿದ ತಪ್ಪಿನಿಂದಾಗಿ ಯು ಮುಂಬಾ ಟೈಗೆ ಸಮಾಧಾನಪಟ್ಟುಕೊಳ್ಳಬೇಕಾಯಿತು. ಡಿಫೆಂಡರ್‌ಗಳು ಮಿಂಚಿದ ಯು ಮುಂಬಾ ಮತ್ತು ಯು.ಪಿ.ಯೋಧಾ ತಂಡಗಳ ನಡುವಿನ ಪಂದ್ಯ 28–28ರ ಟೈ ಆಯಿತು. ಪಂದ್ಯ ಮುಕ್ತಾಯಕ್ಕೆ ಒಂದು ನಿಮಿಷ ಇದ್ದಾಗ ಮುಂಬಾ ಒಂದು ಪಾಯಿಂಟ್‌ನ ಮುನ್ನಡೆಯಲ್ಲಿತ್ತು. ಆದರೆ ಫಜಲ್ ಅತ್ರಾಚಲಿ ಮಾಡಿದ ಪ್ರಮಾದವು ಎದುರಾಳಿ ತಂಡಕ್ಕೆ ಸಮಬಲ ಸಾಧಿಸಲು ಅವಕಾಶ ಒದಗಿಸಿತು.  

ಯು.ಪಿ.ಯೋಧಾ ತಂಡದ ಸುಮಿತ್‌ (6 ಟ್ಯಾಕಲ್ ಪಾಯಿಂಟ್ಸ್‌) ಎದುರಾಳಿ ತಂಡದ ಪ್ರಮುಖ ರೇಡರ್‌ಗಳಾದ ಪ್ರದೀಪ್ ನರ್ವಾಲ್ ಮತ್ತು ಅಭಿಷೇಕ್ ಸಿಂಗ್ ಅವರನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಮೊದಲಾರ್ಧದಲ್ಲಿ ಯು ಮುಂಬಾ 3 ಪಾಯಿಂಟ್‌ಗಳ (16-13) ಮುನ್ನಡೆ ಗಳಿಸಿತ್ತು. ನಂತರ ಪಂದ್ಯ 19–19ರಲ್ಲಿ ಸಮ ಆಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು