ಎಂಟರಘಟ್ಟಕ್ಕೆ ನಿಶಾಂತ್, ಸಂಜೀತ್

ಬೆಲ್‌ಗ್ರೇಡ್: ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಬಾಕ್ಸರ್‌ಗಳು ಗೆಲುವಿನ ಅಭಿಯಾನ ಮುಂದುವರಿಸಿದ್ದಾರೆ. ಪ್ರೀಕ್ವಾರ್ಟರ್‌ಫೈನಲ್‌ಗಳಲ್ಲಿ ಭರ್ಜರಿ ಜಯ ಗಳಿಸಿದ ನಿಶಾಂತ್ ದೇವ್ ಹಾಗೂ ಸಂಜೀತ್ ಎಂಟರಘಟ್ಟಕ್ಕೆ ಲಗ್ಗೆಯಿಟ್ಟಿದ್ದಾರೆ.
71 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿರುವ ನಿಶಾಂತ್, ಭಾನುವಾರ ತಡರಾತ್ರಿ ನಡೆದ ಹಣಾಹಣಿಯಲ್ಲಿ 3–2ರಿಂದ ಮೆಕ್ಸಿಕೊದ ಮಾರ್ಕೊ ಅಲ್ವರೆಜ್ ಅವರ ಸವಾಲು ಮೀರಿದರು.
ಕ್ವಾರ್ಟರ್‌ಫೈನಲ್‌ನಲ್ಲಿ ನಿಶಾಂತ್ ಅವರು ರಷ್ಯಾದ ವ್ಯಾಡಿಮ್ ಮಸಾಯೆವ್ ವಿರುದ್ಧ ಸೆಣಸಲಿದ್ದಾರೆ.
ಹೋದ ಆವೃತ್ತಿಯಲ್ಲಿ ಕ್ವಾರ್ಟರ್‌ಫೈನಲ್ ತಲುಪಿದ್ದ ಸಂಜೀತ್ (92 ಕೆಜಿ), 16ರ ಘಟ್ಟದ ಬೌಟ್‌ನಲ್ಲಿ 4–1ರಿಂದ ಜಾರ್ಜಿಯಾದ ಜಾರ್ಜಿ ಸಿಗ್ಲೆಜ್ ಅವರನ್ನು ಪರಾಭವಗೊಳಿಸಿದರು. ಮುಂದಿನ ಹಣಾಹಣಿಯಲ್ಲಿ ಅವರಿಗೆ ಇಟಲಿಯ ಅಜೀಜ್ ಅಬ್ಬೇಸ್ ಮೊಹಿದೀನ್ ಸವಾಲು ಎದುರಾಗಿದೆ.
92+ ಕೆಜಿ ವಿಭಾಗದಲ್ಲಿ ಕಣಕ್ಕಿಳಿದಿರುವ ನರೇಂದರ್ ಬೆರ್ವಾಲ್ ಕೂಡ ಭಾನುವಾರ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದರು. ತಜಿಕಿಸ್ತಾನದ ಜಾಕೊನ್ ಒರ್ಬೊನೊವ್ ಅವರನ್ನು ಎರಡನೇ ಸುತ್ತುಗಳಲ್ಲಿ ಕಂಗೆಡಿಸಿದ ಅವರು ಸುಲಭ ಜಯ ಸಂಪಾದಿಸಿದರು.
ಬೌಟ್ ಆರಂಭವಾದ ಮೂರು ನಿಮಿಷಗಳಲ್ಲೇ ಭಾರತದ ಬಾಕ್ಸರ್‌ನ ನೇರ ಪಂಚ್‌ಗಳಿಗೆ ಜಾಕೊನ್ ಉಸಿರಾಡಲೂ ಪರದಾಟ ನಡೆಸಬೇಕಾಯಿತು. ಹೀಗಾಗಿ ಹಣಾಹಣಿಯನ್ನು ಎರಡನೇ ಸುತ್ತಿಗೇ ಸ್ಥಗಿತಗೊಳಿಸಿ ನರೇಂದರ್ ಅವರನ್ನು ವಿಜಯಿ ಎಂದು ಪ್ರಕಟಿಸಲಾಯಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.