ಬ್ರೇಕ್‌ಡಾನ್ಸ್ ಈಗ ಒಲಿಂಪಿಕ್ ಕ್ರೀಡೆ!

ಲಾಸೇನ್: ಪ್ಯಾರಿಸ್‌ನಲ್ಲಿ 2024ರಲ್ಲಿ ನಡೆಯಲಿರುವ ಒಲಿಂಪಿಕ್ ಕೂಟದಲ್ಲಿ ಬ್ರೇಕ್ ಡ್ಯಾನ್ಸ್ ಕೂಡ ಇರಲಿದೆ. ಸೋಮವಾರ ನಡೆದ ಅಂತರರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ (ಐಒಸಿ) ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಬ್ರೇಕ್‌ಡ್ಯಾನ್ಸ್‌ಗೆ ಮಾನ್ಯತೆ ನೀಡಲು ನಿರ್ಧರಿಸಲಾಯಿತು. ಸ್ಕೇಟ್ ಬೋರ್ಡಿಂಗ್, ಸರ್ಫಿಂಗ್ ಮತ್ತು ಸ್ಪೋರ್ಟ್ ಕ್ಲೈಂಬಿಂಗ್ ಕೂಡ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇರುತ್ತವೆ. ಈ ಕ್ರೀಡೆಗಳನ್ನು ಮುಂದಿನ ವರ್ಷ ನಡೆಯಲಿರುವ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸೇರಿಸಲು ಈಗಾಗಲೇ ನಿರ್ಧಾರ ಕೈಗೊಳ್ಳಲಾಗಿದೆ.
‘ಯುವಜನತೆ ಹೆಚ್ಚು ಇಷ್ಟಪಡುವ ಕ್ರೀಡೆಗಳತ್ತ ಗಮನ ಕೊಡುವುದು ನಮ್ಮ ಆದ್ಯತೆ. ಕ್ರೀಡೆಯನ್ನು ನಗರೀಕರಣಗೊಳಿಸಲು ಇದು ಸಹಕಾರಿಯಾಗಲಿದೆ’ ಎಂದು ಐಒಸಿ ಮುಖ್ಯಸ್ಥ ಥಾಮಸ್ ಬಾಕ್ ಹೇಳಿದರು.
ಹಿಪ್ ಹಾಪ್ ಜೊತೆಯಲ್ಲಿ ನ್ಯೂಯಾರ್ಕ್‌ನ ದಕ್ಷಿಣ ಬ್ರಾಂಕ್ಸ್‌ನಲ್ಲಿ 1970ರಲ್ಲಿ ಆರಂಭಗೊಂಡ ಬ್ರೇಕ್ ಡ್ಯಾನ್ಸ್‌ಗೆ ಕ್ರೀಡಾವಲಯದಲ್ಲಿ ‘ಬ್ರೇಕಿಂಗ್’ ಎಂದು ಹೆಸರು. 2018ರಲ್ಲಿ ನಡೆದ ಯೂತ್ ಒಲಿಂಪಿಕ್ಸ್‌ನಲ್ಲಿ ಇದನ್ನು ಅಳವಡಿಸಲಾಗಿತ್ತು. ಬಬಲ್‌ಬೀ ಎಂಬ ಅಡ್ಡಹೆಸರಿನ ರಷ್ಯಾದ ಸರ್ಜಿ ಚೆರ್ನಿಶೆವ್ ಆ ಕೂಟದಲ್ಲಿ ಚಿನ್ನ ಗೆದ್ದಿದ್ದರು. ಜಪಾನ್‌ನ ರಮು ಕವಾಯ್ ಮಹಿಳಾ ಬಾಲಕಿಯರವ ವಿಭಾಗದ ಚಿನ್ನ ಗಳಿಸಿದ್ದರು.
ಈಗಾಗಲೇ ಒಲಿಂಪಿಕ್ಸ್‌ನಲ್ಲಿ ಇರುವ ಕ್ರೀಡೆಗಳಿಗೆ ಸಂಬಂಧಿಸಿದ ಫೆಡರೇಷನ್‌ಗಳು 41 ಹೊಸ ಕ್ರೀಡೆಗಳನ್ನು ಸೇರಿಸುವಂತೆ ಆಗ್ರಹಿಸಿದ್ದವು. ಆದರೆ ಅದನ್ನು ನಿರಾಕರಿಸಲಾಯಿತು. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಕ್ರೀಡೆಗಳ ಸಂಖ್ಯೆ 339ರಿಂದ 329ಕ್ಕೆ ಇಳಿಯಲಿವೆ ಎಂದೂ ಪಾಲ್ಗೊಳ್ಳುವ ಕ್ರೀಡಾಪಟುಗಳ ಸಂಖ್ಯೆ 10,500 ಆಗಿರಲಿದೆ ಎಂದೂ ಥಾಮಸ್ ಬಾಕ್ ತಿಳಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.