ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್–19: ಥಾಮಸ್‌–ಊಬರ್‌ ಕಪ್‌ ಮುಂದೂಡಿಕೆ

ಪ್ರತಿಷ್ಠಿತ ಬ್ಯಾಡ್ಮಿಂಟನ್‌ ಟೂರ್ನಿಯನ್ನು ಮುಂದಿನ ವರ್ಷ ನಡೆಸಲು ಬಿಬ್ಲ್ಯುಎಫ್‌ ನಿರ್ಧಾರ
Last Updated 15 ಸೆಪ್ಟೆಂಬರ್ 2020, 15:08 IST
ಅಕ್ಷರ ಗಾತ್ರ

ನವದೆಹಲಿ: ಡೆನ್ಮಾರ್ಕ್‌ನಲ್ಲಿ ನಿಗದಿಯಾಗಿದ್ದ ಪ್ರತಿಷ್ಠಿತ ಥಾಮಸ್‌ ಮತ್ತು ಊಬರ್‌ ಕಪ್‌ ಟೂರ್ನಿಯನ್ನು ವಿಶ್ವ ಬ್ಯಾಡ್ಮಿಂಟನ್‌ ಫೆಡರೇಷನ್‌ (ಬಿಡಬ್ಲ್ಯುಎಫ್‌) ಮಂಗಳವಾರ ಮುಂದಿನ ವರ್ಷಕ್ಕೆ ಮುಂದೂಡಿದೆ. ಕೋವಿಡ್–19 ಸೋಂಕು‌ ಪ್ರಕರಣಗಳುಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಮುಖ ತಂಡಗಳು ಟೂರ್ನಿಯಲ್ಲಿ ಭಾಗವಹಿಸಲು ಹಿಂಜರಿದ ಕಾರಣ ಈ ನಿರ್ಧಾರ ತಳೆಯಲಾಗಿದೆ.

ಅಕ್ಟೋಬರ್‌ 3ರಿಂದ 11ರವರೆಗೆ ಡೆನ್ಮಾರ್ಕ್‌ನ ಅರಾಹಸ್‌ನಲ್ಲಿ ಟೂರ್ನಿಯು ನಡೆಯಬೇಕಿತ್ತು. ಭಾರತ ಈಗಾಗಲೇ ಪುರುಷ ಹಾಗೂ ಮಹಿಳಾ ತಂಡಗಳನ್ನು ಪ್ರಕಟಿಸಿತ್ತು.

ಕೋವಿಡ್‌ ಹಿನ್ನೆಲೆಯಲ್ಲಿ ಥಾಯ್ಲೆಂಡ್‌, ಆಸ್ಟ್ರೇಲಿಯಾ, ಚೀನಾ ತೈಪೆ ಹಾಗೂ ಅಲ್ಜೀರಿಯಾ ತಂಡಗಳು ಟೂರ್ನಿಯಿಂದ ಹಿಂದೆ ಸರಿದಿದ್ದವು. ಇಂಡೊನೇಷ್ಯಾ ಹಾಗೂ ದಕ್ಷಿಣ ಕೊರಿಯಾ ತಂಡಗಳೂ ಭಾಗವಹಿಸುವುದಿಲ್ಲ ಎಂದುಶುಕ್ರವಾರ ಪ್ರಕಟಿಸಿದ್ದವು. ಈ ಹಿನ್ನೆಲೆಯಲ್ಲಿ ಭಾನುವಾರ ಬಿಡಬ್ಲ್ಯುಎಫ್‌ ಕೌನ್ಸಿಲ್‌, ಆನ್‌ಲೈನ್‌ ಮೂಲಕ ತುರ್ತುಸಭೆ ನಡೆಸಿತ್ತು.

‘ಆತಿಥ್ಯ ವಹಿಸಬೇಕಾಗಿದ್ದ ಬ್ಯಾಡ್ಮಿಂಟನ್‌ ಡೆನ್ಮಾರ್ಕ್‌ ಸಂಸ್ಥೆಯೊಂದಿಗೆ ಸಮಾಲೋಚಿಸಿದ ಬಳಿಕ ಥಾಮಸ್‌ ಮತ್ತು ಊಬರ್‌ ಕಪ್‌ ಟೂರ್ನಿಯನ್ನು ಮುಂದೂಡುವ ಕಠಿಣ ನಿರ್ಧಾರ ತೆಗೆದುಕೊಳ್ಳಲಾಯಿತು‘ ಎಂದು ಬಿಡಬ್ಲ್ಯುಎಫ್ ಹೇಳಿದೆ.

‘ಟೂರ್ನಿಗೆ ಪರ್ಯಾಯ ವೇಳಾಪಟ್ಟಿಯನ್ನು ನಿಗದಿ ಮಾಡಲು ಚಿಂತನೆ ನಡೆಸುತ್ತಿದ್ದೇವೆ. ಆದರೆ 2020ರಲ್ಲಿ ಟೂರ್ನಿ ನಡೆಸಲು ಸಾಧ್ಯವಿಲ್ಲ‘ ಎಂದೂ ಬಿಡಬ್ಲ್ಯುಎಫ್‌ ಸ್ಪಷ್ಟಪಡಿಸಿದೆ.

ಥಾಮಸ್‌ ಮತ್ತು ಊಬರ್‌ ಕಪ್‌ ಟೂರ್ನಿಯಿಂದ ಜಪಾನ್‌ ಕೂಡ ಹಿಂದೆ ಸರಿಯಲು ಯೋಚಿಸುತ್ತಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಅಲ್ಲದೆ ಚೀನಾ ಬ್ಯಾಡ್ಮಿಂಟನ್‌ ಸಂಸ್ಥೆ ಕೂಡ ತನ್ನ ಸರ್ಕಾರದ ಅನುಮತಿಯ ನಿರೀಕ್ಷೆಯಲ್ಲಿತ್ತು. ಟೂರ್ನಿಯಲ್ಲಿ ಭಾಗವಹಿಸುವುದನ್ನು ಖಚಿತಪಡಿಸಲು ಇದೇ 18 ಕಡೆಯ ದಿನವಾಗಿತ್ತು.

ಭಾರತದ ಖ್ಯಾತ ಆಟಗಾರ್ತಿ ಸೈನಾ ನೆಹ್ವಾಲ್ ಆಯೋಜಕರ ನಿರ್ಧಾರವನ್ನು ಭಾನುವಾರ ಪ್ರಶ್ನಿಸಿದ್ದರು. ’ಸಂಕಷ್ಟದ ಸಂದರ್ಭದಲ್ಲಿ ಟೂರ್ನಿಯನ್ನು ಆಯೋಜಿಸುವುದು ಎಷ್ಟು ಸರಿ‘ ಎಂದು ಕೇಳಿದ್ದ ಅವರು ‘ಟೂರ್ನಿ ಮುಂದೂಡುವುದೇ ಉಚಿತ‘ ಎಂದಿದ್ದರು.

ಮತ್ತೊಂದು ಮಹತ್ವದ ಬೆಳವಣಿಗೆಯಲ್ಲಿ ಅಕ್ಟೋಬರ್‌ 13ರಿಂದ 18ರವರೆಗೆ ನಡೆಯಲಿರುವ ಡೆನ್ಮಾರ್ಕ್‌ ಓಪನ್‌ ಟೂರ್ನಿಯನ್ನು ನಡೆಸಲು ನಿರ್ಧರಿಸಲಾಗಿದೆ. ಆದರೆ ಅಕ್ಟೋಬರ್‌ 20ರಿಂದ 25ರವರೆಗೆ ನಡೆಯಬೇಕಿದ್ದ ವಿಕ್ಟರ್‌ ಡೆನ್ಮಾರ್ಕ್‌ ಮಾಸ್ಟರ್ಸ್‌ ಟೂರ್ನಿಯನ್ನು ರದ್ದು ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT