ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಸ್‌ ಒಲಿಂಪಿಯಾಡ್‌: ಭಾರತ ‘ಎ’ – ಫ್ರಾನ್ಸ್ ಪಂದ್ಯ ಡ್ರಾ

Last Updated 1 ಆಗಸ್ಟ್ 2022, 20:15 IST
ಅಕ್ಷರ ಗಾತ್ರ

ಮಹಾಬಲಿಪುರಂ: ಚೆಸ್‌ ಒಲಿಂಪಿಯಾಡ್‌ನಲ್ಲಿ ಭಾರತ ‘ಎ’ ತಂಡದ ಗೆಲುವಿನ ಓಟಕ್ಕೆ ಫ್ರಾನ್ಸ್‌ ತಡೆಯೊಡ್ಡಿದೆ. ಆದರೆ ‘ಬಿ’ ತಂಡ ಸತತ ನಾಲ್ಕನೇ ಗೆಲುವು ಸಾಧಿಸಿತು.

ಸೋಮವಾರ ನಡೆದ ನಾಲ್ಕನೇ ಸುತ್ತಿನ ಹಣಾಹಣಿಯಲ್ಲಿ ಭಾರತ ಮತ್ತು ಫ್ರಾನ್ಸ್‌ 2–2 ರಲ್ಲಿ ಸಮಬಲ ಸಾಧಿಸಿದವು. ಎಲ್ಲ ನಾಲ್ಕೂ ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡವು.

ಟಾಪ್‌ಬೋರ್ಡ್‌ನಲ್ಲಿ ಆಡಿದ ಪಿ.ಹರಿಕೃಷ್ಣ ಅವರು ಜೂಲ್ಸ್‌ ಮೊಸಾರ್ಡ್‌ ಜತೆ ಪಾಯಿಂಟ್‌ ಹಂಚಿಕೊಂಡರು. ವಿದಿತ್‌ ಸಂತೋಷ್ ಗುಜರಾತಿ– ಲಾರೆಂಟ್ ಫ್ರೆಸಿನೆಟ್, ಅರ್ಜುನ್‌ ಎರಿಗೈಸಿ– ಮ್ಯಾಥ್ಯೂ ಕಾರ್ನೆಟ್, ಎಸ್‌.ಎಲ್‌.ನಾರಾಯಣನ್– ಮ್ಯಾಕ್ಸಿಮ್‌ ಲಗಾರ್ಡ್‌ ನಡುವಿನ ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡವು.

‘ಬಿ’ ತಂಡ ಜಯಭೇರಿ: ಯುವ ಆಟಗಾರರನ್ನು ಒಳಗೊಂಡಿರುವ ‘ಬಿ’ ತಂಡದ ಅಜೇಯ ಓಟ ಮುಂದುವರಿದಿದ್ದು, ನಾಲ್ಕನೇ ಸುತ್ತಿನಲ್ಲಿ 3–1 ರಲ್ಲಿ ಇಟಲಿ ತಂಡವನ್ನು ಮಣಿಸಿತು.

ಟಾಪ್‌ಬೋರ್ಡ್‌ನಲ್ಲಿ ಆಡಿದ ಡಿ.ಗುಕೇಶ್‌ ಅವರು ಡೇನಿಯಲ್‌ ವೊಕಾಟುರೊ ವಿರುದ್ಧ ಗೆದ್ದರೆ, ನಿಹಾಲ್‌ ಸರಿನ್‌ ಅವರು ಲುಕಾ ಮೊರೊನಿ ಅವರನ್ನು ಮಣಿಸಿದರು. ಇವರಿಬ್ಬರು ಪೂರ್ಣ ಪಾಯಿಂಟ್ಸ್‌ ಕಲೆಹಾಕಿದ್ದು, ತಂಡದ ಗೆಲುವಿಗೆ ಕಾರಣವಾಯಿತು. ಆರ್‌. ಪ್ರಗ್ನಾನಂದ– ಲೊರೆಂಜೊ ಲೊಡಿಕಿ, ರೌನಕ್‌ ಸಾಧ್ವಾನಿ– ಫ್ರಾನ್ಸಿಸ್ಕೊ ಸೊನಿಸ್‌ ನಡುವಿನ ಪಂದ್ಯ ಡ್ರಾದಲ್ಲಿ ಮುಕ್ತಾಯಗೊಂಡಿತು.

‘ಸಿ’ ತಂಡಕ್ಕೆ ಸೋಲು: ಮುಕ್ತ ವಿಭಾಗದಲ್ಲಿ ಕಣದಲ್ಲಿರುವ ಭಾರತದ ಮೂರನೇ ತಂಡ 1.5–2.5 ಪಾಯಿಂಟ್‌ಗಳಿಂದ ಸ್ಪೇನ್‌ ಎದುರು ಸೋತಿತು.

ಸೂರ್ಯಶೇಖರ್‌ ಗಂಗೂಲಿ– ಅಲೆಕ್ಸಿ ಶಿರೋವ್, ಎಸ್‌.ಪಿ.ಸೇತುರಾಮನ್– ಫ್ರಾನ್ಸಿಸ್ಕೊ ವಲೆಜೊ ಮತ್ತು ಮುರಳಿ ಕಾರ್ತಿಕೇಯನ್– ಜೈಮ್ ಸಂಟೊಸ್ ನಡುವಿನ ಪಂದ್ಯ ಡ್ರಾದಲ್ಲಿ ಕೊನೆಗೊಂಡವು. ಆದರೆ ಅಭಿಜಿತ್‌ ಗುಪ್ತಾ ಅವರು ಡೇವಿಡ್ ಆ್ಯಂಟನ್‌ ಗುಜಾರೊ ಎದುರು ಸೋತದ್ದು ಭಾರತಕ್ಕೆ ಮುಳುವಾಗಿ ಪರಿಣಮಿಸಿತು.

ಮಹಿಳಾ ತಂಡಕ್ಕೆ ಗೆಲುವು: ಮಹಿಳೆಯರ ವಿಭಾಗದಲ್ಲಿ ಭಾರತ ‘ಎ’ ತಂಡ 2.5–1.5 ಪಾಯಿಂಟ್‌ಗಳಿಂದ ಹಂಗರಿ ತಂಡವನ್ನು ಮಣಿಸಿತು.

ಕೊನೇರು ಹಂಪಿ– ತ್ರಾಂಗ್ ಹೊವಂಗ್, ಡಿ.ಹರಿಕಾ– ಟಿಸಿಯ ಗರಾ ಮತ್ತು ಆರ್‌.ವೈಶಾಲಿ– ಸಿದೊನಿಯಾ ಲಜಾರ್ನೆ ನಡುವಿನ ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡವು. ಸೊಕಾ ಗಾಲ್‌ ಅವರನ್ನು ಮಣಿಸಿದ ತಾನಿಯಾ ಸಚ್‌ದೇವ್‌, ಭಾರತದ ಗೆಲುವಿಗೆ ಕಾರಣರಾದರು.

‘ಬಿ’ ತಂಡ 2.5–1.5 ಪಾಯಿಂಟ್‌ ಗಳಿಂದ ಎಸ್ಟೋನಿಯ ವಿರುದ್ಧ ಗೆದ್ದರೆ, ‘ಸಿ’ ತಂಡ 1–3 ರಲ್ಲಿ ಜಾರ್ಜಿಯಾ ಕೈಯಲ್ಲಿ ಪರಾಭವಗೊಂಡಿತು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT