ಬುಧವಾರ, ನವೆಂಬರ್ 13, 2019
18 °C
ಎರಡನೇ ಸುತ್ತಿಗೆ ಬಿ.ಸಾಯಿಪ್ರಣೀತ್‌

ಚೀನಾ ಓಪನ್‌: ಸೈನಾ ನೆಹ್ವಾಲ್‌ಗೆ ಸೋಲು, ಕಶ್ಯಪ್‌ ಮುನ್ನಡೆ

Published:
Updated:

ಫುಝೌ, ಚೀನಾ: ಸೈನಾ ನೆಹ್ವಾಲ್‌ ಅವರ ನಿರಾಶಾದಾಯಕ ಪ್ರದರ್ಶನ ಮುಂದುವರಿಯುತ್ತಿದೆ. ಭಾರತದ ಆಟಗಾರ್ತಿ ಬುಧವಾರ ಚೀನಾ ಓಪನ್‌ ಟೂರ್ನಿಯ ಮೊದಲ ಸುತ್ತಿನಲ್ಲೇ ಆತಿಥೇಯ ದೇಶದ ಕೈ ಯಾನ್‌ ಯಾನ್‌ ಅವರಿಗೆ ನೇರ ಸೆಟ್‌ಗಳಲ್ಲಿ ಶರಣಾದರು.

ಪ‍್ರಶಸ್ತಿ ಗೆಲ್ಲುವ ಸ್ಥಳೀಯ ನೆಚ್ಚಿನ ಆಟಗಾರ್ತಿ ‌ಯಾನ್‌ ಯಾನ್‌ 21–9, 21–12 ರಿಂದ ಸೈನಾ ಅವರನ್ನು ಕೇವಲ 24 ನಿಮಿಷಗಳಲ್ಲಿ ಸದೆಬಡಿದರು. ವಿಶ್ವ ಕ್ರಮಾಂಕದಲ್ಲಿ ಸೈನಾ ಪ್ರಸ್ತುತ 9ನೇ ಸ್ಥಾನದಲ್ಲಿದ್ದಾರೆ.

ಆದರೆ ಪುರುಷರ ಸಿಂಗಲ್ಸ್‌ನಲ್ಲಿ, ಸೈನಾ ಅವರ ಪತಿ ಪರುಪಳ್ಳಿ ಕಶ್ಯಪ್‌, ಬಿ. ಸಾಯಿ ಪ್ರಣೀತ್‌ ಎರಡನೇ ಸುತ್ತಿಗೆ ಪ್ರವೇಶಿಸಿದರು. ಕಶ್ಯಪ್‌ 43 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ 21–14, 21–3 ರಿಂದ ಥಾಯ್ಲೆಂಡ್‌ನ ಸಿಥಿಕೊಮ್‌ ಥಾಮ್ಮಾಸಿನ್‌ ಅವರನ್ನು ಸೋಲಿಸಿದರು. ಕಶ್ಯಪ್‌ ಎರಡನೇ ಸುತ್ತಿನಲ್ಲಿ ಡೆನ್ಮಾರ್ಕ್‌ನ ವಿಕ್ಟರ್‌ ಆಕ್ಸೆಲ್‌ಸನ್‌ ಅವರನ್ನು ಎದುರಿಸಲಿದ್ದಾರೆ.

ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದ ಸಾಯಿಪ್ರಣೀತ್‌ ತೀವ್ರ ಸೆಣಸಾಟ ನಡೆಸಿ 15-21, 21-12, 21-10 ರಿಂದ ಇಂಡೊನೇಷ್ಯಾದ ಟಾಮಿ ಸುಗಿಯಾರ್ಟೊ ಅವರನ್ನು ಸೋಲಿಸಿದರು. ಮೊದಲ ಸುತ್ತಿನ ಈ ಪಂದ್ಯ 52 ನಿಮಿಷ ನಡೆಯಿತು. ವಿಶ್ವದ 11ನೇ ಕ್ರಮಾಂಕದ ಪ್ರಣೀತ್‌ ಮುಂದಿನ ಸುತ್ತಿನಲ್ಲಿ ಡೆನ್ಮಾರ್ಕ್‌ನ ಆ್ಯಂಡರ್ಸ್‌ ಅಂಟೊನ್‌ಸೆನ್‌ ಎದುರು ಆಡಲಿದ್ದಾರೆ.

ಮಿಕ್ಸ್ಡ್‌ ಡಬಲ್ಸ್‌ನಲ್ಲಿ ಪ್ರಣವ್‌ ಜೆರಿ ಚೋಪ್ರಾ –ಸಿಕ್ಕಿ ರೆಡ್ಡಿ ಜೋಡಿ 14–21, 14–21 ರಲ್ಲಿ ಚೀನಾ ತೈಪಿಯ ವಾಂಗ್‌ ಚಿ ಲಿನ್– ಚೆಂಗ್‌ ಚಿ ಯಾ ಜೋಡಿಗೆ ಮಣಿಯಿತು.‌

29 ವರ್ಷದ ಸೈನಾ, ಈ ವರ್ಷದ ಆರಂಭದಲ್ಲಿ ಇಂಡೊನೇಷ್ಯಾ ಮಾಸ್ಟರ್ಸ್‌ ಗೆದ್ದ ನಂತರ ಹಿನ್ನಡೆ ಅನುಭವಿಸುತ್ತಿದ್ದಾರೆ. ಫಿಟ್ನೆಸ್‌ ಸಮಸ್ಯೆಯೂ ಕಾಡುತ್ತಿದೆ. ಮೂರು ಟೂರ್ನಿಗಳಲ್ಲಿ ಮೊದಲ ಸುತ್ತನಲ್ಲೇ ಗಂಟುಮೂಟೆ ಕಟ್ಟಿದ್ದ ಅವರು, ಕಳೆದ ತಿಂಗಳು ಫ್ರೆಂಚ್‌ ಓಪನ್‌ನಲ್ಲಿ ಎಂಟರ ಘಟ್ಟ ತಲುಪಿದ್ದೇ ಉತ್ತಮ ಸಾಧನೆ ಎನಿಸಿತ್ತು.

ಪ್ರತಿಕ್ರಿಯಿಸಿ (+)