ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಫಿ ಡೇ ರ‍್ಯಾಲಿಯ ‘ಚಾಲನಾ ಶಕ್ತಿ’ ಸಿದ್ಧಾರ್ಥ

Last Updated 4 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ಕಾಫಿ ಪರಿಮಳ ಆಸ್ವಾದಿಸಲು ಮತ್ತು ಕಾರು ರ‍್ಯಾಲಿ ವೀಕ್ಷಿಸಲು ಇಡೀ ಜಗತ್ತು ಚಿಕ್ಕಮಗಳೂರಿನತ್ತ ಕಣ್ಣು ನೆಡುತ್ತದೆ. ಇದಕ್ಕೆ ಮಹತ್ವದ ಕೊಡುಗೆ ನೀಡಿದವರಲ್ಲಿ ಪ್ರಮುಖರು ಉದ್ಯಮಿ ವಿ.ಜಿ.ಸಿದ್ಧಾರ್ಥ ಹೆಗ್ಡೆ. ಅಪ್ಪಟ ಮಲೆನಾಡು ಚಿಕ್ಕಮಗಳೂರಿಗೆ ‘ಕಾಫಿ ಕಣಿವೆ‘ ಮತ್ತು ‘ಕಾರು ರ‍್ಯಾಲಿ ಹಬ್‌’ ಅನ್ವರ್ಥನಾಮ ಬಂದಿದ್ದರೆ ಅವರ ಅನನ್ಯ ಕೊಡುಗೆ ಇರುವುದನ್ನು
ಅಲ್ಲಗಳೆಯುವಂತಿಲ್ಲ.

ವಿಶ್ವದಲ್ಲೇ ನೆರಳಿನಲ್ಲಿ ಕಾಫಿ ಬೆಳೆಯುವ ಏಕೈಕ ಪ್ರದೇಶವೆಂದರೆ ಚಿಕ್ಕಮಗಳೂರು. ಅದೇ ರೀತಿ ನೆರಳಿನಡಿ ರ‍್ಯಾಲಿ ಕಾರು ಚಲಾಯಿಸುವ ಡರ್ಟ್‌ ಟ್ರ್ಯಾಕ್‌ ಇದ್ದರೆ ಅದು, ಜಗತ್ತಿನಲ್ಲೇ ಈ ಮಲೆನಾಡಿನ ಪ್ರದೇಶದಲ್ಲಿ ಮಾತ್ರ ಎನ್ನುವ ಮಾತನ್ನೂ ರ‍್ಯಾಲಿ ಚಾಲಕರು ಹೆಮ್ಮೆಯಿಂದ ಹೇಳುತ್ತಾರೆ.

ಚಿಕ್ಕಮಗಳೂರಿನ ಕಾಫಿಯ ಪರಿಮಳ ಹೇಗೆ ಮೂಗರಳಿಸಿ, ನಾಲಿಗೆ ಚಪ್ಪರಿಸುವಂತೆ ಮಾಡುತ್ತದೆಯೇ ಹಾಗೆಯೇ ಕಾಫಿ ನಾಡಿನಲ್ಲಿ ಪ್ರತಿ ವರ್ಷ ನಡೆಯುವ ಕಾರು ರ‍್ಯಾಲಿಯೂ ರ‍್ಯಾಲಿಪ್ರಿಯರಕಣ್ಣರಳಿಸುವಂತೆ ಮಾಡುತ್ತದೆ. ಅಂತಹ ಕಾರು ರ‍್ಯಾಲಿ ಸಂಘಟಿಸುವ ‘ಚಿಕ್ಕಮಗಳೂರು ಮೋಟಾರ್‌ ಸ್ಪೋರ್ಟ್ಸ್‌ ಕ್ಲಬ್‌ (ಎಂಎಸ್‌ಸಿಸಿ)’ ಹಿಂದೆ ಎರಡು ದಶಕಗಳಿಂದ ಪ್ರೇರಕ ಶಕ್ತಿಯಾಗಿದ್ದವರು ಸಿದ್ಧಾರ್ಥ ಹೆಗ್ಡೆ. ಕ್ರೀಡಾ ಚಟುವಟಿಕೆಗಳಿಗೆ ಅವರು ನೀಡಿರುವ ಪ್ರೋತ್ಸಾಹವನ್ನು ಜಿಲ್ಲೆಯ ಜನರಷ್ಟೇ ಅಲ್ಲ, ಹೊರಗಿನವರೂ ಪ್ರೀತಿಯಿಂದ ಸ್ಮರಿಸುತ್ತಾರೆ. ಚಿಕ್ಕಮಗಳೂರಿನಲ್ಲಿ ನಡೆಯುವ ಐಎನ್‌ಆರ್‌ಸಿ, ಎಪಿಆರ್‌ಸಿ ರ‍್ಯಾಲಿಗಳು ರ‍್ಯಾಲಿಪ್ರಿಯರ ಕಣ್ಣಿನಲ್ಲಿ ‘ಕಾಫಿ ಡೇ ರ‍್ಯಾಲಿ’ ಎಂದೇ ಗುರುತಿಸಿಕೊಂಡಿವೆ.

ಇಲ್ಲಿ ಪ್ರತಿ ವರ್ಷ ನಡೆಯುವ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಮೋಟಾರ್‌ ರ‍್ಯಾಲಿಯಲ್ಲಿ ಕೋಟ್ಯಂತರ ರೂಪಾಯಿ ವೆಚ್ಚವಾಗುತ್ತದೆ. ಐಆರ್‌ಸಿ, ಐಎನ್‌ಆರ್‌ಸಿ,ಏಷ್ಯಾ ಕಪ್‌, ಎಪಿಆರ್‌ಸಿ ರ‍್ಯಾಲಿಗಳನ್ನು ಸಂಘಟಿಸಬೇಕಾದರೆ ಕೋಟ್ಯಂತರ ರೂಪಾಯಿಗಳೇ ಬೇಕಾಗುತ್ತದೆ. ಮೋಟಾರ್ ರ‍್ಯಾಲಿ ದುಬಾರಿ ಕ್ರೀಡೆ! ಇದರಲ್ಲಿ ಉಳ್ಳವರಿಗೆ ಮಾತ್ರ ಭಾಗವಹಿಸಲು ಸಾಧ್ಯ ಮತ್ತು ಪ್ರಾಯೋಜಕರ ನೆರವಿನಿಂದಷ್ಟೇ ಸಂಘಟಿಸಲು ಸಾಧ್ಯ ಎಂದು ರ‍್ಯಾಲಿಪಟುಗಳು ಹೇಳುವ ಮಾತು ಒಪ್ಪಲೇಬೇಕು.

ಪ್ರಾಯೋಜಕತ್ವದ ಕೊರತೆ ನೀಗಿದ್ದ ಕಾಫಿ ಡೇ

1980ರ ದಶಕದಲ್ಲಿ ಆರಂಭವಾದ ‘ಕಾಫಿ 500’ ರ‍್ಯಾಲಿಗೆ ಜಿಲ್ಲೆಯಷ್ಟೇ ಅಲ್ಲ ಹೊರ ಜಿಲ್ಲೆ, ರಾಜ್ಯಗಳಿಂದಲೂ ಚಾಲಕ ಸ್ಪರ್ಧಿಗಳು ಬರುತ್ತಿದ್ದರು. ಈ ರ‍್ಯಾಲಿಯೇ ಮಲೆನಾಡಿಗರಲ್ಲಿ ಕಾರು ರ‍್ಯಾಲಿ ಆಸಕ್ತಿ ಬೆಳೆಸಿದ್ದು. ಆರಂಭದ ದಿನಗಳಲ್ಲಿ ಕಾಫಿ ಬೆಳೆಗಾರರು ಮತ್ತು ರ‍್ಯಾಲಿ ಆಸಕ್ತ ಸ್ಥಿತಿವಂತರು ರ‍್ಯಾಲಿಯ ಪ್ರಾಯೋಜಕತ್ವ ವಹಿಸುತ್ತಿದ್ದರು. ದಶಕ ಕಾಲ 11 ರ‍್ಯಾಲಿಗಳು ಕಾಫಿ ಬೆಳೆಗಾರರ ಪ್ರೋತ್ಸಾಹದಿಂದಲೇ ನಡೆದವು. ಕಾಫಿ ಬೆಲೆ ಕುಸಿದು, ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದಾಗ ರ‍್ಯಾಲಿ ಪ್ರಾಯೋಜಕತ್ವಕ್ಕೂ ಬರ ಬಂತು. ಮೂರು ವರ್ಷ ರ‍್ಯಾಲಿ ಸ್ಥಗಿತಗೊಂಡಿತು. 90ರ ದಶಕದ ಮಧ್ಯಂತರ ‘ಕಾಫಿ ಡೇ’ ಪ್ರಾಯೋಜಕತ್ವದಲ್ಲಿ ‘ಕಾಫಿ ಡೇ ರ‍್ಯಾಲಿ’ ಮರು ಚಾಲನೆ ಪಡೆಯಿತು.

‘ಕಾಫಿ 500’ ಕಾರು ರ‍್ಯಾಲಿ ಪಯಣ ಈಗ ಕಾಫಿ ನಾಡಿನಲ್ಲಿ ಏಷ್ಯಾ ಪೆಸಿಫಿಕ್‌ ರ‍್ಯಾಲಿ ಆತಿಥ್ಯ ವಹಿಸುವ ಹೆಗ್ಗಳಿಕೆ ಗಿಟ್ಟಿಸಿದೆ. ಭವಿಷ್ಯದಲ್ಲಿ ವಿಶ್ವಮಟ್ಟದ ಕಾರು ರ‍್ಯಾಲಿ ಚಾಂಪಿಯನ್‌ಷಿಪ್‌ (ಡಬ್ಲ್ಯುಆರ್‌ಸಿ) ಆತಿಥ್ಯದ ಅವಕಾಶ ಗಿಟ್ಟಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಎಂಎಸ್‌ಸಿಸಿ ಪದಾಧಿಕಾರಿಗಳನ್ನು ಸಿದ್ಧಾರ್ಥ ಹೆಗ್ಡೆ ಅವರು ಹುರಿದುಂಬಿಸಿಯೂ ಇದ್ದರಂತೆ.

‘ಸಿದ್ಧಾರ್ಥ ಹೆಗ್ಡೆ ಕುಟುಂಬದ ಆತಿಥ್ಯ‌ಕ್ಕೆ, ಇಲ್ಲಿನ ಜನರು ತೋರುವ ಅಭಿಮಾನಕ್ಕೆಮನಸೋತೇ ನಾನು ಪ್ರತಿ ಬಾರಿ ಇಲ್ಲಿ ನಡೆಯುವ ರ‍್ಯಾಲಿ ತಪ್ಪಿಸಿಕೊಳ್ಳುವುದಿಲ್ಲ’ ಎನ್ನುವ ಕೃತಜ್ಞತೆಯ ಮಾತನ್ನು ಹೇಳುತ್ತಿದ್ದರು ಏಷ್ಯಾ ಚಾಂಪಿಯನ್‌ ಚಾಲಕ ಗೌರವ್‌ ಗಿಲ್‌.

ಅಷ್ಟರಮಟ್ಟಿಗೆ ಸಿದ್ಧಾರ್ಥ ಅವರು, ಕಾರು ರ‍್ಯಾಲಿಗೆ ಒಂದು ಆಕರ್ಷಣೆ ತಂದುಕೊಟ್ಟಿದ್ದರು. ಪ್ರತಿ ವರ್ಷ ನವೆಂಬರ್‌, ಡಿಸೆಂಬರ್‌ನಲ್ಲಿ ನಡೆಯುವ ರ‍್ಯಾಲಿಗೆ ರ‍್ಯಾಲಿಪ್ರಿಯರು ಚಾತಕ ಪಕ್ಷಿಯಂತೆ ಎದುರು ನೋಡುತ್ತಾರೆ. ರಾಜ್ಯದ ಮೂಲೆ ಮೂಲೆಯಿಂದ, ಹೊರ ರಾಜ್ಯಗಳಿಂದ ಹಾಗೂ ವಿದೇಶಗಳಿಂದ ರ‍್ಯಾಲಿಪ್ರಿಯರು, ರ‍್ಯಾಲಿಪಟುಗಳು ಇಲ್ಲಿಗೆ ಬಂದು ವಾರಗಟ್ಟಲೆ ಬೀಡುಬಿಡುತ್ತಾರೆ.

ತೋಟದಲ್ಲೇ ಡರ್ಟ್‌ ಟ್ರ್ಯಾಕ್‌

ಜಿಲ್ಲೆಯಲ್ಲಿ 2013ಕ್ಕೂ ಮೊದಲುಕಾರು ರ‍್ಯಾಲಿ ನಡೆಸಲು ಕಡೂರು ತಾಲ್ಲೂಕಿನ ಎಮ್ಮೆದೊಡ್ಡಿ ರಸ್ತೆ ಮತ್ತು ಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದ ವಿಶಾಲ ಮೈದಾನವನ್ನು ಟ್ರ್ಯಾಕ್ ಆಗಿ ಬಳಸಲಾಗುತ್ತಿತ್ತು.

ರ್‍ಯಾಲಿ ಮೇಲೆ ಇದ್ದ ಪ್ರೀತಿಯಿಂದಾಗಿ ಸಿದ್ಧಾರ್ಥ ಅವರು ಸಾರ್ವಜನಿಕ ಜಾಗ ಮತ್ತು ಅರಣ್ಯ ಜಾಗ ಬಳಸದಂತೆ ಸಂಘಟಕರಿಗೆ ತಾಕೀತು ಮಾಡಿ, ತಮ್ಮದೇ ಒಡೆತನದ ಕಾಫಿ ಎಸ್ಟೇಟ್‌ಗಳಲ್ಲಿ ವಿಶ್ವ ದರ್ಜೆಯ ಡರ್ಟ್‌ ಟ್ರ್ಯಾಕ್‌ಗಳನ್ನು ಮಾಡಿಸಿಕೊಟ್ಟಿದ್ದರು. ಪ್ರತಿ ವರ್ಷವೂ ಟ್ರ್ಯಾಕ್‌ ಉತ್ತಮಪಡಿಸಲು ಮತ್ತು ಟ್ರ್ಯಾಕ್‌ ನಿರ್ವಹಣೆಗೆ ನೆರವು ನೀಡುತ್ತಿದ್ದರು. ಈ ಎಸ್ಟೇಟ್‌ಗಳಲ್ಲಿರುವ ರ‍್ಯಾಲಿ ಟ್ರ್ಯಾಕ್‌ಗಳು ಮಲೇಷ್ಯಾ, ನ್ಯೂಜಿಲೆಂಡ್‌ನಲ್ಲಿರುವ ಟ್ರ್ಯಾಕ್‌ಗಳಿಂತ ಕಡಿಮೆಯೇನೂ ಇಲ್ಲ ಎನ್ನುವ ಮೆಚ್ಚುಗೆ ಅಂತರಾಷ್ಟ್ರೀಯ ಮಟ್ಟದ ರ‍್ಯಾಲಿಪಟುಗಳದ್ದಾಗಿತ್ತು.

ಚೇತನಹಳ್ಳಿ, ಕಮ್ಮರಗೋಡು, ಚಂದ್ರಾಪುರ ಹಾಗೂ ಜಾಗೀನಮನೆ ಕಾಫಿ ಎಸ್ಟೇಟ್‌ಗಳಲ್ಲಿ ಹೆಚ್ಚು ಕಾಫಿಗಿಡ ಮತ್ತು ಮರಗಳನ್ನು ನಾಶಪಡಿಸದೆ ಖಾಲಿ ಜಾಗಗಳನ್ನು ಬಳಸಿಕೊಂಡೇ ಟ್ರ್ಯಾಕ್‌ ನಿರ್ಮಿಸಲಾಗಿದೆ.ಅಂಬರ್‌ ವ್ಯಾಲಿ ಇಂಟರ್‌ ನ್ಯಾಷನಲ್‌ ಶಾಲೆ ಮೈದಾನದಲ್ಲೂ ಪ್ರೇಕ್ಷಕ ಕೇಂದ್ರಿತ ರ‍್ಯಾಲಿಗೆ ಟ್ರ್ಯಾಕ್‌ ಒದಗಿಸಿದ್ದಾರೆ. ಸಂಘಟಕರು ವಿಶ್ವ ರ‍್ಯಾಲಿ ಚಾಂಪಿಯನ್‌ಷಿಪ್‌ ನಡೆಸಲು ಇನ್ನೂ ಸುಮಾರು 100 ಕಿ.ಮೀ. ಟ್ರ್ಯಾಕ್‌ ಅವಶ್ಯವಿದೆ ಎಂದಾಗ, ಅರೇಹಳ್ಳಿ ಬಳಿಯ ಉದಯವಾರದಲ್ಲಿರುವ ತಮ್ಮ ಒಡೆತನದ ಮತ್ತೊಂದು ಎಸ್ಟೇಟ್‌ನಲ್ಲೂ ಡರ್ಟ್‌ ಟ್ರ್ಯಾಕ್‌ ಮಾಡಿಕೊಳ್ಳಲು ಸಂಘಟಕರಿಗೆ ಅನುಮತಿ ನೀಡಿದ್ದರಂತೆ.

ಪ್ರವಾಸಿ ತಾಣ ಕೆಮ್ಮಣ್ಣುಗುಂಡಿ ಸಮೀಪ ಇರುವ ಸಿದ್ಧಾರ್ಥ ಒಡೆತನದ ಮತ್ತೊಂದು ಎಸ್ಟೇಟ್‌ ಲಾಲ್‌ಬಾಗ್‌ ಮತ್ತು ಕತ್ಲೆಖಾನ್‌ ಎಸ್ಟೇಟ್‌ನಲ್ಲಿ ಪ್ರತಿ ವರ್ಷ ಅಲ್ಟ್ರಾ ಮ್ಯಾರಥಾನ್‌ ಓಟದ ಸ್ಪರ್ಧೆಗೂ ಅನುವು ಮಾಡಿಕೊಟ್ಟು, ಜಗತ್ತಿನ ನಾನಾ ದೇಶಗಳ ರ‍್ಯಾಲಿಪಟುಗಳಿಗೆ ಪ್ರಕೃತಿಯ ಸೊಬಗು ಸವಿಯುವ ಅನುವು ಮಾಡಿಕೊಟ್ಟಿದ್ದಾರೆ.

ಪ್ರೇಕ್ಷಕರಿಗೂ ಆತಿಥ್ಯ

ರ‍್ಯಾಲಿ ನೋಡಲು ಬರುವ ಪ್ರೇಕ್ಷಕರಿಗೆ ಕುಡಿಯುವಷ್ಟು ಅವರದ್ದೇ ಕಾಫಿ ಡೇ ಕಂಪ‍ನಿಯ ಶುದ್ಧ ನೀರು, ಕಾಫಿ, ಮಧ್ಯಾಹ್ನದ ಊಟದ ವ್ಯವಸ್ಥೆಯನ್ನೂ ಸಿದ್ಧಾರ್ಥ ಅವರು ಮಾಡಿಸುತ್ತಿದ್ದರು. ಒಮ್ಮೆಪ್ರೇಕ್ಷಕ ಕೇಂದ್ರಿತ ರ‍್ಯಾಲಿಯ ವೀಕ್ಷಣೆಗೆ ಸಂಘಟಕರು ಟಿಕೆಟ್‌ ನಿಗದಿಪಡಿಸಿದ್ದಕ್ಕೆ ಬೇಸರಿಸಿಕೊಂಡಿದ್ದ ಅವರು, ಟಿಕೆಟ್‌ ರದ್ದುಪಡಿಸುವಂತೆ ಸೂಚಿಸಿ, ಟಿಕೆಟ್ ಮಾರಾಟದಿಂದ ನಿರೀಕ್ಷೆ ಮಾಡಿದಷ್ಟು ಹಣವನ್ನು ಸಂಘಟಕರಿಗೆ ಸ್ವತಃ ಭರಿಸಿದ್ದರಂತೆ.

ದೇಶ, ವಿದೇಶದಿಂದ ಬರುತ್ತಿದ್ದ ಹೆಸರಾಂತ ರ‍್ಯಾಲಿಪಟುಗಳಿಗೆ ಅವರದೇ ಒಡೆತನದ ಐಷಾರಾಮಿ ಸೆರಾಯ್‌ ರೆಸಾರ್ಟ್‌ನಲ್ಲಿ ವಾಸ್ತವ್ಯಕ್ಕೂ ಸೌಲಭ್ಯ ಕಲ್ಪಿಸಿ, ರಾಜಾತಿಥ್ಯ ಮಾಡುತ್ತಿದ್ದರು ಎಂದು ಸ್ಮರಿಸುತ್ತಾರೆ ಚಿಕ್ಕಮಗಳೂರು ಜಿಲ್ಲೆಯ ಹಿರಿಯ ರ‍್ಯಾಲಿಪಟುಗಳು.

ಪ್ರೇರಕ ಶಕ್ತಿ

ಪ್ರಾಯೋಜಕರಿಲ್ಲದೆ ಸೊರಗುತ್ತಿದ್ದ ಕಾರು ರ‍್ಯಾಲಿಗೆ ಮಲೆನಾಡಿನಲ್ಲಿ ನಿಜವಾದ ಕಳೆಗಟ್ಟುವಂತೆ, ನಮ್ಮೆಲ್ಲರ ಉತ್ಸಾಹ ಪುಟಿದೇಳುವಂತೆ ಮಾಡಿದ ಅಪ್ಪಟ ಕ್ರೀಡಾಪ್ರೇಮಿ ಎಂದರೆ ಸಿದ್ಧಾರ್ಥ ಹೆಗ್ಡೆ. ಅವರು ಯಾವತ್ತೂ ರ‍್ಯಾಲಿಗೆ ಏನೊಂದು ಕೊರತೆ ಎದುರಾಗದಂತೆ ನೋಡಿಕೊಂಡರು. 1995ರಿಂದಲೂ ಕಾಫಿ ಡೇ ಕಂಪನಿಯ ನಿರಂತರ ಪ್ರಾಯೋಜಕತ್ವ ವಹಿಸುತ್ತಿದೆ. ಪ್ರತಿಷ್ಠಿತ ಎಪಿಆರ್‌ಸಿ (ಏಷ್ಯಾ ಫೆಸಿಪಿಕ್‌ ರ‍್ಯಾಲಿ ಚಾಂಪಿಯನ್‌ಷಿಪ್‌) ರ‍್ಯಾಲಿ ಪ್ರಾಯೋಜಕತ್ವ ಭಾರತಕ್ಕೆ ಅದರಲ್ಲೂ ಚಿಕ್ಕಮಗಳೂರಿಗೆ ಸಿಕ್ಕಿದ್ದರೆ ಅದರ ಪೂರ್ಣ ಶ್ರೇಯ ಸಿದ್ಧಾರ್ಥ ಅವರಿಗೆ ಸಲ್ಲಬೇಕು ಎನ್ನುತ್ತಾರೆ ಹಿರಿಯ ರ‍್ಯಾಲಿಪಟು ಫಾರೂಕ್‌ ಅಹಮದ್‌.

ಕಾಫಿ ನಾಡಿಗೆ ವಿದೇಶಿ ಕಾರುಗಳ ದಾಂಗುಡಿ

ಕಾಫಿ ಕಣಿವೆಯಲ್ಲಿ ಕಾರು ರ‍್ಯಾಲಿಗೆ ಸಿಗುವ ಪ್ರೋತ್ಸಾಹದಿಂದಾಗಿ ಇಂದು ಸುಮಾರು ₹80 ಲಕ್ಷದಿಂದ ₹1 ಕೋಟಿವರೆಗಿನ ಬೆಲೆಯ ವಿದೇಶಿ ತಯಾರಿಯ ಸ್ಕೋಡಾ, ಸುಬಾರೊ ಕಾರುಗಳು ರ‍್ಯಾಲಿಯಲ್ಲಿ ದೂಳೆಬ್ಬಿಸುತ್ತವೆ. ಚಾಂಪಿಯನ್‌ ಚಾಲಕರಾದ ಗೌರವ್‌ ಗಿಲ್‌, ಗ್ಲೆನ್‌ ಮೆಕ್ಲೀನ್‌, ಜರ್ಮನಿಯ ಫ್ಯಾಬಿಯನ್‌ ಕ್ರೀಮ್‌–ಪ್ರಾಂಕ್‌ ಕ್ರಿಶ್ಚಿಯನ್‌, ನ್ಯೂಜಿಲೆಂಡಿನ ಮೈಕ್‌ಯಂಗ್‌–ಮ್ಯಾಲ್‌ಕಮ್‌ ರೀಡ್‌, ಸಂಜಯ್‌ ಟಕಲೆ–ಟಾಕಶೀಟಾನುರಿಯೊ, ಜಪಾನಿನ ಯುವ ಸುಮಿಯಾಮ–ಟಾಕಾಹೀರೊ ಯಸುಹಿ ಅವರ ಚಾಲನಾ ಸಾಮರ್ಥ್ಯ ಮತ್ತು ಕೌಶಲ ತೋರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT