ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

CWG 2022: ಪುರುಷರ ಲಾಂಗ್ ಜಂಪ್‌ನಲ್ಲಿ ಭಾರತದ ಶ್ರೀಶಂಕರ್‌ಗೆ ಬೆಳ್ಳಿ

Last Updated 5 ಆಗಸ್ಟ್ 2022, 13:36 IST
ಅಕ್ಷರ ಗಾತ್ರ

ಬರ್ಮಿಂಗ್‌ಹ್ಯಾಮ್: ಕಾಮನ್‌ವೆಲ್ತ್‌ ಕೂಟದ ಅಥ್ಲೆಟಿಕ್ಸ್‌ನಲ್ಲಿ ಭಾರತದ ಪದಕದ ಭರವಸೆ ಎನಿಸಿದ್ದ ಮುರಳಿ ಶ್ರೀಶಂಕರ್‌ ನಿರಾಸೆ ಉಂಟುಮಾಡಲಿಲ್ಲ. ಪುರುಷರ ಲಾಂಗ್‌ಜಂಪ್‌ನಲ್ಲಿ ಬೆಳ್ಳಿಯೆಡೆಗೆ ಜಿಗಿದು ಐತಿಹಾಸಿಕ ಸಾಧನೆ ಮಾಡಿದರು.

ಗುರುವಾರ ರಾತ್ರಿ ನಡೆದ ಸ್ಪರ್ಧೆಯಲ್ಲಿ ಅವರು 8.08 ಮೀ. ಸಾಧನೆಯೊಂದಿಗೆ ಎರಡನೇ ಸ್ಥಾನ ಪಡೆದರು. ಬಹಾಮಸ್‌ನ ಲಕ್ವಾನ್ ನಯರ್ನ್ ಚಿನ್ನ ಗೆದ್ದರು. ತುರುಸಿನ ಪೈಪೋಟಿ ನಡೆದ ಸ್ಪರ್ಧೆಯಲ್ಲಿ ಮುರಳಿ ಮತ್ತು ಲಕ್ವಾನ್‌ ಇಬ್ಬರೂ ಒಂದೇ ದೂರ ಕಂಡುಕೊಂಡರು.

ಇದರಿಂದ ಚಿನ್ನವನ್ನು ನಿರ್ಧರಿಸಲು ಇವರಿಬ್ಬರ ಎರಡನೇ ಅತ್ಯುತ್ತಮ ಪ್ರದರ್ಶನವನ್ನು ಪರಿಗಣಿಸಲಾಯಿತು. ಬಹಾಮಸ್‌ನ ಅಥ್ಲೀಟ್‌ನ ಎರಡನೇ ಅತ್ಯುತ್ತಮ ಪ್ರದರ್ಶನ 7.98 ಮೀ. ಆಗಿದ್ದರೆ, ಮುರಳಿ ಅವರದ್ದು 7.84 ಮೀ. ಆಗಿದೆ. ಆದ್ದರಿಂದ ಚಿನ್ನ ಲಕ್ವಾನ್‌ ಪಾಲಾಯಿತು.

ಲಾಂಗ್‌ಜಂಪ್‌ ನಿಯಮದ ಪ್ರಕಾರ, ಇಬ್ಬರು ಅಥ್ಲೀಟ್‌ಗಳ ನಡುವೆ ‘ಟೈ’ ಆದರೆ ಎರಡನೇ ಅತ್ಯುತ್ತಮ ಪ್ರದರ್ಶನದ ಆಧಾರದಲ್ಲಿ ವಿಜೇತರನ್ನು ನಿರ್ಧರಿಸಲಾಗುತ್ತದೆ. ದಕ್ಷಿಣ ಆಫ್ರಿಕಾದ ಯುವಾನ್ ವಾನ್ ವುರೆನ್ (8.06 ಮೀ.) ಕಂಚು ಗೆದ್ದರು.

ಕಣದಲ್ಲಿದ್ದ ಭಾರತದ ಇನ್ನೊಬ್ಬ ಸ್ಪರ್ಧಿ ಮುಹಮ್ಮದ್‌ ಅನೀಸ್‌ ಯಹ್ಯಾ (7.97 ಮೀ.) ಐದನೇ ಸ್ಥಾನ ಪಡೆದುಕೊಂಡರು.

ಮೊದಲ ಅಥ್ಲೀಟ್‌: ಕಾಮನ್‌ವೆಲ್ತ್‌ ಕೂಟದ ಲಾಂಗ್‌ಜಂಪ್‌ನಲ್ಲಿ ಬೆಳ್ಳಿ ಗೆದ್ದ ಭಾರತದ ಮೊದಲ ಅಥ್ಲೀಟ್‌ ಎಂಬ ಗೌರವ ಶ್ರೀಶಂಕರ್‌ಗೆ ಒಲಿಯಿತು. ಸುರೇಶ್‌ ಬಾಬು ಅವರು 1978ರ ಕೂಟದಲ್ಲಿ ಕಂಚು ಗೆದ್ದಿದ್ದರು.

ಮಹಿಳೆಯರ ವಿಭಾಗದಲ್ಲಿ ಪ್ರಜೂಶಾ ಮಲಿಯಕ್ಕಲ್‌ ಅವರು 2010ರ ನವದೆಹಲಿ ಕೂಟದಲ್ಲಿ ಬೆಳ್ಳಿ ಹಾಗೂ ಅಂಜು ಬಾಬಿ ಜಾರ್ಜ್‌ 2002 ರಲ್ಲಿ ಕಂಚು ಜಯಿಸಿದ್ದರು.

ಈ ಋತುವಿನಲ್ಲಿ 8.36 ಮೀ. ಸಾಧನೆಯೊಂದಿಗೆ, ಚಿನ್ನದ ಪದಕ ಗೆಲ್ಲುವ ‘ಫೇವರಿಟ್‌’ ಆಗಿದ್ದುಕೊಂಡು ಶ್ರೀಶಂಕರ್‌ ಕಾಮನ್‌ವೆಲ್ತ್‌ ಕೂಟಕ್ಕೆ ತೆರಳಿದ್ದರು. ನಿರೀಕ್ಷೆಯಂತೆ ಅಮೋಘ ಪ್ರದರ್ಶನ ನೀಡಿದರಾದರೂ, ಚಿನ್ನದ ಪದಕ ಅಲ್ಪ ಅಂತರದಲ್ಲಿ ಕೈತಪ್ಪಿತು.

ಮೊದಲ ನಾಲ್ಕು ಅವಕಾಶಗಳಲ್ಲಿ ಅವರು ನಿರಾಸೆ ಉಂಟುಮಾಡಿದರು. ಆರಂಭಿಕ ಪ್ರಯತ್ನದಲ್ಲಿ 7.64 ಮೀ. ದೂರ ಕಂಡುಕೊಂಡರೆ, ಎರಡು ಮತ್ತು ಮೂರನೇ ಪ್ರಯತ್ನದಲ್ಲಿ 7.84 ಮೀ. ದೂರ ಕಂಡುಕೊಂಡರು. ನಾಲ್ಕನೇ ಅವಕಾಶ ಫೌಲ್‌ ಆಯಿತು. ಮೊದಲ ನಾಲ್ಕು ಸುತ್ತುಗಳ ಕೊನೆಗೊಂಡಾಗ ಅವರು ಆರನೇ ಸ್ಥಾನದಲ್ಲಿದ್ದರು.

ಐದನೇ ಪ್ರಯತ್ನದಲ್ಲಿ 8.08 ಮೀ. ದೂರ ಜಿಗಿದು ಎರಡನೇ ಸ್ಥಾನಕ್ಕೇರಿದರು. ಕೊನೆಯ ಅವಕಾಶದಲ್ಲೂ ಅವರು 8 ಮೀ. ಗಡಿ ದಾಟಿದ್ದರು. ಆದರೆ ಜಿಗಿಯುವ ವೇಳೆ ಫುಟ್‌ಬೋರ್ಡ್‌ನಲ್ಲಿ ಅವರ ಕಾಲು 2 ಸೆಂ.ಮೀ. ನಷ್ಟು ಮುಂದೆ ಇದ್ದ ಕಾರಣ ಫೌಲ್‌ ಆಯಿತು. ಇಲ್ಲದಿದ್ದರೆ ಎರಡನೇ ಅತ್ಯುತ್ತಮ ಪ್ರದರ್ಶನದ ಬಲದೊಂದಿಗೆ ಚಿನ್ನ ಗೆಲ್ಲುತ್ತಿದ್ದರು.

ಪ್ರಮುಖ ಅಂತರರಾಷ್ಟ್ರೀಯ ಕೂಟದಲ್ಲಿ ಶ್ರೀಶಂಕರ್‌ಗೆ ದೊರೆತ ಮೊದಲ ಪದಕ ಇದಾಗಿದೆ. ಇದಕ್ಕೂ ಮುನ್ನ 2018 ರಲ್ಲಿ ಏಷ್ಯನ್‌ ಅಂಡರ್‌–20 ಚಾಂಪಿಯನ್‌ಷಿಪ್‌ನಲ್ಲಿ ಕಂಚು ಗೆದ್ದಿದ್ದರು. ಅಮೆರಿಕದ ಯೂಜಿನ್‌ನಲ್ಲಿ ನಡೆದಿದ್ದ ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನಲ್ಲಿ ಅವರು ಏಳನೇ ಸ್ಥಾನ ಪಡೆದಿದ್ದರು.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT