ಗುರುವಾರ , ಆಗಸ್ಟ್ 5, 2021
28 °C
ರಾಷ್ಟ್ರೀಯ ಅಂತರರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್ ಇಂದಿನಿಂದ

ಒಲಿಂಪಿಕ್ಸ್ ಅರ್ಹತೆ ಗಿಟ್ಟಿಸಲು ಹಿಮಾ, ದ್ಯುತಿಗೆ ಕೊನೆ ಅವಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪಟಿಯಾಲ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವ ಅವಕಾಶ ಪಡೆಯಲು ಅಥ್ಲೀಟ್‌ಗಳಾದ ದ್ಯುತಿ ಚಾಂದ್ ಮತ್ತು ಹಿಮಾ ದಾಸ್ ಅವರಿಗೆ ಶುಕ್ರವಾರ ಆರಂಭವಾಗಲಿರುವ  ಅಂತರರಾಜ್ಯ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್ ಕೊನೆಯ ಅವಕಾಶವಾಗಲಿದೆ.

ವಿಶ್ವ ಅಥ್ಲೆಟಿಕ್ಸ್‌ನಿಂದ ‘ಬಿ‘ ಕೆಟಗರಿ ಮಾನ್ಯತೆ ಪಡೆದಿರುವ ಸ್ಪರ್ಧೆ ಇದಾಗಿದೆ. ದೇಶದ ಪ್ರಮುಖ ಅಥ್ಲೀಟ್‌ಗಳು ಇಲ್ಲಿ ಕಣಕ್ಕಿಳಿಯುವರು. ಒಲಿಂಪಿಕ್ಸ್ ಅರ್ಹತಾ ಮಟ್ಟವನ್ನು ಮುಟ್ಟುವ ಅವಕಾಶವೂ ಇಲ್ಲಿದೆ. ಈ ಕೂಟವನ್ನು ಬೆಂಗಳೂರಿನಲ್ಲಿ ಆಯೋಜನೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ಕೋವಿಡ್ ಪರಿಸ್ಥಿತಿ ಕಾರಣದಿಂದ ಪ್ರಯಾಣದ ನಿರ್ಬಂಧಗಳು ಮತ್ತು ತೊಂದರೆಗಳನ್ನು ನಿವಾರಿಸಲು ಪಟಿಯಾಲದಲ್ಲಿಯೇ ನಡೆಸಲಾಗುತ್ತಿದೆ.

ಹೋದ ಸೋಮವಾರ  ಇಲ್ಲಿ ನಡೆದ ಇಂಡಿಯನ್ ಗ್ರ್ಯಾನ್‌ಪ್ರೀ 4 ರೇಸ್‌ನಲ್ಲಿ ದ್ಯುತಿ ಚಾಂದ್ ಅವರು ಮಹಿಳೆಯರ 100 ಮೀಟರ್ಸ್ ಓಟದಲ್ಲಿ ಸ್ವಲ್ಪ ಅಂತರದಿಂದ  ಒಲಿಂಪಿಕ್ಸ್ ಅರ್ಹತಾ ಮಟ್ಟವನ್ನು ತಪ್ಪಿಸಿಕೊಂಡಿದ್ದರು. ಅವರು 11.15 ಸೆಕೆಂಡುಗಳಲ್ಲಿ ಗುರಿ ತಲುಪಬೇಕಿತ್ತು. ಕೂದಲೆಳೆಯ ಅಂತರದಲ್ಲಿ ಹಿಂದುಳಿದಿದ್ದರು. ಆದರೆ ಇಲ್ಲಿ ಅವರು ತಮ್ಮದೇ ರಾಷ್ಟ್ರೀಯ ದಾಖಲೆಯನ್ನು ಉತ್ತಮಪಡಿಸಿಕೊಂಡಿದ್ದರು.

ಗಾಯದಿಂದ ಚೇತರಿಸಿಕೊಂಡಿರುವ ಹಿಮಾ ದಾಸ್ ಐಜಿಪಿ ಕೂಟದಲ್ಲಿ ಮಹಿಳೆಯರ 200 ಮೀಟರ್ಸ್ ಓಟದಲ್ಲಿ 20.88 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಆದರೆ ಒಲಿಂಪಿಕ್ಸ್‌ ಅರ್ಹತೆ ಪಡೆಯಲು ಅವರು 20.80 ಸೆಕೆಂಡುಗಳಲ್ಲಿ ಗುರಿ ಸಾಧಿಸಬೇಕಿತ್ತು. 

 ಹಿಮಾ, ದ್ಯುತಿ, ಅರ್ಚನಾ ಸುಚಿಂದ್ರನ್ ಮತ್ತು ಎಸ್. ಧನಲಕ್ಷ್ಮೀ  ಅವರು ಇರುವ 4X100 ಮೀ ರಿಲೆ ತಂಡವು ಕೂಡ ಒಲಿಂಪಿಕ್ಸ್ ಟಿಕೆಟ್ ಗಿಟ್ಟಿಸುವ ನಿರೀಕ್ಷೆಯಲ್ಲಿದೆ.

ಅನಾಸ್ ಯಾಹ್ಯಾ, ಅಮೋಜ್ ಜೇಕಬ್, ಆರೋಗ್ಯರಾಜೀವ ಮತ್ತು ನೊಹ್ ನಿರ್ಮಲ್ ಟಾಮ್ ಅವರಿರುವ ಪುರುಷರ ತಂಡವು 4X400 ಮೀಟರ್ ವಿಭಾಗದಲ್ಲಿ ಸ್ಪರ್ಧೆಗಿಳಿಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು