ಶುಕ್ರವಾರ, ಅಕ್ಟೋಬರ್ 30, 2020
27 °C
ದಿ ಸ್ಪೋರ್ಟ್ಸ್‌ ಸ್ಕೂಲ್‌

PV Web Exclusive: ಕ್ರೀಡೆ–ಶಿಕ್ಷಣ ಸಂಯೋಜಿತ ದೇಶದ ಮೊದಲ ಕ್ರೀಡಾಶಾಲೆ

ಗುರು ಪಿ.ಎಸ್. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: 28 ಎಕರೆಯ ವಿಶಾಲ ಪ್ರದೇಶ. ಅಂತರರಾಷ್ಟ್ರೀಯ ಮಟ್ಟದ ಆಟದ ಅಂಕಣಗಳು. ಬೌದ್ಧಿಕ ಶಕ್ತಿ ಹೆಚ್ಚಿಸಿಕೊಳ್ಳಲು ಸ್ಮಾರ್ಟ್‌ಕ್ಲಾಸ್, ದೈಹಿಕ ಸಾಮರ್ಥ್ಯ ಕಾಯ್ದುಕೊಳ್ಳಲು ಜಿಮ್. ಕ್ರೀಡೆಯಲ್ಲಿ ಸಾಧನೆ ಮಾಡಬೇಕು, ವಿದ್ಯಾಭ್ಯಾಸಕ್ಕೂ ತೊಂದರೆಯಾಗಬಾರದು ಎಂಬ ಕನಸು ಹೊಂದಿರುವವರ ಅನುಕೂಲಕ್ಕಾಗಿಯೇ  ತಲೆ ಎತ್ತಿದೆ ‘ದಿ ಸ್ಪೋರ್ಟ್ಸ್‌ ಸ್ಕೂಲ್‌’. 

ನಗರದ ಕನಕಪುರ ರಸ್ತೆಯ ವಡೇರಹಳ್ಳಿಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಈ ಸ್ಪೋರ್ಟ್‌ ಸ್ಕೂಲ್‌ ಕಾರ್ಯಾರಂಭ ಮಾಡಿದೆ. ಕ್ರೀಡೆ–ಶಿಕ್ಷಣ ಸಂಯೋಜಿತ ದೇಶದ ಏಕೈಕ ಶಾಲೆ ಇದು ಎನ್ನುತ್ತಾರೆ ಸ್ಪೋರ್ಟ್‌ ಸ್ಕೂಲ್‌ ನಿರ್ದೇಶಕ ಡಾ. ಯು.ವಿ. ಶಂಕರ್. 

ಬೋಧನಾ ಶುಲ್ಕ, ಊಟ–ವಸತಿ ಮತ್ತು ಕ್ರೀಡಾ ತರಬೇತಿ ಎಲ್ಲ ಸೇರಿ 4ರಿಂದ 12ನೇ  ತರಗತಿಯವರೆಗೆ ವರ್ಷಕ್ಕೆ ₹5.25 ಲಕ್ಷ ಶುಲ್ಕ ನಿಗದಿ ಮಾಡಲಾಗಿದೆ. ಪದವಿ, ಸ್ನಾತಕೋತ್ತರ ಪದವಿ ಕೋರ್ಸ್‌ಗಳೂ ಇಲ್ಲಿವೆ. ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡುವ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಸೌಲಭ್ಯವೂ ಇದೆ.

‘ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡುವ ಗ್ರಾಮೀಣ ವಿದ್ಯಾರ್ಥಿಗಳನ್ನು ಹುರಿದುಂಬಿಸುವ ಕೆಲಸವನ್ನೂ ಈ ಸಂಸ್ಥೆ ಮಾಡುತ್ತಿದೆ. ಇಂತಹ ವಿದ್ಯಾರ್ಥಿಗಳಿಂದ ಬೋರ್ಡಿಂಗ್‌ ಶುಲ್ಕ ಮಾತ್ರ ತೆಗೆದುಕೊಂಡು, ಉಚಿತವಾಗಿ ಶಿಕ್ಷಣ ಮತ್ತು ಕ್ರೀಡಾ ತರಬೇತಿ ನೀಡಲಾಗುತ್ತಿದೆ’ ಎಂದು ಶಂಕರ್ ಹೇಳುತ್ತಾರೆ. 

‘ಕಲಬುರ್ಗಿ ನಮ್ಮೂರು. 8ನೆಯ ತರಗತಿಯಲ್ಲಿ ಓದುತ್ತಿದ್ದೇನೆ. ಟೆನಿಸ್‌ನಲ್ಲಿ ನನಗೆ ಆಸಕ್ತಿ. ಆದರೆ, ಅಲ್ಲಿ ನನಗೆ ಉತ್ತಮ ತರಬೇತಿ ಸಿಗುತ್ತಿರಲಿಲ್ಲ. ಈಗ ಈ ಸ್ಪೋರ್ಟ್ಸ್‌ ಸ್ಕೂಲ್‌ ಸೇರಿದ್ದೇನೆ. ಉತ್ತಮವಾಗಿ ಆಡುವುದನ್ನು ಗುರುತಿಸಿ, ಇಲ್ಲಿ ಉಚಿತವಾಗಿ ಶಾಲೆಯ ಪ್ರವೇಶ ನೀಡಿದ್ದಾರೆ. ಅತ್ಯುತ್ತಮ ತರಬೇತಿಯನ್ನೂ ನೀಡುತ್ತಿದ್ದಾರೆ’ ಎನ್ನುತ್ತಾರೆ ಕಲಬುರ್ಗಿಯ ಶ್ರೀಕರ್‌ ಧೋನಿ. 

‘ಟೆನ್ನಿಸ್ ಆಟದ ಕೌಶಲಗಳ ಬಗ್ಗೆ ಹೇಳಿ ಕೊಡುತ್ತಿದ್ದಾರೆ. ವೃತ್ತಿಪರವಾಗಿ ಆಡುವುದನ್ನು ಕಲಿಯುತ್ತಿದ್ದೇನೆ’ ಎಂದು ಅವರು ಹೇಳುತ್ತಾರೆ. 

ಬ್ಯಾಡ್ಮಿಂಟನ್‌ ತರಬೇತುದಾರ ಪುಲ್ಲೇಲ ಗೋಪಿಚಂದ್, ಅಂತರರಾಷ್ಟ್ರೀಯ ಕ್ರಿಕೆಟಿಗರಾದ ವೆಂಕಟೇಶ ಪ್ರಸಾದ್, ರಾಬಿನ್‌ ಉತ್ತಪ್ಪ, ಡೇವಿಸ್‌ ಕಪ್‌ ಟೆನಿಸ್‌ ಆಟಗಾರ ರೋಹನ್‌ ಬೋಪಣ್ಣ, ಒಲಿಂಪಿಯನ್‌ ಈಜುಗಾರ್ತಿ ಶಿಖಾ ಟಂಡನ್ ಮತ್ತಿತರ ಕ್ರೀಡಾಪಟುಗಳು ಸಂಸ್ಥೆಯ ಕ್ರೀಡಾ ಸಲಹಾ ಮಂಡಳಿಯಲ್ಲಿ ಇದ್ದಾರೆ. 

‘ವಿದ್ಯಾರ್ಥಿ–ವಿದ್ಯಾರ್ಥಿನಿಯರ ಪ್ರತ್ಯೇಕ ಹಾಸ್ಟೆಲ್‌ಗಳು, ಉತ್ತಮ ಕೋಣೆ, ಡೈನಿಂಗ್ ಹಾಲ್, ಮೆಸ್, ಲೈಬ್ರರಿ ಎಲ್ಲ ವ್ಯವಸ್ಥೆ ಇದೆ. ಸೌರಶಕ್ತಿ ಉತ್ಪಾದನೆಯ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ಸಂಸ್ಥೆಗೆ ಬೇಕಾದ ವಿದ್ಯುತ್‌ ಅನ್ನು ಇಲ್ಲಿಂದಲೇ ಪಡೆದು, ಕೆಪಿಟಿಸಿಎಲ್‌ಗೂ ‌ ಮಾರಾಟ ಮಾಡಲಾಗುತ್ತಿದೆ’ ಎಂದು  ಶಂಕರ್ ಹೇಳಿದರು. 

ಪಕ್ಕದ ಸರ್ಕಾರಿ ಶಾಲೆಯನ್ನು ದತ್ತು ಪಡೆದುಕೊಂಡಿರುವ ಈ ‘ಸ್ಪೋರ್ಟ್ಸ್‌ ಸ್ಕೂಲ್‌’ ಅಲ್ಲಿನ ಮಕ್ಕಳಿಗೆ ಉಚಿತವಾಗಿ ಕ್ರೀಡಾ ತರಬೇತಿ ನೀಡುತ್ತಿದೆ. ಜೈನ್ ಡೀಮ್ಡ್‌‌ ವಿಶ್ವವಿದ್ಯಾಲಯದ ಅಡಿ ಕಾರ್ಯನಿರ್ವಹಿಸುತ್ತಿರುವ ಈ ಸ್ಪೋರ್ಟ್ಸ್‌ ಸ್ಕೂಲ್‌, ದೇಶಕ್ಕೆ ಒಲಿಂಪಿಕ್‌ ಪದಕ ತರುವ ರೀತಿಯಲ್ಲಿ ವಿದ್ಯಾರ್ಥಿಗಳನ್ನು ತರಬೇತುಗೊಳಿಸುವ ಗುರಿ ಹೊಂದಿದೆ. 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು