ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಹವ ದಂಡಿಸಿ... ದೇಗುಲವಾಗಿಸಿ...

Last Updated 9 ಡಿಸೆಂಬರ್ 2018, 20:15 IST
ಅಕ್ಷರ ಗಾತ್ರ

ಫಿಟ್‌ನೆಸ್‌ ಕಾರಣದಿಂದಲೇ ಬಾಲಿವುಡ್‌ನಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ನಟ ಟೈಗರ್‌ ಶ್ರಾಫ್‌. ಜಾಕಿ ಶ್ರಾಫ್‌ ಅವರ ಕುಡಿಯಾಗಿರುವ ಈ ನಟ, ಸದ್ಯ ಬಾಲಿವುಡ್‌ನ ಬೆಸ್ಟ್‌ ಆ್ಯಕ್ಷನ್‌ ಹೀರೊ. ಫಿಟ್‌ನೆಸ್‌ನಿಂದಲೇ ಚೆಲುವೆಯರ ಮನಗೆದ್ದಿದ್ದ ಹೃತಿಕ್‌ ರೋಷನ್‌ ಕೂಡ, ‘ಟೈಗರ್‌’ನ ಸೂಪರ್‌ ಹಾಟ್‌ ಅಂಗಸೌಷ್ಠವಕ್ಕೆ ಫಿದಾ ಆಗಿದ್ದಾರೆ. ಯುವತಿಯರ ಮನ ಕದಿಯುವ, ಯುವಕರ ಮನ ಕುದಿಯುವಂತೆ ಮಾಡುವ ಅವರ ದೇಹಸಿರಿಗೆ ಕಾರಣ ಶಿಸ್ತುಬದ್ಧ ಜೀವನ.

ಮೈ ಬಳುಕಿಸುವ ನೃತ್ಯ, ಮೈನವಿರೇಳಿಸುವ ಸ್ಟಂಟ್‌, ಪಂಚ್‌, ಬ್ಯಾಕ್‌ಫ್ಲಿಪ್ಸ್‌ನೆಲ್ಲ ಲೀಲಾಜಾಲವಾಗಿ ಟೈಗರ್‌ ಶ್ರಾಫ್‌ ನಿಭಾಯಿಸುತ್ತಿದ್ದಾರೆ ಎಂದರೆ ಅದಕ್ಕೆ ಕಾರಣ ಅವರ ಫಿಟ್‌ನೆಸ್‌. ಬಾಗಿ–2 ಮತ್ತು ಸ್ಟೂಡೆಂಟ್‌ ಆಫ್‌ ದಿ ಇಯರ್‌–2 ಚಿತ್ರದಲ್ಲಿ ಅವರು ಇದನ್ನು ಸಾಬೀತು ಮಾಡಿದ್ದಾರೆ. ಬಾಗಿ–2 ಚಿತ್ರ ಬಾಕ್ಸ್‌ಆಫೀಸ್‌ ಅನ್ನು ಲೂಟಿ ಹೊಡೆಯುತ್ತಿದ್ದಂತೆ, ಅವರ ‘ಫಿಟ್‌ನೆಸ್ ಮಂತ್ರ’ದ ಬಗ್ಗೆ ತಿಳಿಯುವ ಕುತೂಹಲ ಎಲ್ಲರಲ್ಲಿದೆ.

ಒಂದೊಂದು ದಿನ–ಒಂದೊಂದು ಕಸರತ್ತು
ಜಿಮ್‌ಗೆ ಹೋಗಿ ಕಸರತ್ತು ಆರಂಭಿಸುವುದಕ್ಕೆ ಮುನ್ನ, ದೇಹದಲ್ಲಿನ ಕೊಬ್ಬನ್ನು ಕರಗಿಸಲು ಆದ್ಯತೆ ನೀಡಬೇಕು ಎನ್ನುತ್ತಾರೆ ಟೈಗರ್‌ ಶ್ರಾಫ್‌. ದೇಹವನ್ನು ಬೇಕಾದಂತೆ ದಂಡಿಸಬೇಕು ಎಂದರೆ, ದೇಹದಲ್ಲಿನ ಹೆಚ್ಚುವರಿ ಕೊಬ್ಬಿನ ಅಂಶ ತೆಗೆಯಬೇಕು. ಈ ನಿಟ್ಟಿನಲ್ಲಿ ಅವರು, ಫಿಟ್‌ನೆಸ್‌ ಟ್ರೈನರ್‌ಗಳಿಂದ ತರಬೇತಿ ಪಡೆದಿದ್ದಾರೆ. ಅಲ್ಲದೆ, ವಾರದ ಒಂದೊಂದು ದಿನ, ತಮ್ಮ ದೇಹದ ಒಂದೊಂದು ಭಾಗವನ್ನು ಕೇಂದ್ರೀಕರಿಸಿ ಕಸರತ್ತು ಮಾಡುತ್ತಾರೆ.‌

ಸೋಮವಾರ ಬೆನ್ನಿನ ಭಾಗ, ಮಂಗಳವಾರ ಎದೆಭಾಗ, ಬುಧವಾರ ಕಾಲುಗಳು, ಗುರುವಾರ ತೋಳುಗಳು, ಶುಕ್ರವಾರ ಭುಜ, ಶನಿವಾರ ಕೈ ಮತ್ತು ಕಾಲುಗಳು, ಭಾನುವಾರ–ಹೊಟ್ಟೆಯ ಭಾಗಕ್ಕೆ ಕಸರತ್ತು ನೀಡುತ್ತಾರೆ. ಹೀಗೆ, ಕ್ರಮಬದ್ಧ, ಯೋಜನಾಬದ್ಧ ದೈಹಿಕ ಅಭ್ಯಾಸಗಳಿಂದ ಅವರು ತಮ್ಮ ದೇಹವನ್ನು ‘ದೇಗುಲ’ವನ್ನಾಗಿಸಿಕೊಂಡಿದ್ದಾರೆ.

ಬ್ರೂಸ್‌ ಲೀ, ಜಾಕಿ ಜಾನ್‌ ಅವರ ದೊಡ್ಡ ಅಭಿಮಾನಿಯಾಗಿರುವ ಟೈಗರ್‌ ಶ್ರಾಫ್‌, ಹಾಲಿವುಡ್‌ನಲ್ಲಿಯೂ ಅವಕಾಶ ಪಡೆಯಲು ಸಫಲರಾಗಿದ್ದಾರೆ. ಅವರ ಆರಾಧ್ಯ ದೈವ ಜಾಕಿಚಾನ್‌ ಅವರ ಜೊತೆ ನಟಿಸುವ ಅವಕಾಶ ಅವರಿಗೆ ಒಲಿದು ಬಂದಿದೆ ಎಂದರೆ ಅದಕ್ಕೆ ಕಾರಣ ಅವರ ದೇಹದಾರ್ಢ್ಯತೆ. ನಟನಾ ಕಲೆಗಳು ಮಾತ್ರವಲ್ಲದೆ, ಸಮರ ಕಲೆಗಳನ್ನೂ ಅವರು ರೂಢಿಸಿಕೊಂಡಿದ್ದಾರೆ. ಜಿಮ್ನಾಸ್ಟಿಕ್‌, ಮಾರ್ಷಲ್‌ ಆರ್ಟ್‌ಗಳಲ್ಲಿಯೂ ಪರಿಣತಿ ಸಾಧಿಸಿದ್ದಾರೆ ಟೈಗರ್‌. ಟೇಕ್ವಾಂಡೋದಲ್ಲಿ ಬ್ಲ್ಯಾಕ್‌ಬೆಲ್ಟ್‌ ಪಡೆದಿರುವುದು ಅವರ ಶ್ರದ್ಧೆಗೆ ಸಾಕ್ಷಿ. ಈ ವೇಳೆಅವರು ಪ್ರದರ್ಶಿಸಿದ್ದ ಸಾಹಸ ವಿಡಿಯೊ ಲಕ್ಷಾಂತರ ಮಂದಿಯ ಗಮನ ಸೆಳೆದಿತ್ತು.

ಶಿಸ್ತು ಮುಖ್ಯ
ಸ್ವಯಂ ಶಿಸ್ತು ಹೊಂದಿರುವ ವ್ಯಕ್ತಿ ಟೈಗರ್‌ ಶ್ರಾಫ್‌. ಇಂಥದ್ದೊಂದು ಶಿಸ್ತನ್ನು ಬೆಳೆಸಿಕೊಳ್ಳದಿದ್ದರೆ ಅವರು ಫಿಟ್‌ನೆಸ್‌ ಕಾಯ್ದುಕೊಳ್ಳಲು ಸಾಧ್ಯವೇ ಇಲ್ಲ. ರಾತ್ರಿ ವೇಳೆ ಊರು ಸುತ್ತುವುದು, ಮದ್ಯಪಾನ, ಧೂಮಪಾನ ಮಾಡುವ ದುರಾಭ್ಯಾಸ ಅವರಿಗಿಲ್ಲ. ಸಿನಿಮಾ ಶೂಟಿಂಗ್‌ ಇರದ ಸಂದರ್ಭದಲ್ಲಿ ರಾತ್ರಿ 10.30–11ರ ವೇಳೆಗೆ ನಿದ್ರೆಗೆ ಜಾರುವ ಅವರು, ಬೆಳಗಿನ ಜಾವ ಎದ್ದುಬಿಡುತ್ತಾರೆ. ಟೈಗರ್‌ ಶ್ರಾಫ್‌ರಂತಾಗಬೇಕು ಎಂದು ಬಯಸುವವರು ಜೀವನದಲ್ಲಿ ಅವರಂತೆ ಇಂಥ ಶಿಸ್ತನ್ನು ಅಳವಡಿಸಿಕೊಳ್ಳಲೇಬೇಕಾಗುತ್ತದೆ.

ಹೇಗಿದೆ ‘ಟೈಗರ್‌’ ಡಯಟ್‌ ?
ನಾವು ಸೇವಿಸುವ ಆಹಾರವೇ ನಮ್ಮ ಆರೋಗ್ಯದ ಮೂಲ. ಈ ವಿಷಯದಲ್ಲಿ ಮಾದರಿ ಆಹಾರ ಪದ್ಧತಿ ಅಳವಡಿಸಿಕೊಂಡಿದ್ದಾರೆ ಟೈಗರ್‌ ಶ್ರಾಫ್‌. ಪಾತ್ರಕ್ಕೆ ತಕ್ಕಂತೆ ದೇಹದ ತೂಕವನ್ನು ಹೆಚ್ಚು–ಕಡಿಮೆ ಮಾಡಿಕೊಳ್ಳುವ ಸಂದರ್ಭ ಹೊರತು ಪಡಿಸಿದರೆ, ಉಳಿದ ಸಂದರ್ಭದಲ್ಲಿ ಕಟ್ಟುನಿಟ್ಟಿನ ಡಯಟ್‌ ಪಾಲಿಸುತ್ತಾರೆ ಜೂನಿಯರ್‌ ಶ್ರಾಫ್‌.

ತಮ್ಮ ಬಹುತೇಕ ಗೆಳೆಯ–ಗೆಳತಿಯರು ಜಂಕ್‌ಫುಡ್‌ಗಳಿಗೆ ಮಾರುಹೋಗಿದ್ದರೆ, ಇವುಗಳನ್ನು ನೂರು ಮೈಲಾಚೆ ಇಟ್ಟಿದ್ದಾರೆ ಈ ಹೀರೊ. ತಂಪು ಪಾನೀಯ, ಪಿಜ್ಜಾ, ಬರ್ಗರ್‌ ಅವರಿಗೆ ದೂರ ದೂರ. ಎಣ್ಣೆಯಲ್ಲಿ ಕರಿದ ಇತರೆ ತಿಂಡಿಗಳನ್ನೂ ಸಂಜೆ 5ರ ನಂತರ ಅವರು ಮುಟ್ಟುವುದಿಲ್ಲ. ಆದರೆ, ವಿಶೇಷ ದಿನಗಳಲ್ಲಿ ಅಥವಾ ತೀರಾ ಅಪರೂಪದಲ್ಲಿ ಐಸ್‌ಕ್ರೀಂ, ಕೇಕ್‌, ಬಿಸ್ಕಟ್‌ಗಳನ್ನು ತಿನ್ನುವುದನ್ನು ಮರೆಯುವುದಿಲ್ಲ!

ಹೆಚ್ಚು ಪೋಷಕಾಂಶ ಹಾಗೂ ನಾರಿನ ಅಂಶಗಳಿರುವ ಆಹಾರವನ್ನು ಅಂದರೆ, ಬೇಯಿಸಿರುವ ಮೀನು, ಮೊಟ್ಟೆಯ ಬಿಳಿಯ ಪದರು, ಓಟ್ಸ್‌, ಹಸಿರು ತರಕಾರಿ ಸೇವಿಸುತ್ತಾರೆ. ಜೊತೆಗೆ, ಸ್ವಲ್ಪ ಬಾದಾಮಿ ತಿಂದು, ಗ್ರೀನ್‌ ಟೀ ಕುಡಿಯುತ್ತಾರೆ. ತಿಂಡಿ ಮತ್ತು ಊಟದ ನಡುವಿನ ಅವಧಿಯಲ್ಲಿ ಡ್ರೈ ಫ್ರೂಟ್ಸ್‌ ಸೇವಿಸುತ್ತಿರುತ್ತಾರೆ.

ಕೆಂಪಕ್ಕಿ ಅನ್ನ (ಬ್ರೌನ್‌ ರೈಸ್‌), ಚಿಕನ್‌ ಹಾಗೂ ಹಸಿರು ತರಕಾರಿಗೆ ಅವರ ಮಧ್ಯಾಹ್ನದ ಊಟ ಸೀಮಿತವಾಗಿರುತ್ತದೆ. ಸಂಜೆ, ವ್ಯಾಯಾಮ ಆರಂಭಿಸುವುದಕ್ಕೂ ಮುನ್ನ ಪ್ರೋಟೀನ್‌ ಶೇಕ್‌ ಕುಡಿಯುತ್ತಾರೆ.

ರಾತ್ರಿ, ತರಕಾರಿ ಮಾತ್ರ ಸೇವಿಸುತ್ತಾರೆ. ಆದರೆ, ಇಡೀ ದಿನ ಸಾಕಷ್ಟು ನೀರು ಕುಡಿಯುವುದನ್ನು ಮಾತ್ರ ಅವರು ಮರೆಯುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT