ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ರೆಂಚ್‌ ಓಪನ್‌ ಬ್ಯಾಡ್ಮಿಂಟನ್‌: ಲಯಕ್ಕೆ ಮರಳುವ ನಿರೀಕ್ಷೆಯಲ್ಲಿ ಸಿಂಧು

Last Updated 21 ಅಕ್ಟೋಬರ್ 2019, 19:12 IST
ಅಕ್ಷರ ಗಾತ್ರ

ಪ್ಯಾರಿಸ್‌: ವಿಶ್ವ ಚಾಂಪಿಯನ್‌ ಆದ ಬಳಿಕ ಭಾರತದ ಪಿ.ವಿ.ಸಿಂಧು ಫಾರ್ಮ್‌ ಕಂಡುಕೊಳ್ಳಲು ಪರದಾಡುತ್ತಿದ್ದಾರೆ. ಮಂಗಳವಾರ ಆರಂಭವಾಗುವ ಫ್ರೆಂಚ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಕಣಕ್ಕಿಳಿಯಲಿರುವ ಅವರು ಹಳೆಯ ವೈ‌ಭವಕ್ಕೆಮರಳುವ ನಿರೀಕ್ಷೆಯಿದೆ. ಸುಮಾರು ₹ 5.30 ಕೋಟಿ (7,50,000 ಡಾಲರ್‌) ಬಹುಮಾನ ಮೊತ್ತದ ಟೂರ್ನಿ ಇದಾಗಿದೆ.

ಆಗಸ್ಟ್‌ನಲ್ಲಿ ವಿಶ್ವ ಸಿಂಗಲ್ಸ್ ಕಿರೀಟ ಧರಿಸಿದ್ದ ಸಿಂಧು, ಆ ಬಳಿಕ ಆಡಿದ ಮೂರು ಟೂರ್ನಿಗಳಲ್ಲಿ ಎರಡನೇ ಸುತ್ತು ದಾಟಲು ವಿಫಲರಾಗಿದ್ದಾರೆ. ಚೀನಾ ಮತ್ತು ಕೊರಿಯ ಓಪನ್‌ಗಳಲ್ಲಿ ಕ್ರಮವಾಗಿ ಎರಡು ಹಾಗೂ ಮೂರನೇ ಸುತ್ತಿನಲ್ಲೇ ನಿರ್ಗಮಿಸಿದ್ದರು. ಹೋದ ವಾರ ಡೆನ್ಮಾರ್ಕ್‌ ಓಪನ್‌ನಲ್ಲೂ ಅವರ ಸವಾಲು ಎರಡನೇ ಸುತ್ತಿಗೇ ಅಂತ್ಯವಾಗಿತ್ತು. ಕೊರಿಯಾದ ಆ್ಯನ್‌ ಸೆ ಯಂಗ್‌ ಎದುರು ಅವರು ಸೋತಿದ್ದರು.

ಫ್ರೆಂಚ್‌ ಓಪನ್‌ ಟೂರ್ನಿಯಲ್ಲಿ ಐದನೇ ಶ್ರೇಯಾಂಕ ಪಡೆದಿರುವ ಅವರು, ಮೊದಲ ಸುತ್ತಿನಲ್ಲಿ ಕೆನಡಾದ ಮಿಶೆಲ್‌ ಲೀ ಎದುರು ಸೆಣಸುವರು. ವಿಶ್ವ ರ‍್ಯಾಂಕಿಂಗ್‌ನಲ್ಲಿ ಒಂಬತ್ತನೇ ಸ್ಥಾನದಲ್ಲಿರುವ ಲೀ, ಈ ಹಿಂದೆ ಎರಡು ಬಾರಿ ಸಿಂಧು ಅವರನ್ನು ಮಣಿಸಿದ್ದಾರೆ.

ಭಾರತದ ಇನ್ನೋರ್ವ ಪ್ರಮುಖ ಆಟಗಾರ್ತಿ ಸೈನಾ ನೆಹ್ವಾಲ್‌ ಫಾರ್ಮ್‌ ಕೂಡ ಕಳವಳಕ್ಕೆ ಕಾರಣವಾಗಿದೆ. ಹೋದ ಮೂರು ಟೂರ್ನಿಗಳನ್ನು ಅವರು ಮೊದಲ ಸುತ್ತುಗಳಲ್ಲೇ ಅಭಿಯಾನ ಕೊನೆಗೊಳಿಸಿದ್ದಾರೆ. 2012ರಲ್ಲಿ ಫ್ರೆಂಚ್‌ ಓಪನ್‌ ರನ್ನರ್‌ಅಪ್‌ ಆಗಿರುವ ಅವರು, ಮೊದಲ ಹಣಾಹಣಿಯಲ್ಲಿ ಹಾಂಗ್‌ಕಾಂಗ್‌ನ ಚೆವುಂಗ್‌ ಗಾನ್‌ ಯಿ ಅವರ ಎದುರು ಆಡುವರು.

ಪುರುಷರ ಸಿಂಗಲ್ಸ್ ವಿಭಾಗದಲ್ಲಿ 2017ರ ಚಾಂಪಿಯನ್ ಕಿದಂಬಿ ಶ್ರೀಕಾಂತ್‌, ಮೊದಲ ಸುತ್ತಿನಲ್ಲಿ ಚೀನಾ ತೈಪೆಯ ಚೊ ಟಿಯೆನ್‌ ಚೆನ್‌ ವಿರುದ್ಧ ಕಣಕ್ಕಿಳಿಯುವರು. ವಿಶ್ವ ‌ರ‍್ಯಾಂಕಿಂಗ್‌ನಲ್ಲಿ ಒಂಬತ್ತನೇ ಸ್ಥಾನದಲ್ಲಿರುವ ಶ್ರೀಕಾಂತ್‌ ಅವರಿಗೆ ಎರಡನೇ ಶ್ರೇಯಾಂಕದ ತೈಪೆ ಆಟಗಾರನ ತಡೆ ದಾಟುವುದು ಸುಲಭವಲ್ಲ.

ಇತರ ಸಿಂಗಲ್ಸ್ ಆಟಗಾರರ ಪೈಕಿ ಪರುಪಳ್ಳಿ ಕಶ್ಯಪ್‌, ಹಾಂಗ್‌ಕಾಂಗ್‌ನ ಎನ್‌ ಕಾ ಲಾಂಗ್‌ ಅಂಗಸ್‌ ಎದುರು, ಸಮೀರ್‌ ವರ್ಮಾ ಅವರು ಜಪಾನ್‌ ಕೆಂಟಾ ನಿಶಿಮೊಟೊ ವಿರುದ್ಧ ಮತ್ತು ಬಿ.ಸಾಯಿ ಪ್ರಣೀತ್‌ ಅವರು ಚೀನಾದ ಲಿನ್‌ ಡಾನ್‌ ಎದುರು ಆಡುವರು.

ಮಹಿಳಾ ಡಬಲ್ಸ್‌ ವಿಭಾಗದಲ್ಲಿ ಕನ್ನಡತಿ ಅಶ್ವಿನಿ ಪೊನ್ನಪ್ಪ–ಎನ್‌.ಸಿಕ್ಕಿ ರೆಡ್ಡಿ, ಪುರುಷರ ವಿಭಾಗದಲ್ಲಿ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ–ಚಿರಾಗ್‌ ಶೆಟ್ಟಿ, ಮತ್ತೊಂದು ಜೋಡಿ ಮನು ಅತ್ರಿ–ಬಿ.ಸುಮಿತ್‌ ರೆಡ್ಡಿ ಆಡಲಿದ್ದಾರೆ. ಮಿಶ್ರ ಡಬಲ್ಸ್‌ನಲ್ಲಿ ಸಾತ್ವಿಕ್‌ ಸಾಯಿರಾಜ್‌–ಅಶ್ವಿನಿ ಜೋಡಿ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT