ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟದ ಮನೆ: ಸೆಣೆಸಿಲ್ಲದ ಅಖಾಡದಲ್ಲಿ ಕುಸ್ತಿ ಕಲಿಗಳು

Last Updated 10 ಸೆಪ್ಟೆಂಬರ್ 2020, 0:58 IST
ಅಕ್ಷರ ಗಾತ್ರ
ADVERTISEMENT
"ವ್ಯಾಯಾಮನಿರತ ಅರ್ಜುನ್ ಹಲಕುರ್ಕಿ"
""
""

ಪದಕ ಗೆಲ್ಲುವ ಕನಸನ್ನು ಕಣ್ಣಲ್ಲಿಟ್ಟುಕೊಂಡಿರುವ ಕುಸ್ತಿಪಟುಗಳಲ್ಲಿ ರಫಿಕ್ ಹೊಳಿ, ಅರ್ಜುನ್ ಹಲಕುರ್ಕಿ ಕರ್ನಾಟಕದ ಮಟ್ಟಿಗೆ ಮುಖ್ಯರು. ಪುಣೆಯಲ್ಲಿ ನಡೆಯುತ್ತಿರುವ ಶಿಬಿರದಲ್ಲಿ ಈ ಇಬ್ಬರೂ ದೇಹವನ್ನೇನೋ ದಣಿಸುತ್ತಿದ್ದಾರೆ. ಸೆಣೆಸಾಡಲು ಜತೆಗಾರನಿಲ್ಲ ಎನ್ನುವುದು ವಿಷಾದ. ಕೋವಿಡ್ ಒಡ್ಡಿರುವ ಸವಾಲುಗಳ ನಡುವೆಯೂ ಅವರು ನಡೆಸಿರುವ ಅಭ್ಯಾಸದ ಪ್ರಕ್ರಿಯೆ ಆಸಕ್ತಿಕರ.

‘ಶ್ರೀರಾಮ ವನವಾಸಕ್ಕೆ ಹೋದನಲ್ಲ; ಹಾಗೆ ಆಗಿದೆ ನಮ್ಮ ಪರಿಸ್ಥಿತಿ’–ಕುಸ್ತಿಪಟು ರಫಿಕ್ ಹೊಳಿ ತಮ್ಮಂಥವರ ಈ ಹೊತ್ತಿನ ಪಡಿಪಾಟಲಿನ ಮೇಲೆ ತುಸು ವ್ಯಂಗ್ಯದ ಧಾಟಿಯಲ್ಲೇ ಬೆಳಕು ಚೆಲ್ಲಿದ್ದು ಹೀಗೆ.

ಲಾಕ್‌ಡೌನ್‌ ಆದಮೇಲೆ ಕ್ರೀಡಾಕ್ಷೇತ್ರದಲ್ಲಿ ಗಮನಾರ್ಹ ಬದಲಾವಣೆಗಳಾಗಿವೆ. ಹಾಗಿದ್ದೂ ಅಮೆರಿಕನ್ ಓಪನ್ ಟೆನಿಸ್ ನಡೆಯುತ್ತಿದೆ. ಇಂಡಿಯನ್ ಪ್ರೀಮಿಯರ್ ಲೀಗ್‌ ಕ್ರಿಕೆಟ್‌ಗೆ ಸಿದ್ಧತೆ ಜೋರಾಗಿಯೇ ಸಾಗಿದೆ. ನೂರು, ಇನ್ನೂರು, ನಾಲ್ಕುನೂರು ಮೀಟರ್ ಓಡುವವರ ಅಭ್ಯಾಸ ಅವಿರತವಾಗಿ ಸಾಗಿದೆ. ಅದೇ ಇಬ್ಬರು ಪರಸ್ಪರ ಹತ್ತಿರ ಆಗಲೇಬೇಕಾದ, ಸೆಣೆಸಬೇಕಾದ ಜೂಡೊ, ಬಾಕ್ಸಿಂಗ್, ಕುಸ್ತಿ ಇಂತಹ ಸ್ಪರ್ಧೆಗಳ ಸಿದ್ಧತೆಗೆ ಮಂಕು ಕವಿದಿದೆ. ದೈಹಿಕ ಕ್ಷಮತೆ, ಮನೋಬಲ ಕಾಪಾಡಿಕೊಳ್ಳುವುದರಲ್ಲಿ ಅವರೆಲ್ಲ ನಿರತರಾಗಿದ್ದಾರಾದರೂ, ತಂತ್ರನೈಪುಣ್ಯ, ತುರುಸಿನ ವರಸೆ ದಕ್ಕಿಸಿಕೊಡುವ ವ್ಯಕ್ತಿ–ವ್ಯಕ್ತಿಯ ನಡುವಿನ ಕಾದಾಟಕ್ಕೆ ಅವಕಾಶ ಸಿಗುತ್ತಿಲ್ಲ.

ಧಾರಾವಾಡದ ರಫಿಕ್ ಅಂದೊಡನೆ ಕುಸ್ತಿಪ್ರಿಯರ ಕಣ್ಣರಳುತ್ತದೆ. ಅರ್ಜುನ ಪ್ರಶಸ್ತಿ ಪುರಸ್ಕೃತರಾದ ಅವರು ಸೇನೆಯಲ್ಲಿ ಕೆಲಸ ಮಾಡುತ್ತಲೇ ಕುಸ್ತಿಗಾಗಿ ತಮ್ಮ ತನು–ಮನವನ್ನು ಮುಡಿಪಾಗಿಟ್ಟವರು. ಹತ್ತು ವರ್ಷಕ್ಕೂ ಹೆಚ್ಚು ಅವಧಿಯಿಂದ ಪುಣೆಯ ಕ್ಯಾಂಪ್‌ನಲ್ಲಿ ಅವರ ಪಟ್ಟುಗಳನ್ನು ಕಂಡವರು ಇದ್ದಾರೆ. ಆಸಕ್ತಿ ತುಸು ಕಡಿಮೆಯಾಯಿತೆಂದರೂ ಅಲ್ಲಿಂದ ಗೇಟ್‌ಪಾಸ್. ರಫಿಕ್ ಅವುಡುಗಚ್ಚಿ ಅಭ್ಯಾಸ ಮಾಡುತ್ತಲೇ ಇದ್ದಾರೆ. ಅವರೊಟ್ಟಿಗೆ ಬಾಗಲಕೋಟೆ ಜಿಲ್ಲೆಯ ಯುವಪ್ರತಿಭೆ ಅರ್ಜುನ್ ಹಲಕುರ್ಕಿ ಕೂಡ ಇದ್ದಾರೆ. ಗ್ರೆಕೊ ರೋಮನ್ ಬಗೆಯ ಕುಸ್ತಿಯಲ್ಲಿ ಈ ಇಬ್ಬರೂ ಕರ್ನಾಟಕದ ಮಟ್ಟಿಗೆ ಪದಕದ ಹೊಳಪುಗಳೇ. ಕಳೆದ ವರ್ಷವಷ್ಟೇ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಚಿನ್ನದ ಪದಕದ ಬೆಳಕನ್ನು ಕರ್ನಾಟಕ್ಕೆ ಕಾಣಿಸಿದ ಇಪ್ಪತ್ತೆರಡರ ಅರ್ಜುನ್, ಈಗ ಒಲಿಂಪಿಕ್ಸ್‌ ಟ್ರಯಲ್ಸ್ ಕನಸನ್ನು ಕಣ್ತುಂಬಿಕೊಂಡಿದ್ದಾರೆ. ಹೀಗಿರುವಾಗಲೇ ಕೊರೊನಾ ಸೋಂಕಿನ ವ್ಯಾಪಕತೆ ಈ ಇಬ್ಬರ ಗುರಿ ನಡುವೆ ಎಡರಿನಂತೆ ಕಾಣುತ್ತಿದೆ.

ಡಮ್ಮಿ ಬೊಂಬೆಗಳ ಜತೆ ಕುಸ್ತಿಪಟುಗಳೀಗ ಸ್ಪರ್ಧಿಸಿ ತಂತ್ರಗಳಲ್ಲಿ ಪಳಗುವುದು ಅನಿವಾರ್ಯವಾಗಿದೆ. ರಫಿಕ್ ತರಹದ ಹುರಿಯಾಳುಗಳಿಗೆ ಬೊಂಬೆಗಳ ಜತೆ ಕಾದಾಡುವುದು ಮುದ ನೀಡುವ ವಿಷಯವೇನಲ್ಲ. ಪಟ್ಟು, ಪ್ರತಿಪಟ್ಟು, ಸ್ಪರ್ಧೆಯ ನಡುವೆ ತಂತ್ರಗಾರಿಕೆ ಹುಟ್ಟುವುದು ಇವೆಲ್ಲವೂ ಜತೆಗಾರನೊಂದಿಗೆ ಸೆಣೆಸಿದರಷ್ಟೇ ತಲೆಯಲ್ಲಿ ಮೂಡುವ ವಿಷಯಗಳು.

‘ಹೀರೊ ಈಗ ಝೀರೊ ಆಗಿದ್ದಾನೆ, ಝೀರೊ ಹೀರೊ ಆಗುತ್ತಿದ್ದಾನೆ’ ಎಂದು ವಿಷಾದ ಬೆರೆತ ದನಿಯಲ್ಲಿ ಹೇಳಿದರು ರಫಿಕ್. ಅದು ಹೇಗೆ ಎನ್ನುವುದಕ್ಕೆ ಅವರು ನೀಡುವ ವಿವರಣೆ ಹೀಗಿದೆ: ‘ಈಗಿನ್ನೂ ಸ್ಪರ್ಧೆಯ ತಂತ್ರಗಳನ್ನು ಕಲಿಯುತ್ತಿರುವವರಿಗೆ ಎದುರಾಳಿಗಳ ಜತೆ ಸೆಣೆಸುವುದೀಗ ಸಾಧ್ಯವಿಲ್ಲದಿರುವುದು ವರದಾನವಾಗಿದೆ. ಯಾಕೆಂದರೆ, ತಂತ್ರಗಾರಿಕೆಯಲ್ಲಿ ಪಳಗಿದವರನ್ನು ಎದುರಿಸಿದಾಗ ಅವರ ಮನೋಬಲ ಸುಲಭವಾಗಿ ಹೆಚ್ಚಾಗುವುದಿಲ್ಲ. ಆದರೆ, ಈಗ ಅವರು ಬೊಂಬೆಗಳನ್ನು ಬಳಸಿಯೇ ಅಭ್ಯಾಸ ಮಾಡುತ್ತ ಸಾಕಷ್ಟು ಮೂಲತಂತ್ರಗಳನ್ನು ಕಲಿತುಕೊಳ್ಳುತ್ತಾರೆ. ಈಗಾಗಲೇ ಪದಕಗಳನ್ನು ಗಳಿಸಿರುವ ಸ್ಪರ್ಧಿಗಳಿಗೆ ಜತೆಗಾರನ ಜತೆ ಹೋರಾಡದೆ ತಂತ್ರವೃದ್ಧಿ ಸಾಧ್ಯವಿಲ್ಲ. ಹೀಗಾಗಿ ಅಂಥವರರಾದ ನಾವು ಝೀರೊಗಳಾಗಿಬಿಟ್ಟಿದ್ದೇವೆ.’

ಪುಣೆಯಲ್ಲಿನ ಕ್ಯಾಂಪ್‌ನಲ್ಲಿ ಈಗ 60 ಜನ ತರಬೇತಿ ಪಡೆಯುತ್ತಿದ್ದಾರೆ. ಮೂರು ಬ್ಯಾಚ್‌ಗಳಲ್ಲಿ ಅಭ್ಯಾಸ ನಡೆಸುವುದು ಅನಿವಾರ್ಯ. ತಲಾ 20 ಜನರು ಒಂದು ತಂಡದಲ್ಲಿ ಇರುತ್ತಾರೆ. ಅನುಭವ, ಪ್ರತಿಭೆಗಳಿಗೆ ಆಧಾರವಾಗಿ ಮೂರೂ ತಂಡಗಳು ಇವೆ. ಬೆಳಿಗ್ಗೆ 6ರಿಂದ 7ರ ವರೆಗೆ ಒಂದು ತಂಡದ ಅಭ್ಯಾಸ. 7ರಿಂದ 8 ಹಾಗೂ 8ರಿಂದ 9ರವರೆಗೆ ಉಳಿದೆರಡರ ಸರದಿ. ಅಭ್ಯಾಸ ಮುಗಿದಮೆಲೆ ಉಪಾಹಾರ.

ಕುಸ್ತಿಪಟುಗಳು ಇಡೀ ದೇಹವನ್ನು ಕ್ಷಮತೆಗೆ ಅಣಿಗೊಳಿಸುವ ಸವಾಲಿದೆ. ದೇಹತೂಕ ಕಾಪಾಡಿಕೊಳ್ಳುವುದಂತೂ ಅನಿವಾರ್ಯ. ಆಯಾ ತೂಕದ ವಿಭಾಗದಲ್ಲೇ ಸೆಣೆಸಬೇಕಾಗಿರುವುದರಿಂದ ಸಾಮಾನ್ಯವಾಗಿ ಸ್ಪರ್ಧೆ ಹತ್ತಿರ ಬರುವವರೆಗೆ ಅಗತ್ಯಕ್ಕಿಂತ ಮೂರು ಕೆ.ಜಿಯಷ್ಟು ಹೆಚ್ಚಿಸಿಕೊಂಡು, ಆಮೇಲೆ ದಿಢೀರನೆ ಇಳಿಸಿಕೊಂಡು ಕಣಕ್ಕಿಳಿಯುತ್ತಾರೆ.

‘ಲಾಕ್‌ಡೌನ್‌ ಅವಧಿಯಲ್ಲಿ ನೂರರಲ್ಲಿ ತೊಂಬತ್ತೊಂಬತ್ತು ಸ್ಪರ್ಧಿಗಳ ದೇಹತೂಕ ಹೆಚ್ಚಾಗಿದೆ. ಸಾಕಷ್ಟು ಬೌಟ್‌ ಮಾಡಬೇಕು. ವ್ಯಾಯಾಮ ಮಾಡಬೇಕು. ಓಡಬೇಕು. ಉಠ್ ಭೈಸ್ ಹೆಚ್ಚಾಗಿ ಮಾಡುವುದು ನಮ್ಮ ಭಾರತದ ಪ್ರಮುಖ ಟ್ರೈನಿಂಗ್. ಇವೆಲ್ಲ ಇದ್ದೂ ಜತೆಗಾರನ ಜತೆ ಹೋರಾಡಿ, ಪೆಟ್ಟು ಮಾಡುವುದು–ಮಾಡಿಕೊಳ್ಳುವುದು ಇಲ್ಲದೇ ಇರುವುದರಿಂದ ಎಲ್ಲರ ದೇಹತೂಕದಲ್ಲಿ ತುಸು ವ್ಯತ್ಯಾಸ ಕಂಡುಬಂದಿದೆ. ಆದರೂ ಸ್ಪರ್ಧೆ ಹತ್ತಿರ ಬಂದರೆ ಎಲ್ಲರೂ ಹಳಿಗೆ ಮರಳುವುದರಲ್ಲಿ ಅನುಮಾನವೇ ಇಲ್ಲ’ ಎನ್ನುವುದು ರಫಿಕ್ ಅನುಭವದ ಮಾತು. ಅರ್ಜುನ್ ತಮ್ಮ ದೇಹತೂಕ ಹೆಚ್ಚಾಗಲು ಬಿಟ್ಟಿಲ್ಲ ಎನ್ನುವುದು ವಿಶೇಷ. ಕೈಯಲ್ಲಿ ಇರುವ ಸಣ್ಣದೊಂದು ನೋವಿನಿಂದ ಹೊರಬರುತ್ತಲೇ ಅವರು ಬೆವರು ಬಸಿಯುತ್ತಿದ್ದಾರೆ.

ದಿನಕ್ಕೆ ಐದಾರು ಮೊಟ್ಟೆಗಳ ಬಿಳಿಭಾಗ, ನೆನೆಸಿ, ಹದವಾಗಿ ಬೇಯಿಸಿದ ಹಲವು ಬಗೆಯ ಕಾಳುಗಳು, ರೊಟ್ಟಿ–ಮಾಂಸಾಹಾರ, ಬ್ರೆಡ್‌, ಜಾಮ್, ಕಸರತ್ತಿಗೆ ಮುನ್ನ ಹಾಗೂ ನಂತರ ಬಾಳೆಹಣ್ಣು...ಇವೆಲ್ಲ ಕುಸ್ತಿಪಟುಗಳ ‘ಆಹಾರದ ಮೆನು’ವಿನಲ್ಲಿ ಸೇರಿವೆ. ದಿನಕ್ಕೆ ನಾಲ್ಕು ಬಾರಿ ಆಹಾರ ಸೇವಿಸುವುದು ಅವರಿಗೆಲ್ಲ ರೂಢಿ.

ವ್ಯಾಯಾಮನಿರತ ಅರ್ಜುನ್ ಹಲಕುರ್ಕಿ

ಪ್ರತಿನಿತ್ಯದ ವ್ಯಾಯಾಮದ ರುಟೀನನ್ನು ರಫಿಕ್ ಹಾಗೂ ಅರ್ಜುನ್ ಬಿಚ್ಚಿಡುವುದು ಹೀಗೆ: ‘ದಿನಕ್ಕೆ 10 ಕಿ.ಮೀ. ಓಡುತ್ತೇವೆ. ಓಟದ ದೂರ ಕಡಿಮೆ ಮಾಡಿದರೆ, 500ರಷ್ಟು ಉಠ್ ಭೈಸ್ ಅನ್ನು ಒಂದೇ ಸಲ ಮಾಡಬೇಕು. ಆಮೇಲೆ ಪುಷ್‌ಅಪ್ಸ್. ಇವೆಲ್ಲವೂ ಇಡೀ ದೇಹವನ್ನು ಅಣಿಗೊಳಿಸುತ್ತವೆ. ಹಗ್ಗ ಹಿಡಿದು ಜಗ್ಗಾಡುವುದರಿಂದ ಕೈಗಳ ಸ್ನಾಯುಗಳೆಲ್ಲ ಗಟ್ಟಿಯಾಗುತ್ತವೆ. ಉಠ್ ಭೈಸ್ ಹೆಚ್ಚು ಮಾಡುವಾಗ ನಮ್ಮ ದೇಹ ಸಹಜವಾಗಿಯೇ ತುಸು ಹಿಂದಕ್ಕೆ ಜಗ್ಗುತ್ತದೆ. ಆಗ ಕಾಲುಗಳನ್ನು ಹಿಂದಕ್ಕೆ ಇಟ್ಟು ಆಡುವ ತಂತ್ರಗಾರಿಕೆಯಲ್ಲಿ ಪಕ್ಕಾ ಆಗಬಹುದು. ಭಾರತದ ಡಿಫೆನ್ಸ್‌ ಕಲಿಕೆಯ ಶೈಲಿ ಇದು. ಹಿಂದೆ ಅಭ್ಯಾಸಕ್ಕೆ ಹೆಚ್ಚು ಜಾಗ ಇರಲಿಲ್ಲ. ನಾಲ್ಕಡಿ ಉದ್ದ–ಅಗಲ, ಏಳು ಅಡಿ ಎತ್ತರದ ಸಣ್ಣ ಜಾಗವಿದ್ದರೂ ಉಠ್ ಭೈಸ್ ಮಾಡಿ ದೇಹವನ್ನು ದಂಡಿಸಬಹುದಿತ್ತು. ಹೀಗಾಗಿಯೇ ಅದು ಟ್ರೈನಿಂಗ್‌ನಲ್ಲಿ ಮುಖ್ಯ ವ್ಯಾಯಾಮವಾಗಿ ನಮ್ಮಲ್ಲಿ ರೂಢಿಯಲ್ಲಿದೆ.’

ಕುಸ್ತಿ ಆಡುವವರು ಬೆಳಿಗ್ಗೆ ತಿನ್ನುವ ಆಹಾರದ ಪ್ರಮಾಣದಲ್ಲಿ ಅರ್ಧದಷ್ಟನ್ನು ಮಾತ್ರ ರಾತ್ರಿ ಸೇವಿಸುತ್ತಾರೆ. ನಾಲ್ಕು ರೊಟ್ಟಿ ತಿನ್ನುವವರಿಗೆ ಎರಡಷ್ಟೇ. ಅರ್ಧ ಲೀಟರ್ ಹಾಲಿನ ಡಯಟ್‌ ಬೆಳಿಗ್ಗೆ ಇದ್ದರೆ, ರಾತ್ರಿ ಕಾಲು ಲೀಟರ್.

ಲಾಕ್‌ಡೌನ್‌ಗೆ ಮೊದಲು ಕ್ಯಾಂಪ್‌ನಲ್ಲಿ ಇರುವವರೆಲ್ಲ ಒಟ್ಟಿಗೆ ಅಭ್ಯಾಸ ಮಾಡುವ ಅವಕಾಶವಿತ್ತು. ಹೀಗಾಗಿ ಸೆಣಸಿನ ಮೂಲಕ ತಂತ್ರಗಾರಿಕೆ ವೃದ್ಧಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿತ್ತು.

ಕೋವಿಡ್ ಪರೀಕ್ಷೆ ಮಾಡಿಸಿ, ನೆಗೆಟಿವ್ ಬಂದವರನ್ನೆಲ್ಲ ಸೆಣೆಸಲು ಬಿಡಬಹುದಲ್ಲವೇ ಎಂಬ ಪ್ರಶ್ನೆಗೆ ರಫಿಕ್–ಅರ್ಜುನ್ ಕೊಡುವ ಉತ್ತರ ಆಸಕ್ತಿಕರವಾಗಿದೆ: ‘ಈಗ ಸ್ವಲ್ಪ ಸೋಂಕಿರುವವರೆಲ್ಲರಿಗೂ ಪಾಸಿಟಿವ್ ಬರುತ್ತಿದೆ. ಕುಸ್ತಿಯಲ್ಲಿ ತುಸು ವಯಸ್ಸಾದ ರೆಫರಿಗಳೂ ಇರುತ್ತಾರೆ. ಸ್ವಲ್ಪ ಹೆಚ್ಚುಕಡಿಮೆಯಾದರೂ ಇಡೀ ಶಿಬಿರವೇ ಆತಂಕದಲ್ಲಿ ಮುಳುಗಬೇಕಾದೀತು. ಅದಕ್ಕೇ ಕಾಂಟ್ಯಾಕ್ಟ್‌ ಇಲ್ಲದೆಯೇ ಅಭ್ಯಾಸ ಮಾಡುವುದು ಅನಿವಾರ್ಯವಾಗಿದೆ.’

ರಫೀಕ್

ಹರಿಯಾಣದಲ್ಲಿ ನಡೆಯುತ್ತಿರುವ ಕ್ಯಾಂಪ್‌ಗೆ ಹೋಗಿ, ಅಲ್ಲಿ ಒಲಿಂಪಿಕ್ಸ್ ಟ್ರಯಲ್ಸ್‌ಗೆ ಅರ್ಜುನ್ ಅಣಿಯಾಗಬೇಕಿತ್ತು. ಈಗ ಅಲ್ಲಿಗೆ ಹೋದರೆ ಮತ್ತೆ ಹದಿನಾಲ್ಕು ದಿನ ಕ್ವಾರಂಟೈನ್ ಆಗಬೇಕು. ಆ ಅವಧಿಯಲ್ಲಿ ಅಭ್ಯಾಸ ಮುಕ್ಕಾಗುತ್ತದೆ ಎನ್ನುವುದು ಅವರ ಅಭಿಪ್ರಾಯ. ಅದಕ್ಕೇ ಪುಣೆಯಲ್ಲೇ ಅಭ್ಯಾಸ ಮುಂದುವರಿಸಿ, ಟ್ರಯಲ್ಸ್ ಹೊತ್ತಿಗೆ ನೇರವಾಗಿ ಸಹ ಸ್ಪರ್ಧಿಗಳನ್ನು ಸೇರಿಕೊಳ್ಳಬೇಕೆಂದು ಅವರು ನಿರ್ಧರಿಸಿದ್ದಾರೆ.

ರಫಿಕ್‌ ಅದೆಷ್ಟೋ ಸಂಜೆಗಳಲ್ಲಿ ಮಾಡುವ ಅಭ್ಯಾಸ ಗಮನಾರ್ಹ. ಎದುರಾಳಿಯನ್ನು ಕಲ್ಪಿಸಿಕೊಂಡೇ ಅವರು ‘ಅಟ್ಯಾಕ್‌’ ಎನ್ನುತ್ತಾ ಮುನ್ನುಗ್ಗುತ್ತಾರೆ. ಡೆಫೆನ್ಸ್‌ ಮಾಡಬೇಕಾದ ಸನ್ನಿವೇಶಗಳೂ ಮನದಲ್ಲಿ ಸಹಜವಾಗಿಯೇ ಮೂಡುತ್ತದೆ. ಹೀಗೆ ಅಭ್ಯಾಸ ಮಾಡುವಾಗ ನಿರ್ದಿಷ್ಟ ಎದುರಾಳಿಯನ್ನು ಅವರು ಕಲ್ಪಿಸಿಕೊಂಡಿರುತ್ತಾರೆ. ಎದುರಾಳಿ ಇಲ್ಲದೆಯೂ ಇದ್ದಾನೆ ಎಂದು ಭಾವಿಸಿ ಒಬ್ಬರೇ ಸಿದ್ಧರಾಗುವ ಸಿನಿಮೀಯವೆನ್ನಿಸುವ ಈ ಬಗೆಯ ಅಭ್ಯಾಸವೀಗಅನಿವಾರ್ಯ.

‘ಎಷ್ಟೋ ಕುಸ್ತಿಪಟುಗಳ ಬದುಕನ್ನು ಕೋವಿಡ್ ಕೊಂದುಹಾಕಿದೆ. ಈ ಸ್ಪರ್ಧೆಯ ಸಹವಾಸವೇ ಬೇಡ ಎಂದು ಮನೆಗೆ ಹೋದ ಕೆಲವರಿಗೆ ಮದುವೆ ಮಾಡಿರುವ ಉದಾಹರಣೆಗಳೂ ಇವೆ. ಯಾರು ಅವುಡುಗಚ್ಚಿ ಕುಸ್ತಿಯನ್ನು ನೆಚ್ಚಿಕೊಂಡಿದ್ದಾರೆಯೋ ಅವರಷ್ಟೇ ಉಳಿದಿದ್ದಾರೆ’ ಎನ್ನುವ ರಫಿಕ್ ಮಾತು ಸಮಸ್ಯೆಯ ಸಿಕ್ಕುಗಳಿಗೆ ಕನ್ನಡಿ ಹಿಡಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT