ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೊ ಕಬಡ್ಡಿ ಲೀಗ್‌: ಪ್ಯಾಂಥರ್ಸ್‌ಗೆ ಮಣಿದ ಪಲ್ಟನ್; ಚಾಂಪಿಯನ್ನರಿಗೆ ಆಘಾತ

ಪ್ರೊ ಕಬಡ್ಡಿ ಲೀಗ್‌: ಚಾಂಪಿಯನ್ನರನ್ನು ಮಣಿಸಿದ ಸ್ಟೀಲರ್ಸ್‌; ಮಣಿಂದರ್‌, ಮೀತು ‘ಸೂಪರ್ ಟೆನ್‌’ ಸಾಧನೆ
Last Updated 7 ಜನವರಿ 2022, 16:32 IST
ಅಕ್ಷರ ಗಾತ್ರ

ಬೆಂಗಳೂರು: ಅರ್ಜುನ್ ದೇಶ್ವಾಲ್ ಅವರ ‘ಸೂಪರ್’ ಆಟದ ನೆರವಿನಿಂದ ಜೈಪುರ್ ಪಿಂಕ್ ಪ್ಯಾಂಥರ್ಸ್ ತಂಡ ಪ್ರೊ ಕಬಡ್ಡಿ ಲೀಗ್‌ನ ಶುಕ್ರವಾರದ ಪಂದ್ಯದಲ್ಲಿ ಗೆಲುವು ಸಾಧಿಸಿತು. ವೈಟ್‌ಫೀಲ್ಡ್‌ನ ಶೆರಟಾನ್ ಗ್ರ್ಯಾಂಡ್ ಹೋಟೆಲ್‌ನಲ್ಲಿ ಸಿದ್ಧಪಡಿಸಿರುವ ಮ್ಯಾಟ್‌ನಲ್ಲಿ ನಡೆದ ಹಣಾಹಣಿಯಲ್ಲಿ ಪ್ಯಾಂಥರ್ಸ್‌ 31–26ರಲ್ಲಿ ಪುಣೇರಿ ಪಲ್ಟನ್ ವಿರುದ್ಧ ಗೆದ್ದಿತು.

ಏಳು ಟಚ್‌ ಪಾಯಿಂಟ್‌ಗಳೊಂದಿಗೆ ಅರ್ಜುನ್ ಒಟ್ಟು 11 ಪಾಯಿಂಟ್ ಗಳಿಸಿ ಮಿಂಚಿದರು. ಆಲ್‌ರೌಂಡರ್ ಸಾಹುಲ್ ಕುಮಾರ್ ಮತ್ತು ಡಿಫೆಂಡರ್ ಸಂದೀಪ್ ಧುಲ್ ತಲಾ 4 ಪಾಯಿಂಟ್ ಕಲೆ ಹಾಕಿದರೆ ದೀಪಕ್ ಹೂಡಾ 3 ಪಾಯಿಂಟ್ ಗಳಿಸಿದರು. ಪುಣೇರಿ ಪರವಾಗಿ ಅಸ್ಲಾಂ ಇನಾಂದಾರ್ 6, ಪಂಕಜ್ ಮೋಹಿತೆ 4 ಮತ್ತು ಮೋಹಿತ್ ಗೋಯತ್ 3 ಪಾಯಿಂಟ್ ಗಳಿಸಿದರು.

ಚಾಂಪಿಯನ್ನರಿಗೆ ಆಘಾತ

ಜಿದ್ದಾಜಿದ್ದಿಯ ಹೋರಾಟದಲ್ಲಿ ಹರಿಯಾಣ ಸ್ಟೀಲರ್ಸ್, ಹಾಲಿ ಚಾಂಪಿಯನ್ ಬೆಂಗಾಲ್ ವಾರಿಯರ್ಸ್ ವಿರುದ್ದ 41–37ರಲ್ಲಿ ಜಯ ಗಳಿಸಿತು. ಆರಂಭದಲ್ಲಿ ಅಮೋಘ ಆಟವಾಡಿದ ಬೆಂಗಾಲ್ ಎದುರಾಳಿಗಳನ್ನು ಆಲ್‌ಔಟ್ ಮಾಡಿ ಮುನ್ನಡೆ ಸಾಧಿಸಿತ್ತು. ಆದರೆ ಮೀತು ಮತ್ತು ವಿಕಾಸ್ ಖಂಡೋಲ ಭರ್ಜರಿ ರೇಡಿಂಗ್ ಮೂಲಕ ಪಂದ್ಯಕ್ಕೆ ತಿರುವು ನೀಡಿದರು. ಮೀತು 10 ಟಚ್ ಪಾಯಿಂಟ್‌ಗಳೊಂದಿಗೆ ಮಿಂಚಿದರೆ ವಿಕಾಸ್ ಒಂದು ಬೋನಸ್ ಪಾಯಿಂಟ್‌ನೊಂದಿಗೆ 9 ಪಾಯಿಂಟ್ ಗಳಿಸಿದರು.

9 ಬೋನಸ್ ಪಾಯಿಂಟ್‌ ಸೇರಿದಂತೆ 14 ಪಾಯಿಂಟ್‌ಗಳನ್ನು ಕಲೆ ಹಾಕಿದ ಬೆಂಗಾಲ್ ವಾರಿಯರ್ಸ್ ನಾಯಕ ಮಣಿಂದರ್ ಸಿಂಗ್ ನಡೆಸಿದ ಹೋರಾಟಕ್ಕೆ ಮೊಹಮ್ಮದ್ ನಬಿಭಕ್ಷ್ ಆಲ್‌ರೌಂಡ್ ಆಟದ ಮೂಲಕ ಸಹಕಾರ ನೀಡಿದರು. ತಲಾ ಮೂರು ಟಚ್‌ ಪಾಯಿಂಟ್‌, ಬೋನಸ್ ಪಾಯಿಂಟ್ ಮತ್ತು ಟ್ಯಾಕ್ಲಿಂಗ್ ಪಾಯಿಂಟ್‌ಗಳನ್ನು ಅವರು ಗಳಿಸಿದರು.

ಮೊದಲಾರ್ಧದ ಮುಕ್ತಾಯಕ್ಕೆ 18–15ರ ಮುನ್ನಡೆ ಸಾಧಿಸಿದ್ದ ವಾರಿಯರ್ಸ್‌ ನಂತರ ಮುಗ್ಗರಿಸಿತು. ದ್ವಿತೀಯಾರ್ಧದ ಆರಂಭದಲ್ಲೇ ವಾರಿಯರ್ಸ್ ತಂಡವನ್ನು ಆಲ್‌ಔಟ್ ಮಾಡಿದ ಹರಿಯಾಣ ಸಮಬಲ ಸಾಧಿಸಿತು. ನಂತರ ಜಯದತ್ತ ಮುನ್ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT