ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಕ್ರಗಳ ಮೇಲೆ ಆರೋಗ್ಯಕರ ಸವಾರಿ

Last Updated 19 ಜನವರಿ 2020, 19:30 IST
ಅಕ್ಷರ ಗಾತ್ರ

ಮೈಸೂರಿನ ‘ಸೈಕ್ಲೊಪೀಡಿಯಾ’ ಯುವ ಮನಸ್ಸುಗಳಲ್ಲಿ ಸೈಕ್ಲಿಂಗ್‌ ಕುರಿತು ಆಸಕ್ತಿಯನ್ನು ಬೆಳೆಸುತ್ತಿದೆ. 2013ರಲ್ಲಿ ಆರಂಭವಾದ ಈ ಸಂಸ್ಥೆ ಹಲವು ಮಾದರಿಯ ಸೈಕ್ಲಿಂಗ್‌ಸ್ಪರ್ಧೆಗಳನ್ನು ಆಯೋಜಿಸುತ್ತಿದೆ. ಅಲ್ಲದೆ, ತರಬೇತಿ ನೀಡಿ ನೂರಾರು ಸೈಕ್ಲಿಸ್ಟ್‌ಗಳನ್ನು ರೂಪಿಸಿದೆ. ರಾಜ್ಯದ ಹೆಸರಾಂತ ಸೈಕ್ಲಿಸ್ಟ್ ಎನ್‌.ಲೋಕೇಶ್‌ ಅವರು ಚಿಣ್ಣರಿಗೆ, ಯುವ ಮನಸ್ಸುಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಇವರ ಮುಖ್ಯ ಉದ್ದೇಶ ಸೈಕ್ಲಿಂಗ್‌ ಸಂಸ್ಕೃತಿಯನ್ನು ಬೆಳೆಸುವುದು. ಈ ಮೂಲಕ ಎಲ್ಲರಲ್ಲೂ ಫಿಟ್‌ನೆಸ್‌ ಪ‍್ರಜ್ಞೆಯನ್ನು ಮೂಡಿಸುವುದು.

ಈ ತಿಂಗಳ 26ರಂದು ನೈಟ್‌ರೈಡ್‌ ಹಮ್ಮಿಕೊಂಡಿದ್ದು, 200ರಷ್ಟು ಸ್ಪರ್ಧಿಗಳು ಭಾಗವಹಿಸುತ್ತಿದ್ದಾರೆ. 44 ಕಿ.ಮೀ ದೂರದ ಗುರಿಯನ್ನು ಈ ರೈಡ್‌ ಹೊಂದಿದೆ. ಸ್ಪರ್ಧಿಗಳು ಸಂಜೆ 7ರಿಂದ ರಾತ್ರಿ 9ರವರೆಗೆ ಮೈಸೂರಿನ ವರ್ತುಲ ರಸ್ತೆಯನ್ನು ಒಂದು ಸುತ್ತು ಹಾಕಲಿದ್ದಾರೆ.ಈ ಮೂಲಕ ಗಣರಾಜ್ಯೋತ್ಸವವನ್ನು ಕ್ರೀಡಾ ಪ್ರಜ್ಞೆಯೊಂದಿಗೆ ‘ಸೈಕ್ಲೊಪಿಡಿಯಾ’ ಆಚರಿಸಲಿದೆ. ಈ ಹಿನ್ನೆಲೆಯಲ್ಲಿ ಸೈಕ್ಲಿಂಗ್‌ ಮೂಲಕ ಫಿಟ್‌ನೆಸ್‌ ಕಾಯ್ದುಕೊಳ್ಳುವ ಕುರಿತು ಸೈಕ್ಲೊಪಿಡಿಯಾ ಸ್ಥಾಪಕ, ಏಕಲವ್ಯ ಪ್ರಶಸ್ತಿ ವಿಜೇತರೂ ಆದ ಎನ್‌.ಲೋಕೇಶ್‌ ಅವರು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ್ದಾರೆ.‌

ಸೈಕ್ಲಿಂಗ್‌,ಫಿಟ್‌ನೆಸ್‌ ಕಾಯ್ದುಕೊಳ್ಳಲು ಹೇಗೆ ಸಹಾಯಕ?

ಸೈಕ್ಲಿಂಗ್‌ ಮಾಡುವುದರಿಂದ ನಮ್ಮ ಸ್ನಾಯುಗಳು ಬಲಗೊಳ್ಳುತ್ತವೆ. ದೇಹವನ್ನು ಸಪೂರವಾಗಿಸಲು ಇದಕ್ಕಿಂತ ಅಗ್ಗವಾದ, ವೆಚ್ಚವಿಲ್ಲದ, ಅಲ್ಪಶ್ರಮದ, ಆಯಾಸ ನೀಡದ, ಚೇತೋಹಾರಿ ಅನುಭವ ನೀಡುವ ಕ್ರೀಡೆ ಇನ್ನೊಂದಿಲ್ಲ. ಖುಷಿಯಿಂದ ಮುಂಜಾನೆಯೋ, ಮುಸ್ಸಂಜೆಯೋ ಸೈಕಲ್‌ನ ಪೆಡಲ್‌ಗಳನ್ನು ತುಳಿದರೆ ಸಾಕು, ನಮ್ಮ ಫಿಟ್‌ನೆಸ್‌ ಜೀವನದುದ್ದಕ್ಕೂ ಕಾಯ್ದುಕೊಳ್ಳಬಹುದು.

ನಿತ್ಯ ಎಷ್ಟು ಕಿ.ಮೀಕ್ರಮಿಸಬೇಕು?

ದಿನಕ್ಕೆ 2ರಿಂದ ಮೂರು ಕಿ.ಮೀ ಸೈಕ್ಲಿಂಗ್‌ ಮಾಡಬೇಕು. ಅಂದರೆ, 1 ಗಂಟೆ 40 ನಿಮಿಷ ಇದಕ್ಕೆ ಮೀಸಲಿಡಬೇಕು. ಒಮ್ಮೆಲೇ ಕಿ.ಮೀ.ಗಟ್ಟಲೆ ಸೈಕ್ಲಿಂಗ್‌ ಮಾಡದೇ ಕ್ರಮಿಸುವ ದೂರವನ್ನು ನಿಧಾನವಾಗಿ ಹೆಚ್ಚಿಸಿಕೊಳ್ಳಬೇಕು. ಇದರಿಂದ ಮಾನಸಿಕ ಮತ್ತು ದೈಹಿಕ ಒತ್ತಡವನ್ನು ಕಡಿಮೆಗೊಳಿಸಬಹುದು. ವಾರದಲ್ಲಿ ಐದು ದಿನ ನಿತ್ಯ ಸೈಕ್ಲಿಂಗ್‌ ಮಾಡಿದರೆ ಸಾಕು ದೇಹವನ್ನು ಆರೋಗ್ಯವಾಗಿ ಇಟ್ಟುಕೊಳ್ಳಬಹುದು.

ಸೈಕ್ಲಿಂಗ್‌ನಿಂದ ಮೂಳೆ, ಸ್ನಾಯುಗಳಿಗೆ ಹೆಚ್ಚು ಒತ್ತಡ ಬೀಳುತ್ತದೆ ಎಂಬ ಮಾತಿದೆಯಲ್ಲಾ?

ಇತರ ಕ್ರೀಡೆಗಳಿಗೆ ಹೋಲಿಸಿದರೆ ಗಾಯಗಳಾಗುವ ಸಂಭವ ಸೈಕ್ಲಿಂಗ್‌ನಲ್ಲಿ ಕಡಿಮೆ. ವಾರಕ್ಕೆ ಐದರಿಂದ 10 ಗಂಟೆವರೆಗೆ ಸೈಕ್ಲಿಂಗ್‌ ಮಾಡಿದರೆ ಸಾಕು. ತಿಂಗಳಲ್ಲಿ ದೇಹದ ಸಾಮರ್ಥ್ಯ ಉತ್ತಮಗೊಳ್ಳುತ್ತದೆ. ಯಾವುದೇ ಕೆಲಸವನ್ನು ಗೆಲುವಿನಿಂದ ಮಾಡಬಹುದು. ಕಾಸ್ಮೋಪಾಲಿಟನ್‌ ನಗರಗಳ ಉದ್ಯೋಗಸ್ಥರು, ಟೆಕಿಗಳು, ತಂತ್ರಜ್ಞರು, ವಿದ್ಯಾರ್ಥಿಗಳು ತಮ್ಮ ಫಿಟ್‌ನೆಸ್‌ ಕಾಯ್ದುಕೊಳ್ಳಲು ಸೈಕ್ಲಿಂಗ್‌ ಮೊರೆ ಹೋಗುತ್ತಾರೆ. ಮೂಳೆ– ಸ್ನಾಯುಗಳಿಗೆ ಒತ್ತಡ ಬೀಳುತ್ತದೆ. ಆದರೆ, ಗಂಭೀರ ಗಾಯಗಳಾಗುವುದು ಈ ಕ್ರೀಡೆಯಲ್ಲಿಲ್ಲ.‌

ಕೌಶಲ ಪ್ರಧಾನ ಕ್ರೀಡೆಯೇ?

‌ಇದು ಹೆಚ್ಚು ಕೌಶಲವೇನೂ ಬೇಡುವುದಿಲ್ಲ. ಆದರೆ, ಸ್ಪರ್ಧೆಗಳಲ್ಲಿ ಭಾಗವಹಿಸುವಾಗ ಕೌಶಲಗಳನ್ನು ನುರಿತವರಿಂದ ಕಲಿಯಬೇಕು. ಒಮ್ಮೆ ಸೈಕಲ್‌ ಸವಾರಿ ಮಾಡುವುದನ್ನು ಕಲಿತರೆ ನಾವು ಹೇಗೆ ಮರೆಯುವುದಿಲ್ಲವೋ ಹಾಗೆಯೇ ಗೊತ್ತಿಲ್ಲದೇ ಸೈಕ್ಲಿಂಗ್‌ನ ಕೌಶಲಗಳು ನಮ್ಮಲ್ಲಿ ಬೆರೆತುಹೋಗುತ್ತದೆ. ಪೆಡಲ್‌ಗಳನ್ನು ತುಳಿಯುವಾಗ ದೇಹದ ಪ್ರಮುಖ ಸ್ನಾಯುಗಳಿಗೆ ಉತ್ತಮ ವ್ಯಾಯಾಮವಾಗುತ್ತದೆ. ದೇಹದ ತ್ರಾಣವು ಇಮ್ಮಡಿಗೊಳ್ಳುತ್ತದೆ. ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸುವ ಇದು, ಏರೋಬಿಕ್‌–ಕಾರ್ಡಿಯೊ ವ್ಯಾಯಾಮಗಳು ನೀಡುವ ಅನುಭವ ಮತ್ತು ಪರಿಣಾಮವನ್ನೇ ನೀಡುತ್ತದೆ.‌

ಸೈಕ್ಲಿಂಗ್‌ ಹೆಚ್ಚು ಆಯಾಸ ನೀಡುತ್ತದೆ ಅಲ್ಲವೇ?

ಸೈಕಲ್‌ನಲ್ಲಿ ಗುಡ್ಡವೇರಿದಾಗ ಆದ ಆಯಾಸವನ್ನು ಇಳಿಜಾರಿನಲ್ಲಿ ಸಿಗುವ ಚೇತೋಹಾರಿ ಅನುಭವ ಮರೆಸಿಬಿಡುತ್ತದೆ. ಇತರ ಕ್ರೀಡೆಗಳಿಗೆ ಹೋಲಿಸಿದರೆ ದುಬಾರಿಯಲ್ಲದ, ಯಾವುದೇ ಖರ್ಚಿಲ್ಲದ, ಹೆಚ್ಚು ತೃಪ್ತಿ ನೀಡುವ ವ್ಯಾಯಾಮವಾಗಿದೆ. ಬಸ್‌, ರೈಲು, ಬೈಕ್‌ ಅನ್ನು ದೂರ ಪ್ರಯಾಣಕ್ಕೆ ಅವಲಂಬಿಸಬೇಕು. ಎರಡ್ಮೂರು ಕಿ.ಮೀ ಅಳತೆಯಲ್ಲೇ ಇರುವ ಕಾರ್ಯಗಳಿಗೆ ಸೈಕಲ್‌ ಅವಲಂಬಿಸುವುದನ್ನು ರೂಢಿಸಿಕೊಳ್ಳಬೇಕು.ಶ್ವಾಸ, ಹೃದಯ, ರಕ್ತನಾಳಗಳಿಗೆ ಉತ್ತಮ ವ್ಯಾಯಾಮ ನೀಡುವ ಇದು, ಈ ಎಲ್ಲ ಅಂಗಗಳ ಸಾಮರ್ಥ್ಯವನ್ನು ದ್ವಿಗುಣಗೊಳಿಸುತ್ತದೆ. ಉಸಿರಾಟ ಕ್ರಿಯೆಗೆ ಶಿಸ್ತಿನ ಆಯಾಮವನ್ನು ನೀಡುತ್ತದೆ. ಉಚ್ಛ್ವಾಸ, ನಿಶ್ವಾಸಗಳು ದೇಹದ ಉಷ್ಣತೆಯನ್ನು ಹೆಚ್ಚಿಸಿ ಬೆವರನ್ನು ಹೊರಹಾಕುತ್ತದೆ.

ನಾವೆಲ್ಲ ಸಣ್ಣ– ಸಣ್ಣ ಕೆಲಸಗಳಿಗೂ ವಾಹನಗಳನ್ನು ಅವಲಂಬಿಸಿದ್ದೇವೆ. ಅಲ್ಲವೇ?

ಮನೆಯಿಂದ ಹತ್ತಿರದ ಅಂಗಡಿಗೆ ದಿನಸಿ ಕೊಳ್ಳುವುದಕ್ಕೋ ಅಥವಾ ಮತ್ತೊಂದು ಕಾರ್ಯಕ್ಕೆ ಹೋಗಬೇಕಾದರೆ ಬೈಕು– ಕಾರುಗಳನ್ನು ಅವಲಂಬಿಸುವುದರ ಬದಲು ಕಾಲ್ನಡಿಗೆಯಲ್ಲೋ, ಸೈಕಲ್‌ನಲ್ಲೋ ಹೋಗಿ ಬಂದರೆ ದೇಹಕ್ಕೆ ವ್ಯಾಯಾಮವಾಗುತ್ತದೆ. ಅಂತೆಯೇ, ಇಂಧನ– ಹಣದ ಉಳಿತಾಯದ ಜೊತೆಗೆ ಎಲ್ಲರೂ ಪರಿಸರಪ್ರೇಮಿಗಳಾಗಬಹುದು!.ಪ್ರಪಂಚದಾದ್ಯಂತ ದಿನಕ್ಕೆ 100 ಕೋಟಿಗೂ ಹೆಚ್ಚು ಜನರು ಉದ್ಯೋಗ ಸ್ಥಳಗಳಿಗೆ ತೆರಳಲು, ಕ್ರೀಡೆ, ಸಂಚಾರಕ್ಕಾಗಿ ಸೈಕಲ್‌ ಬಳಸುತ್ತಾರೆ. ಚೀನಾ, ಜಪಾನ್‌, ಆಗ್ನೇಯ ಏಷ್ಯಾ,ಯೂರೋಪ್‌ಗಳಲ್ಲಿ ನಿತ್ಯ ಕೆಲಸಗಳಿಗೆ ಸೈಕಲ್‌ ಅನ್ನು ಈಗಲೂ ಅವಲಂಬಿಸುತ್ತಾರೆ.

ದೇಹತೂಕ ಇಳಿಸಿಕೊಳ್ಳಲು ಇದು ಹೇಗೆ ಸಹಕಾರಿ?

ದೇಹದ ತೂಕವನ್ನು ಸಮತೋಲನದಲ್ಲಿರಿಸಲು ಸೈಕ್ಲಿಂಗ್‌ ಸಹಕರಿಸುತ್ತದೆ. ಸಂಶೋಧನೆ ಪ್ರಕಾರ ವಾರದಲ್ಲಿ 2,000 ಕ್ಯಾಲರಿಯನ್ನು ಕರಗಿಸುತ್ತದೆ. ದಿನಕ್ಕೆ 300 ಕ್ಯಾಲರಿಯನ್ನು ಕರಗಿಸಬಹುದು. ಅರ್ಧಗಂಟೆ ಸೈಕ್ಲಿಂಗ್‌ ಮಾಡಿದರೆ ವರ್ಷಕ್ಕೆ ಏನಿಲ್ಲವೆಂದರೂ 5 ಕೆ.ಜಿಯಷ್ಟು ತೂಕ ಇಳಿಸಿಕೊಳ್ಳಬಹುದು.ನಿಧಾನವಾಗಿ ವ್ಯಾಯಾಮದ ಅವಧಿಯನ್ನು ಹೆಚ್ಚಿಸುವುದು, ಉತ್ತಮ ಆಹಾರಕ್ರಮದಿಂದ ದೇಹಾರೋಗ್ಯವನ್ನು ಕಾಪಾಡಿಕೊಳ್ಳಬಹುದು.ಹೃದಯ ಮತ್ತು ಶ್ವಾಸಕೋಶದ ಸ್ನಾಯುಗಳಿಗೆ ಉತ್ತಮ ವ್ಯಾಯಾಮ ಸಿಗುವುದರಿಂದ ಹೃದಯ ಸಂಬಂಧಿ ಕಾಯಿಲೆಗಳು ಸುಳಿಯುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT