ಹಾಕಿ ದಿಗ್ಗಜ, ಎರಡು ಬಾರಿಯ ಒಲಿಂಪಿಕ್ ಚಾಂಪಿಯನ್ ಕೇಶವ್ ದತ್ತ ನಿಧನ

ನವದೆಹಲಿ: 1948 ಮತ್ತು 1952ರ ಒಲಿಂಪಿಕ್ಸ್‌ಗಳಲ್ಲಿ ಚಿನ್ನ ಗೆದ್ದ ಭಾರತ ಹಾಕಿ ತಂಡದ ಆಟಗಾರ ಕೇಶವ ದತ್ತ(95) ವಯೋಸಹಜ ಕಾಯಿಲೆಗಳಿಂದಾಗಿ ಬುಧವಾರ ಕೋಲ್ಕತ್ತದ ನಿವಾಸದಲ್ಲಿ ನಿಧನರಾದರು. ಅವರಿಗೆ ಪತ್ನಿ, ಇಬ್ಬರು ಪುತ್ರರು ಮತ್ತು ಪುತ್ರಿ ಇದ್ದಾರೆ.
ಅವರ ಪತ್ನಿ ಮತ್ತು ಪುತ್ರರು ವಿದೇಶಗಳಲ್ಲಿ ನೆಲೆಸಿದ್ದು, ಕೇಶವ ಅವರು ಏಕಾಂತ ಜೀವನ ನಡೆಸುತ್ತಿದ್ದರು.
1925ರ ಡಿಸೆಂಬರ್ 29ರಂದು ಲಾಹೋರ್‌ನಲ್ಲಿ ಜನಿಸಿದ್ದ ಕೇಶವ ದತ್ತ, ದೇಶ ವಿಭಜನೆಯ ಬಳಿಕ ಕೋಲ್ಕತ್ತಾದಲ್ಲಿ ನೆಲೆಸಿದರು. ಭಾರತ ಹಾಕಿಯ ಸುವರ್ಣಯುಗದಲ್ಲಿ ಅವರು ತಂಡದ ಭಾಗವಾಗಿದ್ದರು.
1948ರ ಲಂಡನ್ ಒಲಿಂಪಿಕ್ಸ್ ಫೈನಲ್ ಪಂದ್ಯದಲ್ಲಿ ಭಾರತ ತಂಡವು ಆತಿಥೇಯ ಬ್ರಿಟನ್ ತಂಡವನ್ನು ಮಣಿಸಿ ಪ್ರಶಸ್ತಿಗೆ ಮುತ್ತಿಕ್ಕಿತ್ತು. ವೆಂಬ್ಲಿ ಕ್ರೀಡಾಂಗಣದಲ್ಲಿ ನಡೆದಿದ್ದ ಈ ಹಣಾಹಣಿಯಲ್ಲಿ ಭಾರತಕ್ಕೆ 4–0 ಜಯ ಒಲಿದಿತ್ತು. ಸ್ವಾತಂತ್ರ್ಯಾನಂತರ ತಂಡವು ಜಯಿಸಿದ ಮೊದಲ ಚಿನ್ನ ಇದಾಗಿತ್ತು.
ಇದಕ್ಕೂ ಮೊದಲು 1947ರಲ್ಲಿ ಹಾಕಿ ಮಾಂತ್ರಿಕ ಧ್ಯಾನ್ ಚಂದ್ ನಾಯಕತ್ವದಲ್ಲಿ ಭಾರತ ತಂಡವು ಪೂರ್ವ ಆಫ್ರಿಕಾ ಪ್ರವಾಸ ಕೈಗೊಂಡಾಗ ಕೇಶವ ತಂಡದಲ್ಲಿದ್ದರು.
1952ರ ಹೆಲ್ಸಿಂಕಿ ಒಲಿಂಪಿಕ್ಸ್‌ನ ಫೈನಲ್ ಪಂದ್ಯದಲ್ಲಿ ಭಾರತ 6–0ಯಿಂದ ನೆದರ್ಲೆಂಡ್ಸ್ ತಂಡವನ್ನು ಪರಾಭವಗೊಳಿಸಿ, ಸತತ ಐದನೇ ಬಾರಿ ಚಿನ್ನಕ್ಕೆ ಕೊರಳೊಡ್ಡಿತ್ತು.
ಮೋಹನ್ ಬಾಗನ್ ಹಾಕಿ ತಂಡದ ನಾಯಕರಾಗಿಯೂ ಅವರು ಆಡಿದ್ದರು.
‘ನಮ್ಮ ಕುಟುಂಬಕ್ಕೆ ಇದು ಅತಿ ದುಃಖದ ಸಂಗತಿ. ನಾನು ವರ್ಷದಲ್ಲಿ ನಾಲ್ಕೈದು ಬಾರಿ ಅವರನ್ನು ಭೇಟಿಯಾಗುತ್ತಿದ್ದೆ. ಆದರೆ ಕೋವಿಡ್ ಕಾರಣ 2019ರಿಂದ ಅವರನ್ನು ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ‘ ಎಂದು ಕೋಪನ್‌ಹೇಗನ್‌ನಲ್ಲಿರುವ ಕೇಶವ ಅವರ ಪುತ್ರಿ ಅಂಜಲಿ ಕೇಶವ ಪೌಲ್ಸನ್ ಹೇಳಿದ್ದಾರೆ.
ಇದೇ 13ನೇ ತಾರೀಕಿನೊಳಗೆ ಭಾರತಕ್ಕೆ ಬಂದು ತಂದೆಯ ಅಂತಿಮ ವಿಧಿವಿಧಾನದಲ್ಲಿ ಪಾಲ್ಗೊಳ್ಳುವುದಾಗಿ ಅವರು ಹೇಳಿದ್ದಾರೆ.
ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು, ಹಾಕಿ ಇಂಡಿಯಾ ಅಧ್ಯಕ್ಷ ಗ್ಯಾನೆಂದ್ರೊ ನಿಂಗೊಬಮ್ ಮತ್ತಿತರರು ಕೇಶವ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
We mourn the loss of the former Indian Hockey player and two-time Gold Medallist at the 1948 and 1952 Olympics, Keshav Datt. 🙏
May his soul rest in peace. #IndiaKaGame #RestInPeace pic.twitter.com/7EV8nWzZyv
— Hockey India (@TheHockeyIndia) July 7, 2021
The world of hockey lost one of its true legends today. Saddened at the passing away of Keshav Datt. He was a double Olympic gold medal winner, 1948 and 1952. A champion of India and Bengal. Condolences to his family and friends.
— Mamata Banerjee (@MamataOfficial) July 7, 2021
ಕೇಶವ್ ದತ್ತ ನಿಧನಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಹಾಕಿ ಇಂಡಿಯಾದ (ಎಚ್‌ಐ) ಅಧ್ಯಕ್ಷ ಜ್ಞಾನೇಂದ್ರೊ ನಿಂಗೊಬಮ್ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.