ಶನಿವಾರ, ಜೂನ್ 6, 2020
27 °C
ಅಳಲು ತೋಡಿಕೊಂಡ ಹಾಕಿ ಆಟಗಾರರು

ಅಭ್ಯಾಸಕ್ಕೆ ಅವಕಾಶ ಕೊಡಿ: ಪುರುಷ, ಮಹಿಳಾ ಹಾಕಿ ತಂಡದಿಂದ ಕ್ರೀಡಾ ಸಚಿವರಿಗೆ ಮನವಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ‘ನಾಲ್ಕು ಗೋಡೆಗಳ ಮಧ್ಯೆ ಇದ್ದು ಸಾಕಾಗಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಖಿನ್ನತೆಗೆ ಒಳಗಾಗುವ ಅಪಾಯ ಇದೆ. ಹೀಗಾಗಿ ಸಾಧ್ಯವಾದಷ್ಟು ಬೇಗ ಅಭ್ಯಾಸಕ್ಕೆ ಅವಕಾಶ ನೀಡಿ’ ಎಂದು ಭಾರತದ ಪುರುಷ ಹಾಗೂ ಮಹಿಳಾ ಹಾಕಿ ತಂಡದವರು ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜು ಅವರಿಗೆ ಮನವಿ ಮಾಡಿದ್ದಾರೆ.

ಪುರುಷ (34 ಮಂದಿ) ಹಾಗೂ ಮಹಿಳಾ (24) ತಂಡದವರು ಲಾಕ್‌ ಡೌನ್‌ ಜಾರಿಯಾದ ದಿನದಿಂದಲೂ ಬೆಂಗಳೂರಿನಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರದ (ಸಾಯ್‌) ಕೇಂದ್ರದಲ್ಲಿದ್ದಾರೆ.

ಅವರೊಂದಿಗೆ ರಿಜಿಜು ಅವರು ಗುರುವಾರ ಆನ್‌ಲೈನ್‌ ಮೂಲಕ ಸಂವಾದ ನಡೆಸಿದ್ದಾರೆ. ಸಾಯ್‌ ಅಧಿ ಕಾರಿಗಳು ಹಾಗೂ ಕೋಚ್‌ಗಳೂ ಇದ ರಲ್ಲಿ ಪಾಲ್ಗೊಂಡಿದ್ದರು. 

‘ವಿಶ್ವದ ಅಗ್ರ 12 ತಂಡಗಳ ಪೈಕಿ ನೆದರ್ಲೆಂಡ್ಸ್‌ ಹಾಗೂ ಬೆಲ್ಜಿಯಂ, ಈಗಾಗಲೇ ಅಭ್ಯಾಸ ಆರಂಭಿಸಿವೆ. ನಮ್ಮ ಕ್ರೀಡಾಪಟುಗಳು ತರಬೇತಿ ಇಲ್ಲದೆಯೇ ಎರಡು ತಿಂಗಳು ಕಳೆದಿದ್ದಾರೆ. ಆದಷ್ಟು ಬೇಗ ತರಬೇತಿ ಶಿಬಿರ ಪುನರಾರಂಭ ಮಾಡಿದರೆ ಹೆಚ್ಚು ಅನುಕೂಲವಾಗಲಿದೆ. ನಾಲ್ಕು ಮಂದಿಯನ್ನೊಳಗೊಂಡಂತೆ ಹಲವು ಗುಂಪುಗಳನ್ನು ಮಾಡಿ ಅಭ್ಯಾಸ ನಡೆಸಲು ಅನುಮತಿ ಕೊಡಬೇಕು. ಈ ವೇಳೆ ವೈಯಕ್ತಿಕ ಕೌಶಲಗಳಿಗೆ ಹೆಚ್ಚು ಒತ್ತು ನೀಡಲಾಗುತ್ತದೆ. ಅಂತರ ಕೂಡ ಕಾಪಾಡಿಕೊಳ್ಳಲಾಗುತ್ತದೆ’ ಎಂದು ಹಾಕಿ ತಂಡದ ಆಡಳಿತ ಮಂಡಳಿಯ ಸದಸ್ಯರೊಬ್ಬರು ಸಚಿವರಿಗೆ ಮನವಿ ಮಾಡಿಕೊಂಡಿದ್ದಾರೆ.

‘ಎಲ್ಲಾ ಕೇಂದ್ರಗಳಲ್ಲೂ ತರಬೇತಿ ಪುನರಾರಂಭಿಸುವುದು ನಮ್ಮ ಉದ್ದೇಶ. ಹೀಗಾಗಿ ತರಬೇತಿಯ ಗುಣಮಟ್ಟದ ಮೇಲೆ ನಿಗಾ ವಹಿಸಲು (ಎಸ್ಒಪಿ) ಆರು ಮಂದಿ ತಜ್ಞರ ಸಮಿತಿಯನ್ನು ರಚಿಸಿದ್ದೇವೆ. ಆನ್‌ಲೈನ್‌ ಸಂವಾದದ ವೇಳೆ ಆಟಗಾರರು ಹಾಗೂ ಕೋಚ್‌ಗಳು ನೀಡಿರುವ ಸಲಹೆಗಳನ್ನೂ ಪರಿಗಣಿಸುತ್ತೇವೆ. ಆದಷ್ಟು ಬೇಗ ಹಂತ ಹಂತವಾಗಿ ತರಬೇತಿ ಶಿಬಿರ ಪುನರಾರಂಭಿಸಲಿ
ದ್ದೇವೆ’ ಎಂದು ರಿಜಿಜು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಕ್ರೀಡಾಪಟುಗಳು ಸಾಧ್ಯವಾದಷ್ಟು ಬೇಗ ಅಭ್ಯಾಸ ಆರಂಭಿಸಬೇಕೆಂಬುದು ನಮ್ಮ ಆಶಯ. ಇದಕ್ಕಾಗಿ ಎಲ್ಲಾ ಬಗೆಯ ಸಹಕಾರ ನೀಡಲು ಸಿದ್ಧರಿದ್ದೇವೆ. ಇದೆಲ್ಲದರ ಜೊತೆಗೆ ಅಥ್ಲೀಟ್‌ಗಳ ಸುರಕ್ಷತೆಗೂ ಆದ್ಯತೆ ನೀಡಬೇಕಿದೆ. ಯಾರೊಬ್ಬರನ್ನೂ ಅಪಾಯಕ್ಕೆ ತಳ್ಳುವ ಕೆಲಸಕ್ಕೆ ನಾವು ಕೈಹಾಕುವುದಿಲ್ಲ. ಒಬ್ಬ ರಿಗೆ ಕೊರೊನಾ ಸೋಂಕು ತಗುಲಿದರೂ ಸಾಕು, ನಮ್ಮೆಲ್ಲಾ ಯೋಜನೆಗಳೂ ತಲೆಕೆಳಗಾಗುವ ಅಪಾಯವಿದೆ’ ಎಂದಿದ್ದಾರೆ.

‘ಕೋವಿಡ್‌ ನಂತರದ ಕಾಲಘಟ್ಟದಲ್ಲಿ ಹಲವು ಬದಲಾವಣೆಗಳಾಗಲಿವೆ. ಅದಕ್ಕೆ ನಾವೆಲ್ಲಾ ಒಗ್ಗಿಕೊಳ್ಳುವುದು ಅನಿವಾರ್ಯ’ ಎಂದೂ ನುಡಿದಿದ್ದಾರೆ.

‘ಒಲಿಂಪಿಕ್ಸ್‌ಗೂ ಮುನ್ನ ಮಾನಸಿಕ ಹಾಗೂ ದೈಹಿಕ ಸಾಮರ್ಥ್ಯ ಕಾಪಾಡಿಕೊಳ್ಳುವುದು ಅತ್ಯವಶ್ಯ. ಅಂಗಳದಲ್ಲಿ ಅಭ್ಯಾಸ ನಡೆಸಲು ಅನುವು ಮಾಡಿಕೊಟ್ಟರೆ ಖಿನ್ನತೆಗೆ ಒಳಗಾಗುವ ಅಪಾಯದಿಂದಲೂ ಪಾರಾಗಬಹುದು’ ಎಂದು ಭಾರತ ಪುರುಷರ ತಂಡದ ಅನುಭವಿ ಗೋಲ್‌ಕೀಪರ್‌ ಪಿ.ಆರ್‌.ಶ್ರೀಜೇಶ್‌ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು