ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೂರು ದಿನ ಅದ್ಧೂರಿ ದಶಮಾನೋತ್ಸವ

Last Updated 31 ಜನವರಿ 2018, 9:36 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಚಿಕ್ಕಬಳ್ಳಾಪುರ ನೂತನ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂದು 10 ವರ್ಷಗಳನ್ನು ಪೂರೈಸಿರುವ ಪ್ರಯುಕ್ತ ನಗರದ ಸರ್‌.ಎಂ.ವಿ.ಜಿಲ್ಲಾ ಕ್ರೀಡಾಂಗಣದಲ್ಲಿ ಫೆಬ್ರುವರಿ 2 ರಿಂದ ಮೂರು ದಿನಗಳ ಕಾಲ ಅದ್ಧೂರಿಯಾಗಿ ದಶಮಾನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಜಿಲ್ಲಾಧಿಕಾರಿ ದೀಪ್ತಿ ಕಾನಡೆ ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಫೆ.2ರಂದು ಬೆಳಿಗ್ಗೆ 6.30ಕ್ಕೆ ನಂದಿ ಗ್ರಾಮದ ಭೋಗನಂದೀಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಸಾಂಕೇತಿಕವಾಗಿ ದಶಮಾನೋತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ಅಲ್ಲಿಂದ ಸುಲ್ತಾನ್‌ಪೇಟೆ ಬಳಿ ಇರುವ ನಂದಿ ಬೆಟ್ಟದ ನಡಿಗೆ ಮಾರ್ಗದ ಮೂಲಕ ‘ನಂದಿಗಿರಿ ಪಾರಂಪರಿಕ ನಡಿಗೆ’ಯಲ್ಲಿ ಬೆಟ್ಟ ಹತ್ತಲಾಗುತ್ತದೆ. ಇದರಲ್ಲಿ ಜಿಲ್ಲಾ ಮಟ್ಟ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಾರ್ವಜನಿಕರು, ಸಂಘ, ಸಂಸ್ಥೆಗಳ ಕಾರ್ಯಕರ್ತರು, ವಿದ್ಯಾರ್ಥಿಗಳು ಹೆಜ್ಜೆ ಹಾಕಲಿದ್ದಾರೆ’ ಎಂದರು.

‘ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಕಂದವಾರ ಕೆರೆಯಲ್ಲಿ ಪ್ಯಾರಾಸೇಲಿಂಗ್ ಮತ್ತು ಶ್ರೀನಿವಾಸ ಸಾಗರ ಕೆರೆಯಲ್ಲಿ ಜಲಸಾಹಸ ಕ್ರೀಡೆಗಳನ್ನು ಆಯೋಜಿಸಲಾಗುತ್ತಿದೆ. ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆಗಳ ಕಾಲ ಇವು ಸಾರ್ವಜನಿಕರಿಗೆ ಲಭ್ಯವಿರುತ್ತವೆ. ದಶಮಾನೋತ್ಸವದ ಮೂರೂ ದಿನಗಳ ಕಾಲ ಇವು ನಡೆಯಲಿವೆ’ ಎಂದು ಹೇಳಿದರು.

‘ಅಂಬೇಡ್ಕರ್ ಭವನದಲ್ಲಿ ಮೂರೂ ದಿನಗಳು ಬೆಳಿಗ್ಗೆ 11 ರಿಂದ ಮಧ್ಯಾಹ್ನ 3ರ ವರೆಗೆ ವಿಚಾರಗೋಷ್ಠಿಗಳು ನಡೆಯುತ್ತವೆ. ಶಿಕ್ಷಣ ಮತ್ತು ಸಾಹಿತ್ಯ, ಮಹಿಳಾ ಸಬಲೀಕರಣ, ಆರೋಗ್ಯ, ಶಿಕ್ಷಣ, ಸಾಹಿತ್ಯ, ಕೃಷಿ ಮತ್ತು ಅವಲಂಬಿತ ಚಟುವಟಿಕೆಗಳ ವಿಚಾರಗಳ ಬಗ್ಗೆ ಗೋಷ್ಠಿಗಳು ನಡೆಯಲಿವೆ. ಮೊದಲ ದಿನ ಮಧ್ಯಾಹ್ನ 3ಕ್ಕೆ ತಾಲ್ಲೂಕು ಕಚೇರಿ ಬಳಿ ಜಿಲ್ಲಾ ಉಸ್ತುವಾರಿ ಸಚಿವರು ದಶಮಾನೋತ್ಸವ ಮೆರವಣಿಗೆಗೆ ಚಾಲನೆ ನೀಡಲಾಗುತ್ತದೆ. ಆ ಮೆರವಣಿಗೆ ದಶಮಾನೋತ್ಸವದ ಮುಖ್ಯ ವೇದಿಕೆ ವರೆಗೆ ನಡೆಯಲಿದೆ’ ಎಂದು ತಿಳಿಸಿದರು.

‘ಬಳಿಕ ಮುಖ್ಯ ವೇದಿಕೆಯಲ್ಲಿ ಸಂಜೆ 4ಕ್ಕೆ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ. ಇದರಿಂದ ದಶಮಾನೋತ್ಸವ ಅಂಗವಾಗಿ ಸ್ಮರಣ ಸಂಚಿಕೆ ಮತ್ತು ಜಿಲ್ಲೆಯ ಪ್ರವಾಸೋದ್ಯಮ ಸ್ಥಳ ಕೈಪಿಡಿ ಬಿಡುಗಡೆ ಮಾಡಲಾಗುತ್ತದೆ. ಜತೆಗೆ ಮೂರು ದಿನಗಳ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಲಾಗುತ್ತದೆ. ನಗರದ ಎಂ.ಜಿ.ರಸ್ತೆಯಲ್ಲಿರುವ ಜೈಭೀಮ್ ಪದವಿ ಬಾಲಕರ ವಿದ್ಯಾರ್ಥಿ ನಿಲಯದ ಆವರಣದಲ್ಲಿ ಸಂಜೆ 5ಕ್ಕೆ ಹಾಲು ಕರೆಯುವ ಸ್ಪರ್ಧೆಗೆ ಚಾಲನೆ ನೀಡಲಾಗುತ್ತದೆ’ ಎಂದರು.

‘ಮೂರು ದಿನಗಳ ಕಾಲ ನಿತ್ಯ ಸಂಜೆ 6 ಗಂಟೆಯಿಂದ ರಾತ್ರಿ 11.30ರ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಮುಖ್ಯ ವೇದಿಕೆಯಲ್ಲಿ ಪ್ರತಿ ದಿನ ಸಂಜೆ 4 ರಿಂದ ರಾತ್ರಿ 7ರ ವರೆಗೆ ಸ್ಥಳೀಯ ಕಲಾವಿದರಿಗೆ ಜಿಲ್ಲೆಯ ಮುಖ್ಯ ಕಲಾ ಪ್ರಕಾರಗಳನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸಲಾಗುತ್ತದೆ. ಬಳಿಕ ರಾಜ್ಯ ಮತ್ತು ವಿವಿಧ ರಾಜ್ಯಗಳ ಕಲಾವಿದರ ಕಾರ್ಯಕ್ರಮಗಳು ನಡೆಯಲಿವೆ’ ಎಂದು ಹೇಳಿದರು.

‘ಫೆ.2 ರಂದು ಮುಖ್ಯವೇದಿಕೆಯಲ್ಲಿ ರಾತ್ರಿ ಮೊದಲು ವಿನಯ್‌ ನಾಡಿಗ್‌ ತಂಡದವರಿಂದ ‘ಭಾವ ಲಹರಿ’ ಎಂಬ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ. ಬಳಿಕ ಒಡಿಶಾದ ಪ್ರಿನ್ಸ್ ಡ್ಯಾನ್ಸ್ ಅಕಾಡೆಮಿ ಕಲಾವಿದರಿಂದ ನೃತ್ಯ ಪ್ರದರ್ಶನ ನಡೆಯಲಿದೆ. ಬಳಿಕ ಬೀಟ್ ಗುರೂಸ್‌ ತಂಡದವರಿಂದ ಪಾಪ್‌ ಸಂಗೀತ ಕಛೇರಿ ನಡೆಯಲಿದೆ. ಪ್ರಹ್ಲಾದ್ ಆಚಾರ್ಯ ಅವರಿಂದ ಮರಳು ಮತ್ತು ನೆರಳು ಕಲೆಯ ಪ್ರದರ್ಶನವಿರಲಿದೆ. ಪ್ರಭಾತ್ ಕಲಾವಿದರಿಂದ ನೃತ್ಯ ರೂಪಕ ಪ್ರದರ್ಶನವಾಗಲಿದೆ’ ಎಂದು ತಿಳಿಸಿದರು.

‘ಫೆ.3 ರಂದು ಬೆಳಿಗ್ಗೆ 11ಕ್ಕೆ ದಶಮಾನೋತ್ಸವದ ಜಿಲ್ಲಾ ಮಟ್ಟದ ಕ್ರೀಡಾಕೂಟ ನಡೆಯಲಿದೆ. ಜಾನುವಾರು, ಕುರಿಗಳ ಪ್ರದರ್ಶನ ನಡೆಯಲಿದೆ. ಸಂಜೆ 5ಕ್ಕೆ ಹಾಲು ಕರೆಯುವ ಸ್ಪರ್ಧೆಯ ಅಂತಿಮ ಸುತ್ತು ನಡೆಯಲಿದೆ. ರಾತ್ರಿ 7ರ ನಂತರ ಚಿಂತಲಪಲ್ಲಿ ಪರಂಪರಾ ಟ್ರಸ್ಟ್‌ನ ಶ್ರೀಕಾಂತಶಾಸ್ತ್ರಿ ಅವರಿಂದ ಶಾಸ್ತ್ರೀಯ ಸಂಗೀತ, ಅಭಿನವ್ ಡ್ಯಾನ್ಸ್‌ ಕಂಪನಿ ಕಲಾವಿದರಿಂದ ನೃತ್ಯ ಪ್ರದರ್ಶನ, ಬಳಿಕ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ ಮತ್ತು ತಂಡದವರಿಂದ ಹಾಸ್ಯ ರಸಸಂಜೆ, ನಂತರ ರಘು ದೀಕ್ಷಿತ್ ತಂಡದವರಿಂದ ಸಂಗೀತದೌತಣ ಇರಲಿದೆ’ ಎಂದರು.

‘ಫೆ.4 ರಂದು ಬೆಳಿಗ್ಗೆ 10ಕ್ಕೆ ಶ್ವಾನ ಪ್ರದರ್ಶನ ಏರ್ಪಡಿಸಲಾಗಿದೆ. ಸ್ವಯಂ ಆತ್ಮರಕ್ಷಣಾ ಕಲೆ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಮುಖ್ಯ ವೇದಿಕೆಯಲ್ಲಿ ಸಂಜೆ 4ಕ್ಕೆ ಸಮಾರೋಪ ಸಮಾರಂಭ ಹಮ್ಮಿಕೊಳ್ಳಲಾಗಿದೆ. ರಾತ್ರಿ 7ರ ನಂತರ ಆಕ್ಸಿಜನ್ ತಂಡದವರಿಂದ ನೃತ್ಯ ಕಾರ್ಯಕ್ರಮ, ಸಮೀರ್ ರಾವ್‌ ಮತ್ತು ತಂಡದವರಿಂದ ಶಾಸ್ತ್ರೀಯ ಜುಗಲ್ಭಂದಿ ನಡೆಯಲಿದೆ. ಬಳಿಕ ಕುದ್ರೋಳಿ ಗಣೇಶ್ ಅವರಿಂದ ಜಾದೂ ಪ್ರದರ್ಶನ, ಒಡಿಶಾದ ಎಸ್.ಎಂ.ಎಸ್ ಅವರಿಂದ ಮರಳು ಕಲೆ ಪ್ರದರ್ಶನ. ಅಂತಿಮವಾಗಿ ಗಾಯಕ ವಿಜಯ್ ಪ್ರಕಾಶ್ ಅವರಿಂದ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ’ ಎಂದು ಹೇಳಿದರು.

ಶಾಸಕ ಡಾ.ಕೆ.ಸುಧಾಕರ್ ಮಾತನಾಡಿ, ‘ಇದು ನಮ್ಮೆಲ್ಲರ ಹಬ್ಬ. ಜಿಲ್ಲೆಯ ಹಬ್ಬ. ವಿದ್ಯಾರ್ಥಿಗಳು, ರೈತರು, ಮಹಿಳೆಯರು ಇದು ನಮ್ಮ ಕಾರ್ಯಕ್ರಮ ಎಂದು ಭಾವಿಸಿಕೊಂಡು ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸ್ಫೂರ್ತಿ ನೀಡಬೇಕು. ಎಲ್ಲಾ ಚಟುವಟಿಕೆಗಳಲ್ಲಿ ಜನರು ಭಾಗವಹಿಸಿದರೆ ದಶಮಾನೋತ್ಸವ ಅರ್ಥಪೂರ್ಣವಾಗಿ ನಡೆಯಲಿದೆ’ ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎನ್.ಅನುರಾಧಾ ಮಾತನಾಡಿ, ‘ದಶಮಾನೋತ್ಸವದ ಪ್ರಯುಕ್ತ ಜಿಲ್ಲಾ ಕ್ರೀಡಾಂಗಣದ ಬಳಿ ಸುಮಾರು 100 ಮಳಿಗೆಗಳನ್ನು ತೆರೆಯಲಾಗಿದೆ. ಅವುಗಳಲ್ಲಿ 20 ಆಹಾರ ಪದಾರ್ಥಗಳು, ತಿಂಡಿ, ತಿನಿಸುಗಳ ಮಳಿಗೆಗಳು ಇರಲಿವೆ. ಉಳಿದಂತೆ ಬಟ್ಟೆ, ಕರಕುಶಲವಸ್ತುಗಳು, ಗುಡಿಕೈಗಾರಿಕೆ ಉತ್ಪನ್ನಗಳು, ಕೃಷಿ ಉಪಕರಣಗಳು, ಗೃಹೋಪಯೋಗಿ ವಸ್ತುಗಳ ಮಳಿಗೆಗಳು ಇರಲಿವೆ’ ಎಂದರು. ಎಸ್‌ಪಿ ಕಾರ್ತಿಕ್‌ ರೆಡ್ಡಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸಿದ್ದರಾಮಯ್ಯ ಉಪಸ್ಥಿತರಿದ್ದರು.

ಹೂವಿನಲ್ಲಿ ಮೈದಳೆಯುವ ಜಗತ್ತಿನ ಏಳು ಅದ್ಭುತಗಳು

ಜಿಲ್ಲಾ ಕ್ರೀಡಾಂಗಣದಲ್ಲಿ ಕ್ರೀಡಾ ವಸತಿ ಶಾಲೆಯ ಸಮೀಪ ಫಲಪುಷ್ಪ ಪ್ರದರ್ಶನಕ್ಕಾಗಿ ಭರದ ಸಿದ್ಧತೆ ನಡೆದಿದೆ. ಆಗ್ರಾದ ತಾಜ್‌ಮಹಲ್‌, ಇಟಲಿಯ ಪೀಸಾ ಗೋಪುರ, ರೋಮನ್‌ ಕಲೋಸಿಯಂ, ಈಜಿಪ್ಟ್‌ನ ಪಿರಮಿಡ್‌, ಫ್ರಾನ್ಸ್‌ನ ಐಫಲ್‌ ಗೋಪುರ, ಬ್ರೆಸಿಲ್‌ನ ಕ್ರೈಸ್ಟ್ ದಿ ರಿಡೀಮರ್ ಹಾಗೂ ಚೀನಾದ ಮಹಾಗೋಡೆ ಪ್ರತಿಕೃತಿಗಳು ಮೈದಾನದಲ್ಲಿ ಹೂವಿನಲ್ಲಿ ಮೈದಳೆಯಲಿವೆ. ಇದರ ಸಿದ್ಧತೆಗಾಗಿ ಕೋಲ್ಕತ್ತಾದ 35 ಕಾರ್ಮಿಕರು ಕ್ರೀಡಾಂಗಣದಲ್ಲಿಯೇ ಠಿಕಾಣಿ ಹೂಡಿ ಭರದಿಂದ ಕೆಲಸ ಮಾಡುತ್ತಿದ್ದಾರೆ. ಸುಮಾರು 2.50 ಲಕ್ಷ ಹೂವುಗಳು, ದೊಣ್ಣೆ ಮೆಣಸಿನಕಾಯಿ ಬಳಸಿ ಏಳು ಅದ್ಭುತಗಳ ಮಾದರಿಯನ್ನು ಅಲಂಕರಿಸಲಾಗುತ್ತದೆ ಎಂದು ಗುತ್ತಿಗೆದಾರ ಎಸ್.ಪಿ.ಅಗರ್‌ವಾಲ್‌ ತಿಳಿಸಿದರು.

* * 

ಜಿಲ್ಲೆ ದಶಕ ಪೂರೈಸಿದ ಸ್ಮರಣಾರ್ಥ ಇಲ್ಲಿನ ಕಲೆ, ಸಂಸ್ಕೃತಿ, ಇತಿಹಾಸದ ಸಂಭ್ರಮಾಚರಣೆ ಮಾಡುತ್ತಿದ್ದೇವೆ. ಈ ಹಬ್ಬದಲ್ಲಿ ಜಿಲ್ಲೆಯ ಜನತೆ ಭಾಗವಹಿಸಬೇಕು
ದೀಪ್ತಿ ಕಾನಡೆ, ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT