ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೋವಿಡ್‌ ಆತಂಕ’ಕ್ಕೆ ವಿದಾಯ ಹೇಳುತ್ತಿದ್ದೇನೆ, ಆಟಕ್ಕಲ್ಲ: ಸಿಂಧು ಸ್ಪಷ್ಟನೆ

ಸಂಚಲನ ಸೃಷ್ಟಿಸಿದ್ದ ವಿಶ್ವ ಚಾಂಪಿಯನ್ ಬ್ಯಾಡ್ಮಿಂಟನ್‌ ಆಟಗಾರ್ತಿಯ ಟ್ವೀಟ್‌
Last Updated 2 ನವೆಂಬರ್ 2020, 14:50 IST
ಅಕ್ಷರ ಗಾತ್ರ

ನವದೆಹಲಿ: ‘ನಾನು ವಿದಾಯ ಹೇಳುತ್ತಿದ್ದೇನೆ‘....

ವಿಶ್ವ ಚಾಂಪಿಯನ್‌ ಬ್ಯಾಡ್ಮಿಂಟನ್‌ ಆಟಗಾರ್ತಿ ಭಾರತದ ಪಿ.ವಿ. ಸಿಂಧು ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವ ಈ ಪೋಸ್ಟ್‌ ಸೋಮವಾರ ಸಂಚಲನ ಸೃಷ್ಟಿಸಿತ್ತು. ಆದರೆ ಇದಕ್ಕೆ ದೀರ್ಘ ವಿವರಣೆಯನ್ನು ಪೋಸ್ಟ್‌ನಲ್ಲೇ ವಿವರಿಸಿರುವ ಅವರು, ‘ವಾಸ್ತವವಾಗಿ ನಾನು ನಿವೃತ್ತಿ ಘೋಷಿಸುತ್ತಿರುವುದು ಕೋವಿಡ್‌–19 ಪಿಡುಗಿನಿಂದ ಉಂಟಾದ ಅನಿಶ್ಚಿತತೆ, ಆತಂಕ ಹಾಗೂ ನಕಾರಾತ್ಮಕ ಯೋಚನೆಗಳಿಗೆ‘ ಎಂದು ಸ್ಪಷ್ಟಪಡಿಸಿದ್ದಾರೆ.

ರಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಸಿಂಧು, ಸದ್ಯ ಫಿಟ್‌ನೆಸ್‌ ವಿಷಯಕ್ಕೆ ಸಂಬಂಧಿಸಿ ಲಂಡನ್‌ನ ಗ್ಯಾಟೊರೇಡ್‌ ಕ್ರೀಡಾ ವಿಜ್ಞಾನ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.

‘ಡೆನ್ಮಾರ್ಕ್‌ ಓಪನ್‌ ನನ್ನ ಕೊನೆಯ ಟೂರ್ನಿ. ನಾನು ವಿದಾಯ ಹೇಳುತ್ತಿದ್ದೇನೆ‘ ಎಂದು ಟ್ವೀಟ್‌ ಆರಂಭಿಸಿರುವ ಅವರು,‘ಇಂದು ನಾನು ಸದ್ಯದ ತಳಮಳಕ್ಕೆ ವಿದಾಯ ಹೇಳುತ್ತಿದ್ದೇನೆ. ನಕಾರಾತ್ಮಕ ಆಲೋಚನೆ, ಆತಂಕ, ಅನಿಶ್ಚಿತತೆಗೆ, ಈ ಅಪರಿಚಿತನ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಲಾಗದ್ದಕ್ಕೆ ವಿದಾಯ ಪ್ರಕಟಿಸುತ್ತಿದ್ದೇನೆ. ಮುಖ್ಯವಾಗಿ ವೈರಸ್‌ ಬಗ್ಗೆ ನಮಗಿರುವ ತಿಳಿವಳಿಕೆ ಹಾಗೂ ನೈರ್ಮಲ್ಯ ಮಾನದಂಡಗಳ ಅರಿವಿನ ಕೊರತೆಯ ಮನೋಭಾವಕ್ಕೆ ವಿದಾಯ ಹೇಳುತ್ತೇನೆ‘ ಎಂದು ಬರೆದುಕೊಂಡಿದ್ದಾರೆ.

ಸಿಂಧು ಕೊನೆಯ ಬಾರಿ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಪಾಲ್ಗೊಂಡಿದ್ದು ಮಾರ್ಚ್‌ನಲ್ಲಿ ನಡೆದ ಆಲ್ ಇಂಗ್ಲೆಂಡ್‌ ಚಾಂಪಿಯನ್‌ಷಿಪ್‌ನಲ್ಲಿ. ಮುಂದಿನ ವರ್ಷದ ಜನವರಿಯಲ್ಲಿ ನಡೆಯುವ ಏಷ್ಯನ್‌ ಲೆಗ್‌ ಟೂರ್ನಿಗಳ ಮೂಲಕ ಬ್ಯಾಡ್ಮಿಂಟನ್‌ಗೆ ಮರಳಲು ಅವರು ನಿರ್ಧರಿಸಿದ್ದಾರೆ.

‘ಈ ಪಿಡುಗು ನನ್ನ ಕಣ್ಣು ತೆರೆಸುವಂತಿದೆ. ಬಲಿಷ್ಠ ಸ್ಪರ್ಧಿಗಳನ್ನು ಎದುರಿಸಲು ಕಠಿಣ ಅಭ್ಯಾಸ ನಡೆಸಿದ ಉದಾಹರಣೆಗಳಿವೆ. ಆದರೆಇಡೀ ವಿಶ್ವವನ್ನು ಆವರಿಸಿರುವ ಈ ಅಗೋಚರ ವೈರಾಣುವನ್ನು ನಾನು ಹೇಗೆ ಸೋಲಿಸಲಿ? ಮನೆಯಲ್ಲೇ ಉಳಿದು ಹಲವು ತಿಂಗಳುಗಳಾದವು. ಮುಂದಡಿ ಇಡುವ ಬಗೆ ಹೇಗೆ ಎಂದುನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕಿದೆ‘ ಎಂದು ಸಿಂಧು ಬರೆದಿದ್ದಾರೆ.

ತಮ್ಮ ಪೋಸ್ಟ್‌ಗೆ ‘ನಾನು ವಿದಾಯ ಹೇಳುತ್ತಿದ್ದೇನೆ‘ ಎಂಬ ಶೀರ್ಷಿಕೆಯನ್ನು ಕೊಟ್ಟ ಕಾರಣವನ್ನೂ ಅವರು ನೀಡಿದ್ದಾರೆ.ಕೊರೊನಾ ವೈರಾಣು ಕುರಿತು ತಾನು ಹೇಳಲು ಪ್ರಯತ್ನಿಸಿರುವ ಸಂದೇಶವನ್ನು ಹೆಚ್ಚಿನ ಜನರು ಗಮನಿಸಲಿ ಎಂಬ ಉದ್ದೇಶದಿಂದ ಹೀಗೆ ಮಾಡಿದ್ದಾಗಿ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT