ಬುಧವಾರ, ಜೂನ್ 3, 2020
27 °C
ನೆದರ್ಲೆಂಡ್ಸ್ ತಂಡಕ್ಕೆ ಎರಡನೇ ಪಂದ್ಯದಲ್ಲೂ ನಿರಾಸೆ

ಎಫ್‌ಐಎಚ್‌ ಪ್ರೊ ಲೀಗ್‌ ಹಾಕಿ ಟೂರ್ನಿ: ಶೂಟೌಟ್‌ನಲ್ಲಿ ಜಯಿಸಿದ ಮನ್‌ಪ್ರೀತ್‌ ಪಡೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಭುವನೇಶ್ವರ: ಸೊಗಸಾದ ಆಟವಾಡಿದ ಭಾರತ ಹಾಕಿ ತಂಡ ಎಫ್‌ಐಎಚ್‌ ಪ್ರೊ ಲೀಗ್‌ ಹಾಕಿ ಟೂರ್ನಿಯ ಎರಡನೇ ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ 3–1ರಿಂದ ಸೋಲಿಸಿತು. 

ಭಾನುವಾರ ಇಲ್ಲಿನ ಕಳಿಂಗ ಕ್ರೀಡಾಂಗಣದಲ್ಲಿ ನಡೆದ ಹಣಾಹಣಿಯಲ್ಲಿ ನಿಗದಿತ ಅವಧಿಯಲ್ಲಿ ಎರಡೂ ತಂಡಗಳು ತಲಾ ಮೂರು ಗೋಲು ಗಳಿಸಿ ಸಮಬಲ ಸಾಧಿಸಿದ್ದವು. ಶೂಟೌಟ್‌ನಲ್ಲಿ ಭಾರತ ಮೂರು ಗೋಲು ದಾಖಲಿಸಿದರೆ, ನೆದರ್ಲೆಂಡ್ಸ್‌ ಕೇವಲ ಒಂದರಲ್ಲಿ ಯಶಸ್ವಿಯಾಯಿತು. ಪಂದ್ಯದಿಂದ ಮನ್‌ಪ್ರೀತ್‌ ಪಡೆಯ ಖಾತೆಗೆ ಎರಡು ಪಾಯಿಂಟ್ಸ್‌ (ಒಂದು ಬೋನಸ್‌ ಸೇರಿ) ಸೇರಿದವು. ನಿಗದಿತ ಅವಧಿಯಲ್ಲಿ ಸ್ಕೋರ್‌ ಸಮಬಲವಾಗಿದ್ದರಿಂದ ನೆದರ್ಲೆಂಡ್ಸ್‌ ಒಂದು ಪಾಯಿಂಟ್‌ ಗಳಿಸಿತು.

ಪಂದ್ಯದ ನಾಲ್ಕನೇ ಕ್ವಾರ್ಟರ್‌ವರೆಗೆ ಭಾರತ ತಂಡ 1–3ರ ಹಿನ್ನಡೆಯಲ್ಲಿತ್ತು. ನೆದರ್ಲೆಂಡ್ಸ್ ತಂಡದ ವೀರ್‌ಡೆನ್‌ ವ್ಯಾನ್‌ ಡರ್‌ ಮಿಂಕ್‌ (24ನೇ ನಿಮಿಷ), ಜೆರೊನ್‌ ಹರ್ಟ್‌ಬರ್ಗರ್‌ (26ನೇ ನಿಮಿಷ) ಹಾಗೂ ಕೆಲ್ಲರ್‌ಮನ್‌ ಬೊರ್ನ್‌ ಕೆಲ್ಲರ್‌ಮೆನ್‌ (27ನೇ ನಿಮಿಷ) ಗೋಲು ದಾಖಲಿಸಿ ಸಂಭ್ರಮಿಸಿದರು. ಭಾರತದ ಲಲಿತ್‌ ಉಪಾಧ್ಯಾಯ 25ನೇ ನಿಮಿಷ ಯಶಸ್ಸು ಕಂಡಿದ್ದರು. 

ಮನದೀಪ್‌ ಸಿಂಗ್‌ ಹಾಗೂ ರೂಪಿಂದರ್‌ ಪಾಲ್‌ ಸಿಂಗ್‌ ಕ್ರಮವಾಗಿ 51 ಹಾಗೂ 55ನೇ ನಿಮಿಷಗಳಲ್ಲಿ ಕೈಚಳಕ ತೋರಿ ಭಾರತದ ಪಾಳಯದಲ್ಲಿ ನಿಟ್ಟುಸಿರು ಬಿಡುವಂತೆ ಮಾಡಿದ್ದರು.

ಶೂಟೌಟ್‌ನಲ್ಲಿ ಭಾರತದ ವಿವೇಕ್‌ ಪ್ರಸಾದ್‌, ಗುರ್ಜಂತ್‌ ಸಿಂಗ್‌ ಮತ್ತು ಆಕಾಶ್‌ ದೀಪ್‌ ಸಿಂಗ್‌ ಚೆಂಡನ್ನು ಗೋಲುಪೆಟ್ಟಿಗೆಗೆ ಸೇರಿಸುವಲ್ಲಿ ತಪ್ಪು ಮಾಡಲಿಲ್ಲ. ನೆದರ್ಲೆಂಡ್ಸ್ ಪರ ಪ್ರಿಜ್‌ಸೆರ್‌ ಮಿರ್ಕೊ ಮಾತ್ರ ಯಶಸ್ಸು ಸಾಧಿಸಿದರು.

ಇದೇ ತಂಡದ ವಿರುದ್ಧ ಶನಿವಾರ ನಡೆದ ಮೊದಲ ಪಂದ್ಯದಲ್ಲಿ ಮನ್‌ಪ್ರೀತ್‌ ಬಳಗ 5–2ರಿಂದ ಗೆದ್ದು ಬೀಗಿತ್ತು. ಭಾರತ ಎರಡು ಪಂದ್ಯಗಳಿಂದ ಐದು ಪಾಯಿಂಟ್ಸ್‌ ಕಲೆಹಾಕಿದೆ.

ಪ್ರೊ ಲೀಗ್‌ನಲ್ಲಿ ಫೆಬ್ರುವರಿ 8 ಹಾಗೂ 9ರಂದು ವಿಶ್ವ ಚಾಂಪಿಯನ್‌ ಬೆಲ್ಜಿಯಂ ಎದುರು ಬಳಿಕ ಫೆಬ್ರುವರಿ 22 ಹಾಗೂ 23ರಂದು ತವರಿನಲ್ಲಿ ಭಾರತ ಪಂದ್ಯಗಳನ್ನು ಆಡಲಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು