ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯಾ ಕಪ್ ಹಾಕಿ ಟೂರ್ನಿ: ಡ್ರಾಗೆ ಸಮಾಧಾನಪಟ್ಟುಕೊಂಡ ಭಾರತ

ಅಂತಿಮ ನಿಮಿಷದಲ್ಲಿ ಮಿಂಚಿದ ಪಾಕಿಸ್ತಾನ; ಮಲೇಷ್ಯಾ, ದಕ್ಷಿಣ ಕೊರಿಯಾ ತಂಡಗಳಿಗೆ ಭರ್ಜರಿ ಗೆಲುವು
Last Updated 23 ಮೇ 2022, 17:09 IST
ಅಕ್ಷರ ಗಾತ್ರ

ಜಕಾರ್ತ: ಕೊನೆಯ ಕ್ವಾರ್ಟರ್‌ನಲ್ಲಿ ಗೋಲು ಬಿಟ್ಟುಕೊಟ್ಟ ಹಾಲಿ ಚಾಂಪಿಯನ್ ಭಾರತ ತಂಡ ಏಷ್ಯಾಕಪ್ ಹಾಕಿ ಟೂರ್ನಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಜೊತೆ 1–1ರ ಡ್ರಾಗೆ ಸಮಾಧಾನಪಟ್ಟುಕೊಂಡಿತು.

ಸೋಮವಾರ ಸಂಜೆ ನಡೆದ ’ಎ’ ಗುಂ‍ಪಿನ ಪಂದ್ಯದ 9ನೇ ನಿಮಿಷದಲ್ಲಿ ಕಾರ್ತಿ ಸೆಲ್ವಂ ಗಳಿಸಿದ ಗೋಲಿನೊಂದಿಗೆ ಮುನ್ನಡೆ ಸಾಧಿಸಿದ ಭಾರತ ಕೊನೆಯ ಕ್ವಾರ್ಟರ್‌ ವರೆಗೂ ಅದನ್ನು ಉಳಿಸಿಕೊಂಡಿತು. ಆದರೆ 59ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶ ಬಿಟ್ಟುಕೊಟ್ಟು ಕೈಸುಟ್ಟುಕೊಂಡಿತು. ಅಬ್ದುಲ್ ರಾಣಾ ಗೋಲು ಗಳಿಸಿ ಬದ್ಧ ಎದುರಾಳಿಗಳಿಗೆ ಸಮಬಲ ತಂದುಕೊಟ್ಟರು. ಮಂಗಳವಾರ ಭಾರತ ತಂಡ ಜಪಾನ್ ವಿರುದ್ಧ ಸೆಣಸಲಿದೆ.

3ನೇ ನಿಮಿಷದಲ್ಲೇ ಭಾರತ ಪೆನಾಲ್ಟಿ ಕಾರ್ನರ್ ಬಿಟ್ಟುಕೊಟ್ಟಿತ್ತು. ಆದರೆ ಗೋಲು ಗಳಿಸಲು ಪಾಕಿಸ್ತಾನಕ್ಕೆ ಸಾಧ್ಯವಾಗಲಿಲ್ಲ. ಕೆಲವೇ ಸೆಕೆಂಡುಗಳ ನಂತರ ಭಾರತಕ್ಕೂ ಪೆನಾಲ್ಟಿ ಅವಕಾಶ ಲಭಿಸಿತು. ಆದರೆ ನೀಲಂ ಸಂಜೀವ್ ಕ್ಸೆಸ್‌ ಹೊಡೆದ ಚೆಂಡನ್ನು ತಡೆಯುವಲ್ಲಿ ಎದುರಾಳಿ ತಂಡದ ಗೋಲ್ ಕೀಪರ್ ಅಕ್ಮಲ್ ಹುಸೇನ್ ಯಶಸ್ವಿಯಾದರು. ನಂತರವೂ ಭಾರತ ಆಕ್ರಮಣಕಾರಿ ಆಟದ ಮೂಲಕ ಪಾಕಿಸ್ತಾನದ ರಕ್ಷಣಾ ವಿಭಾಗದ ಮೇಲೆ ಒತ್ತಡ ಹೇರಿತು. ಹೀಗಾಗಿ ಮೊದಲಾರ್ಧದಲ್ಲಿ ಇನ್ನೂ ಎರಡು ಪೆನಾಲ್ಟಿ ಕಾರ್ನರ್‌ಗಳು ತಂಡಕ್ಕೆ ಲಭಿಸಿದವು. 9ನೇ ನಿಮಿಷದಲ್ಲಿ ಲಭಿಸಿದ ಅವಕಾಶದಲ್ಲಿ ಕಾರ್ತಿ ಫ್ಲಿಕ್ ಮಾಡಿದ ಚೆಂಡು ಪಾಕ್‌ ಆಟಗಾರನ ಸ್ಟಿಕ್‌ಗೆ ಹೊಡೆದು ಗುರಿ ಮುಟ್ಟಿತು. ಮೊದಲ ಅಂತರರಾಷ್ಟ್ರೀಯ ಗೋಲು ಗಳಿಸಿದ ಕಾರ್ತಿ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ನಂತರ ಪಾಕಿಸ್ತಾನ ಪೆನಾಲ್ಟಿ ಕಾರ್ನರ್ ಅವಕಾಶ ಕೈಚೆಲ್ಲಿತು.

ಮಿಂಚಿದ ಪಾಕಿಸ್ತಾನ ಗೋಲ್‌ಕೀಪರ್
ಮೊದಲಾರ್ಧದ ಮುಕ್ತಾಯಕ್ಕೆ ಕೆಲವೇ ನಿಮಿಷಗಳ ಮುನ್ನ ಸಮೀಪದಿಂದ ಪವನ್ ರಾಜ್‌ಭರ್ ಅವರು ಹೊಡೆದ ಚೆಂಡನ್ನು ತಡೆದು ಪಾಕ್ ಗೋಲ್‌ಕೀಪರ್ ಮಿಂಚಿದರು. ಆದರೂ ಭಾರತದ ಆಕ್ರಮಣಕಾರಿ ಆಟ ಮುಂದುವರಿಯಿತು. ಎರಡು ನಿಮಿಷಗಳ ನಂತರ ಪಾಕಿಸ್ತಾನಕ್ಕೆ ಉತ್ತಮ ಅವಕಾಶವೊಂದು ಒದಗಿತ್ತು. ಆದರೆ ವಿಷ್ಣುಕಾಂತ್ ಸಿಂಗ್ ಭಾರತದ ರಕ್ಷಣೆಗೆ ಬಂದರು.

ದ್ವಿತೀಯಾರ್ಧದಲ್ಲಿ ಪಾಕಿಸ್ತಾನ ಆಕ್ರಮಣಕ್ಕೆ ಮುಂದಾಯಿತು. ಆರಂಭದಲ್ಲೇ ಪೆನಾಲ್ಟಿ ಕಾರ್ನರ್ ಅವಕಾಶ ಗಳಿಸಿತು. ಆದರೆ ರಿಜ್ವಾನ್ ಅಲಿ ಅವರ ಪ್ಲಿಕ್ ಗೋಲು ಪೆಟ್ಟಿಗೆಯಿಂದ ಹೊರ ಸಾಗಿತು. ನಂತರ ಸೂರಜ್ ಕರ್ಕೇರ ಅವರ ಅಮೋಘ ಆಟದಿಂದಾಗಿ ಭಾರತ ಅಪಾಯದಿಂದ ಪಾರಾಯಿತು. ಆದರೆ ಕೊನೆಗೂ ಗೋಲು ಗಳಿಸುವಲ್ಲಿ ಪಾಕಿಸ್ತಾನ ಯಶಸ್ವಿಯಾಯಿತು.

ಮಲೇಷ್ಯಾ, ಕೊರಿಯಾಗೆ ಭರ್ಜರಿ ಜಯ
ಬೆಳಿಗ್ಗೆ ನಡೆದ ಪಂದ್ಯಗಳಲ್ಲಿ ಮಲೇಷ್ಯಾ ಮತ್ತು ದಕ್ಷಿಣ ಕೊರಿಯಾ ತಂಡಗಳು ಭರ್ಜರಿ ಜಯ ಗಳಿಸಿದವು. ಜಿಬಿಕೆ ಅರೆನಾದಲ್ಲಿ ನಡೆದ ‘ಬಿ’ ಗುಂಪಿನ ಪಂದ್ಯದಲ್ಲಿ ಪೆನಾಲ್ಟಿ ಕಾರ್ನರ್ ತಜ್ಞ ರಜೀ ರಹೀಮ್ ಅವರ ಹ್ಯಾಟ್ರಿಕ್ ಬಲದಿಂದ ಮಲೇಷ್ಯಾ 7–0ಯಿಂದ ಒಮಾನ್ ವಿರುದ್ಧ ಜಯ ಗಳಿಸಿತು.

6ನೇ ನಿಮಿಷದಲ್ಲಿ ಮೊದಲ ಗೋಲು ಗಳಿಸಿದ ರಹೀಮ್ 13 ಮತ್ತು 19ನೇ ನಿಮಿಷಗಳಲ್ಲಿ ಮತ್ತೆ ಚೆಂಡನ್ನು ಗೋಲು ಗಳಿಸಿದರು. 23ನೇ ನಿಮಿಷದಲ್ಲಿ ಫೈಜಲ್ ಸಾರಿ ಅವರ ಗೋಲಿನೊಂದಿಗೆ ಮೊದಲಾರ್ಧದ ಮುಕ್ತಾಯಕ್ಕೆ ತಂಡ 4–0ಯಿಂದ ಮುನ್ನಡೆಯಿತು. ಶಹರಿಲ್ ಸಾಬಾ (34ನೇ ನಿಮಿಷ), ಫೈಜ್ ಜಲಿ (40ನೇ ನಿ) ಮತ್ತು ಅಶ್ರಾನ್ ಹಂಸಾನಿ (48ನೇ ನಿ) ದ್ವಿತೀಯಾರ್ಧದಲ್ಲಿ ಮಿಂಚಿದರು.

‘ಬಿ’ ಗುಂಪಿನ ಮತ್ತೊಂದು ಪಂದ್ಯದಲ್ಲಿ ಕೊರಿಯಾ 6–1ರಲ್ಲಿ ಬಾಂಗ್ಲಾದೇಶವನ್ನು ಮಣಿಸಿತು. ಕೊರಿಯಾದ 4 ಗೋಲುಗಳು ಪೆನಾಲ್ಟಿ ಕಾರ್ನರ್‌ಗಳಿಂದ ಬಂದವು. 13ನೇ ನಿಮಿಷದಲ್ಲಿ ತಯೆಲಿ ಹ್ವಾಂಗ್‌, 18 ಮತ್ತು 52ನೇ ನಿಮಿಷಗಳಲ್ಲಿ ಜೊಂಗ್ಯುನ್ ಜಾಂಗ್, 45ನೇ ನಿಮಿಷದಲ್ಲಿ ಜಿಹುನ್ ಯಾಂಗ್ ಅವರು ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಗೋಲಾಗಿ ಪರಿವರ್ತಿಸಿದರು. ಹ್ವಾಂಗ್‌ 22ನೇ ನಿಮಿಷದಲ್ಲಿ ಫೀಲ್ಡ್ ಗೋಲು ಕೂಡ ಗಳಿಸಿದರು. ಮತ್ತೊಂದು ಗೋಲು ನಮ್ಯೊಂಗ್ (32ನೇ ನಿ) ಗಳಿಸಿದರು.

ಇಂಡೊನೇಷ್ಯಾವನ್ನು ಜಪಾನ್ 9–0ಯಿಂದ ಮಣಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT