ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Commonwealth Games: ಬ್ಯಾಡ್ಮಿಂಟನ್‌ಗೆ ಸುವರ್ಣಯುಗ

ಸಿಂಗಲ್ಸ್‌ನಲ್ಲಿ ಸಿಂಧು, ಸೇನ್‌ಗೆ; ಡಬಲ್ಸ್‌ನಲ್ಲಿ ಸಾತ್ವಿಕ್– ಚಿರಾಗ್‌ಗೆ ಚಿನ್ನ ಸಂಭ್ರಮ
Last Updated 9 ಆಗಸ್ಟ್ 2022, 5:16 IST
ಅಕ್ಷರ ಗಾತ್ರ

ಬರ್ಮಿಂಗ್‌ಹ್ಯಾಮ್: ಬರ್ಮಿಂಗ್‌ಹ್ಯಾಮ್‌ನ ಎನ್‌ಇಸಿ ಅರೆನಾದಲ್ಲಿ ಸೋಮವಾರ ಭಾರತದ ಬ್ಯಾಡ್ಮಿಂಟನ್‌ ಕ್ರೀಡೆಯ ಶಕ್ತಿ ಅನಾವರಣಗೊಂಡಿತು. ಮೂರು ಚಿನ್ನದ ಪದಕ ಬಗಲಿಗೆ ಹಾಕಿಕೊಂಡ ಭಾರತದ ಸ್ಪರ್ಧಿಗಳು ಇತಿಹಾಸ ರಚಿಸಿದರು.

ಪಿ.ವಿ.ಸಿಂಧು ಮತ್ತು ಲಕ್ಷ್ಯಸೇನ್‌ ಅವರು ಸಿಂಗಲ್ಸ್‌ ವಿಭಾಗದಲ್ಲಿ ಚಾಂಪಿಯನ್‌ ಆದರೆ, ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಹಾಗೂ ಚಿರಾಗ್‌ ಶೆಟ್ಟಿ ಚಿನ್ನದ ಪದಕ ಕೊರಳಿಗೇರಿಸಿಕೊಂಡರು.

ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಹಾಗೂ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಜಯಿಸಿದ್ದ ಸಿಂಧು ಅವರಿಗೆ ಕಾಮನ್‌ವೆಲ್ತ್‌ ಕೂಟದ ಚಿನ್ನ ಮರೀಚಿಕೆಯಾಗಿಯೇ ಉಳಿದಿತ್ತು. ಅವರ ಕಾಯುವಿಕೆಗೆ ಈ ಬಾರಿ ತೆರೆಬಿದ್ದಿದೆ. ಸಿಂಧು 2018 ಮತ್ತು 2014ರ ಕಾಮನ್‌ವೆಲ್ತ್‌ ಕೂಟದಲ್ಲಿ ಬೆಳ್ಳಿ ಹಾಗೂ ಕಂಚು ಗೆದ್ದುಕೊಂಡಿದ್ದರು.

ಸೋಮವಾರ ನಡೆದ ಫೈನಲ್‌ನಲ್ಲಿ ಹೈದರಾಬಾದ್‌ನ ಆಟಗಾರ್ತಿ 21–15, 21–13 ರಲ್ಲಿ ಕೆನಡಾದ ಮಿಷೆಲ್ ಲಿ ಅವರನ್ನು ಪರಾಭವಗೊಳಿಸಿದರು. ಲಕ್ಷ್ಯ ಸೇನ್‌ ಪುರುಷರ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ 19-21, 21-9, 21-16 ರಲ್ಲಿ ಮಲೇಷ್ಯಾದ ಎಂಗ್ ತ್ಸೆ ಯೊಂಗ್‌ ಅವರನ್ನು ಮಣಿಸಿದರು.

‍ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌– ಚಿರಾಗ್‌ 21–15, 21–13 ರಲ್ಲಿ ಇಂಗ್ಲೆಂಡ್‌ನ ಬೆನ್‌ ಲೇನ್‌– ಸೀನ್‌ ವೆಂಡಿ ಅವರ ಸವಾಲನ್ನು ಮೆಟ್ಟಿನಿಂತರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಏಳನೇ ಸ್ಥಾನದಲ್ಲಿರುವ ಸಿಂಧು ಅವರು 13ನೇ ರ‍್ಯಾಂಕ್‌ನ ಆಟಗಾರ್ತಿ ಎದುರು ಎರಡೂ ಗೇಮ್‌ಗಳಲ್ಲಿ ಪೂರ್ಣ ಪ್ರಭುತ್ವ ಸಾಧಿಸಿದರು. ಮಿಷೆಲ್‌ ಅವರು 2014ರ ಗ್ಲಾಸ್ಗೊ ಕಾಮನ್‌ವೆಲ್ತ್‌ ಕೂಟದಲ್ಲಿ ಕೊನೆಯದಾಗಿ ಸಿಂಧು ಅವರನ್ನು ಮಣಿಸಿದ್ದರು.

ಮೊದಲ ಗೇಮ್‌ನಲ್ಲಿ ಮಿಷೆಲ್‌ ನೆಟ್ ಬಳಿಯೇ ಆಡಿ ಪಾಯಿಂಟ್‌ ಗಳಿಸಲು ಪ್ರಯತ್ನಿಸಿದರೆ, ಸಿಂಧು ಆಕ್ರಮಣಕಾರಿ ಆಟದ ಮೊರೆಹೋದರು. 7–5 ರಲ್ಲಿ ಮೇಲುಗೈ ಪಡೆದ ಅವರು ಮೊದಲ ವಿರಾಮದ ಅವಧಿಯ ಬಳಿಕ ಸತತ ಮೂರು ಪಾಯಿಂಟ್‌ ಗಿಟ್ಟಿಸಿ ಮುನ್ನಡೆಯನ್ನು 14–8ಕ್ಕೆ ಹೆಚ್ಚಿಸಿಕೊಂಡರು.

ಸತತ ಎರಡು ಬ್ಯಾಕ್‌ಹ್ಯಾಂಡ್‌ ವಿನ್ನರ್‌ಗಳ ಮೂಲಕ ಮಿಷೆಲ್‌ ಹಿನ್ನಡೆಯನ್ನು 14–17ಕ್ಕೆ ತಗ್ಗಿಸಿದರು. ಆ ಬಳಿಕ ಎದುರಾಳಿಗೆ ಒಂದು ಪಾಯಿಂಟ್‌ ಬಿಟ್ಟುಕೊಟ್ಟ ಸಿಂಧು ಗೇಮ್‌ ಗೆದ್ದರು.

ಎರಡನೇ ಗೇಮ್‌ನ ಆರಂಭದಲ್ಲಿ 4–2ರ ಮೇಲುಗೈ ಪಡೆದ ಸಿಂಧು, ವಿರಾಮದ ವೇಳೆಗೆ 11–6ರ ಮುನ್ನಡೆಯಲ್ಲಿದ್ದರು. ಆ ಬಳಿಕವೂ ಶಿಸ್ತಿನ ಆಟ ಮುಂದುವರಿಸಿ ಕ್ರಾಸ್‌ ಕೋರ್ಟ್‌ ವಿನ್ನರ್‌ ಮೂಲಕ ಗೇಮ್‌ ಹಾಗೂ ಪಂದ್ಯವನ್ನು ಗೆದ್ದುಕೊಂಡು ಚೊಚ್ಚಲ ಚಿನ್ನದ ಪದಕಕ್ಕೆ ಮುತ್ತಿಟ್ಟರು.

20 ವರ್ಷದ ಲಕ್ಷ್ಯ ಅವರು ಮೊದಲ ಗೇಮ್‌ನಲ್ಲಿ ಸೋತರೂ, ಅಮೋಘ ರೀತಿಯಲ್ಲಿ ತಿರುಗೇಟು ನೀಡಿ ಚಿನ್ನದ ಪದಕ ಕೊರಳಿಗೇರಿಸಿಕೊಂಡರು.

ಎರಡನೇ ಗೇಮ್‌ನಲ್ಲಿ ಇಬ್ಬರೂ 9–9 ರಲ್ಲಿ ಸಮಬಲ ಸಾಧಿಸಿದ್ದರು. ಆ ಬಳಿಕದ ಆಟ ‘ಒನ್‌ವೇ ಟ್ರಾಫಿಕ್‌‘ನಂತೆ ಭಾಸವಾಯಿತು. ಸೇನ್‌ ಸತತ 12 ಪಾಯಿಂಟ್‌ ಕಲೆಹಾಕಿ ಗೇಮ್‌ ಗೆದ್ದುಕೊಂಡು ಪಂದ್ಯವನ್ನು 1–1 ರಲ್ಲಿ ಸಮಸ್ಥಿತಿಗೆ ತಂದರು.

ಮೂರನೇ ಗೇಮ್‌ನಲ್ಲಿ ಸೇನ್‌ ಅವರು ಆರಂಭದಿಂದಲೇ ಆಕ್ರಮಣಕಾರಿ ಆಟವಾಡಿದರು. ವಿರಾಮದ ವೇಳೆಗೆ 11–7ರ ಮುನ್ನಡೆ ಪಡೆದರು. ಹಿನ್ನಡೆಯನ್ನು 12–15ಕ್ಕೆ ತಗ್ಗಿಸಿದ ಎಂಗ್, ಮರುಹೋರಾಟಕ್ಕೆ ಪ್ರಯತ್ನಿಸಿದರು.

ಆದರೆ ಒಂದೊಂದು ಪಾಯಿಂಟ್‌ ಗಳಿಸುತ್ತಿದ್ದಂತೆ ಆತ್ಮವಿಶ್ವಾಸವನ್ನು ವೃದ್ಧಿಸಿಕೊಳ್ಳುತ್ತಿದ್ದ ಸೇನ್‌ ಅವರನ್ನು ತಡೆಯಲು ಮಲೇಷ್ಯಾದ ಆಟಗಾರನಿಗೆ ಸಾಧ್ಯವಾಗಲಿಲ್ಲ. ಲಕ್ಷ್ಯ ಅವರು ಪಂದ್ಯ ಗೆಲ್ಲುತ್ತಿದ್ದಂತೆಯೇ ತಮ್ಮ ರ‍್ಯಾಕೆಟ್‌, ಟಿ–ಶರ್ಟ್‌ಅನ್ನು ಪ್ರೇಕ್ಷಕರತ್ತ ಎಸೆದು ಸಂಭ್ರಮಿಸಿದರು.

*

ಈ ಚಿನ್ನದ ಪದಕಕ್ಕಾಗಿ ಹಲವು ವರ್ಷಗಳಿಂದ ಕಾಯುತ್ತಿದ್ದೆ. ಕೊನೆಗೂ ಅದು ಸಿಕ್ಕಿದೆ. ಅತಿಯಾದ ಸಂತಸ ಆಗುತ್ತಿದೆ.
-ಪಿ.ವಿ.ಸಿಂಧು

*

ಆರಂಭದಲ್ಲಿ ಒತ್ತಡಕ್ಕೆ ಒಳಗಾಗಿದ್ದೆ. ಕಠಿಣ ಪ್ರಯತ್ನದ ಮೂಲಕ ಮರುಹೋರಾಟ ನಡೆಸಿದೆ. ಯೊಂಗ್‌ ಅತ್ಯುತ್ತಮವಾಗಿ ಆಡಿದರು.
-ಲಕ್ಷ್ಯ ಸೇನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT