ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡ್ಮಿಂಟನ್: ಉತ್ತಮ ಸಾಮರ್ಥ್ಯ ತೋರುವ ನಿರೀಕ್ಷೆಯಲ್ಲಿ ಭಾರತ

ಥಾಮಸ್ ಮತ್ತು ಊಬರ್ ಕಪ್ ಬ್ಯಾಡ್ಮಿಂಟನ್ ಫೈನಲ್ಸ್
Last Updated 8 ಅಕ್ಟೋಬರ್ 2021, 11:28 IST
ಅಕ್ಷರ ಗಾತ್ರ

ಆಹಸ್‌, ಡೆನ್ಮಾರ್ಕ್‌: ಸುದಿರ್ಮನ್ ಕಪ್ ಟೂರ್ನಿಯಲ್ಲಿ ಅನುಭವಿಸಿದ ನಿರಾಸೆಯನ್ನು ಮರೆತು ಮುನ್ನುಗ್ಗುವ ಹಂಬಲದಲ್ಲಿರುವ ಭಾರತ ತಂಡವು ಶನಿವಾರದಿಂದ ಥಾಮಸ್‌ ಮತ್ತು ಊಬರ್ ಕಪ್ ಫೈನಲ್ಸ್ ಟೂರ್ನಿಯಲ್ಲಿ ಕಣಕ್ಕಿಳಿಯಲಿದೆ. ಸೈನಾ ನೆಹ್ವಾಲ್‌, ಚಿರಾಗ್‌ ಶೆಟ್ಟಿ ಮತ್ತು ಸಾತ್ವಿಕ್‌ಸಾಯಿರಾಜ್‌ ರಣಕಿರೆಡ್ಡಿ ತಂಡಕ್ಕೆ ಮರಳಿರುವುದು ಬಲ ಹೆಚ್ಚಿಸಿದೆ.

ಪ್ರಮುಖ ಆಟಗಾರರ ಅನುಪಸ್ಥಿತಿಯ ಕಾರಣದಿಂದ ಭಾರತವು, ಕಳೆದ ವಾರ ಫಿನ್ಲೆಂಡ್‌ನ ವಂಟಾದಲ್ಲಿ ಕೊನೆಗೊಂಡ ಸುದಿರ್ಮನ್ ಕಪ್ ಟೂರ್ನಿಯಲ್ಲಿ ಚೀನಾ ಮತ್ತು ಥಾಯ್ಲೆಂಡ್‌ ತಂಡಗಳ ಎದುರು ಸೋಲು ಅನುಭವಿಸಿತ್ತು.

ಐದು ಖಂಡಗಳ ಪ್ರಮುಖ 16 ತಂಡಗಳು ಕಣಕ್ಕಿಳಿಯುವ ಥಾಮಸ್‌ ಮತ್ತು ಊಬರ್ ಕಪ್ ಫೈನಲ್ಸ್‌ನಲ್ಲಿ ಉತ್ತಮ ಸಾಮರ್ಥ್ಯ ತೋರುವ ನಿರೀಕ್ಷೆಯಲ್ಲಿದೆ. ಥಾಮಸ್ ಕಪ್‌ನಲ್ಲಿ, ಭಾರತ ತಂಡವು ಚೀನಾ, ನೆದರ್ಲೆಂಡ್ಸ್ ಮತ್ತು ತಹಿತಿಯೊಂದಿಗೆ ‘ಸಿ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಆದರೆ ಉಬರ್ ಕಪ್‌ನ ‘ಬಿ‘ ಗುಂಪಿನಲ್ಲಿ ಮಹಿಳಾ ತಂಡವು ಥಾಯ್ಲೆಂಡ್‌, ಸ್ಪೇನ್ ಮತ್ತು ಸ್ಕಾಟ್ಲೆಂಡ್‌ನೊಂದಿಗಿದೆ.

ಪುರುಷರ ತಂಡವು ಮೊದಲ ಪಂದ್ಯದಲ್ಲಿ ನೆದರ್ಲೆಂಡ್ಸ್ ಎದುರು ಆಡಲಿದ್ದರೆ, ಮಹಿಳಾ ತಂಡಕ್ಕೆ ಸ್ಪೇನ್ ಮುಖಾಮುಖಿಯಾಗಲಿದೆ.

ಭಾರತದ 10 ಮಂದಿ ಪುರುಷರ ತಂಡದಲ್ಲಿ ಸಿಂಗಲ್ಸ್ ವಿಭಾಗದ ನಾಲ್ವರು ಮತ್ತು ಮೂರು ಡಬಲ್ಸ್ ಜೋಡಿಗಳು ಇವೆ.

ಪುರುಷರ ತಂಡವು ಕಳೆದ 11 ವರ್ಷಗಳಿಂದ ಟೂರ್ನಿಯ ನಾಕೌಟ್‌ ಹಂತ ತಲುಪಿಲ್ಲ. ಈ ಬಾರಿ ಆ ತಡೆ ದಾಟುವ ಭರವಸೆಯಲ್ಲಿದೆ. ಮಹಿಳಾ ತಂಡವು 2014 ಮತ್ತು 2016ರಲ್ಲಿ ಕಂಚಿನ ಪದಕ ಗೆದ್ದಿತ್ತು. ಎರಡು ಬಾರಿ ಒಲಿಂಪಿಕ್ಸ್ ಪ‍ದಕ ವಿಜೇತೆ ಪಿ.ವಿ.ಸಿಂಧು ಅವರು ಈ ಟೂರ್ನಿಯಲ್ಲಿ ಆಡುತ್ತಿಲ್ಲವಾದ್ದರಿಂದ ಪದಕ ಗೆಲ್ಲುವುದು ಸವಾಲೆನಿಸಿದೆ.

ತಂಡಗಳು: ಪುರುಷರು: ಸಿಂಗಲ್ಸ್ ವಿಭಾಗ: ಬಿ.ಸಾಯಿ ಪ್ರಣೀತ್‌, ಕಿರಣ್ ಜಾರ್ಜ್‌, ಕಿದಂಬಿ ಶ್ರೀಕಾಂತ್, ಸಮೀರ್‌ ವರ್ಮಾ. ಡಬಲ್ಸ್: ಚಿರಾಗ್‌ ಶೆಟ್ಟಿ–ಸಾತ್ವಿಕ್‌ಸಾಯಿರಾಜ್ ರಣಕಿರೆಡ್ಡಿ, ಧ್ರುವ ಕಪಿಲ– ಎಂ.ಆರ್‌.ಅರ್ಜುನ್‌, ಜಿ. ಕೃಷ್ಣಪ್ರಸಾದ್– ವಿಷ್ಣುವರ್ಧನ್‌

ಮಹಿಳೆಯರು: ಸಿಂಗಲ್ಸ್: ಸೈನಾ ನೆಹ್ವಾಲ್‌, ಮಾಳವಿಕಾ ಬಾನ್ಸೋದ್‌, ಅದಿತಿ ಭಟ್‌ ಮತ್ತು ತಸ್ನಿಮ್ ಮಿರ್‌. ಡಬಲ್ಸ್: ಅಶ್ವಿನಿ ಪೊನ್ನಪ್ಪ– ಎನ್‌.ಸಿಕ್ಕಿರೆಡ್ಡಿ, ತನಿಶಾ ಕ್ರಾಸ್ಟೊ– ಋತುಪರ್ಣಾ ಪಂಡಾ, ಗಾಯತ್ರಿ ಗೋಪಿಚಂದ್‌–ತ್ರೀಶಾ ಜೋಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT