ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಫ್‌ಐಎಚ್‌ ಪುರುಷರ ವಿಶ್ವಕಪ್ ಟೂರ್ನಿ| ಕ್ರಾಸ್‌ಓವರ್ ತಡೆ ದಾಟದ ಭಾರತ

ಪೆನಾಲ್ಟಿ ಶೂಟೌಟ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ ಸೋಲು: ವಿಶ್ವಕಪ್‌ನಿಂದ ಹೊರಕ್ಕೆ
Last Updated 22 ಜನವರಿ 2023, 18:38 IST
ಅಕ್ಷರ ಗಾತ್ರ

ಭುವನೇಶ್ವರ: ಎಫ್‌ಐಎಚ್‌ ಪುರುಷರ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ಅಭಿಯಾನ ಭಾನುವಾರ ಅಂತ್ಯಗೊಂಡಿದೆ.

ಇಲ್ಲಿಯ ಕಳಿಂಗ ಕ್ರೀಡಾಂಗಣದಲ್ಲಿ ನಡೆದ ಕ್ರಾಸ್‌ಓವರ್ ಪಂದ್ಯದಲ್ಲಿ ನ್ಯೂಜಿಲೆಂಡ್‌ ತಂಡವು ಪೆನಾಲ್ಟಿ ಶೂಟೌಟ್‌ನಲ್ಲಿ 5–4ರಿಂದ ಭಾರತದ ವಿರುದ್ಧ ಗೆದ್ದು ಎಂಟರಘಟ್ಟ ತಲುಪಿತು. ಗ್ಯಾಲರಿಯಲ್ಲಿದ್ದ ಭಾರತದ 15 ಸಾವಿರಕ್ಕೂ ಅಭಿಮಾನಿಗಳ ಹಾರೈಕೆ ಫಲಿಸಲಿಲ್ಲ.

ಪಂದ್ಯದ ನಿಗದಿತ ಅವಧಿಯಲ್ಲಿ ಉಭಯ ತಂಡಗಳು ತಲಾ ಮೂರು ಗೋಲು ಗಳಿಸಿದ್ದವು. ಹೀಗಾಗಿ ಪೆನಾಲ್ಟಿ ಶೂಟೌಟ್‌ ಮೊರೆಹೋಗಲಾಗಿತ್ತು. ವಿಶ್ವ ರ‍್ಯಾಂಕಿಂಗ್‌ನಲ್ಲಿ ಆರನೇ ಸ್ಥಾನದಲ್ಲಿರುವ ಭಾರತ ತನಗಿಂತ ಕೆಳ ರ‍್ಯಾಂಕಿನ ಕಿವೀಸ್‌ (12) ಎದುರು ಸಾಧಾರಣ ಸಾಮರ್ಥ್ಯ ತೋರಿತು.

ಮೊದಲಾರ್ಧದಲ್ಲಿ 2–0ಯಿಂದ ಮುನ್ನಡೆ ಗಳಿಸಿದ್ದ ಭಾರತ ಅದೇ ಲಯ ಉಳಿಸಿಕೊಳ್ಳುವಲ್ಲಿ ವಿಫಲವಾಯಿತು.

ಪಂದ್ಯದ ನಿಗದಿತ ಅವಧಿಯಲ್ಲಿ ಭಾರತ ತಂಡಕ್ಕಾಗಿ ಲಲಿತ್ ಉಪಾಧ್ಯಾಯ (17ನೇ ನಿಮಿಷ) ಮೊದಲ ಗೋಲು ಹೊಡೆದರು. ಸುಖಜೀತ್ ಸಿಂಗ್‌ (24ನೇ ನಿ.) ಮತ್ತು ವರುಣ್ ಕುಮಾರ್ (40ನೇ ನಿ.) ಪೆನಾಲ್ಟಿ ಕಾರ್ನರ್‌ ಅವಕಾಶಗಳಲ್ಲಿ ಚೆಂಡನ್ನು ಗೋಲುಪೆಟ್ಟಿಗೆಗೆ ಸೇರಿಸಿದರು.

ನ್ಯೂಜಿಲೆಂಡ್‌ ಪರ ಸ್ಯಾಮ್ ಲಾನೆ (28ನೇ ನಿ.) ಫೀಲ್ಡ್ ಗೋಲು ದಾಖಲಿಸಿದರೆ, ಕೇನ್‌ ರಸೆಲ್‌ (43ನೇ ನಿ.) ಮತ್ತು ಸೀನ್ ಫೈಂಡ್ಲಿ (49ನೇ ನಿ.) ಪೆನಾಲ್ಟಿ ಕಾರ್ನರ್‌ಗಳನ್ನು ಗೋಲುಗಳಲ್ಲಿ ಪರಿವರ್ತಿಸಿದರು.

ಈ ಪಂದ್ಯದಲ್ಲಿಯೂ ಭಾರತ ಪೆನಾಲ್ಟಿ ಕಾರ್ನರ್‌ ಅವಕಾಶಗಳನ್ನು ಗೋಲುಗಳಲ್ಲಿ ಪರಿವರ್ತಿಸುವಲ್ಲಿ ಎಡವಿತು. ದೊರೆತ 11 ಅವಕಾಶಗಳಲ್ಲಿ ಕೇವಲ ಎರಡು ಬಾರಿ ಯಶಸ್ಸು ಸಾಧಿಸಿತು. ಆದರೆ ಎದುರಾಳಿ ತಂಡ ಎರಡೇ ಅವಕಾಶ ದೊರೆತರೂ ಎರಡನ್ನೂ ಗೋಲಿನಲ್ಲಿ ಪರಿವರ್ತಿಸಿತು.

1975ರಲ್ಲಿ ಅಜಿತ್‌ ಪಾಲ್‌ ಸಿಂಗ್‌ ನೇತೃತ್ವದ ತಂಡ ಚಾಂಪಿಯನ್‌ ಆಗಿತ್ತು. ಆ ಬಳಿಕ ಭಾರತಕ್ಕೆ ಪದಕ ಗೆಲ್ಲಲು ಆಗಿಲ್ಲ. 48 ವರ್ಷಗಳ ನಂತರ ಪದಕ ಗೆಲ್ಲುವ ಕನಸು ಈಡೇರಲಿಲ್ಲ.

ಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ ನ್ಯೂಜಿಲೆಂಡ್ ತಂಡವು ಹಾಲಿ ಚಾಂಪಿಯನ್ ಬೆಲ್ಜಿಯಂ ತಂಡವನ್ನು ಎದುರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT