ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಯೊನ್ ಮೆಂಡೊನ್ಸಾಗೆ ಗ್ರ್ಯಾಂಡ್‌ಮಾಸ್ಟರ್‌ ಗರಿ

Last Updated 26 ಅಕ್ಟೋಬರ್ 2020, 13:57 IST
ಅಕ್ಷರ ಗಾತ್ರ

ಚೆನ್ನೈ : ಭಾರತದ ಯುವ ಚೆಸ್‌ ತಾರೆ, ಅಂತರರಾಷ್ಟ್ರೀಯ ಮಾಸ್ಟರ್‌ ಲಿಯೊನ್‌ ಲ್ಯೂಕ್‌ ಮೆಂಡೊನ್ಸಾ ಅವರು ತಮ್ಮ ಮೊದಲ ಗ್ರಾಂಡ್‌ಮಾಸ್ಟರ್‌ ನಾರ್ಮ್‌ ಗಳಿಸಿದ್ದಾರೆ. ಹಂಗರಿಯಲ್ಲಿ ನಡೆದ ರಿಗೊಚೆಸ್‌ ಅಂತರರಾಷ್ಟ್ರೀಯ ಚೆಸ್‌ ಹಬ್ಬದಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ಅವರು ಈ ಸಾಧನೆ ಮಾಡಿದರು.

14 ವರ್ಷದ ಮೆಂಡೊನ್ಸಾ ಅವರು ಟೂರ್ನಿಯ ಒಂಬತ್ತು ಪಂದ್ಯಗಳ ಪೈಕಿ ಆರರಲ್ಲಿ ಗೆದ್ದು, ಎರಡಲ್ಲಿ ಡ್ರಾ ಸಾಧಿಸಿದರು. ಒಂದು ಪಂದ್ಯದಲ್ಲಿ ಮಾತ್ರ ಸೋಲು ಅನುಭವಿಸಿದರು. ಟೂರ್ನಿಯಲ್ಲಿ ಪಾಲ್ಗೊಂಡಿದ್ದ 10 ಆಟಗಾರರಲ್ಲಿ ಮೂವರು ಗ್ರ್ಯಾಂಡ್‌ಮಾಸ್ಟರ್‌ಗಳಿದ್ದರು. ಇವರೆಲ್ಲರನ್ನೂ ಹಿಂದಿಕ್ಕಿದ ಮೆಂಡೊನ್ಸಾ ಒಟ್ಟು ಏಳು ಪಾಯಿಂಟ್ಸ್‌ ಕಲೆಹಾಕಿದರು.

ಗೋವಾ ಮೂಲದ ಮೆಂಡೊನ್ಸಾ (2499 ಇಎಲ್‌ಒ ರೇಟಿಂಗ್ಸ್) ಅವರು ಮೊದಲ ಸುತ್ತಿನಲ್ಲಿ ಅಮೆರಿಕದ ವಿಲಿಯಮ್‌ ಪಾಶ್ಚೆಲ್‌ ಅವರನ್ನು ಮಣಿಸಿದರು. ಎರಡನೇ ಸುತ್ತಿನಲ್ಲಿ ತನಗಿಂತ ಕೆಳ ಕ್ರಮಾಂಕದ ಅಲೆಕ್ಸ್ ಕ್ರುಸ್ಟುಲೊವಿಚ್‌ ಎದುರು ಸೋತರು. ಆ ಬಳಿಕ ಸತತ ಐದು ಪಂದ್ಯಗಳಲ್ಲಿ ಮೆಂಡೊನ್ಸಾ ಗೆಲುವಿನ ನಗೆ ಬೀರಿದರು. ಈ ಹಾದಿಯಲ್ಲಿ ಅವರು ಗ್ರ್ಯಾಂಡ್‌ಮಾಸ್ಟರ್‌ಗಳಾದ ಎನ್‌ಗುಯೆನ್‌ ಹ್ಯುನ್‌ ಮಿನ್‌ ಹ್ಯುಯ್‌ ಹಾಗೂ ಡೇವಿಡ್‌ ಬೆರ್ಸೆಜ್‌ ಅವರನ್ನು ಪರಾಭವಗೊಳಿಸಿದರು.

ಒಂಬತ್ತನೇ ಹಾಗೂ ಕೊನೆಯ ಸುತ್ತಿನಲ್ಲಿ ಮೆಂಡೊನ್ಸಾ, ಹಂಗರಿಯ ಗ್ರ್ಯಾಂಡ್‌ಮಾಸ್ಟರ್‌ ಆ್ಯಡಂ ಕೊಜಾಕ್‌ ಎದುರು ಡ್ರಾಕ್ಕೆ ಸಮ್ಮತಿಸಿದರು.

ಟೂರ್ನಿಯಲ್ಲಿ ಕೋವಿಡ್‌–19 ಕುರಿತ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿತ್ತು.

‘ಹಲವು ಬಾರಿ ಕೂದಲೆಳೆ ಅಂತರದಲ್ಲಿ ಕೈ ತಪ್ಪಿದ್ದ ಗ್ರ್ಯಾಂಡ್‌ಮಾಸ್ಟರ್‌ ನಾರ್ಮ್‌ಅನ್ನು ಈ ಬಾರಿ ಗಳಿಸಿದ್ದು, ಸಂತಸ ತಂದಿದೆ‘ ಎಂದು ಮೆಂಡೊನ್ಸಾ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT