ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ಹಾಕಿ ಆಟಗಾರರು ಕ್ಷೇಮ

ಸಾಯ್ ದಕ್ಷಿಣ ವಲಯ ಕೇಂದ್ರದಲ್ಲಿ ಪುರುಷ-ಮಹಿಳಾ ತಂಡಗಳ ತರಬೇತಿ ನಿರಾತಂಕ
Last Updated 22 ಮಾರ್ಚ್ 2020, 7:40 IST
ಅಕ್ಷರ ಗಾತ್ರ

ಬೆಂಗಳೂರು: ಟೋಕಿಯೊ ಒಲಿಂಪಿಕ್ಸ್‌ಗೆ ಸಜ್ಜಾಗುತ್ತಿರುವ ಭಾರತದ ಪುರುಷ ಮತ್ತು ಮಹಿಳೆಯರ ಹಾಕಿ ತಂಡಗಳು ಬೆಂಗಳೂರಿನಲ್ಲಿ ಕ್ಷೇಮವಾಗಿದ್ದು ಅವರ ಅಭ್ಯಾಸ ನಿರಾತಂಕವಾಗಿ ಮುಂದುವರಿದಿದೆ.

ನಗರದಲ್ಲಿ ಕೋವಿಡ್ ಸೋಂಕಿತರು ಪತ್ತೆಯಾಗುತ್ತಿದ್ದಂತೆ ಆತಂಕ ಹೆಚ್ಚಿತ್ತು. ಹೀಗಾಗಿ ಸಾಯ್ ಕೇಂದ್ರಕ್ಕೆ ಹೊರಗಿನವರು ಹೋಗುವುದನ್ನು ನಿರ್ಬಂಧಿಸಲಾಗಿತ್ತು. ಕೇಂದ್ರದಲ್ಲಿ ತರಬೇತಿ ಪಡೆಯುತ್ತಿರುವ ಕ್ರೀಡಾಪಟುಗಳು ಹೊರಗೆ ಹೋಗುವಂತಿಲ್ಲ ಎಂದೂ ಸೂಚಿಸಲಾಗಿತ್ತು.‌ ಈ ನಿರ್ಬಂಧಗಳು ಹಾಕಿ ತರಬೇತಿಗೆ ಅಡ್ಡಿಯಾಗಲಿಲ್ಲ.

‘ಕೊರೊನಾ ವೈರಸ್‌ನಿಂದಾಗಿ ಉಂಟಾಗಿರುವ ಭೀತಿ ನಮ್ಮ ತರಬೇತಿಗೆ ಯಾವ ರೀತಿಯಲ್ಲೂ ಅಡ್ಡಿಯಾಗಿಲ್ಲ. ನಾವು ನಿರಂತರವಾಗಿ ಕೈಗಳನ್ನು ತೊಳೆಯುತ್ತಿದ್ದೇವೆ. ದೇಹದ ಉಷ್ಣಾಂಶದ ಮಾಪನ ನಿಯಮಿತವಾಗಿ ನಡೆಯುತ್ತಿದೆ. ಸಾಯ್ ಕೇಂದ್ರ ಸುರಕ್ಷಿತವಾಗಿದ್ದು ನಿರಾತಂಕವಾಗಿ ಅಭ್ಯಾಸ ಮಾಡುವ ಪರಿಸರವನ್ನು ಅಧಿಕಾರಿಗಳು ಒದಗಿಸಿದ್ದಾರೆ’ ಎಂದು ಪುರುಷರ ತಂಡದ ನಾಯಕ ಮನ್‌ಪ್ರೀತ್ ಸಿಂಗ್ ಹೇಳಿದರು.

‘ಸಾಯ್ ಅಧಿಕಾರಿಗಳು ಮತ್ತು ಕೋಚ್‌ಗಳ ಅರ್ಪಣಾ ಭಾವ ನಮ್ಮಲ್ಲಿ ಹುರುಪು ಮೂಡಿಸಿದ್ದು ಒಲಿಂಪಿಕ್ಸ್‌ಗಾಗಿ ಕಠಿಣ ಅಭ್ಯಾಸ ಮಾಡುತ್ತಿದ್ದೇವೆ’ ಎಂದು ಅವರು ತಿಳಿಸಿದರು.

‘ಒಲಿಂಪಿಕ್ಸ್ ಅಭ್ಯಾಸ ಶಿಬಿರಕ್ಕೆ ಯಾವುದೇ ರೀತಿಯಲ್ಲಿ ಧಕ್ಕೆಯಾಗಲಿಲ್ಲ. ಇಂಥ ಪರಿಸರ ಲಭಿಸಿರುವುದು ನಮ್ಮಅದೃಷ್ಟ’ ಎಂದು ಮಹಿಳಾ ತಂಡದ ನಾಯಕಿ ರಾಣಿ ರಾಂಪಾಲ್ ಅಭಿಪ್ರಾಯಪಟ್ಟರು.

‘ಆರೋಗ್ಯದ ಮೇಲೆ ನಿಗಾ ಇರಿಸಿ ಪ್ರತಿದಿನವೂ ತಪಾಸಣೆ ನಡೆಸಲಾಗುತ್ತಿದೆ. ನಾವು ಕೂಡ ಆರೋಗ್ಯವನ್ನು ಕಾಳಜಿಯಿಂದ ಕಾಪಾಡಿಕೊಳ್ಳುತ್ತಿದ್ದೇವೆ. ಅಭ್ಯಾಸ ನಿರಾತಂಕವಾಗಿ ನಡೆಯಲು ಸಾಯ್ ಅಧಿಕಾರಿಗಳು ಸಹಕರಿಸುತ್ತಿದ್ದಾರೆ’ ಎಂದು ರಾಣಿ ಹೇಳಿದರು.

ಟೋಕಿಯೊ ಒಲಿಂಪಿಕ್ಸ್‌ನ ಮೊದಲ ಪಂದ್ಯದಲ್ಲಿ ಭಾರತ ಪುರುಷರ ತಂಡ ನ್ಯೂಜಿಲೆಂಡ್ ವಿರುದ್ಧವೂ ಮಹಿಳೆಯರ ತಂಡ ನೆದರ್ಲೆಂಡ್ಸ್ ಎದುರೂ ಸೆಣಸಲಿದೆ. ಎರಡೂ ಪಂದ್ಯಗಳು ಜುಲೈ 25ರಂದು ನಿಗದಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT