ಶುಕ್ರವಾರ, ಸೆಪ್ಟೆಂಬರ್ 25, 2020
22 °C

ಭಾರತ ಪುರುಷರ ಮತ್ತು ಮಹಿಳೆಯರ ಹಾಕಿ ತಂಡಗಳ ಅಭ್ಯಾಸ 19ರಂದು ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಭಾರತ ಪುರುಷರ ಮತ್ತು ಮಹಿಳೆಯರ ಹಾಕಿ ತಂಡಗಳು ಇದೇ ತಿಂಗಳ 19ರಂದು ಕ್ರೀಡಾ ಚಟುವಟಿಕೆಯನ್ನು ಆರಂಭಿಸಲಿವೆ ಎಂದು ಭಾರತ ಕ್ರೀಡಾ ಪ್ರಾಧಿಕಾರ (ಸಾಯ್) ಬುಧವಾರ ತಿಳಿಸಿದೆ.

ಕೊರೊನಾ ಹಾವಳಿಯಿಂದಾಗಿ ಬೆಂಗಳೂರಿನ ಸಾಯ್ ಕೇಂದ್ರದಲ್ಲಿ ‘ಬಂದಿ’ಯಾಗಿದ್ದ ಹಾಕಿಪಟುಗಳನ್ನು ಒಂದು ತಿಂಗಳ ವಿರಾಮಕ್ಕಾಗಿ ಅವರವರ ಮನೆಗಳಿಗೆ ಕಳುಹಿಸಲಾಗಿತ್ತು. ಆಗಸ್ಟ್ ನಾಲ್ಕರಂದು ಅವರೆಲ್ಲರೂ ಸಾಯ್‌ಗೆ ಮರಳಿದ್ದು, 14 ದಿನಗಳ ಕ್ವಾರಂಟೈನ್‌ನಲ್ಲಿದ್ದಾರೆ.

ಮುಖ್ಯ ಕೋಚ್ ಮತ್ತು ಎರಡೂ ತಂಡಗಳ ಪ್ರಮುಖರ ಜೊತೆ ಮಾತುಕತೆ ನಡೆಸಿದ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ. ಅಥ್ಲೀಟ್‌ಗಳ ಸುರಕ್ಷತೆಗೆ ಬೇಕಾದ ಎಲ್ಲ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿದ್ದು ಸಾಯ್ ಆವರಣದಲ್ಲೇ ತರಬೇತಿ ಆರಂಭಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

‘ರಾಷ್ಟ್ರೀಯ ಶಿಬಿರಕ್ಕೆ ವಾಪಸಾಗಿದ್ದು ತುಂಬ ಖುಷಿ ನೀಡಿದೆ. ಆಟಗಾರ್ತಿಯರೆಲ್ಲರೂ ಅಭ್ಯಾಸ ಆರಂಭಿಸಲು ತುದಿಗಾಲಲ್ಲಿ ನಿಂತಿದ್ದು 19ರಂದು ಕಣಕ್ಕೆ ಇಳಿಯಲು ಸಂತೋಷದಿಂದ ಒಪ್ಪಿಕೊಂಡಿದ್ದಾರೆ. ಸುರಕ್ಷಿತ ವಾತಾವರಣದಲ್ಲಿ ಫಿಟ್‌ನೆಸ್ ಕಾಯ್ದುಕೊಳ್ಳಲು ಕಠಿಣ ಪ್ರಯತ್ನಪಡಬೇಕಾದ ಅಗತ್ಯವಿದೆ‘ ಎಂದು ಮಹಿಳಾ ತಂಡದ ಕೊಚ್ ಶೊರ್ಡ್ ಮ್ಯಾರಿಜ್ ಹೇಳಿದರು.

‘ಆಟಗಾರರು ಮತ್ತು ನೆರವು ಸಿಬ್ಬಂದಿಯ ಜೊತೆ ಸುದೀರ್ಘ ಚರ್ಚೆ ನಡೆಸಿದ್ದೇನೆ. ಚಟುವಟಿಕೆ ಆರಂಭಿಸಲು ಅವರೆಲ್ಲರೂ ಒಪ್ಪಿಗೆ ಸೂಚಿಸಿದ್ದಾರೆ. ಆರೋಗ್ಯವನ್ನು ಕಾಯ್ದುಕೊಂಡೇ ಆಟದ ಅಂಗಣಕ್ಕೆ ಇಳಿಯಲು ಎಲ್ಲರೂ ಸಜ್ಜಾಗಿದ್ದಾರೆ. ಪರಿಸ್ಥಿತಿಗೆ ಅತಿವೇಗವಾಗಿ ಅವರು ಹೊಂದಿಕೊಂಡಿದ್ದು ಅಭ್ಯಾಸ ಆರಂಭಿಸಿದ ಕೆಲವೇ ದಿನಗಳಲ್ಲಿ ಎಲ್ಲವೂ ಸರಿಹೋಗುವ ನಿರೀಕ್ಷೆ ಇದೆ’ ಎಂದು ಪುರುಷರ ತಂಡದ ಕೋಚ್ ಗ್ರಹಾಂ ರೀಡ್ ಹೇಳಿದರು.

‘ಕೋವಿಡ್ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಚಾಚೂ ತಪ್ಪದೆ ಪಾಲಿಸಲಾಗುವುದು. ಎಲ್ಲ ರೀತಿಯ ಸುರಕ್ಷಾ ಕ್ರಮಗಳನ್ನು ಕೈಗೊಂಡು ಉತ್ತಮ ವಾತಾವರಣದಲ್ಲಿ ತರಬೇತಿಯನ್ನು ನಡೆಸಲಾಗುವುದು’ ಎಂದು ಸಾಯ್ ದಕ್ಷಿಣ ಕೇಂದ್ರದ ನಿರ್ದೇಶಕ ಎ.ಕೆ.ಬಹ್ಲ್ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು