ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೇಬಲ್‌ ಟೆನಿಸ್‌ ಟೂರ್ನಿ: ಭಾರತದ ಖಾತೆಗೆ ಏಳು ಪದಕ

Last Updated 26 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ಬೆಂಗಳೂರು: ಭಾರತದ ಟೇಬಲ್‌ ಟೆನಿಸ್‌ ಸ್ಪರ್ಧಿಗಳು ಮಸ್ಕತ್‌ನಲ್ಲಿ ನಡೆಯುತ್ತಿರುವ ಒಮನ್‌ ಜೂನಿಯರ್‌ ಮತ್ತು ಕೆಡೆಟ್‌ ಓಪನ್‌ ಟೂರ್ನಿಯಲ್ಲಿ ಒಂದು ಚಿನ್ನ ಸೇರಿದಂತೆ ಒಟ್ಟು ಏಳು ಪದಕಗಳನ್ನು ಕೊರಳಿಗೇರಿಸಿಕೊಂಡಿದ್ದಾರೆ.

ಶುಕ್ರವಾರ ರಾತ್ರಿ ನಡೆದ ಕೆಡೆಟ್‌ ಬಾಲಕಿಯರ ಫೈನಲ್‌ನಲ್ಲಿ ಕಾವ್ಯಶ್ರೀ ಭಾಸ್ಕರ್‌ ಮತ್ತು ನಿಲೀಷ್ಮಾ ಸರ್ಕಾರ್‌ ಅವರಿದ್ದ ಭಾರತ ‘ಬಿ’ ತಂಡ 3–1ರಿಂದ ಚೀನಾ ತೈಪೆ ‘ಎ’ ತಂಡವನ್ನು ಪರಾಭವಗೊಳಿಸಿ ಚಿನ್ನದ ಸಾಧನೆ ಮಾಡಿತು.

ಕಾವ್ಯಶ್ರೀ ಅವರು ಆಡಿದ ಎರಡು ಸಿಂಗಲ್ಸ್‌ ಪಂದ್ಯಗಳಲ್ಲೂ ಗೆದ್ದು ಎಲ್ಲರ ಗಮನ ಸೆಳೆದರು.

ಭಾರತ ‘ಎ’ ತಂಡವು ಈ ವಿಭಾಗದ ಕಂಚಿನ ಪದಕ ಪಡೆಯಿತು. ಎಸ್‌.ತನೀಷಾ ಮತ್ತು ಸುಹನಾ ಸೈನಿ ಅವರಿದ್ದ ಭಾರತ ‘ಎ’ ತಂಡ ಸೆಮಿಫೈನಲ್‌ನಲ್ಲಿ 2–3ರಿಂದ ಭಾರತ ‘ಬಿ’ ತಂಡದ ಎದುರು ಸೋತಿತ್ತು.

ಕೆಡೆಟ್‌ ಬಾಲಕರ ವಿಭಾಗದಲ್ಲಿ ಭಾರತ ‘ಎ’ ಮತ್ತು ಭಾರತ ‘ಬಿ’ ತಂಡಗಳು ಕಂಚಿನ ಪದಕ ಗೆದ್ದವು.

ಆದರ್ಶ್‌ ಓಂ ಚೆಟ್ರಿ ಮತ್ತು ದಿವ್ಯಾಂಶ್‌ ಶ್ರೀವಾಸ್ತವ ಅವರಿದ್ದ ಭಾರತ ‘ಎ’ ತಂಡವು ಸೆಮಿಫೈನಲ್‌ನಲ್ಲಿ 0–3ರಲ್ಲಿ ಚೀನಾ ತೈಪೆ ‘ಎ’ ತಂಡದ ಎದುರು ಸೋತಿತು.

ನಾಲ್ಕರ ಘಟ್ಟದ ಇನ್ನೊಂದು ಪಂದ್ಯದಲ್ಲಿ ರಾಜ್‌ ಸುರೇಶ್‌ ಮತ್ತು ಸಾರ್ಥ್‌ ಮಿಶ್ರಾ ಅವರನ್ನೊಳಗೊಂಡ ಭಾರತ ‘ಬಿ’ ತಂಡ 0–3ರಲ್ಲಿ ರಷ್ಯಾ ವಿರುದ್ಧ ಮಣಿಯಿತು.

ಜೂನಿಯರ್‌ ಬಾಲಕಿಯರ ತಂಡ ವಿಭಾಗದಲ್ಲಿ ಕರ್ನಾಟಕದ ಅನರ್ಘ್ಯಾ ಮಂಜುನಾಥ್‌ ಮತ್ತು ಸ್ವಸ್ತಿಕಾ ಘೋಷ್‌ ಅವರಿದ್ದ ಭಾರತ ‘ಎ’ ತಂಡ ಬೆಳ್ಳಿಯ ಪದಕಕ್ಕೆ ಕೊರಳೊಡ್ಡಿತು.

ರೌಂಡ್‌ ರಾಬಿನ್‌ ಮಾದರಿಯಲ್ಲಿ ನಡೆದ ಸ್ಪರ್ಧೆಯಲ್ಲಿ ಅನರ್ಘ್ಯಾ ಮತ್ತು ಸ್ವಸ್ತಿಕಾ ಅವರು ಆಡಿದ ನಾಲ್ಕು ಪಂದ್ಯಗಳ ಪೈಕಿ ಮೂರರಲ್ಲಿ ಗೆದ್ದರು. ಇದರೊಂದಿಗೆ ಏಳು ಪಾಯಿಂಟ್ಸ್‌ ಕಲೆಹಾಕಿದರು.

ನಾಲ್ಕನೇ ಹಣಾಹಣಿಯಲ್ಲಿ ಅನರ್ಘ್ಯಾ ಮತ್ತು ಸ್ವಸ್ತಿಕಾ 2–3ರಿಂದ ಚೀನಾ ತೈಪೆ ಆಟಗಾರ್ತಿಯರ ಎದುರು ಸೋತರು. ಹೀಗಾಗಿ ಚಿನ್ನದ ಪದಕದ ಕನಸು ಕಮರಿತು.

ಇದೇ ವಿಭಾಗದಲ್ಲಿ ಭಾರತ ‘ಬಿ’ ತಂಡ ಕಂಚಿನ ಪದಕ ಜಯಿಸಿತು. ಮುನ್‌ಮುನ್‌ ಕುಂದು ಮತ್ತು ಅನುಷಾ ಕುಟುಂಬಳೆ ಅವರಿದ್ದ ತಂಡವು ಎರಡು ಪಂದ್ಯಗಳಲ್ಲಿ ಗೆದ್ದು ಆರು ಪಾಯಿಂಟ್ಸ್‌ ಗಳಿಸಿತು.

ಜೂನಿಯರ್‌ ಬಾಲಕರ ವಿಭಾಗದಲ್ಲಿ ಶ್ರೇಯಾನ್ಸ್‌ ಗೋಯಲ್‌ ಮತ್ತು ಹಿಮ್ನಾಕುಲ್ಹ್‌ಪುಯಿಂಗೆತಾ ಜೆಹೊ ಅವರಿದ್ದ ಭಾರತ ‘ಬಿ’ ತಂಡವು ಕಂಚಿನ ಪದಕ ಗಳಿಸಿತು.

ಸೆಮಿಫೈನಲ್‌ನಲ್ಲಿ ಭಾರತ ‘ಬಿ’ ತಂಡ 1–3ರಲ್ಲಿ ಇರಾನ್‌ ಎದುರು ಸೋತಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT