ಗುರುವಾರ , ಆಗಸ್ಟ್ 5, 2021
22 °C

ಟೋಕಿಯೊ ಒಲಿಂಪಿಕ್ಸ್‌: ಉದ್ಘಾಟನಾ ಸಮಾರಂಭದಲ್ಲಿ ಭಾರತದ ಕನಿಷ್ಠ ಪ್ರಾತಿನಿಧ್ಯ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಟೋಕಿಯೊ: ಒಲಿಂಪಿಕ್ಸ್‌ ಕೂಟದ ಉದ್ಘಾಟನಾ ಸಮಾರಂಭದಲ್ಲಿ ಭಾರತದ ಕ್ರೀಡಾಪಟುಗಳು ಕನಿಷ್ಠ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅಧಿಕಾರಿಗಳ ಪೈಕಿ ಆರು ಮಂದಿ ಮಾತ್ರ ಭಾಗವಹಿಸಲಿದ್ದಾರೆ ಎಂದು ಭಾರತ ಒಲಿಂಪಿಕ್ ಸಂಸ್ಥೆ (ಐಒಎ) ತಿಳಿಸಿದೆ. 

ಉದ್ಘಾಟನೆಯ ಮರುದಿನ ನಡೆಯುವ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವವರನ್ನು ಉದ್ಘಾಟನಾ ಸಮಾರಂಭದಿಂದ ದೂರ ಇರಿಸಲಾಗುವುದು ಎಂದು ಭಾರತ ತಂಡದ ಉಪ ಚೆಫ್ ಡಿ ಮಿಷನ್ ‍ಪ್ರೇಮ್‌ ಕುಮಾರ್ ವರ್ಮಾ ತಿಳಿಸಿದ್ದಾರೆ.

‘ಕನಿಷ್ಠ ಸಂಖ್ಯೆಯ ಕ್ರೀಡಾಪಟುಗಳನ್ನು ಪಾಲ್ಗೊಳ್ಳಿಸುವುದು ನಮ್ಮ ಉದ್ದೇಶ. ಎಷ್ಟು ಮಂದಿಗೆ ಅವಕಾಶ ನೀಡಬೇಕು, ಅವರು ಯಾರೆಲ್ಲ ಎಂಬುದನ್ನು ಚೆಫ್‌ ಡಿ ಮಿಷನ್ ಮತ್ತು ಉಪ ಚೆಫ್‌ ಡಿ ಮಿಷನ್ ಗುರುವಾರ ನಿರ್ಧರಿಸಲಿದ್ದಾರೆ. ಕೋವಿಡ್‌ ಆತಂಕ ಇರುವುದರಿಂದ ಇದು ಅನಿವಾರ್ಯವಾಗಿದೆ’ ಎಂದು ಐಒಎ ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ತಿಳಿಸಿದ್ದಾರೆ. 

120ಕ್ಕೂ ಹೆಚ್ಚು ಕ್ರೀಡಾಪಟುಗಳನ್ನು ಒಳಗೊಂಡ ಭಾರತ ತಂಡದಲ್ಲಿ ಅಧಿಕಾರಿಗಳು, ಕೋಚ್‌ಗಳು ಮತ್ತು ಸಿಬ್ಬಂದಿ ಸೇರಿ ಒಟ್ಟು 228 ಮಂದಿ ಇದ್ದಾರೆ.

10 ಮೀಟರ್ಸ್ ಏರ್‌ ಪಿಸ್ತೂಲ್ ಶೂಟರ್‌ಗಳಾದ ಸೌರಭ್ ಚೌಧರಿ, ಅಭಿಷೇಕ್ ವರ್ಮಾ, ಅಪೂರ್ವಿ ಚಂಡೇಲ ಮತ್ತು ಇಳವೆನ್ನಿಲ ವಾಳರಿವನ್ ಅವರಿಗೆ ಮೊದಲ ದಿನವೇ ಸ್ಪರ್ಧೆಗಳಿವೆ. ಮರುದಿನ ಸ್ಪರ್ಧಿಸಲಿರುವ ಶೂಟರ್‌ಗಳಾದ ಮನು ಭಾಕರ್‌, ಯಶಸ್ವಿನಿ ಸಿಂಗ್ ದೇಸ್ವಾಲ್, ದೀಪಕ್ ಕುಮಾರ್‌ ಮತ್ತು ದಿವ್ಯಾಂಶ ಸಿಂಗ್ ಪನ್ವರ್ ಅವರಿಗೆ ಪಥಸಂಚಲನದಲ್ಲಿ ಪಾಲ್ಗೊಳ್ಳುವ ಅವಕಾಶ ಸಿಗುವ ಸಾಧ್ಯತೆ ಇಲ್ಲ.

ಭಾರತ ಹಾಕಿ ತಂಡದ ನಾಯಕ ಮನಪ್ರೀತ್ ಸಿಂಗ್ ಮತ್ತು ಆರು ಬಾರಿಯ ವಿಶ್ವ ಚಾಂಪಿಯನ್ ಎಂ.ಸಿ.ಮೇರಿ ಕೋಮ್ ಉದ್ಘಾಟನಾ ಸಮಾರಂಭದಲ್ಲಿ ಭಾರತದ ಧ್ವಜಧಾರಿಗಳಾಗಿರುವರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು