ಶುಕ್ರವಾರ, ಮೇ 14, 2021
31 °C
ವರ್ಷದ ಬಳಿಕ ಪ್ರಮುಖ ಲೀಗ್‌ನಲ್ಲಿ ಮನ್‌ಪ್ರೀತ್ ಪಡೆ ಕಣಕ್ಕೆ

ಎಫ್‌ಐಎಚ್‌ ಪ್ರೊ ಲೀಗ್ ಹಾಕಿ ಟೂರ್ನಿ: ಭಾರತಕ್ಕೆ ಅರ್ಜೆಂಟೀನಾ ಸವಾಲು

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ಬ್ಯೂನಸ್‌ ಐರಿಸ್‌, ಅರ್ಜೆಂಟೀನಾ: ಭಾರತ ಹಾಕಿ ತಂಡವು ಎಫ್‌ಐಎಚ್‌ ಪ್ರೊ ಲೀಗ್‌ನಲ್ಲಿ ಶನಿವಾರ ಒಲಿಂಪಿಕ್ಸ್ ಚಾಂಪಿಯನ್‌ ಅರ್ಜೆಂಟೀನಾ ತಂಡದ ಸವಾಲಿಗೆ ಸಜ್ಜಾಗಿದೆ. ಮನ್‌ಪ್ರೀತ್ ನಾಯಕತ್ವದ ಭಾರತ, ಸುಮಾರು ಒಂದು ವರ್ಷದ ಬಳಿಕ ಅಂತರರಾಷ್ಟ್ರೀಯ ಮಟ್ಟದ ಪ್ರಮುಖ ಟೂರ್ನಿಯಲ್ಲಿ ಕಣಕ್ಕಿಳಿಯುತ್ತಿದೆ.

ಭಾರತ ತಂಡದ ಆಟಗಾರರು, ಕೊರೊನಾ ವೈರಸ್ ಹಾವಳಿಯ ಹಿನ್ನೆಲೆಯಲ್ಲಿ ಕಳೆದ ವರ್ಷವನ್ನು ಬಹುತೇಕ ಬೆಂಗಳೂರಿನಲ್ಲಿರುವ ಭಾರತ ಕ್ರೀಡಾ ಪ್ರಾಧಿಕಾರ (ಸಾಯ್‌) ಕೇಂದ್ರದಲ್ಲಿ ಕಳೆದಿದ್ದರು.

ಎಫ್‌ಐಎಚ್ ಪ್ರೊ ಲೀಗ್‌ನಲ್ಲಿ ಕೊನೆಯ ಬಾರಿ ಭಾರತ, ಆಸ್ಟ್ರೇಲಿಯಾ ತಂಡದ ಎದುರು ಭುವನೇಶ್ವರದಲ್ಲಿ ಆಡಿತ್ತು. ಫೆಬ್ರುವರಿಯಲ್ಲಿ ಈ ಹಣಾಹಣಿ ನಡೆದಿತ್ತು.

ಎಫ್‌ಐಎಚ್‌ ಲೀಗ್‌ನ ಪಾಯಿಂಟ್ಸ್ ಪಟ್ಟಿಯಲ್ಲಿ ಭಾರತ ತಂಡವು ಸದ್ಯ 10 ಪಾಯಿಂಟ್‌ಗಳೊಂದಿಗೆ ಐದನೇ ಸ್ಥಾನದಲ್ಲಿದೆ. ಇದುವರೆಗೆ ಆರು ಪಂದ್ಯಗಳನ್ನು ಆಡಿರುವ ತಂಡ, ತಲಾ ಎರಡರಲ್ಲಿ ಜಯ, ಸೋಲು ಹಾಗೂ ಡ್ರಾ ಸಾಧಿಸಿದೆ.

ವಿಶ್ವ ಚಾಂಪಿಯನ್‌ ಬೆಲ್ಜಿಯಂ ತಂಡವು 13 ಪಂದ್ಯಗಳಿಂದ 32 ಪಾಯಿಂಟ್ಸ್ ಕಲೆಹಾಕಿದ್ದು, ಅಗ್ರಸ್ಥಾನದಲ್ಲಿದೆ. ಜರ್ಮನಿ (19 ಪಾಯಿಂಟ್ಸ್), ನೆದರ್ಲೆಂಡ್ಸ್ (18) ಹಾಗೂ ಆಸ್ಟ್ರೇಲಿಯಾ (14) ಕ್ರಮವಾಗಿ ಎರಡರಿಂದ ನಾಲ್ಕನೇ ಸ್ಥಾನದಲ್ಲಿವೆ. ಆರನೇ ಸ್ಥಾನದಲ್ಲಿ ಅರ್ಜೆಂಟೀನಾ ಇದೆ.

ಟೋಕಿಯೊ ಒಲಿಂಪಿಕ್ಸ್ ಸಿದ್ಧತೆಯಲ್ಲಿರುವ ಭಾರತ ತಂಡವು, ಈ ವರ್ಷದ ಫೆಬ್ರುವರಿಯಲ್ಲಿ ಯೂರೋಪ್ ಪ್ರವಾಸ ಕೈಗೊಂಡಿತ್ತು. ಈ ಅವಧಿಯಲ್ಲಿ ಜರ್ಮನಿ ಹಾಗೂ ಗ್ರೇಟ್ ಬ್ರಿಟನ್ ಎದುರು ನಡೆದ ನಾಲ್ಕು ಪಂದ್ಯಗಳಲ್ಲಿ ಎರಡರಲ್ಲಿ ಜಯ ಸಾಧಿಸಿತ್ತು.

ಅರ್ಜೆಂಟೀನಾ ಎದುರು ನಡೆದ ಎರಡು ಅಭ್ಯಾಸ ಪಂದ್ಯಗಳಲ್ಲಿ ಮನ್‌ಪ್ರೀತ್ ಪಡೆ ಕ್ರಮವಾಗಿ 4–3ರಿಂದ ಗೆಲುವು ಹಾಗೂ 4–4ರಿಂದ ಡ್ರಾ ಸಾಧಿಸಿತ್ತು. ಅದೇ ಆತ್ಮವಿಶ್ವಾಸದಲ್ಲಿ ಕಣಕ್ಕಿಳಿಯುತ್ತಿದೆ.

ಈ ಪಂದ್ಯಗಳಲ್ಲಿ ಮಿಂಚಿದ್ದ ಮನದೀಪ್ ಸಿಂಗ್‌, ನೀಲಕಂಠ ಶರ್ಮಾ ಹಾಗೂ ದಿಲ್‌ಪ್ರೀತ್ ಸಿಂಗ್ ಇಲ್ಲಿಯೂ ಉತ್ತಮ ಸಾಮರ್ಥ್ಯ ತೋರುವ ನಿರೀಕ್ಷೆಯಿದೆ.

ಭಾನುವಾರ ಎರಡನೇ ಪಂದ್ಯ ನಡೆಯಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು