ಬುಧವಾರ, ಜನವರಿ 29, 2020
30 °C
ಮೂರು ರಾಷ್ಟ್ರಗಳ ಜೂನಿಯರ್‌ ಹಾಕಿ: ಫೈನಲ್‌ನಲ್ಲಿ ಆಸ್ಟ್ರೇಲಿಯಾ ಎದುರು ಸೋಲು

ಭಾರತದ ಮಡಿಲಿಗೆ ಟ್ರೋಫಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೆನ್‌ಬೆರ್ರಾ, ಆಸ್ಟ್ರೇಲಿಯಾ: ಭಾರತದ ಜೂನಿಯರ್‌ ಮಹಿಳಾ ತಂಡವು ಮೂರು ರಾಷ್ಟ್ರಗಳ ಹಾಕಿ ಟೂರ್ನಿಯನ್ನು ಗೆದ್ದುಕೊಂಡಿದೆ. ಭಾನುವಾರ ನಡೆದ ಫೈನಲ್‌ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯ ತಂಡದ ಎದುರು ಭಾರತ 1–2 ಗೋಲುಗಳಿಂದ ಸೋಲು ಕಂಡಿತು.  ಆದರೆ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿದ್ದರಿಂದ ಟ್ರೋಫಿ ಒಲಿಯಿತು.

ಭಾರತ ನಾಲ್ಕು ಪಂದ್ಯಗಳಿಂದ ಏಳು ಪಾಯಿಂಟ್ಸ್ ಕಲೆಹಾಕಿತು. ಗೋಲು ಗಳಿಕೆಯಲ್ಲಿ ಆಸ್ಟ್ರೇಲಿಯಾಕ್ಕಿಂತ ಮುಂದಿತ್ತು. ನಾಲ್ಕು ಪಂದ್ಯಗಳಿಂದ ಕೇವಲ ಮೂರು ಪಾಯಿಂಟ್ಸ್‌ ಗಳಿಸಿದ ನ್ಯೂಜಿಲೆಂಡ್‌ ಮೂರನೇ ಸ್ಥಾನ ಪಡೆಯಿತು.

ಫೈನಲ್‌ ಪಂದ್ಯದಲ್ಲಿ ಆತಿಥೇಯ ತಂಡದ ಅಬಿಗೇಲ್ ವಿಲ್ಸನ್‌ 15ನೇ ನಿಮಿಷದಲ್ಲಿ ಯಶಸ್ಸು ಕಂಡರು. 53ನೇ ನಿಮಿಷದಲ್ಲಿ ಭಾರತದ ಗಗನದೀಪ್‌ ಕೌರ್‌ ಗಳಿಸಿದ ಗೋಲು ಸಮಬಲಕ್ಕೆ ಕಾರಣವಾಯಿತು. ಆದರೆ ಆಸ್ಟ್ರೇಲಿಯಾದ ಯುವ ಆಟಗಾರ್ತಿ ಅಬಿಗೇಲ್‌ 56ನೇ ನಿಮಿಷದಲ್ಲಿ ಮತ್ತೊಂದು ಗೋಲು ಹೊಡೆದು ಭಾರತ ತಂಡದ ಗೆಲುವಿನ ಆಸೆಗೆ ತಣ್ಣೀರೆರೆಚಿದರು.

ಮೊದಲ ಕ್ವಾರ್ಟರ್‌ನಲ್ಲಿ ಆತಿಥೇಯ ತಂಡ ಭಾರತದ ಮೇಲೆ ಭಾರೀ ಒತ್ತಡವನ್ನು ಹಾಕಿತು. ಪೆನಾಲ್ಟಿ ಕಾರ್ನರ್‌ ಅವಕಾಶದಲ್ಲಿ ಗೋಲು ಗಳಿಸಿದ ಅಬಿಗೇಲ್‌ ಆಸ್ಟ್ರೇಲಿಯಾದ ಮುನ್ನಡೆಗೆ ಕಾರಣವಾದರು.

22 ಹಾಗೂ 23ನೇ ನಿಮಿಷಗಳಲ್ಲಿ ಭಾರತಕ್ಕೆ ಪೆನಾಲ್ಟಿ ಕಾರ್ನರ್‌ ಲಭಿಸಿದ್ದವು. ಆದರೆ ಆಸ್ಟ್ರೇಲಿಯಾದ ಗೋಲ್‌ಕೀಪರ್‌ ಹನ್ನಾ ಆಸ್ಟ್‌ಬರಿ ಸೊಗಸಾದ ಡೈವ್‌ ಮಾಡಿ ಪ್ರಯತ್ನ ವಿಫಲಗೊಳಿಸಿದರು.

ನಾಲ್ಕನೇ ಕ್ವಾ‌ರ್ಟರ್‌ನಲ್ಲಿ ಭಾರತ ಆತಿಥೇಯ ತಂಡದ ಮೇಲೆ ಒತ್ತಡ ಹೇರಿತು. 53ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಕಾರ್ನರ್‌ ಅವಕಾಶವನ್ನು ಗೋಲಾಗಿ ಪರಿವರ್ತಿಸುವಲ್ಲಿ ಗಗನದೀಪ್‌ ಕೌರ್‌ ತಪ್ಪು ಮಾಡಲಿಲ್ಲ. ಇದಾದ ಮೂರನೇ ನಿಮಿಷದಲ್ಲಿಯೇ ಅಬಿಗೇಲ್‌ ತಮ್ಮ ಎರಡನೇ ಗೋಲು ದಾಖಲಿಸಿ ಆಸ್ಟ್ರೇಲಿಯಾದ ಸಂಭ್ರಮಕ್ಕೆ ಕಾರಣವಾದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು