ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರ್ಜಿತ್‌ ಮಿಂಚು: ತಪ್ಪಿದ ಸೋಲು

ಒಲಿಂಪಿಕ್‌ ಹಾಕಿ ಟೆಸ್ಟ್‌: ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಡ್ರಾ ಸಾಧಿಸಿದ ರಾಣಿ ರಾಂಪಾಲ್‌ ಬಳಗ
Last Updated 18 ಆಗಸ್ಟ್ 2019, 20:15 IST
ಅಕ್ಷರ ಗಾತ್ರ

ಟೋಕಿಯೊ: ಪ್ರಬಲ ಹೋರಾಟ ಕಂಡುಬಂದ ಒಲಿಂ ಪಿಕ್‌ ಹಾಕಿ ಟೆಸ್ಟ್‌ ಎರಡನೇ ಪಂದ್ಯ ದಲ್ಲಿ ಭಾರತ ವನಿತೆಯರ ತಂಡ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ 2–2 ಗೋಲುಗಳಿಂದ ಡ್ರಾ ಸಾಧಿಸಿದೆ.

ವಂದನಾ ಕಟಾರಿಯಾ (36ನೇ ನಿಮಿಷ), ಗುರ್ಜಿತ್‌ ಕೌರ್‌ (59) ಭಾರತದ ಪರ ಮಿಂಚಿದರು. ಕೈಟ್ಲಿನ್‌ ನಾಬ್ಸ್ (14) ಹಾಗೂ ಗ್ರೇಸ್‌ ಸ್ಟೀವರ್ಟ್‌ (43) ಆಸ್ಟ್ರೇಲಿಯಾ ಪರ ಗೋಲು ದಾಖಲಿಸಿದರು. ಭಾರತ ತಂಡ ಶನಿವಾರ ಜಪಾನ್‌ ತಂಡವನ್ನು 2–1ರಿಂದ ಮಣಿಸಿತ್ತು.

ಆರಂಭದಲ್ಲೇ ಆಕ್ರಮಣಾಕಾರಿ ಆಟಕ್ಕೆ ಮುಂದಾದ ಭಾರತದ ವನಿತೆ ಯರು, ಎದುರಾಳಿಗಳನ್ನು ವಿಚಲಿತಗೊಳಿಸಿದರು. ಎರಡೂ ತಂಡಗಳು ಪೆನಾಲ್ಟಿ ಕಾರ್ನರ್‌ ಅವಕಾಶ ಪಡೆದರೂ ಗೋಲಾಗಿ ಪರಿವರ್ತಿಸುವಲ್ಲಿ ವಿಫಲ ವಾದವು. 14ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಕಾರ್ನರ್‌ ಅವಕಾಶದಲ್ಲಿ ಆಸ್ಟ್ರೇಲಿಯಾದ ನಾಬ್ಸ್ ಗೋಲು ದಾಖಲಿಸುವಲ್ಲಿ ಯಶಸ್ವಿಯಾದರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ , ಎರಡನೇ ಕ್ವಾರ್ಟರ್‌ನಲ್ಲಿ ಮತ್ತಷ್ಟು ಆಕ್ರಮಣಕಾರಿಯಾಗಿ ಆಡಿತು. ಆದರೆ ಭಾರತದ ಗೋಲ್‌ಕೀಪರ್‌ ಸವಿತಾ ಅವರ ಜಾಣ್ಮೆಯ ರಕ್ಷಣೆ ಆಸ್ಟ್ರೇಲಿಯಾಕ್ಕೆ ಗೋಲು ನಿರಾಕರಿಸಿತು. ಪ್ರಥಮಾರ್ಧದ ವಿರಾಮಕ್ಕೆ ಆಸ್ಟ್ರೇಲಿಯಾ 1–0 ಮುನ್ನಡೆಗೆ ತೃಪ್ತಿಪಟ್ಟಿತು.

36ನೇ ನಿಮಿಷದಲ್ಲಿ ಸೊಗಸಾದ ಗೋಲು ದಾಖಲಿಸಿದ ವಂದನಾ ಕಟಾರಿಯಾ ಭಾರತದ ಪಾಳಯದಲ್ಲಿ ಹೋರಾಟದ ಮನೋಭಾವ ಪ್ರೇರೇಪಿಸಿದರು. ಆದರೆ 43ನೇ ನಿಮಿಷದಲ್ಲಿ ಸಂಘಟಿತ ಆಟದ ಮೂಲಕ ಆಸ್ಟ್ರೇಲಿಯಾ ಮತ್ತೊಂದು ಗೋಲು ದಾಖಲಿಸಿತು. ಗ್ರೇಸ್‌ ಸ್ಟೀವರ್ಟ್‌ ಗಳಿಸಿದ ಗೋಲು ಆಸ್ಟ್ರೇಲಿಯಾಕ್ಕೆ 2–1ರ ಮುನ್ನಡೆ ತಂದಿತು.

ಈ ಹಂತದಲ್ಲಿ ಹಲವು ಅವಕಾಶಗಳನ್ನು ಕೈಚೆಲ್ಲಿತು. ಪಂದ್ಯ ಆಸ್ಟ್ರೇಲಿಯಾ ತೆಕ್ಕೆಗೆ ಸರಿಯುವ ಆತಂಕ ನಿರ್ಮಾಣವಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ದೊರೆತ ಪೆನಾಲ್ಟಿ ಕಾರ್ನರ್‌ ಅವಕಾಶವೊಂದನ್ನು ಗೋಲಾಗಿ ಪರಿವರ್ತಿಸಿದ ಗುರ್ಜಿತ್‌ ಕೌರ್‌ ತಂಡವನ್ನು ಸೋಲಿನ ದವಡೆಯಿಂದ ಪಾರು ಮಾಡಿದರು.

ಮಂಗಳವಾರದ ಪಂದ್ಯದಲ್ಲಿ ಭಾರತ ತಂಡ ಚೀನಾ ವಿರುದ್ಧ ಆಡಲಿದೆ.

ಪುರುಷರಿಗೆ ಕಾಡಿದ ನಿರಾಸೆ
ಆರಂಭದಲ್ಲಿ ದೊರೆತ ಮುನ್ನಡೆಯನ್ನು ಕಾಯ್ದುಕೊಳ್ಳಲಾಗದ ಭಾರತ ಪುರುಷರ ತಂಡ ಒಲಿಂಪಿಕ್‌ ಟೆಸ್ಟ್‌ನ ಎರಡನೇ ಪಂದ್ಯದಲ್ಲಿ ನ್ಯೂಜಿಲೆಂಡ್‌ ಎದುರು ಮುಗ್ಗರಿಸಿತು. ಭಾನುವಾರ ನಡೆದ ಪಂದ್ಯದಲ್ಲಿ 1–2 ಗೋಲುಗಳಿಂದ ಹರ್ಮನ್‌ಪ್ರೀತ್‌ ಪಡೆ ಸೋತಿತು.

ನಾಯಕ ಹರ್ಮನ್‌ಪ್ರೀತ್‌ ಪಂದ್ಯದ ಎರಡನೇ ನಿಮಿಷದಲ್ಲೇ ಪೆನಾಲ್ಟಿ ಕಾರ್ನರ್‌ ಅವಕಾಶವನ್ನು ಗೋಲಾಗಿ ಪರಿವರ್ತಿಸಿ ಕನಸಿನ ಮುನ್ನಡೆ ತಂದರು. ಆದರೆ ಕೊನೆಯ ಕ್ವಾರ್ಟರ್‌ನಲ್ಲಿ ನ್ಯೂಜಿಲೆಂಡ್‌ ಪರಾಕ್ರಮ ತೋರಿತು. ಜಾಕೊಬ್‌ ಸ್ಮಿತ್‌ (47ನೇ ನಿಮಿಷ) ಹಾಗೂ ಸ್ಯಾಮ್‌ ಲೇನ್‌ (60) ಗೋಲು ಬಾರಿಸಿ ಕಿವೀಸ್‌ ಪಡೆಯಲ್ಲಿ ಸಂತಸದ ಅಲೆ ಚಿಮ್ಮಿಸಿದರು.

ಭಾರತ ಆರಂಭದಲ್ಲೇ ಆಕ್ರಮಣಕಾರಿ ಆಟಕ್ಕೆ ಮನ ಮಾಡಿತು. ಎರಡನೇ ನಿಮಿಷದಲ್ಲಿ ಯಶಸ್ಸು ಕಂಡಿತು. ಆರನೇ ನಿಮಿಷದಲ್ಲಿ ಸಿಕ್ಕ ಮತ್ತೊಂದು ಪೆನಾಲ್ಟಿಯನ್ನು ಕೈ ಚೆಲ್ಲಿತು. ಭಾರತ ಮುನ್ನಡೆಯನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನ ನಡೆಸುತ್ತಲೇ ಸಾಗಿತು. 42ನೇ ನಿಮಿಷದಲ್ಲಿ ಇನ್ನೊಂದು ಪೆನಾಲ್ಟಿ ಅವಕಾಶ ಭಾರತದ ಕೈ ತಪ್ಪಿತು.

ಕೊನೆಯ ಕ್ವಾರ್ಟರ್‌ನಲ್ಲಿ ಉತ್ತಮ ಆಟವಾಡಿದ ನ್ಯೂಜಿಲೆಂಡ್‌ ಎರಡು ಗೋಲು ದಾಖಲಿಸಿ ಜಯ ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.

ಮಂಗಳವಾರ ನಡೆಯುವ ಪಂದ್ಯದಲ್ಲಿ ಆತಿಥೇಯ ಜಪಾನ್‌ ತಂಡವನ್ನು ಭಾರತ ಎದುರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT