ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ: ಭಾರತ ಮಹಿಳೆಯರ ಭರ್ಜರಿ ಜಯದಾರಂಭ

ಥಾಯ್ಲೆಂಡ್‌ಗೆ ನಿರಾಶೆ
Last Updated 5 ಡಿಸೆಂಬರ್ 2021, 12:57 IST
ಅಕ್ಷರ ಗಾತ್ರ

ಡಾಂಗೆ, ದಕ್ಷಿಣ ಕೊರಿಯಾ (ಪಿಟಿಐ): ಡ್ರ್ಯಾಗ್‌ಫ್ಲಿಕರ್ ಗುರ್ಜಿತ್ ಕೌರ್ ಅವರು ಗಳಿಸಿದ ಐದು ಗೋಲುಗಳ ಬಲದಿಂದ ಭಾರತ ಹಾಕಿ ತಂಡವು ಭಾನುವಾರ ಆರಂಭವಾದ ಮಹಿಳಾ ಏಷ್ಯನ್ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಭರ್ಜರಿ ಆರಂಭ ಮಾಡಿತು.

ಏಕಪಕ್ಷೀಯ ಪ್ರಾಬಲ್ಯದ ಪಂದ್ಯದಲ್ಲಿ ಭಾರತ ತಂಡವು 13–0ಯಿಂದ ಥಾಯ್ಲೆಂಡ್ ವಿರುದ್ಧ ಜಯಭೇರಿ ಬಾರಿಸಿತು.

ಪಂದ್ಯದ ಎರಡನೇ ನಿಮಿಷದಲ್ಲಿಯೇ ಗುರ್ಜಿತ್ ಕೌರ್ ಪೆನಾಲ್ಟಿ ಕಾರ್ನರ್‌ ಅನ್ನು ಗೋಲಿನಲ್ಲಿ ಪರಿವರ್ತಿಸಿದರು. ಇದರೊಂದಿಗೆ ಭಾರತ ತಂಡದ ಖಾತೆ ತೆರೆದರು. ಇಲ್ಲಿಂದ ಮುಂದೆ ಭಾರತ ತಂಡದ ಗುರ್ಜಿತ್ ಮತ್ತು ಫಾರ್ವರ್ಡ್‌ ಆಟಗಾರ್ತಿಯರು ಥಾಯ್ಲೆಂಡ್ ತಂಡದ ರಕ್ಷಣಾ ಗೋಡೆಯನ್ನು ನುಚ್ಚುನೂರು ಮಾಡಿದರು.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನಾಲ್ಕು ಗೋಲು ಗಳಿಸಿದ್ದ ಗುರ್ಜಿತ್ ತಮ್ಮ ಶಾಂತಚಿತ್ತದ ಆಟದ ಮೂಲಕ ಇಲ್ಲಿಯೂ ಮಿಂಚಿದರು. ಅವರಿಗೆ ಉತ್ತಮ ಜೊತೆ ನೀಡಿದ ವಂದನಾ ಕಟಾರಿಯಾ ತಂಡಕ್ಕೆ ಏಳನೇ ನಿಮಿಷದಲ್ಲಿ ಎರಡನೇ ಗೋಲಿನ ಕಾಣಿಕೆ ನೀಡಿದರು.

ಪಂದ್ಯದ ಮೊದಲ ಕ್ವಾರ್ಟರ್‌ನ 14ನೇ ನಿಮಿಷದಲ್ಲಿ ಲಿಲಿಮಾ ಮಿಂಜ್ ಫೀಲ್ಡ್ ಗೋಲು ಹೊಡೆದರು. ಇದಾದ ನಂತರ ಲಭಿಸಿದ ಎರಡು ಪೆನಾಲ್ಟಿ ಕಾರ್ನರ್‌ಗಳಲ್ಲಿ ಕ್ರಮವಾಗಿ ಗುರ್ಜಿತ್ ಮತ್ತು ಜ್ಯೋತಿ ತಲಾ ಒಂದು ಗೋಲು ಹೊಡೆದರು. ಭಾರತ 5–0 ಮುನ್ನಡೆ ಸಾಧಿಸಿತು.

ಎರಡನೇ ಕ್ವಾರ್ಟರ್‌ನಲ್ಲಿಯೂ ಭಾರತದ ಆಟ ಮುಂದುವರಿಯಿತು. ಈ ಪಂದ್ಯದ ಮೂಲಕ ಅಂತರರಾಷ್ಟ್ರೀಯ ಹಾಕಿಗೆ ಪದಾರ್ಪಣೆ ಮಾಡಿದ ರಜ್ವಿಂದರ್ ಕೌರ್ ತಮ್ಮ ಕೈಚಳಕ ತೋರಿದರು. 16ನೇ ನಿಮಿಷದಲ್ಲಿ ಗೋಲು ಗಳಿಸಿದರು. 24ನಿಮಿಷದಲ್ಲಿ ಗುರ್ಜಿತ್ ಮತ್ತು ಲಿಲಿಮಾ ತಲಾ ಒಂದು ಗೋಲು ಹೊಡೆದರು.

ಒಂದು ನಿಮಿಷದ ನಂತರ ಗುರ್ಜಿತ್ ತಮ್ಮ ವೈಯಕ್ತಿಕ ನಾಲ್ಕನೇ ಗೋಲು ದಾಖಲಿಸಿದರು. ತಂಡಕ್ಕೆ 9–0 ಮುನ್ನಡೆ ಲಭಿಸಿತು. ಇದರಿಂದಾಗಿ ಸಂಪೂರ್ಣ ಬಸವಳಿದ ಥಾಯ್ಲೆಂಡ್ ತಂಡವು ದ್ವಿತಿಯಾರ್ಧದಲ್ಲಿ ಮಂಕಾಯಿತು. ಭಾರತದ ಆಟಗಾರ್ತಿಯರು ಮತ್ತಷ್ಟು ಪ್ರಬಲರಾದರು.

ಜ್ಯೋತಿ(36ನೇ ನಿ), ಸೋನಿಕಾ(43ನಿ), ಮೋನಿಕಾ(55) ಮತ್ತು ಗುರ್ಜಿತ್ (58ನಿ) ಗೋಲು ಗಳಿಸಿದರು.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನಾಲ್ಕನೇ ಸ್ಥಾನ ಪಡೆದ ನಂತರ ಭಾರತ ಮಹಿಳಾ ತಂಡವು ಆಡಿದ ಮೊದಲ ಪಂದ್ಯ ಇದಾಗಿದೆ. ರಾಣಿ ರಾಂಪಾಲ್ ಗೈರುಹಾಜರಿಯಲ್ಲಿ ತಂಡವನ್ನು ಗೋಲ್‌ಕೀಪರ್ ಸವಿತಾ ಮುನ್ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT