ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ಸ್‌ಗೆ ಶೂಟರ್‌ಗಳ ಕೊನೆಯ ತಾಲೀಮು

ತರಬೇತಿಯೊಂದಿಗೆ ಸ್ಪರ್ಧೆಗಳಲ್ಲಿ ಭಾಗವಹಿಸಲು ಕ್ರೊವೇಷ್ಯಾಕ್ಕೆ ತೆರಳಿದ ಭಾರತದ ಅಥ್ಲೀಟ್‌ಗಳು
Last Updated 11 ಮೇ 2021, 13:01 IST
ಅಕ್ಷರ ಗಾತ್ರ

ನವದೆಹಲಿ: ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿರುವ ಭಾರತದ ಶೂಟಿಂಗ್ ಪಟುಗಳು ಸುಮಾರು ಎರಡೂವರೆ ತಿಂಗಳುಗಳ ತರಬೇತಿ ಮತ್ತು ಸ್ಪರ್ಧೆಗಳಿಗಾಗಿ ಮಂಗಳವಾರ ಕ್ರೊವೇಷ್ಯಾಕ್ಕೆ ಪ್ರಯಾಣ ಬೆಳೆಸಿದರು. ಟೋಕಿಯೊ ಕೂಟಕ್ಕೆ ಸಜ್ಜಾಗಲು ಇದು ಅವರಿಗೆ ಕೊನೆಯ ತಾಲೀಮು ಎನಿಸಲಿದೆ.

ತರಬೇತುದಾರರು, ನೆರವು ಸಿಬ್ಬಂದಿ ಹಾಗೂ 13 ಮಂದಿಯ ಶೂಟರ್‌ಗಳ ತಂಡವು ಕ್ರೊವೇಷ್ಯಾದ ರಾಜಧಾನಿ ಜಾಗ್ರೇಬ್‌ಗೆ ತೆರಳಿತು. ಮೊದಲು ತರಬೇತಿಯಲ್ಲಿ ಪಾಲ್ಗೊಳ್ಳುವ ಭಾರತದ ಶೂಟರ್‌ಗಳು ಬಳಿಕ ಒಸಿಜೆಕ್‌ನಲ್ಲಿ ನಡೆಯುವ ಯೂರೋಪಿಯನ್ ಚಾಂಪಿಯನ್‌ಷಿಪ್‌ನಲ್ಲಿ (ಮೇ 20ರಿಂದ ಜೂನ್ 6) ಭಾಗವಹಿಸುವರು. ಇದಾದ ಬಳಿಕ ಜೂನ್‌ 22ರಿಂದ ಜುಲೈ ಮೂರರವರೆಗೆ ನಿಗದಿಯಾಗಿರುವ ಐಎಸ್ಎಸ್‌ಎಫ್‌ ಸಂಯೋಜಿತ ವಿಶ್ವಕಪ್ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ.

‘ಭಾರತ ತಂಡ ಇನ್ನು 20 ನಿಮಿಷಗಳಲ್ಲಿ ವಿಮಾನವೇರಲಿದೆ. ಶುಭವಾಗಲಿ, ಯಶಸ್ಸಿಗೆ ನಿರಂತರವಾಗಿ ಶ್ರಮಿಸಿ‘ ಎಂದು ಭಾರತ ರಾಷ್ಟ್ರೀಯ ರೈಫಲ್ ಸಂಸ್ಥೆಯ (ಎನ್ಆರ್‌ಎಐ) ಅಧ್ಯಕ್ಷ ರಣಿಂದರ್ ಸಿಂಗ್ ಅವರು, ತಂಡವು ಕ್ರೊವೇಷ್ಯಾಕ್ಕೆ ತೆರಳುವ ಮೊದಲು ಟ್ವೀಟ್ ಮಾಡಿದರು.

ಒಲಿಂಪಿಕ್ಸ್‌ ಟಿಕೆಟ್‌ ಗಿಟ್ಟಿಸಿರುವ ಭಾರತದ ಸ್ಕೀಟ್ ವಿಭಾಗದ ಶೂಟರ್‌ಗಳಾದ ಅಂಗದ್ ವೀರ್ ಸಿಂಗ್ ಬಜ್ವಾ ಹಾಗೂ ಮೈರಾಜ್ ಅಹಮದ್ ಖಾನ್ ಸದ್ಯ ಇಟಲಿಯಲ್ಲಿದ್ದಾರೆ. ಇವರಿಬ್ಬರು ಹಾಗೂ ಗುರುಜೋತ್ ಸಿಂಗ್ ಖಂಗುರಾ ಸದ್ಯ ಇಟಲಿಯ ಲೊನಾಟೊದಲ್ಲಿ ನಡೆಯುತ್ತಿರುವ ಶಾಟ್‌ಗನ್ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಿದ್ದಾರೆ. ಆದರೆ ಟೂರ್ನಿಯ ಫೈನಲ್‌ ತಲುಪಲು ಸೋಮವಾರ ಅವರು ವಿಫಲರಾಗಿದ್ದರು.

‘ಭಾರತ್ ಮಾತಾ ಕೀ ಜೈ ಘೋಷಣೆಯೊಂದಿಗೆ ನಾವು ಕ್ರೊವೇಷ್ಯಾಕ್ಕೆ ತೆರಳುತ್ತಿದ್ದೇವೆ. ಅಲ್ಲಿಂದ ನೇರವಾಗಿ ಟೋಕಿಯೋ ಒಲಿಂಪಿಕ್ಸ್‌ಗೆ ಪಯಣಿಸಲಿದ್ದೇವೆ. ಒಟ್ಟು 80 ದಿನದ ಪ್ರವಾಸ. ಶೂಟಿಂಗ್ ತಂಡವು ನಿಮ್ಮ ಹಾರೈಕೆಗಳನ್ನು ನಿರೀಕ್ಷಿಸುತ್ತದೆ‘ ಎಂದು ರಾಷ್ಟ್ರೀಯ ರೈಫಲ್ ತಂಡದ ಹೈ ಪರ್ಫಾರ್ಮೆನ್ಸ್ ಕೋಚ್‌ ಸುಮಾ ಶಿರೂರು ಟ್ವೀಟ್ ಮಾಡಿದ್ದಾರೆ.

ರೈಫಲ್ ಹಾಗೂ ಪಿಸ್ತೂಲ್ ವಿಭಾಗದಲ್ಲಿ ಸ್ಪರ್ಧಿಸುವ 13 ಮಂದಿ ಶೂಟರ್‌ಗಳಿಗೆ ಒಂಬತ್ತು ಮಂದಿ ಕೋಚ್‌ಗಳಿದ್ದಾರೆ. ಆದರೆ ತರಬೇತುದಾರರಾದ ಸಮರೇಶ್‌ ಜಂಗ್‌, ಜಸ್ಪಾಲ್ ರಾಣಾ ಹಾಗೂ ರೋನಕ್ ಪಂಡಿತ್ ಅವರು ಕೆಲವು ಕಾರಣಗಳಿಗಾಗಿ ತಂಡದೊಂದಿಗೆ ತೆರಳುತ್ತಿಲ್ಲ.

ಕ್ರೊವೇಷ್ಯಾದಲ್ಲಿ ತರಬೇತಿಗೂ ಮೊದಲು ಭಾರತ ತಂಡವು ಕ್ವಾರಂಟೈನ್ ಅವಧಿ ಪೂರ್ಣಗೊಳಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT