ಶುಕ್ರವಾರ, ಫೆಬ್ರವರಿ 3, 2023
18 °C
ಅಂತರರಾಷ್ಟ್ರೀಯ ಹಾಕಿ ಫೆಡರೇಷನ್‌ ಗೌರವ

ಶ್ರೀಜೇಶ್, ಸವಿತಾ ವರ್ಷದ ಗೋಲ್‌ಕೀಪರ್‌ಗಳು

‍ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತದ ಪಿ.ಆರ್. ಶ್ರೀಜೇಶ್ ಮತ್ತು ಸವಿತಾ ಪೂನಿಯಾ ಅವರು ಎಫ್‌ಐಎಚ್‌ ವರ್ಷದ ಶ್ರೇಷ್ಠ ಗೋಲ್‌ಕೀಪರ್‌ಗಳು ಎನಿಸಿಕೊಂಡಿದ್ದಾರೆ. ಸತತ ಎರಡನೇ ವರ್ಷ ಅವರಿಗೆ ಈ ಗೌರವ ಒಲಿದಿದೆ.

16 ವರ್ಷದಿಂದ ಭಾರತ ರಾಷ್ಟ್ರೀಯ ತಂಡದಲ್ಲಿರುವ ಶ್ರೀಜೇಶ್‌, ಈ ಬಾರಿಯ ಎಫ್‌ಐಎಚ್‌ ಪ್ರೊ ಲೀಗ್‌ನಲ್ಲಿ ಎಲ್ಲ 16 ಪಂದ್ಯಗಳನ್ನು ಆಡಿದ್ದರು. ತಂಡವು ಲೀಗ್‌ನಲ್ಲಿ ಮೂರನೇ ಸ್ಥಾನ ಗಳಿಸಿತ್ತು. ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ತಂಡ ಆಡಿದ ಆರು ಪಂದ್ಯಗಳಲ್ಲೂ ಅವರು ಇದ್ದರು. ಭಾರತ ಈ ಕೂಟದಲ್ಲಿ ಬೆಳ್ಳಿ ಪದಕ ಜಯಿಸಿತ್ತು.

‘ವರ್ಷಗಳುರುಳಿದರೂ ಗೋಲ್‌ಕೀಪಿಂಗ್‌ನಲ್ಲಿ 34 ವರ್ಷದ ಶ್ರೀಜೇಶ್ ಅವರ ಸಾಮರ್ಥ್ಯ ವೃದ್ಧಿಸುತ್ತಲೇ ಇದೆ‘ ಎಂದು ಎಫ್‌ಐಎಚ್‌ ಹೇಳಿಕೆಯಲ್ಲಿ ತಿಳಿಸಿದೆ. ಕಳೆದ ವರ್ಷವೂ ಅವರಿಗೆ ಈ ಗೌರವ ಲಭಿಸಿತ್ತು.

ಆನ್‌ಲೈನ್ ಮೂಲಕ ನಡೆದ ಮತದಾನದಲ್ಲಿ ಶ್ರೀಜೇಶ್‌ ಶೇಕಡಾ 39.9 ಪಾಯಿಂಟ್ಸ್ ಪಡೆದರು. ಬೆಲ್ಜಿಯಂನ ಲೊಯಿಕ್‌ ವ್ಯಾನ್ ಡೊರೆನ್‌ (26.3) ಮತ್ತು ನೆದರ್ಲೆಂಡ್ಸ್‌ನ ಪ್ರಿಮಿನ್‌ ಬ್ಲಾಕ್‌ (23.2) ಅವರನ್ನು ಶ್ರೀಜೇಶ್ ಹಿಂದಿಕ್ಕಿದರು.

ಸತತ ಎರಡು ಬಾರಿ ಈ ಪುರಸ್ಕಾರ ಪಡೆದ ವಿಶ್ವದ ಮೂರನೇ ಆಟಗಾರ ಶ್ರೀಜೇಶ್. ಈ ಹಿಂದೆ ಐರ್ಲೆಂಡ್‌ನ ಡೇವಿಡ್‌ ಹಾರ್ಟ್‌ (2015, 2016), ಮತ್ತು ಬೆಲ್ಜಿಯಂನ ವಿನ್ಸೆಂಟ್‌ ವನಾಶ್‌ (2017, 2019) ಈ ಗೌರವ ಗಳಿಸಿದ್ದರು.

ಮಹಿಳಾ ಗೋಲ್‌ಕೀಪರ್‌ಗಳ ವಿಭಾಗದಲ್ಲಿ ಸವಿತಾ ಶೇ. 37.6 ಪಾಯಿಂಟ್ಸ್ ಗಳಿಸಿದರು. ಅರ್ಜೆಂಟೀನಾದ ಬೆಲೇನ್‌ ಸುಶಿ (26.4) ಮತ್ತು ಆಸ್ಟ್ರೇಲಿಯಾದ ಜೋಸ್‌ಲಿನ್‌ ಬಾರ್ಟಮ್‌ (16 ಪಾಯಿಂಟ್ಸ್) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಗಳಿಸಿದರು. ಅವರು ಸತತ ಎರಡನೇ ಬಾರಿ ಪುರಸ್ಕಾರ ಗಳಿಸಿದ ಮೂರನೇ ಆಟಗಾರ್ತಿಯಾಗಿದ್ದಾರೆ.

ಭಾರತದ ಮುಮ್ತಾಜ್ ಖಾನ್‌ ಅವರು ಮಂಗಳವಾರ ಎಫ್‌ಐಎಚ್‌ ಉದಯೋನ್ಮುಖ ಆಟಗಾರ್ತಿ ಗೌರವ ಪಡೆದಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು