ಭಾನುವಾರ, ಸೆಪ್ಟೆಂಬರ್ 26, 2021
21 °C
ಮೂಡುಬಿದಿರೆಯಲ್ಲಿ ನಾಲ್ಕನೇ ಬಾರಿ ಆಯೋಜನೆ: ಫೋಟೊ ಫಿನಿಶ್ ತಂತ್ರಜ್ಞಾನ ಅಳವಡಿಕೆ

ಅಂತರ ವಿ.ವಿ ಅಥ್ಲೆಟಿಕ್ಸ್‌ ಇಂದಿನಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೂಡುಬಿದಿರೆ: ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಆಳ್ವಾಸ್‌ ಕಾಲೇಜು ಸಹಯೋಗದಲ್ಲಿ 80ನೇ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ ಗುರುವಾರ (ಇದೇ 2) ಆರಂಭವಾಗಲಿದೆ. ಐದು ದಿನಗಳ ಕ್ರೀಡಾಕೂಟಕ್ಕೆ ಸಿದ್ಧತೆಗಳು ಪೂರ್ಣಗೊಂಡಿವೆ.

ಮೂಡುಬಿದಿರೆಯಲ್ಲಿ 4ನೇ ಬಾರಿಗೆ ಈ ಕ್ರೀಡಾಕೂಟ ನಡೆಯುತ್ತಿದ್ದು, ದೇಶದ 400 ವಿಶ್ವವಿದ್ಯಾಲಯಗಳಿಂದ ಸುಮಾರು 5 ಸಾವಿರ ಕ್ರೀಡಾಪಟುಗಳು, ತಂಡದ ಮ್ಯಾನೇಜರ್‌ಗಳು, ತರಬೇತು ದಾರರು, ವೈದ್ಯರು, ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಸ್ವರಾಜ್ಯ ಮೈದಾನನದ ಸಿಂಥೆಟಿಕ್ ಟ್ರ್ಯಾಕ್‌ ನವೀಕರಿಸಲಾಗಿದ್ದು, ಹೊನಲು ಬೆಳಕಿನಲ್ಲಿ ನಡೆಯುವ ಕೂಟಕ್ಕೆ ಅತ್ಯಾಧುನಿಕ ಫೋಟೊ ಫಿನಿಶಿಂಗ್ ತಂತ್ರಜ್ಞಾನವನ್ನು ಅಳವಡಿ ಸಲಾಗಿದೆ. ಸುಮಾರು 10 ಸಾವಿರ ಮಂದಿ ಕುಳಿತು ವೀಕ್ಷಿಸಬಹುದಾದ ಗ್ಯಾಲರಿ, 150 ಮೀಟರ್ ಉದ್ದ, 70 ಮೀಟರ್ ಅಗಲವಿರುವ ವಿಶಾಲವಾದ ವೇದಿಕೆಯನ್ನು ನಿರ್ಮಿಸಲಾಗಿದೆ.

ಸಂಜೆ 5.45ಕ್ಕೆ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಕ್ರೀಡಾಕೂಟವನ್ನು ಉದ್ಘಾಟಿಸುವರು. ರಾಜೀವ್‌ ಗಾಂಧಿ ಆರೋಗ್ಯವಿಜ್ಞಾನ ವಿಶ್ವವಿದ್ಯಾಲಯ ಕುಲಪತಿ ಡಾ.ಎಸ್. ಸಚ್ಚಿದಾನಂದ ಅಧ್ಯಕ್ಷತೆ ವಹಿಸುವರು. 

ಈ ಹಿಂದೆ ಮೂರು ಬಾರಿ ಮೂಡುಬಿದಿರೆಯಲ್ಲಿ ಈ ಕೂಟ ನಡೆದಿದೆ. ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನ ವಿ.ವಿ. ಆಶ್ರಯದಲ್ಲಿ 2013, 2015ರಲ್ಲಿ ಸ್ವರಾಜ್‌ ಮೈದಾನದಲ್ಲಿ ನಡೆದಿತ್ತು. ಕಳೆದ ಬಾರಿ (2018ರ ನವೆಂಬರ್‌ನಲ್ಲಿ) ಮಂಗಳೂರು ವಿಶ್ವವಿದ್ಯಾಲಯ ಆತಿಥ್ಯ ವಹಿಸಿತ್ತು.

ಈ ಕೂಟದಲ್ಲಿ ಸಮಗ್ರ ಪ್ರಶಸ್ತಿ,  ಪುರುಷರ ಮತ್ತು ಮಹಿಳೆಯರ ತಂಡ ಪ್ರಶಸ್ತಿಗಳು ಆತಿಥೇಯ ತಂಡದ ಪಾಲಾಗಿದ್ದವು.  

ಮೇರಿಹಿಲ್‌ನಲ್ಲಿ ಕ್ರೀಡಾ ಮಳಿಗೆ
ಮಂಗಳೂರಿನ ಮೇರಿಹಿಲ್‌ನಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರ ಸ್ಥಾಪನೆಗೆ  ಜಿಲ್ಲಾಡಳಿತ ಎರಡು ಎಕರೆ ಜಮೀನು ನೀಡಿದೆ. ಪ್ರಾದೇಶಿಕ ಕೇಂದ್ರ ಸ್ಥಾಪನೆ ಹಾಗೂ ಕ್ರೀಡಾ ಮಳಿಗೆ ನಿರ್ಮಾಣಕ್ಕೆ ಸಿಂಡಿಕೇಟ್ ಸದಸ್ಯರು ಸಹಮತ ವ್ಯಕ್ತಪಡಿಸಿದ್ದಾರೆ.

ಗುರುವಾರ ಮಂಗಳೂರಿನಲ್ಲಿ ನಡೆಯಲಿರುವ ವಿವಿ ಸಿಂಡಿಕೇಟ್ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಿ ರೂಪುರೇಷೆ ತಯಾರಿಸಲಾಗುವುದು ಎಂದು ರಾಜೀವ್‌ ಗಾಂಧಿ ಆರೋಗ್ಯವಿಜ್ಞಾನ ವಿಶ್ವವಿದ್ಯಾಲಯ ಕುಲಪತಿ ಡಾ.ಎಸ್.ಸಚ್ಚಿದಾನಂದ ಬುಧವಾರ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು