ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ತರಬೇತಿ ಶಿಬಿರಗಳ ಪುನರಾರಂಭ: ಅಭಿಪ್ರಾಯ ಕೇಳಲು ಮುಂದಾದ ಐಒಎ

Last Updated 5 ಮೇ 2020, 19:45 IST
ಅಕ್ಷರ ಗಾತ್ರ

ನವದೆಹಲಿ:ದೀರ್ಘ ಲಾಕ್‌ಡೌನ್‌ನಿಂದಾಗಿ ಅಥ್ಲೀಟುಗಳು ಪ್ರೇರಣೆಯನ್ನು ಕಳೆದುಕೊಳ್ಳುತ್ತಿದ್ದಾರೆ ಎಂಬುದನ್ನು ಭಾರತ ಒಲಿಂಪಿಕ್‌ ಸಂಸ್ಥೆ (ಐಒಎ) ಒಪ್ಪಿಕೊಂಡಿದೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಶಿಬಿರಗಳನ್ನು ಪುನರಾರಂಭಿಸುವ ಬಗ್ಗೆ ಮಂಗಳವಾರ ಅಥ್ಲೀಟುಗಳು, ತರಬೇತುದಾರರು ಮತ್ತು ಇತರ ಭಾಗೀದಾರರ ಅಭಿಪ್ರಾಯಗಳನ್ನು ಆಲಿಸಲು ಐಒಎ ಮುಂದಾಗಿದೆ.

ತರಬೇತಿಯನ್ನು ಯಾವಾಗ ಮತ್ತು ಹೇಗೆ ಆರಂಭಿಸಬೇಕು ಎಂಬ ಬಗ್ಗೆ ಭಾಗೀದಾರರಾದ ಅಥ್ಲೀಟುಗಳು, ಕೋಚ್‌ಗಳು, ನೆರವು ಸಿಬ್ಬಂದಿ, ಕೇಂದ್ರ ಮತ್ತು ರಾಜ್ಯ ಸಚಿವಾಲಯಗಳು, ಅಧಿಕಾರಿಗಳು, ಕ್ರೀಡಾ ಆಡಳಿತಗಾರರಿಂದ ಅಭಿಪ್ರಾಯಗಳನ್ನು ಸಂಗ್ರಹಿಸುವಂತೆ ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳು ಮತ್ತು ರಾಜ್ಯ ಒಲಿಂ‍ಪಿಕ್‌ ಸಂಸ್ಥೆಗಳಿಗೆ ಸೂಚಿಸಲಾಗಿದೆ. ಮೂರನೇ ಹಂತದ ಲಾಕ್‌ಡೌನ್‌ ಮೇ 17ರವರೆಗೆ ಚಾಲ್ತಿಯಲ್ಲಿ ಇರಲಿದೆ.

ಪ್ರಶ್ನಾವಳಿಗಳ ಮೂಲಕ ಭಾಗೀದಾರರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗುವುದು. ಇವುಗಳನ್ನು ಕ್ರೋಡೀಕರಿಸಿ ನಿರ್ಧಾರಕ್ಕೆ ಬರಲಾಗುವುದು.

ಲಾಕ್‌ಡೌನ್‌ ಘೋಷಿಸಿದಾಗ ದೇಶದಲ್ಲಿ ತರಬೇತಿ ಶಿಬಿರಗಳು ಮೇರು ಹಂತಕ್ಕೆ ತಲುಪಿದ್ದವು. ಹಠಾತ್ತನೇ ಶಿಬಿರಗಳನ್ನು ರದ್ದುಗೊಳಿಸಬೇಕಾಯಿತು. ಲಾಕ್‌ಡೌನ್‌ ಮುಂದುವರಿದಿರುವುದರಿಂದ ಅಥ್ಲೀಟುಗಳು ಮತ್ತು ಕೋಚ್‌ಗಳು ಪ್ರೇರಣೆ, ಸ್ಫೂರ್ತಿ ಕಳೆದುಕೊಳ್ಳುವ ಅಪಾಯವಿದೆ ಎಂದು ಮಂಗಳವಾರ ಬಿಡುಗಡೆ ಮಾಡಿದ ಕಡತದಲ್ಲಿ ಉಲ್ಲೇಖಿಸಲಾಗಿದೆ.

‘ಈಗಿನ ಸನ್ನಿವೇಶದಲ್ಲಿ ಯಾವ ರೀತಿ ನಾವು ಮುಂದುವರಿಯಬಹುದು ಮತ್ತು ಅಥ್ಲೀಟುಗಳು ಮರಳಿ ಯಾವ ರೀತಿ ಕ್ರೀಡಾ ಚಟುವಟಿಕೆ, ತರಬೇತಿಯಲ್ಲಿ ತೊಡಗಬಹುದು ಎಂಬುದನ್ನು ಕಂಡುಕೊಳ್ಳಲಾಗುವುದು‘ ಎಂದು ಕಡತದಲ್ಲಿ ಹೇಳಲಾಗಿದೆ.

ತಿಂಗಳ ಕೊನೆಯೊಳಗೆ ಹಂತಹಂತವಾಗಿ ರಾಷ್ಟ್ರೀಯ ಶಿಬಿರಗಳನ್ನು ಆರಂಭಿಸಲಾಗುವುದು ಎಂದು ಕ್ರೀಡಾ ಸಚಿವ ಕಿರಣ್‌ ರಿಜಿಜು ಅವರೂ ಹೇಳಿದ್ದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೂಚಿಸಿರುವ ಸಾರ್ವಜನಿಕರ ಆರೋಗ್ಯ ಮಾರ್ಗದರ್ಶಿ ಸೂತ್ರಗಳ ಅಡಿ ಕ್ರೀಡಾ ಚಟುವಟಿಕೆಗಳಡಿಯೇ ಆರಂಭಗೊಳ್ಳಬೇಕಿದೆ ಎಂದು ಐಒಎ ಈಗಾಗಲೇ ಸ್ಪಷ್ಟಪಡಿಸಿದೆ.

ಅಥ್ಲೀಟುಗಳು ಮತ್ತು ಇತರ ಭಾಗೀದಾರರಿಂದ ಸಂಗ್ರಹಿಸಿದ ಅಭಿಪ್ರಾಯಗಳನ್ನು ಕಳುಹಿಸುವಂತೆ 16 ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳಿಗೆ (ಎನ್‌ಎಸ್‌ಎಫ್‌) ಮತ್ತು 16 ರಾಜ್ಯಗಳ ಒಲಿಂಪಿಕ್‌ ಸಂಸ್ಥೆ (ಎಸ್‌ಒಎ) ಗಳಿಗೆ ಸೂಚಿಸಲಾಗಿದೆ. ತನ್ಮೂಲಕ ಮೇ 20ರೊಳಗೆ ಶ್ವೇತಪತ್ರದ ಕರಡನ್ನು ರೂಪಿಸಲು ಉದ್ದೇಶಿಸಲಾಗಿದೆ. ಉಳಿದ ಎನ್‌ಎಸ್‌ಎಫ್‌ ಮತ್ತು ಎಸ್‌ಒಎಗಳು ತಾವು ಸಂಗ್ರಹಿಸಿದ ಅಭಿಪ್ರಾಯಗಳನ್ನು ಮೇ 31ರೊಳಗೆ ಸಲ್ಲಿಸುವಂತೆ ಕೇಳಲಾಗಿದೆ. ಆ ಮೂಲಕ ಜೂನ್‌ನಲ್ಲಿ ಅಂತಿಮ ಶ್ವೇತಪತ್ರ ಸಿದ್ಧಗೊಳಿಸುವ ಉದ್ದೇಶ ಹೊಂದಲಾಗಿದೆ.

ಈ ಪತ್ರಕ್ಕೆ ಸಂಬಂಧಿಸಿ ಐಒಎ ಅಧ್ಯಕ್ಷ, ಮಹಾ ಕಾರ್ಯದರ್ಶಿ, ಸಿದ್ಧತಾ ಸಮಿತಿಯ ಅಧ್ಯಕ್ಷರು ತಜ್ಞರನ್ನು ಸಂಪರ್ಕಿಸಲಿದ್ದಾರೆ. ಆ ಮೂಲಕ ತರಬೇತಿ, ಟೂರ್ನಿಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT