ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಇರಾನ್‌ ಚೆಸ್‌ ಪ್ರತಿಭೆಯ ಮಹಾನ್‌ ಹೆಜ್ಜೆಗಳು

Last Updated 13 ನವೆಂಬರ್ 2020, 14:30 IST
ಅಕ್ಷರ ಗಾತ್ರ

ಚಿಗುರುಮೀಸೆಯ ಈ ಹುಡುಗನ ಹೆಸರು ಅಲಿರೇಜಾ ಫಿರೋಜ್‌ಝಾ. ಇರಾನ್‌ನ ದೈತ್ಯ ಚೆಸ್‌ ಪ್ರತಿಭೆ. ಕಳೆದ ವರ್ಷದ ಕೊನೆಯಲ್ಲಿ ತವರು ದೇಶವನ್ನು ಬಿಟ್ಟುಹೋಗಿ ದೂರದ ಫ್ರಾನ್ಸ್‌ನಲ್ಲಿ ತಂದೆಯ ಜೊತೆ ನೆಲೆಸಿರುವ ಅಲಿರೇಜಾನಿಗೆ, ಪೌರತ್ವ ನೀಡಲು ಫ್ರಾನ್ಸ್‌ ಮಾತ್ರವಲ್ಲ, ಅಮೆರಿಕವೂ ತುದಿಗಾಲಲ್ಲಿ ನಿಂತಿದೆ. ಬೆರಗು ಹುಟ್ಟಿಸುವ ಚಾಣಾಕ್ಷ, ನಿಖರ ನಡೆಗಳ ಮೂಲಕ ಹದಿನೆಂಟರ ಹರೆಯದ ಅಲಿರೇಜಾ ಅಪಾರ ನಿರೀಕ್ಷೆಗಳನ್ನು ಹುಟ್ಟುಹಾಕಿದ್ದಾನೆ.

ವಿಶ್ವದ ಎರಡನೇ ಅತಿ ಕಿರಿಯ ವಯಸ್ಸಿನ ‘ಸೂಪರ್‌ ಗ್ರ್ಯಾಂಡ್‌ಮಾಸ್ಟರ್‌’ (ಚೆಸ್‌ನಲ್ಲಿ 2700 ರೇಟಿಂಗ್‌ ದಾಟಿದವರನ್ನು ಹೀಗೆ ಕರೆಯವುದು ವಾಡಿಕೆ) ಎನಿಸಿರುವ ಅಲಿರೇಜಾ ಸದ್ಯ ಉದಯೋನ್ಮುಖ ಪ್ರತಿಭೆಗಳಲ್ಲಿ ಮುಂಚೂಣಿಯಲ್ಲಿದ್ದಾನೆ. ಚೀನಾದ ವೀ ಯಿ, 15 ವರ್ಷ 8 ತಿಂಗಳಿದ್ದಾಗ 2700 ರೇಟಿಂಗ್‌ ತಲುಪಿದ್ದರೆ, ಅಲಿರೇಜಾ 16 ವರ್ಷ 1 ತಿಂಗಳಲ್ಲಿ ಈ ಮೈಲಿಗಲ್ಲು ದಾಟಿದ್ದಾನೆ.

ನವೆಂಬರ್‌ಗೆ ಅನ್ವಯ ಆಗುವಂತೆ ಕ್ಲಾಸಿಕಲ್‌ ಚೆಸ್‌ನಲ್ಲಿ ಈತನ ರೇಟಿಂಗ್‌ 2,749. ರ‍್ಯಾಪಿಡ್‌ನಲ್ಲಿ 2,703. ಬ್ಲಿಟ್ಸ್‌ ಮಾದರಿಯಲ್ಲಿ 2,770. ವಿಶ್ವದ ಪ್ರಸ್ತುತ ಟಾಪ್‌ 20 ಆಟಗಾರರಲ್ಲಿ ಅಲಿರೇಜಾ 18ನೇ ಸ್ಥಾನದಲ್ಲಿದ್ದಾನೆ. ಈ 20ರಲ್ಲಿ ಅತಿ ಕಿರಿಯ ಆಟಗಾರ ಈತನೇ. ಉಳಿದವರೆಲ್ಲಾಈತನಿಗಿಂತ ವಯಸ್ಸಿನಲ್ಲಿ 3–4 ವರ್ಷ ದೊಡ್ಡವರು. 16 ವರ್ಷದೊಳಗಿನವರ ವಿಭಾಗದಲ್ಲಿ ಈತ ವಿಶ್ವದ ಅಗ್ರಮಾನ್ಯ ಆಟಗಾರ. ಭವಿಷ್ಯದ ವಿಶ್ವ ಚಾಂಪಿಯನ್‌ ಎನಿಸುವತ್ತ ದಾಪುಗಾಲು ಇಟ್ಟಿದ್ದಾನೆ ಅಲಿರೇಜಾ.

ಇರಾನ್‌ನ ಪ್ರತಿಭೆ:

ಭಾರತದ ರೀತಿಯಲ್ಲೇ ಇರಾನ್‌ನಲ್ಲೂ ಇತ್ತೀಚಿನ ವರ್ಷಗಳಲ್ಲಿ ಅಸಾಧಾರಣ ಸಾಮರ್ಥ್ಯದ ಕೆಲವು ಚೆಸ್‌ ಆಟಗಾರರು ಹೊರಹೊಮ್ಮಿ ಅಚ್ಚರಿ ಮೂಡಿಸಿದ್ದಾರೆ. ಅಲಿರೇಜಾ ಜೊತೆಗೆ ಗಮನ ಸೆಳೆದಿರುವ ಪರ್ಹಾಮ್‌ ಮಘಸೂಡ್ಲು (20 ವರ್ಷ), ಅಮಿನ್‌ ತಬತಬೇಯಿ (19) ಕೂಡ ಯುವ ಗ್ರ್ಯಾಂಡ್‌ಮಾಸ್ಟರ್‌ಗಳೇ.

ಮಘಸೂಡ್ಲು 2016ರ ವಿಶ್ವ ಜೂನಿಯರ್‌ ಚಾಂಪಿಯನ್‌. ಕಳೆದ ವರ್ಷ ಏಷ್ಯನ್‌ ಚಾಂಪಿಯನ್‌ ಆಗಿದ್ದ ತಬಾತಬೇಯಿ, ವಿಶ್ವದ ಪ್ರಮುಖ ಆಟಗಾರರು ಭಾಗವಹಿಸಿದ್ದ ಬೀಲ್‌ ಮಾಸ್ಟರ್ಸ್‌ ಟೂರ್ನಿಯಲ್ಲಿ ಚಾಂಪಿಯನ್‌ ಕಿರೀಟ ಧರಿಸಿದ್ದ ಚತುರಮತಿ. ಆದರೆ ಇವರೆಲ್ಲರಿಗಿಂತ ಹೆಚ್ಚು ಪ್ರತಿಭಾವಂತ, ವಯಸ್ಸಲ್ಲೂ ಸಣ್ಣವ ಎಂಬ ಹೆಗ್ಗಳಿಕೆ ಅಲಿರೇಜಾನದ್ದು.

ಉತ್ತರ ಇರಾನ್‌ನ ಕ್ಯಾಸ್ಪಿಯನ್‌ ಸಮುದ್ರದ ತೀರದ ಬ್ಯಾಬೊಲ್‌ ಈತನ ಹುಟ್ಟೂರು. ಜನಿಸಿದ್ದು 2003ರ ಜೂನ್‌ 18ರಂದು. ಮನೆಯಲ್ಲಿ ಯಾರೂ ಚೆಸ್‌ ಆಡಿದವರಲ್ಲ. ತಂದೆ ಹಮೀದ್‌ರೇಜಾ ಸರ್ಕಾರಿ ಇಲಾಖೆಯೊಂದರಲ್ಲಿ ಟೆಕ್ನೀಷಿಯನ್‌ ಆಗಿದ್ದವರು. ‘ಮಗನಿಗಾಗಿ ನಾವೇನೂ ಹೆಚ್ಚು ತ್ಯಾಗ ಮಾಡಿಲ್ಲ. ಎಲ್ಲ ಪೋಷಕರು ಮಕ್ಕಳಿಗಾಗಿ ಏನು ಮಾಡುತ್ತಾರೆ, ಅಷ್ಟನ್ನೇ ನಾವು ಮಾಡಿದ್ದೇವೆ’ ಎನ್ನುತ್ತಾರೆ.

ಚೆಸ್‌ ಕ್ಲಬ್‌ವೊಂದಕ್ಕೆ ಕೆಲವರು ಮಕ್ಕಳನ್ನು ಕರೆದೊಯ್ಯುತ್ತಿರುವುದನ್ನು ಕಂಡು ಅಲಿರೇಜಾ ತಾಯಿ ಕೂಡ ಮಗನನ್ನು ಆ ಕ್ಲಬ್‌ಗೆ ಸೇರಿಸಿದ್ದರು. ಆಗ ಅವನ ವಯಸ್ಸು ಎಂಟು. ನಂತರ ಆರಂಭವಾದ ಚೆಸ್‌ ಬಗೆಗಿನ ವ್ಯಾಮೋಹ ಅಲಿರೇಜಾನನ್ನು ಬಿಡಲಿಲ್ಲ.

ಶಾಲಾ ಬಾಲಕನಾಗಿದ್ದ ವೇಳೆ ಪೋಷಕರು ಅಲಿರೇಜಾನನ್ನು ಫುಟ್‌ಬಾಲ್‌ನಲ್ಲಿ ತೊಡಗಿಸಿದ್ದರು. ‘ಫುಟ್‌ಬಾಲ್‌ನಲ್ಲಿ ಈತನಿಗೆ ಗೋಲ್‌ಕೀಪರ್‌ ಸ್ಥಾನ ನೀಡಲಾಗುತಿತ್ತು. ಚೆಂಡು ಯಾವ ದಿಕ್ಕಿನಿಂದ ಗುರಿಯತ್ತ ಬರಬಹುದು ಎಂಬುದನ್ನು ಕರಾರುವಾಕ್ಕಾಗಿ ಊಹಿಸುವ ಚಾಣಾಕ್ಷ ಎಂದು ಕೋಚ್‌ ಅವನನ್ನು ಆ ಸ್ಥಾನದಲ್ಲಿ ಆಡಿಸುತ್ತಿದ್ದರು’ ಎಂದು ಹಮೀದ್‌ರೇಜಾ ಸಂದರ್ಶನವೊಂದರಲ್ಲಿ ನೆನಪಿಸುತ್ತಾರೆ. ಈತನ ಬಾಲ್ಯದ ಕೋಚ್‌ ಮೊಹಸೆನ್‌ ಷರ್ಬಾಫ್‌, ಪ್ರದರ್ಶನ ಫುಟ್‌ಬಾಲ್‌ ಪಂದ್ಯವೊಂದಕ್ಕೆ ಕರೆದೊಯ್ದ ವೇಳೆ, ಚೆಂಡಿನ ಪಾಸ್‌ಗಳನ್ನು ಗ್ರಹಿಸುವ ಸಾಮರ್ಥ್ಯವನ್ನು ನೋಡಿ ಅಚ್ಚರಿಪಟ್ಟಿದ್ದರು.

ಮೊಹಸೆನ್‌ ಷರ್ಬಾಫ್‌ ಮೊದಲ ಸಲ ಅಲಿರೇಜಾ ಆಟವನ್ನು ಗಮನಿಸಿದ್ದು ಅಂತರ ಕ್ಲಬ್‌ ಟೂರ್ನಿಯ ವೇಳೆ. ಅಲಿರೇಜಾನ ಪ್ರತಿಭೆ ಇನ್ನಷ್ಟು ಪ್ರಖರವಾಗಿ ಬೆಳಗಿದ್ದು ನೆದರ್ಲೆಂಡ್ಸ್‌ನ ಕೋಚ್‌ ಇವಾನ್‌ ಸೊಕೊಲೊವ್‌ ಅವರಿಂದ ತರಬೇತಿ ಪಡೆದ ನಂತರ. ಓಪನಿಂಗ್‌ ಜೊತೆ ತಂತ್ರಗಳನ್ನು ಹೇಗೆ ಹೆಣೆಯಬೇಕು ಎಂಬುದನ್ನು ಸೊಕೊಲೊವ್‌ ಕಲಿಸಿಕೊಟ್ಟರು. 2016 ರಿಂದ 18ರವರೆಗೆ ಇರಾನ್‌ನಲ್ಲಿ ತರಬೇತು ನೀಡಿದ್ದ ಅವರಿಗೆ ಅಲ್ಲಿನ ಯುವ ಆಟಗಾರರ ಸಾಮರ್ಥ್ಯ ಕಂಡು ದಂಗಾಗಿತ್ತು.

ಹತ್ತು– ಹನ್ನೊಂದನೇ ವಯಸ್ಸಿನಲ್ಲಿ ಜಗತ್ತಿನ ಬೇರೆ ಬೇರೆ ಕಡೆ ಆಡುತ್ತಿದ್ದ ಗ್ರ್ಯಾಂಡ್‌ಮಾಸ್ಟರ್‌ಗಳ ಪಂದ್ಯಗಳನ್ನು ಕೋಚ್‌ ಜೊತೆ ವಿಶ್ಲೇಷಿಸುತ್ತಿದ್ದ ಅಲಿರೇಜಾ, ಯಾವ ಆಟಗಾರ ಎಡವಿದ್ದು ಎಲ್ಲಿ, ಅದಕ್ಕೆ ಏನು ಪರಿಹಾರವಿತ್ತು ಎಂಬುದನ್ನೂ ಬಿಡಿಸುತ್ತಿದ್ದ ರೀತಿ ಷರ್ಬಾಫ್‌ ಅವರನ್ನು ಅಚ್ಚರಿಯಲ್ಲಿ ಕೆಡವುತಿತ್ತು.

ದಶಕಗಳ ಹಿಂದೆ ಆನಂದ್‌ ಜೊತೆ ಆಡಿದ್ದ ಸೊಕೊಲೊವ್‌, ಅಲಿರೇಜಾನ ಆಟ ಆನಂದ್‌ ಅವರ ಆಟವನ್ನು ಹೋಲುತ್ತದೆ ಎಂದಿದ್ದಾರೆ. ಇನ್ನು ಕೆಲವರು ಈತನ ಆಟವನ್ನು ದಂತಕತೆ ಮೈಕೆಲ್‌ ತಾಲ್‌ ಅವರ ಆಟದೊಂದಿಗೆ ಹೋಲಿಸತೊಡಗಿದ್ದಾರೆ.

ಮಹತ್ವದ ಸಾಧನೆಗಳು:

ಏರೊಫ್ಲ್ಯಾಟ್‌ ಓಪನ್‌ ಟೂರ್ನಿಯಲ್ಲಿ (2018 ಫೆಬ್ರುವರಿ) ಮೂರನೇ ಜಿಎಂ ನಾರ್ಮ್‌ ಪಡೆಯುವ ಮೂಲಕ ಅಲಿರೇಜಾನಿಗೆ 14ನೇ ವಯಸ್ಸಿಗೆ ಗ್ರ್ಯಾಂಡ್‌ಮಾಸ್ಟರ್‌ ಪಟ್ಟ. ಅದೇ ವರ್ಷದ ನವೆಂಬರ್‌ನಲ್ಲಿ ವಿಶ್ವ ಯುವ ಒಲಿಂಪಿಯಾಡ್‌ನಲ್ಲಿ ಚಾಂಪಿಯನ್‌ ಕಿರೀಟ. 9 ಸುತ್ತುಗಳಲ್ಲಿ ಅಜೇಯ ಸಾಧನೆ. ಏಳು ಜಯ, ಎರಡು ಡ್ರಾ!. ಆ ವರ್ಷ ಇರಾನ್‌ನ ರಾಷ್ಟ್ರೀಯ ಚಾಂಪಿಯನ್‌.

ರಷ್ಯಾದ ಸೇಂಟ್‌ ಪೀಟರ್ಸ್‌ಬರ್ಗ್‌ನಲ್ಲಿ ಅದೇ ವರ್ಷ ನಡೆದ ವಿಶ್ವ ರ‍್ಯಾಪಿಡ್‌ ಚಾಂಪಿಯನ್‌ಷಿಪ್‌ನಲ್ಲಿ ಆರನೇ ಸ್ಥಾನ ಪಡೆದಿದ್ದು ಕಡಿಮೆ ಸಾಧನೆಯಾಗಿರಲಿಲ್ಲ. ಡೇನಿಯಲ್‌ ಡುಬೋವ್‌, ಶಕ್ರಿಯಾರ್ ಮೆಮೆಡ್ಯರೋವ್‌, ಹಿಕಾರು ನಕಾಮುರಾ, ವ್ಲಾಡಿಸ್ಲಾವ್‌ ಆರ್ಟೆಮಿವ್‌ ಮೊದಲಾದ ದೊಡ್ಡ ಹೆಸರುಗಳು ಕಣದಲ್ಲಿದ್ದವು. ಅಗ್ರ ಶ್ರೇಯಾಂಕದ ಕಾರ್ಲ್‌ಸನ್‌ ವಿಜೇತರಾಗಿದ್ದರು. ಆದರೆ 206 ಆಟಗಾರರಲ್ಲಿ 169ನೇ ಶ್ರೇಯಾಂಕ ಪಡೆದಿದ್ದ ಅಲಿರೇಜಾ ತೋರಿದ ಅಮೋಘ ಸಾಧನೆ ಚೆಸ್‌ಲೋಕದ ಗಮನಸೆಳೆಯಿತು.

2019ರಲ್ಲೂ ಇರಾನ್‌ನ ಚಾಂಪಿಯನ್‌. ಆ ವರ್ಷದ ಸೆಪ್ಟೆಂಬರ್‌ನಲ್ಲಿ ನಡೆದ ಫಿಡೆ ವಿಶ್ವಕಪ್‌ನ ಮೊದಲ ಎರಡು ಸುತ್ತುಗಳಲ್ಲಿ ಪ್ರಬಲ ಎದುರಾಳಿಗಳಾದ ಅರ್ಮನ್‌ ಪಶ್ಕಿಯಾನ್‌ ಮತ್ತು ಡುಬೋವ್‌ ವಿರುದ್ಧ ಗೆಲುವು. ನಂತರ ಅಗ್ರ ಶ್ರೇಯಾಂಕದ ಡಿಂಗ್‌ ಲಾರೆನ್‌ ಎದುರು ಎರಡು ಕ್ಲಾಸಿಕಲ್‌ ಪಂದ್ಯಗಳಲ್ಲಿ ಸಮಬಲದ ಸಾಧನೆ! ಆದರೆ ಟೈಬ್ರೇಕರ್‌ನಲ್ಲಿ ಸೋತು ಟೂರ್ನಿಯಿಂದ ನಿರ್ಗಮನ.

ಫ್ರಾನ್ಸ್‌ಗೆ ವಲಸೆ:

ಡಿಸೆಂಬರ್‌ ಕೊನೆಯಲ್ಲಿ ಇನ್ನು ಇರಾನ್‌ ಧ್ವಜದಡಿ ಆಡುವುದಿಲ್ಲ ಎಂಬ ಹೇಳಿಕೆ. ಇರಾನ್‌, ಇಸ್ರೇಲ್‌ ವಿರುದ್ಧ ಆಡದೇ ಇರುವ ಕಾರಣ ಈತನಿಗೆ ವಿಶ್ವ ಮಟ್ಟದ ಚಾಂಪಿಯನ್‌ಷಿಪ್‌ಗಳಲ್ಲಿ ಭಾಗವಹಿಸಲು ಆಗಲಿಲ್ಲ (ಇರಾನ್‌, ಇಸ್ರೇಲ್‌ ಅನ್ನು ಮಾನ್ಯ ಮಾಡದ ಕಾರಣ ಆ ದೇಶದ ವಿರುದ್ಧ ಆಡುತ್ತಿಲ್ಲ). ತಂದೆ ಜೊತೆ ಫ್ರಾನ್ಸ್‌ಗೆ ತೆರಳಿದ.

ಈ ವರ್ಷದ ಫೆಬ್ರುವರಿಯಲ್ಲಿ ಪ್ರಾಗ್‌ ಚೆಸ್‌ ಫೆಸ್ಟಿವಲ್‌ ಮಾಸ್ಟರ್ಸ್‌ ಟೂರ್ನಿಯಲ್ಲಿ ಗೆಲುವಿನ ಕಿರೀಟ. ಇದು ಈತ ಗೆದ್ದ ಮೊದಲ ಪ್ರಮುಖ ಪ್ರಶಸ್ತಿ. ಹದಿಹರೆಯದಲ್ಲೇ ಈ ಪ್ರಶಸ್ತಿ ಗೆದ್ದವರು ವಿರಳ. ಗ್ಯಾರಿ ಕ್ಯಾಸ್ಪರೋವ್‌, ಅಮೆರಿಕದ ಬಾಬಿ ಫಿಷರ್‌ ಮತ್ತು ಹಾಲಿ ವಿಶ್ವ ಚಾಂಪಿಯನ್‌ ಕಾರ್ಲ್‌ಸನ್‌ ಸಾಲಿನಲ್ಲಿ ವಿರಾಜಮಾನ.

ಕೋಲ್ಕತ್ತದಲ್ಲಿ ನಡೆದ ಟಾಟಾ ಸ್ಟೀಲ್‌ ಚಾಂಪಿಯನ್‌ಷಿಪ್‌ನಲ್ಲಿ 9ನೇ ಸ್ಥಾನ. ‘ನನ್ನ ಗುರಿ ಬರೇ ಪ್ರಶಸ್ತಿ ಗೆಲ್ಲುವುದಲ್ಲ, ಇಲ್ಲಿರುವ ಘಟಾನುಘಟಿ ಆಟಗಾರರ ಎದುರು ಆಡುವ ಅನುಭವ ಸಂಪಾದಿಸುವುದು ಕೂಡ’ ಎಂದಿದ್ದರು ಅಲಿರೇಜಾ.

ಕಳೆದ ಏಪ್ರಿಲ್‌ನಲ್ಲಿ ಎರಡು ಬಾರಿ ಕಾರ್ಲ್‌ಸನ್‌ ನಡೆಸಿದ್ದ ಟೂರ್ನಿಯಲ್ಲಿ ಈತ ಅವರನ್ನೇ ಸೋಲಿಸಿದ್ದ. ಒಮ್ಮೆ ಬ್ಲಿಟ್ಸ್‌ ಮಾದರಿಯ ಆಟದಲ್ಲಿ. ಮತ್ತೊಮ್ಮೆ ಸಂಪ್ರದಾಯಬದ್ಧ ಆಟದಲ್ಲಿ.

ಕಳೆದ ತಿಂಗಳು ಕಾರ್ಲ್‌ಸನ್‌ ತವರು ನಾರ್ವೆಯಲ್ಲಿ ನಡೆದ ಆಲ್ಟಿಬಾಕ್ಸ್‌ ಟೂರ್ನಿಯಲ್ಲಿ ಎರಡನೇ ಸ್ಥಾನ ಈತನದಾಯಿತು. ಒಂದು ಪಾಯಿಂಟ್‌ ಅಂತರದಿಂದ ಕಾರ್ಲ್‌ಸನ್‌ ವಿಜೇತರಾದರು. ಫಲಿತಾಂಶ ಏನೇ ಇರಲಿ, ಅಲಿರೇಜಾ ಫಿರೋಜ್‌ಝಾ, ಕಾರ್ಲ್‌ಸನ್‌ ಉತ್ತರಾಧಿಕಾರಿಯಾಗಬಲ್ಲ ಎಂಬ ಮಾತನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಸಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT