ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೋಕಿಯೊ ಒಲಿಂಪಿಕ್ಸ್‌ಗೆ ಚಾಲನೆ; ಭರವಸೆಯ ಬೆಳಕು ಪ್ರಜ್ವಲಿಸಿದ ಹೊತ್ತು..

ಸುಡ್ಡುಮದ್ದುಗಳ ರಂಗುರಂಗಿನ ವೈಭವ
Last Updated 23 ಜುಲೈ 2021, 14:51 IST
ಅಕ್ಷರ ಗಾತ್ರ

ಟೋಕಿಯೊ:ಒಲಿಂಪಿಕ್ ಕ್ರೀಡಾಂಗಣದಲ್ಲಿ ಶುಕ್ರವಾರದ ಮುಸ್ಸಂಜೆಯ ಕತ್ತಲನ್ನು ಸೀಳುತ್ತ ನಭಕ್ಕೆ ಚಿಮ್ಮಿದ ಸುಡುಮದ್ದಿನ ಬೆಳಕು ಮನುಕುಲದ ಭರವಸೆಯ ಕಿರಣಗಳಾಗಿ ಪ್ರತಿಫಲಿಸಿದವು.

ರಂಗುರಂಗಿನ ಬೆಳಕು, ಇಂಪಾದ ಸಂಗೀತ, ಮನಕ್ಕೆ ಮುದ ನೀಡಿದ ಸಾಂಪ್ರದಾಯಿಕ ನೃತ್ಯಗಳ ನಡುವೆ ಒಲಿಂಪಿಕ್ಸ್‌ ಕ್ರೀಡಾ ಉತ್ಸವಕ್ಕೆ ಚಾಲನೆ ದೊರೆಯಿತು.

ಕೌಂಟ್‌ಡೌನ್ ಗಡಿಯಾರ ಸೊನ್ನೆಗೆ ಬಂದಾಗ ಸುಡುಮದ್ದಿನ ಆರ್ಭಟ ರಂಗೇರಿತು. ಸುಮಾರು 20 ಸೆಕೆಂಡುಗಳ ಕಾಲ ರಂಗುರಂಗಿನ ಬೆಳಕು ಕಣ್ಮನ ಸೆಳೆಯಿತು. ಟೋಕಿಯೊ ಒಲಿಂಪಿಕ್ 2020 ಲಾಂಛನದಲ್ಲಿರುವ ಬಿಳಿ ಮತ್ತು ಆಗಸನೀಲಿ ಬಣ್ಣಗಳ ಚಿತ್ತಾರ ಮೂಡಿದಾಗ ನೋಡುಗರು ಪುಳಕಿತರಾದರು.

ಕೋವಿಡ್ ಕಾಲಘಟ್ಟದ ಆತಂಕ, ಅನಿಶ್ಚಿತತೆಗಳನ್ನು ದಿಟ್ಟತನದಿಂದ ಎದುರಿಸುವ ಛಲದೊಂದಿಗೆ ಜಪಾನ್ ವಿಶ್ವದ ಮೂಲೆಮೂಲೆಯಿಂದ ಬಂದ ಕ್ರೀಡಾಪಟುಗಳನ್ನು ಆತ್ಮೀಯವಾಗಿ ಸ್ವಾಗತಿಸಿತು.

ಜಪಾನ್ ದೇಶದ ತಂತ್ರಜ್ಞಾನ ವೈಭವ ರಂಗೇರಿತು. ಡ್ರೋನ್‌ಗಳು ಒಲಿಂಪಿಕ್ ರಿಂಗ್‌ ಲಾಂಛನದ ಪ್ರತಿಕೃತಿ ರಚಿಸಿದ್ದು ಚಿತ್ತಾಪಹಾರಿಯಾಗಿತ್ತು. 2013ರಲ್ಲಿ ಒಲಿಂಪಿಕ್ ಆಯೋನೆಗೆ ಬಿಡ್ ಲಭಿಸಿದ ನಂತರ ತಮ್ಮ ದೇಶದಲ್ಲಿ ಆದ ಸ್ಥಿತ್ಯಂತರಗಳ ನಡುವೆ ಕ್ರೀಡಾಗ್ರಾಮವನ್ನು ಕಟ್ಟಿದ ರೂಪಕವೂ ಮನಸೆಳೆಯಿತು. ಕೋವಿಡ್ ಉಪಟಳದ ಸಂದರ್ಭದಲ್ಲಿ ಅನುಭವಿಸಿದ ಕಷ್ಟನಷ್ಟಗಳ ನಡುವೆಯೂ ದೃಢವಾಗಿ ನಿಂತ ಕತೆಯ ವಿಡಿಯೊ ಪ್ರದರ್ಶನಗೊಂಡಿತು.

ಜಪಾನ್ ದೊರೆ ನರುಹಿಟೊ ಕ್ರೀಡಾಕೂಟವನ್ನು ಉದ್ಘಾಟಿಸಿದರು. ಅಂತರರಾಷ್ಟ್ರೀಯ ಒಲಿಂಪಿಕ್ ಸಂಸ್ಥೆ ಅಧ್ಯಕ್ಷ ಥಾಮಸ್ ಬಾಕ್ ಹಾಜರಿದ್ದರು.

ಪ್ರೇಕ್ಷಕರ ಪ್ರವೇಶ ನಿರ್ಬಂಧದ ಕಾರಣ ಖಾಲಿ ಕುರ್ಚಿಗಳು ನೀರವ ವಾತಾವರಣ ಸೃಷ್ಟಿಸಿದವು. ಹಿಂದಿನ ಯಾವ ಒಲಿಂಪಿಕ್ ಕೂಟದಲ್ಲಿಯೂ ಕಾಣದಂತಹ ಮತ್ತು ಊಹಿಸದಂತಹ ವಾತಾವರಣದಲ್ಲಿಯೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟ ಕಲಾವಿದರು ಮತ್ತು ಪಥಸಂಚಲನದಲ್ಲಿ ಪಾಲ್ಗೊಂಡ ವಿವಿಧ ದೇಶಗಳ ಕ್ರೀಡಾಪಟುಗಳ ಉತ್ಸಾಹಕ್ಕೆ ಕೊರತೆ ಇರಲಿಲ್ಲ.

ಕ್ರೀಡಾಂಗಣದ ಹೊರಗೆ ಸಾವಿರಾರು ಜನರು ಸೇರಿದ್ದರು. ಅದರಲ್ಲಿ ಕ್ರೀಡಾಪ್ರೇಮಿಗಳೂ ಇದ್ದರು. ಅಂಗಣದೊಳಗೆ ಪ್ರವೇಶಿಸಿ ಸಮಾರಂಭ ಕಣ್ತುಂಬಿಕೊಳ್ಳುವ ಹುಮ್ಮಸ್ಸಿದ್ದರೂ ಭದ್ರತಾ ವ್ಯವಸ್ಥೆಯನ್ನು ದಾಟಲು ಅವಕಾಶವೇ ಇರಲಿಲ್ಲ. ಈ ನಡುವೆ ಒಲಿಂಪಿಕ್ ಅಯೋಜನೆಯನ್ನು ಸ್ಥಗಿತಗೊಳಿಸಿ ಎಂಬ ಪ್ರತಿಭಟನಾಕಾರರ ಕೂಗು ಕೂಡ ಜೋರಾಗಿತ್ತು.

ಕೊರೊನಾ ಪಿಡುಗಿನ ವಿರುದ್ಧದ ಹೋರಾಟಕ್ಕೆ ತಮ್ಮ ಜೊತೆಯಿದೆ ಎಂಬ ದೃಢವಾದ ಹೆಜ್ಜೆಗಳನ್ನು ಎಲ್ಲ ದೇಶಗಳ ಕ್ರೀಡಾಪಟುಗಳೂ ಹಾಕಿದರು. ಸಣ್ಣ, ದೊಡ್ಡ, ಹಿಂದುಳಿದ, ಮುಂದುವರಿದ ದೇಶಗಳ ಅಥ್ಲೀಟ್‌ಗಳೆಲ್ಲರೂ ಒಂದೇ ವೇದಿಕೆಯಲ್ಲಿ ಸೇರಿದರು. ಬೇರೆ ವರ್ಣ, ಧರ್ಮ ಮತ್ತು ಸಂಸ್ಕೃತಿಗಳನ್ನು ಪ್ರತಿನಿಧಿಸುವ ಪೋಷಾಕುಗಳನ್ನು ಧರಿಸಿದ್ದ ಕ್ರೀಡಾಪಟುಗಳು ಭರವಸೆಯ ಹೆಜ್ಜೆ ಹಾಕಿದರು. ಅದರಲ್ಲಿ ಮನಪ್ರೀತ್ ಸಿಂಗ್ ಮತ್ತು ಮೇರಿ ಕೋಮ್ ತ್ರಿವರ್ಣ ಹಿಡಿದು ಮುನ್ನಡೆಸಿದ ಭಾರತ ತಂಡವೂ ಇತ್ತು.

2012ರ ಲಂಡನ್ ಒಲಿಂಪಿಕ್ಸ್ ಮತ್ತು 2016ರ ರಿಯೊ ಒಲಿಂಪಿಕ್ಸ್‌ನ ಉದ್ಘಾಟನೆ ಸಮಾರಂಭದ ಅದ್ದೂರಿತನ ಇಲ್ಲಿ ಇರಲಿಲ್ಲ. ಆದರೆ, ದುರಿತ ಕಾಲದ ಕರಾಳತೆಯನ್ನು ಎದುರಿಸಿ ನಿಂತು ಮಹತ್ಸಾಧನೆ ಮಾಡುವ ಭರವಸೆಯ ಬೆಳಕಂತೂ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT