ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲ್‌ ಇಂಗ್ಲೆಂಡ್ ಬ್ಯಾಡ್ಮಿಂಟನ್: ವಿಕ್ಟರ್ ಚಾಂಪಿಯನ್; ಲಕ್ಷ್ಯ ರನ್ನರ್ ಅಪ್

ಭಾರತದ ಜೋಡಿ ತ್ರಿಷಾ–ಗಾಯತ್ರಿಗೆ ನಿರಾಶೆ
Last Updated 20 ಮಾರ್ಚ್ 2022, 19:43 IST
ಅಕ್ಷರ ಗಾತ್ರ

ಬರ್ಮಿಂಗ್‌ಹ್ಯಾಮ್: ಭಾರತದ ‘ಯುವತಾರೆ’ ಲಕ್ಷ್ಯ ಸೇನ್ ಆಲ್‌ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಜಯಿಸುವ ಕನಸು ನನಸಾಗಲಿಲ್ಲ.

ಭಾನುವಾರ ನಡೆದ ಫೈನಲ್‌ನಲ್ಲಿ 20 ವರ್ಷದ ಲಕ್ಷ್ಯ 10–21, 15–21ರಿಂದ ಡೆನ್ಮಾರ್ಕಿನ ವಿಕ್ಟರ್ ಅಕ್ಸೆಲ್‌ಸೇನ್ ವಿರುದ್ಧ ಸೋತರು. ಈ ಪಂದ್ಯ 53 ನಿಮಿಷ ನಡೆಯಿತು.

ಟೂರ್ನಿಯ ಇತಿಹಾಸದಲ್ಲಿ ಪುರುಷರ ಸಿಂಗಲ್ಸ್‌ ಫೈನಲ್ ತಲುಪಿದ ಭಾರತದ ಮೂರನೇ ಆಟಗಾರನೆಂಬ ಹೆಗ್ಗಳಿಕೆ ಲಕ್ಷ್ಯ ಸೇನ್ ಅವರದ್ದು. ಈ ಹಿಂದೆ ಪ್ರಕಾಶ್ ಪಡುಕೋಣೆ ಮತ್ತು ಪುಲ್ಲೇಲಾ ಗೋಪಿಚಂದ್ ಪ್ರಶಸ್ತಿ ಜಯಿಸಿದ್ದರು.

ಅಗ್ರಶ್ರೇಯಾಂಕದ ವಿಕ್ಟರ್ ಮೊದಲ ಗೇಮ್‌ನ ಆರಂಭದಲ್ಲಿಯೇ ಆಕ್ರಮಣಕಾರಿ ಆಟಕ್ಕಿಳಿದರು. ಅವರ ವೇಗಕ್ಕೆ ಪ್ರತ್ಯುತ್ತರ ನೀಡುವಲ್ಲಿ ಲಕ್ಷ್ಯ ಯಶಸ್ವಿಯಾಗಲಿಲ್ಲ. ಆದ್ದರಿಂದ 11 ಅಂಕಗಳ ಅಂತರದಿಂದ ಮೊದಲ ಗೇಮ್ ಸೋತರು.

ಎರಡನೇ ಗೇಮ್‌ನಲ್ಲಿ ವಿರೋಚಿತ ಆಟವಾಡಿದ ಲಕ್ಷ್ಯ ಗಮನ ಸೆಳೆದರು. ಆದರೆ ವಿಕ್ಟರ್ ಅವರ ಅನುಭವದ ಮುಂದೆ ಲಕ್ಷ್ಯ ಪ್ರಯತ್ನ ಸಾಕಾಗಲಿಲ್ಲ.

ಭಾರತದ ಜೋಡಿಗೆ ನಿರಾಶೆ: ಮಹಿಳೆಯರ ಡಬಲ್ಸ್‌ ಸೆಮಿಫೈನಲ್‌ನಲ್ಲಿ ಭಾರತದ ತ್ರಿಷಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್ ನಿರಾಶೆ ಅನುಭವಿಸಿದರು.

ಈ ಜೋಡಿಯು ಇದೇ ಮೊದಲ ಬಾರಿಗೆ ಸೆಮಿಫೈನಲ್ ಪ್ರವೇಶಿಸಿತ್ತು. ತ್ರಿಷಾ ಮತ್ತು ಗಾಯತ್ರಿ 17–21, 16–21ರಿಂದ ಚೀನಾದ ಶೂ ಶಿಯಾನ್ ಝಾಂಗ್ ಮತ್ತು ಯೂ ಝೆಂಗ್ ವಿರುದ್ಧ ಸೋತರು.

51 ನಿಮಿಷಗಳ ಹೋರಾಟದಲ್ಲಿ ಚೀನಾದ ಆಟಗಾರ್ತಿಯರ ವೇಗದ ಮುಂದೆ ಭಾರತದ ಜೋಡಿಯ ಪ್ರಯತ್ನ ಸಾಕಾಗಲಿಲ್ಲ.

ಗಾಯತ್ರಿ–ತ್ರಿಷಾ ಜೋಡಿಯು ಇದೇ ಮೊದಲ ಬಾರಿಗೆ ಸೆಮಿಫೈನಲ್ ಪ್ರವೇಶಿಸಿತ್ತು.

ಈ ವಿಭಾಗದ ಫೈನಲ್‌ನಲ್ಲಿ ಜಪಾನಿನ ನಮಿ ಮಟ್ಸುಯಾಮಾ ಮತ್ತು ಚಾಹಿರು ಶಿದಾ 21–13, 21–9ರಿಂದ ಚೀನಾದ ಝಾಂಗ್ ಮತ್ತು ಝೇಂಗ್ ವಿರುದ್ಧ ಜಯಭೇರಿ ಬಾರಿಸಿದರು.

ಪುರುಷರ ಡಬಲ್ಸ್‌ ಫೈನಲ್‌ನಲ್ಲಿ ಇಂಡೋನೆಷ್ಯಾದ ಮೊಹಮ್ಮದ್ ಶೋಹಿಬುಲ್ ಫಿಕ್ರಿ ಮತ್ತು ಬಗಾಸ್ ಮೌಲಾನಾ 21–19, 21–13ರಿಂದ ತಮ್ಮದೇ ದೇಶದ ಮೊಹಮ್ಮದ್ ಎಹಸಾನ್ ಮತ್ತು ಹೆಂದ್ರಾ ಸೆತಿಯಾವನ್ ವಿರುದ್ಧ ಗೆದ್ದರು.

*

ಅಕಾನೆಗೆ ಕಿರೀಟ
ಜಪಾನ್‌ನ ಅಕಾನೆ ಯಾಮಗುಚಿ ಮಹಿಳೆಯರ ಸಿಂಗಲ್ಸ್‌ನಲ್ಲಿ ಪ್ರಶಸ್ತಿ ಗೆದ್ದರು.ಫೈನಲ್‌ನಲ್ಲಿ ಅಕಾನೆ 21–15, 21–15ರ ನೇರ ಗೇಮ್‌ಗಳಲ್ಲಿ ದಕ್ಷಿಣ ಕೊರಿಯಾದ ಆನ್ ಸಿ ಯಂಗ್ ವಿರುದ್ಧ ಜಯಭೇರಿ ಬಾರಿಸಿದರು.ವಿಶ್ವ ಶ್ರೇಯಾಂಕದ ಎರಡನೇ ಸ್ಥಾನದಲ್ಲಿರುವ ಅಕಾನೆ ನಾಲ್ಕನೇ ಶ್ರೇಯಾಂಕದ ಸೆಯಾಂಗ್ ವಿರುದ್ಧದ ಪಂದ್ಯದ ಆರಂಭ ದಿಂದಲೇ ಮೇಲುಗೈ ಸಾಧಿಸಿದರು.ಎರಡೂ ಗೇಮ್‌ಗಳ ಯಾವುದೇ ಹಂತದಲ್ಲಿಯೂ ಅಕಾನೆ ತಮ್ಮ ಹಿಡಿತ ಸಡಿಲಿಸಲಿಲ್ಲ. ಬೇಸ್‌ಲೈನ್ ಆಟದಲ್ಲಿ ಚುರುಕುತನ ಮೆರೆದ ಅಕಾನೆ, ರಭಸದ ಸ್ಮ್ಯಾಷ್‌ಗಳನ್ನು ಸಿಡಿಸಿ ಎದುರಾಳಿಯ ಒತ್ತಡ ಹೆಚ್ಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT