ಮಂಗಳವಾರ, ಆಗಸ್ಟ್ 3, 2021
24 °C

ಸ್ಕ್ವಾಷ್‌ ಅಂಗಣಕ್ಕೆ ಮರಳುವ ವಿಶ್ವಾಸದಲ್ಲಿ ಜೋಷ್ನಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತದ ಅಗ್ರಕ್ರಮಾಂಕದ ಸ್ಕ್ವಾಷ್‌ ಪಟು ಜೋಷ್ನಾ ಚಿಣ್ಣಪ್ಪ ಶೀಘ್ರದಲ್ಲೇ ಅಂಗಣಕ್ಕೆ ಮರಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕೋವಿಡ್‌–19 ಪಿಡುಗು ಸೃಷ್ಟಿಸಿರುವ ಬಿಕ್ಕಟ್ಟಿನಿಂದಾಗಿ‌ ಸೆಪ್ಟೆಂಬರ್‌ವರೆಗೆ ಯಾವುದೇ ಚಟುವಟಿಕೆಗಳನ್ನು ನಡೆಸುವುದಿಲ್ಲ ಎಂದು ರಾಷ್ಟ್ರೀಯ ಸ್ಕ್ವಾಷ್‌ ರಾಕೆಟ್‌ ಫೆಡರೇಷನ್ ಹೇಳಿದೆ. ಆದರೆ ಐದು ತಿಂಗಳುಗಳ ಕಾಲ ಮನೆಯಲ್ಲೇ ಬಂದಿಯಾಗಿರುವ ಜೋಷ್ನಾ ಅವರು ಸದ್ಯದಲ್ಲೇ ಕ್ರೀಡಾಂಗಣಕ್ಕೆ ಮರಳುವುದಾಗಿ ಹೇಳಿದ್ದಾರೆ.

ಸೆಪ್ಟೆಂಬರ್‌ಗೂ ಮುನ್ನ ಯಾವುದೇ ಟೂರ್ನಿಯನ್ನು ಆಯೋಜಿಸುವುದಿಲ್ಲ ಎಂದು ರಾಷ್ಟ್ರೀಯ ಸ್ಕ್ವಾಷ್‌ ರಾಕೆಟ್‌ ಫೆಡರೇಷನ್‌ನ (ಎಸ್‌ಆರ್‌ಎಫ್‌ಐ) ಕಾರ್ಯದರ್ಶಿ ಸಿರಿಸ್‌ ಪೊಂಚಾ ಹೋದ ತಿಂಗಳು ಹೇಳಿದ್ದರು. ಚೆನ್ನೈನಲ್ಲಿರುವ ಭಾರತ ಸ್ಕ್ವಾಷ್‌ ಅಕಾಡೆಮಿಯಲ್ಲಿ (ಐಎಸ್‌ಎ) ಪುನರಾರಂಭಿಸಲು ಉದ್ದೇಶಿಸಿದ್ದ ತರಬೇತಿಯ ಅವಕಾಶವೂ ಕ್ಷೀಣಿಸಿದೆ ಎಂದಿದ್ದರು.

’ಸ್ಕ್ವಾಷ್‌ ಅಂಗಣಕ್ಕೆ ಮರಳುವುದು ಅಷ್ಟು ಸುಲಭವಲ್ಲ. ಕ್ರೀಡಾಂಗಣದಿಂದ ಹೊರಗುಳಿದು ಐದು ತಿಂಗಳಾಗುತ್ತ ಬಂತು. ಐಎಸ್‌ಎನಲ್ಲಿ ತರಬೇತಿ ಪಡೆಯುವುದು ನನಗೆ ಇಷ್ಟ. ಪ್ರಮುಖ ಅಥ್ಲೀಟ್‌ಗಳು ಸೆಪ್ಟೆಂಬರ್‌ಗಿಂತ ಮೊದಲೇ ತರಬೇತಿಗೆ ಮರಳುವ ವಿಶ್ವಾಸವಿದೆ‘ ಎಂದು ಜೋಷ್ನಾ ಹೇಳಿದ್ದಾರೆ.

’ಮುಂಬರುವ 2022ರ ಕಾಮನ್‌ವೆಲ್ತ್‌‌ ಹಾಗೂ ಏಷ್ಯನ್‌ ಕ್ರೀಡಾಕೂಟಗಳಿಗೆ ಸಜ್ಜಾಗಲು ಸದ್ಯ ತರಬೇತಿ ಮುಖ್ಯ. ಆಟದ ಲಯ ಕಂಡುಕೊಳ್ಳುವುದು ಅವಶ್ಯ. ದಿನದ ಒಂದು ಗಂಟೆ ಅಥವಾ ಅಂತಹದ್ದೇ ಒಂದು ಸಮಯ ಮಿತಿಯಲ್ಲಿ, ಸುರಕ್ಷಿತ ವಾತಾವರಣದಲ್ಲಿ ತರಬೇತಿಗೆ ಅವಕಾಶ ಮಾಡಿಕೊಡುವ ವಿಶ್ವಾಸವಿದೆ‘ ಎಂದು ಜೋಷ್ನಾ ನುಡಿದರು.

ದೇಶದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಏರುಗತಿಯಲ್ಲಿ ಸಾಗುತ್ತಿವೆ. ಆದರೆ ಹಲವು ಪ್ರಮುಖ ಅಥ್ಲೀಟ್‌ಗಳು ಭಾರತ ಕ್ರೀಡಾ ಪ್ರಾಧಿಕಾರ (ಸಾಯ್‌) ರೂಪಿಸಿರುವ ಕಟ್ಟುನಿಟ್ಟಿನ ಸುರಕ್ಷತಾ ನಿಯಮಗಳ ಅಡಿಯಲ್ಲಿ ತರಬೇತಿ ಆರಂಭಿಸಿದ್ದಾರೆ. ಪ್ರಮುಖ ಸ್ಕ್ವಾಷ್‌ ಕೇಂದ್ರಗಳಾಗಿರುವ ಮುಂಬೈ, ದೆಹಲಿ ಹಾಗೂ ಚೆನ್ನೈ ನಗರಗಳು ಕೋವಿಡ್‌ ಪಿಡುಗಿನಿಂದ ತತ್ತರಿಸಿವೆ.

ತರಬೇತಿ ಪುನರರಾಂಭಿಸಲು ಕೇಂದ್ರ ಸರ್ಕಾರ ಸೂಚಿಸಿರುವ ಮಾರ್ಗಸೂಚಿಗಳ ಅನ್ವಯ ತಮಿಳುನಾಡು ಸರ್ಕಾರ ಕೂಡ ಕ್ರೀಡಾಂಗಣಗಳು, ಕ್ರೀಡಾ ಸಂಕೀರ್ಣಗಳನ್ನು ಅಥ್ಲೀಟ್‌ಗಳಿಗೆ ಮುಕ್ತವಾಗಿಸಿದೆ. ಆದರೂ ಐಎಸ್‌ಎ ಸೇರಿದಂತೆ ಚೆನ್ನೈನಲ್ಲಿರುವ ಬಹುತೇಕ ಕ್ರೀಡಾ ಕೇಂದ್ರಗಳು ಇನ್ನೂ ಬಾಗಿಲು ತೆರೆದಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು